ಮೇರು ಗಾಯಕನ ನೆನಪಿಸುವ ಸಿನಿಮಾ ‘ಕಿಶೋರ್ ಕುಮಾರ್ ಜ್ಯೂನಿಯರ್‌’

ಕೌಶಿಕ್ ಗಂಗೂಲಿ ನಿರ್ದೇಶನದಲ್ಲಿ ತಯಾರಾಗಿರುವ ‘ಕಿಶೋರ್ ಕುಮಾರ್ ಜ್ಯೂನಿಯರ್‌’ ಬೆಂಗಾಲಿ ಸಿನಿಮಾ ಅಕ್ಟೋಬರ್ 12ರಂದು ತೆರೆಕಾಣಲಿದೆ. ಜನಪ್ರಿಯ ಬೆಂಗಾಲಿ ನಟ ಪ್ರೊಸೇನ್‌ಜಿತ್‌ ಚಟರ್ಜಿ ಅವರು ಚಿತ್ರದಲ್ಲಿ ‘ಕಿಶೋರ್ ಕಾಂತಿ’ಯಾಗಿ ಕಾಣಿಸಿಕೊಂಡಿದ್ದಾರೆ

ಹಿಂದಿ ಚಿತ್ರರಂಗದ ಮೇರು ಗಾಯಕ ಕಿಶೋರ್ ಕುಮಾರ್ ಪ್ರೇರಣೆಯಿಂದ ತಯಾರಾಗಿರುವ ‘ಕಿಶೋರ್ ಕುಮಾರ್ ಜ್ಯೂನಿಯರ್‌’ ಬೆಂಗಾಲಿ ಸಿನಿಮಾ ತೆರೆಗೆ ಸಿದ್ಧವಾಗಿದೆ. ಕೌಶಿಕ್ ಗಂಗೂಲಿ ನಿರ್ದೇಶನದ ಚಿತ್ರದಲ್ಲಿ ಪ್ರೊಸೇನ್‌ಜಿತ್‌ ಚಟರ್ಜಿ ಅವರು ‘ಕಿಶೋರ್ ಕಾಂತಿ’ಯಾಗಿ ನಟಿಸಿದ್ದಾರೆ. ಕಿಶೋರ್ ಕುಮಾರ್ ಧ್ವನಿ ಹೊಂದಿರುವ ಗಾಯಕನಿಗೆ ‘ಕಿಶೋರ್ ಕಾಂತಿ’ ಎನ್ನಲಾಗುತ್ತದೆ. ಚಿತ್ರದಲ್ಲಿ ಚಟರ್ಜಿ (ಪಾತ್ರ) ಕಿಶೋರ್ ಕುಮಾರ್‌ ಜನಪ್ರಿಯ ಗೀತೆಗಳನ್ನು ಹಾಡುತ್ತಾ ದೇಶವಿಡೀ ಪ್ರವಾಸ ಕೈಗೊಳ್ಳುತ್ತಾರೆ.

ಬಂಗಾಲದಲ್ಲಿ ಗೌತಮ್ ಘೋಷ್‌ ಅವರನ್ನು ‘ಕಿಶೋರ್ ಕಾಂತಿ’ ಎಂದು ಕರೆಯುತ್ತಾರೆ. ಆರಂಭದಲ್ಲಿ ಈ ಸಿನಿಮಾ ಗೌತಮ್ ಘೋಷ್ ಬಯೋಪಿಕ್ ಎಂದೇ ಹೇಳಲಾಗಿತ್ತು. ಈ ಬಗ್ಗೆ ಸ್ಪಷ್ಟೀಕರಣ ನೀಡುವ ನಿರ್ದೇಶಕ ಗಂಗೂಲಿ, “ಇದು ಗೌತಮ್ ಘೋಷ್ ಬಯೋಪಿಕ್ ಅಲ್ಲ. ನೂರಾರು ಪ್ರತಿಭಾವಂತರು ಗಾಯಕರು ಹಲವು ಕಾರಣಗಳಿಂದಾಗಿ ಮರೆಯಲ್ಲೇ ಉಳಿದಿದ್ದಾರೆ. ಕಿಶೋರ್ ಕುಮಾರ್‌ ಅವರಂತೆಯೇ ಹಾಡುವ ಇಂತಹ ಗಾಯಕರಿಗೆ ಈ ಸಿನಿಮಾ ಅರ್ಪಣೆ” ಎನ್ನುತ್ತಾರೆ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಕೌಶಿಕ್ ಗಂಗೂಲಿ ಅವರು ಚಿತ್ರೀಕರಣಕ್ಕೆ ಮುನ್ನ ಸಾಕಷ್ಟು ತಯಾರಿ ನಡೆಸಿದ್ದಾರೆ. ಕಿಶೋರ್ ಕುಮಾರ್‌ ಅವರಂತೆ ಹಾಡುವ (ಕಿಶೋರ್ ಕಾಂತಿ) ಗಾಯಕರ ಯೂಟ್ಯೂಬ್‌ಗಳನ್ನು ಅಭ್ಯಸಿಸಿದ್ದರಂತೆ. ಪ್ರೊಸೇನ್‌ಜಿತ್‌ ಚಟರ್ಜೀ ಪಾತ್ರವನ್ನು ಜೀವಿಸಿದ್ದಾರೆ ಎನ್ನುವ ವಿಶ್ವಾಸ ಅವರದು. “ಬುಂಬಾ (ಬೆಂಗಾಲಿ ಚಿತ್ರೋದ್ಯಮದಲ್ಲಿ ಪ್ರೊಸೇನ್‌ಜಿತ್ ಅವರನ್ನು ಈ ಹೆಸರಿನಿಂದ ಕರೆಯುತ್ತಾರೆ) ಪ್ರತಿಭಾವಂತ ನಟ. ಸಿನಿಮಾದಲ್ಲಿನ ಲೈವ್ ಕಾರ್ಯಕ್ರಮಗಳ ಸನ್ನಿವೇಶಗಳಲ್ಲಿ ಅವರು ಹೆಚ್ಚು ಆಕರ್ಷಿಸುತ್ತಾರೆ” ಎನ್ನುತ್ತಾರೆ ಗಂಗೂಲಿ. ಕುಮಾರ್ ಸಾನು ಚಿತ್ರದ ಹಾಡುಗಳಿಗೆ ದನಿಯಾಗಿದ್ದಾರೆ. ಅಪರಾಜಿತಾ ಮತ್ತು ರಾಜೇಶ್ ಶರ್ಮಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More