ಟ್ರೈಲರ್‌ | ಬೆಚ್ಚಿ ಬೀಳಿಸುವ ದೃಶ್ಯಗಳೊಂದಿಗೆ ನಿರೀಕ್ಷೆ ಹುಟ್ಟಿಸಿದ ‘ಒಡಿಯಾನ್‌’

ಶ್ರೀಕುಮಾರ್ ಮೆನನ್ ನಿರ್ದೇಶನದಲ್ಲಿ ಮೋಹನ್ ಲಾಲ್‌ ನಟಿಸಿರುವ ಬಹುನಿರೀಕ್ಷಿತ ‘ಒಡಿಯಾನ್‌’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಮೂರು ಭಿನ್ನ ಲುಕ್‌ಗಳಲ್ಲಿ ಲಾಲ್‌ ಗಮನ ಸೆಳೆಯುತ್ತಾರೆ. ಪೀಟರ್ ಹೇನ್ ಸಂಯೋಜನೆಯ ಆಕ್ಷನ್‌ ದೃಶ್ಯಗಳು ಪ್ರಮುಖ ಆಕರ್ಷಣೆ.

ಮಲೆಯಾಳಂ ಹಿರಿಯ ನಟ ಮೋಹನ್‌ ಲಾಲ್‌ ಅಭಿನಯದ ಬಹುನಿರೀಕ್ಷಿತ ’ಒಡಿಯಾನ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಬಹುಪಾಲು ಆಕ್ಷನ್ ದೃಶ್ಯಗಳಿಂದ ಕೂಡಿರುವ ಟ್ರೈಲರ್ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಕೂತುಹಲ ಹೆಚ್ಚಿಸುತ್ತದೆ. ಬೆಚ್ಚಿ ಬೀಳಿಸುವ ಭಯಾನಕ ದೃಶ್ಯಗಳು, ಒಮ್ಮೆ ಯುವಕನಾಗಿ ಕಾಣುವ ಕಥಾನಾಯಕ ಮಾಣಿಕ್ಯನ್, ಮಗದೊಮ್ಮೆ ಮಧ್ಯವಯಸ್ಕನಾಗಿ ಕಾಣಿಸುತ್ತಾನೆ. ಒಂದು ದೃಶ್ಯದಲ್ಲಿ ಮುದುಕನಾಗಿ ಎಲ್ಲವನ್ನೂ ತೊರೆದ ಸನ್ಯಾಸಿಯಂತೆ ಕಾಡುತ್ತಲೇ ಹೋಗುತ್ತಾನೆ.

ಕತ್ತಲ ರಾತ್ರಿಯ ಮೇಣದ ಬೆಳಕಿನಲ್ಲಿ ಭಯಭೀತಳಾದವಳಂತೆ ಗೋಚರಿಸುವ ನಟಿ ಮಂಜು ವಾರಿಯರ್, ತೀರಾ ವಯಸ್ಸಾದ ಆಶ್ರಮವಾಸಿ ಹಾಗೂ ಇನ್ನೊಮ್ಮೆ ಮಧ್ಯವಯಸ್ಕನಾಗಿ ಎರಡು ಭಿನ್ನ ಲುಕ್‌ಗಳಲ್ಲಿ ಹಾದು ಹೋಗುವ ನಟ ಪ್ರಕಾಶ್ ರಾಜ್… ಹೀಗೆ ಟ್ರೈಲರ್‌ನಲ್ಲಿ ಕಾಣಿಸಿಕೊಳ್ಳುವ ಪ್ರತಿ ಪಾತ್ರಗಳು ಚಿತ್ರದ ಬಗ್ಗೆ ಯಾವುದೇ ಸುಳಿವುಗಳನ್ನು ಕೊಡದೆ ತಣಿಯದ ಕುತೂಹಲಗಳನ್ನು ಸೃಷ್ಟಿಸುತ್ತಾ, ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸುತ್ತವೆ.

‘ಒಡಿಯಾನ್’ ಚಿತ್ರದ ಟ್ರೈಲರ್ ಬಿಡುಗಡೆಗೂ ಮುನ್ನವೇ ಟ್ರೇಲರ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡಿದ್ದು, ನಟ ಮೋಹನ್ ಲಾಲ್ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಒಡಿಯನ್ ಚಿತ್ರದ ವಿಶೇಷವೆಂದರೆ ನಟ ಮೋಹನಲಾಲ್ ತಮ್ಮ ಪಾತ್ರದ ಮೂರು ವಿಭಿನ್ನ ಲುಕ್‌ಗಾಗಿ ಹೆಚ್ಚು ಶ್ರಮ ವಹಿಸಿದ್ದಾರೆ. ಯುವಕನಂತೆ ಕಾಣಲು 18 ಕೆಜಿಗಳಷ್ಟು ತೂಕ ಇಳಿಸಿಕೊಂಡಿದ್ದರು. ನಂತರ ಮಧ್ಯ ವಯಸ್ಕ ಹಾಗೂ ವೃದ್ಧನಂತೆ ಕಾಣಲು ಗಡ್ಡಧಾರಿಯಾಗಿಯೂ ಹೊಸ ಪ್ರಯತ್ನಗಳಿಗೆ ಅಣಿಯಾಗಿದ್ದಾರೆ.

ಈವರೆಗೂ ಜಾಹಿರಾತುಗಳ ನಿರ್ದೇಶನದಲ್ಲಿ ಹೆಸರು ಮಾಡಿದ್ದ ಶ್ರೀಕುಮಾರ್ ಮೆನನ್ ಪಾಲಿಗೆ ‘ಒಡಿಯಾನ್’ ಚೊಚ್ಚಲ ಚಿತ್ರ. ಚಿತ್ರದಲ್ಲಿನ ಸಾಹಸ ದೃಶ್ಯಗಳಿಗೆ ಪೀಟರ್ ಹೇನ್ ಸಾರಥ್ಯ ವಹಿಸಿದ್ದು ಆಕ್ಷನ್ ದೃಶ್ಯಗಳು ವಿಶಿಷ್ಟವಾಗಿ ಮೂಡಿಬಂದಿವೆ. ಆಂಥೋನಿ ಪೆರುಂಬವೂರ್ ನಿರ್ಮಾಣದ ಚಿತ್ರಕ್ಕೆ, ಹರಿಕೃಷ್ಣನ್ ಚಿತ್ರಕಥೆ ರಚಿಸಿದ್ದು, ಸ್ಯಾಮ್ ಸಿ ಎಸ್, ಎಮ್ ಜಯಚಂದ್ರನ್ ಸಂಗೀತ ಸಂಯೋಜಿಸಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More