ಲೈಂಗಿಕ ಶೋಷಣೆ | ಕ್ಷಮೆ ಯಾಚಿಸಿದ ರಘು ದೀಕ್ಷಿತ್‌, ಸಂತ್ರಸ್ತೆ ಪರ ರಘು ಪತ್ನಿ ಮಯೂರಿ ಮಾತು

ಲೈಂಗಿಕ ಶೋಷಣೆ ಆರೋಪದ ಹಿನ್ನೆಲೆಯಲ್ಲಿ ಗಾಯಕ, ಸಂಗೀತ ಸಂಯೋಜಕ ರಘು ದೀಕ್ಷಿತ್‌ ಕ್ಷಮೆ ಯಾಚಿಸಿದ್ದಾರೆ. #MeToo ಅಭಿಯಾನಕ್ಕೆ ಅವರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಮಧ್ಯೆ, ರಘು ಅವರ ಪತ್ನಿ, ನೃತ್ಯಕಲಾವಿದೆ ಮಯೂರಿ ಸಂತ್ರಸ್ತೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ

ಲೈಂಗಿಕ ಶೋಷಣೆ ವಿರುದ್ಧದ #MeToo ಅಭಿಯಾನಕ್ಕೆ ಕೈಜೋಡಿಸಿದ ಪ್ರಮುಖರಲ್ಲಿ ಹಿನ್ನೆಲೆ ಗಾಯಕಿ ಚಿನ್ಮಯಿ ಶ್ರೀಪಾದ ಒಬ್ಬರು. ಅವರು ಕಳೆದ ವಾರ ತಮ್ಮ ಅನುಭವಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಅವರು ಅನಾಮಿಕ ಗಾಯಕಿಯೊಬ್ಬರ ಬರಹವನ್ನು ಟ್ವಿಟರ್‌ನಲ್ಲಿ ಶೇರ್ ಮಾಡುವ ಮೂಲಕ ಕನ್ನಡದ ಗಾಯಕ, ಸಂಗೀತ ಸಂಯೋಜಕ ರಘು ದೀಕ್ಷಿತ್ ವಿರುದ್ಧ ಲೈಂಗಿಕ ಶೋಷಣೆಯ ಆರೋಪ ಮಾಡಿದ್ದರು. ಗಾಯಕಿ ಚಿನ್ಮಯಿ ಶ್ರೀಪಾದ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಈ ಬರಹ ಹಾಕಿದ್ದು, “ನನ್ನ ಗೆಳತಿ, ಗಾಯಕಿಯ ಆರೋಪವಿದು. ಆಕೆಯನ್ನು ನಾನು ನಂಬುತ್ತೇನೆ. ರಘು ದೀಕ್ಷಿತ್‌ ಇದಕ್ಕೇನು ಹೇಳುತ್ತೀರಿ?” ಎಂದು ಟ್ವೀಟಿಸಿದ್ದಾರೆ.

ತಮ್ಮ ಸ್ಟುಡಿಯೋದಲ್ಲಿ ಗಾಯಕ ರಘು ದೀಕ್ಷಿತ್ ತಮ್ಮನ್ನು ಅಪ್ಪಿಕೊಂಡು ಚುಂಬಿಸಲು ಯತ್ನಿಸಿದ್ದರು ಎಂದು ಅನಾಮಿಕ ಗಾಯಕಿ ಆರೋಪಿಸಿದ್ದಾರೆ. “ನಾನು ಅವರ ಸ್ಟುಡಿಯೋಗೆ ತೆರಳಿದ್ದೆ. ಆಗೊಮ್ಮೆ ಅವರು ನನ್ನನ್ನು ಬರಸೆಳೆದು ಚುಂಬಿಸುವಂತೆ ಹೇಳಿದರು. ಮತ್ತೊಮ್ಮೆ ಅಪ್ಪಿಕೊಳ್ಳಲು ಮುಂದಾದರು. ನಾನು ಅಳುತ್ತ ಸ್ಟುಡಿಯೋದಿಂದ ಹೊರಟೆ. ನನ್ನ ಹಾಗೆ ಹಲವಾರು ಯುವತಿಯರಿಗೆ ಅವರಿಂದ ಇಂತಹ ಅನುಭವ ಆಗಿರಬಹುದು,” ಎಂದು ಅನಾಮಿಕ ಗಾಯಕಿ ಬರೆದುಕೊಂಡಿದ್ದಾರೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಗಾಯಕ ರಘು ದೀಕ್ಷಿತ್, “ಆರೋಪಿಸಿರುವ ಯುವತಿ ನನಗೆ ಗೊತ್ತು. ಆ ಘಟನೆಯ ನಂತರ ಆಕೆಯಲ್ಲಿ ನಾನು ಕ್ಷಮೆ ಯಾಚಿಸಿದ್ದೆ. ಆದರೆ ಅವರು ಹೇಳಿರುವುದೆಲ್ಲವೂ ಸತ್ಯವಲ್ಲ. ನನ್ನನ್ನು ಅಪರಾಧಿಯಂತೆ ಬಿಂಬಿಸಿದ್ದಾರೆ. ನಾನು ಅಪ್ಪಿಕೊಂಡು ಆಕೆಗೆ ಚುಂಬಿಸಲು ಯತ್ನಿಸಿದ್ದು ನಿಜ. ಅವರು ಸ್ಟುಡಿಯೋದಿಂದ ಹೊರನಡೆದರು. ಆ ಸಂದರ್ಭದಲ್ಲಿ ನನ್ನ ಮತ್ತು ಪತ್ನಿಯ ಮಧ್ಯೆಯ ಸಂಬಂಧ ಹಳಸತೊಡಗಿತ್ತು. ನನಗೆ ಯುವ ಗಾಯಕಿಯಲ್ಲಿ ಉತ್ತಮ ಸಂಗಾತಿ ಕಾಣಿಸಿದ್ದರು,” ಎಂದಿರುವ ರಘು ದೀಕ್ಷಿತ್‌, ಗಾಯಕಿ ಚಿನ್ಮಯಿ ಹಾಗೂ #MeToo ಅಭಿಯಾನದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

ಈ ಮಧ್ಯೆ, ರಘು ದೀಕ್ಷಿತ್ ಪತ್ನಿ, ನೃತ್ಯಕಲಾವಿದೆ ಮಯೂರಿ ಉಪಾಧ್ಯ ಪ್ರಕರಣದ ಬಗ್ಗೆ ಟ್ವೀಟ್ ಮಾಡಿದ್ದಾರೆ. “ಮಹಿಳೆಯರ ಗೌರವಕ್ಕೆ ಧಕ್ಕೆ ತರುವವರಿಗೆ, ತಪ್ಪು ಮಾಡಿದವರಿಗೆ ಕಾನೂನು ರೀತಿ ಶಿಕ್ಷೆಯಾಗಬೇಕು. ಆಗ ಇತರ ಪುರುಷರು ಎಚ್ಚೆತ್ತುಕೊಳ್ಳುತ್ತಾರೆ. ಲೈಂಗಿಕ ಶೋಷಣೆ ವಿರುದ್ಧ ದಿಟ್ಟತನದಿಂದ ಮಾತನಾಡುತ್ತಿರುವ ಚಿನ್ಮಯಿ ಶ್ರೀಪಾದ ಅವರಿಗೆ ಅಭಿನಂದನೆಗಳು. ನಾನು ಯಾವಾಗಲೂ ಶೋಷಿತರ ಪರವಾಗಿರುತ್ತೇನೆ,” ಎಂದು ಮಯೂರಿ ಹೇಳಿದ್ದಾರೆ.

ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
ವಿಡಿಯೋ | ‘ಥಗ್ಸ್‌ ಆಫ್‌ ಹಿಂದೋಸ್ಥಾನ್’ ಚಿತ್ರದ ‘ವಶಮಲ್ಲೆ’ ಹಾಡು ರಿಲೀಸ್‌
Editor’s Pick More