ಬಾಲಿವುಡ್‌ನ ಸುಭಾಷ್ ಘೈ, ಸಾಜಿದ್‌ ಖಾನ್‌ ವಿರುದ್ಧ ಲೈಂಗಿಕ ಶೋಷಣೆ ಆರೋಪ

ಬಾಲಿವುಡ್‌ ನಿರ್ದೇಶಕರಾದ ಸುಭಾಷ್ ಘೈ ಮತ್ತು ಸಾಜಿದ್ ಖಾನ್‌ ಅವರ ವಿರುದ್ಧ ಲೈಂಗಿಕ ಶೋಷಣೆಯ ಆರೋಪ ಕೇಳಿಬಂದಿದೆ. ಘೈ ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ. ನಿರ್ದೇಶಕ ಸಾಜಿದ್ ಖಾನ್‌ ನೈತಿಕ ಹೊಣೆ ಹೊತ್ತು ‘ಹೌಸ್‌ಫುಲ್ 4’ ಚಿತ್ರನಿರ್ದೇಶನದಿಂದ ಹಿಂದೆ ಸರಿದಿದ್ದಾರೆ

ದಿನಗಳೆದಂತೆ ಸಾಮಾಜಿಕ ಜಾಲತಾಣದಲ್ಲಿ ಬೆಳಕಿಗೆ ಬರುತ್ತಿರುವ ಲೈಂಗಿಕ ಶೋಷಣೆ ಆರೋಪಗಳು ಹೆಚ್ಚುತ್ತಲೇ ಇವೆ. ಈ ಬಾರಿ ಬಾಲಿವುಡ್‌ನ ಹಿರಿಯ ಚಿತ್ರನಿರ್ದೇಶಕ ಸುಭಾಷ್‌ ಘೈ ವಿರುದ್ಧ ಆರೋಪ ಕೇಳಿಬಂದಿದ್ದು, ಉದ್ಯಮದವರು ಅಚ್ಚರಿಪಟ್ಟಿದ್ದಾರೆ. ಸಂತ್ರಸ್ತೆಯ ಹೇಳಿಕೆಯ ಬರಹವನ್ನು ಸಿನಿಮಾ ಬರಹಗಾರ್ತಿ ಮಹಿಮಾ ಕುಕ್ರೇಜಾ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ನಿರ್ದೇಶಕ ಸುಭಾಷ್‌ ಘೈ ಮಧ್ಯಪಾನ ಮಾಡಿಸಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಬರೆದುಕೊಂಡಿದ್ದಾರೆ. ಘೈ ಈ ಆರೋಪವನ್ನು ಅಲ್ಲಗಳೆದಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ‘ರೇಸ್‌ 3’ ಚಿತ್ರದಲ್ಲಿ ನಟಿಸಿದ್ದ ನಟಿ ಸಲೋನಿ ಚೋಪ್ರಾ ಅವರು ನಿರ್ದೇಶಕ ಸಾಜಿದ್ ಖಾನ್‌ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಹಿಂದೊಮ್ಮೆ ಸಾಜಿದ್‌ ಅವರೊಂದಿಗೆ ಸಲೋನಿ ಸಹಾಯಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದರು. ಆ ಸಂದರ್ಭದಲ್ಲಿ ಸಾಜಿದ್ ತಮ್ಮೊಂದಿಗೆ ತಪ್ಪಾಗಿ ನಡೆದುಕೊಂಡಿದ್ದರು ಎಂದಿದ್ದಾರೆ ಸಲೋನಿ. ಸಾಜಿದ್ ಮಾತ್ರವಲ್ಲದೆ, ನಟ ಝೈನ್‌ ದುರಾನಿ ಮತ್ತು ಚಿತ್ರನಿರ್ದೇಶಕ ವಿಕಾಸ್ ಬೆಹ್ಲ್‌ ಅವರ ವಿರುದ್ಧವೂ ಸಲೋನಿ ಲೈಂಗಿಕ ಶೋಷಣೆಯ ಆರೋಪ ಮಾಡಿದ್ದಾರೆ.

#MeToo ಅಭಿಯಾನಕ್ಕೆ ಪ್ರತಿಕ್ರಿಯಿಸಿದ ಮೊದಲಿಗರಲ್ಲಿ ಸಿನಿಮಾ ಬರಹಗಾರ್ತಿ ಮಹಿಮಾ ಕುಕ್ರೇಜಾ ಒಬ್ಬರು. ಅವರು ಕಮೆಡಿಯನ್‌ ಉತ್ಸವ್‌ ಚಕ್ರವರ್ತಿ ಅವರ ಮೇಲೆ ಲೈಂಗಿಕ ಶೋಷಣೆಯ ಆರೋಪ ಮಾಡಿದ್ದರು. ಇದೀಗ ಅವರೇ ನಿರ್ದೇಶಕ ಸುಭಾಷ್ ಘೈ ಅವರಿಂದ ಶೋಷಣೆಗೊಳಗಾಗಿದ್ದೇನೆ ಎನ್ನುವ ಯುವತಿಯ ಬರಹವನ್ನು ಟ್ವೀಟ್ ಮಾಡಿದ್ದಾರೆ. ಚಿತ್ರಕತೆ ಚರ್ಚಿಸುವ ಸಲುವಾಗಿ ಯುವತಿಯನ್ನು ಘೈ ಅಪಾರ್ಟ್‌ಮೆಂಟ್‌ಗೆ ಕರೆದಿದ್ದಾರೆ. ಆಗ ಅವರು ತಮ್ಮನ್ನು ಚುಂಬಿಸಿದ್ದರು ಎಂದು ಯುವತಿ ಹೇಳಿಕೊಂಡಿದ್ದಾರೆ. ಮತ್ತೊಂದು ಬಾರಿ ಮಧ್ಯಪಾನ ಮಾಡಿಸಿ ಲೈಂಗಿಕ ಶೋಷಣೆ ನಡೆಸಿದ್ದರು ಎಂದು ಯುವತಿ ಗಂಭೀರ ಆರೋಪ ಮಾಡಿದ್ದಾರೆ.

ನಿರ್ದೇಶಕ ಸುಭಾಷ್ ಘೈ ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, “ನನ್ನ ಮೇಲೆ ಆರೋಪ ಕೇಳಿಬಂದಿದೆ. ತಮಗೆ ಪರಿಚಿತರಿರುವ ವ್ಯಕ್ತಿಯ ಇಮೇಜನ್ನು ಹಾಳುಮಾಡುವುದು ಒಂದು ರೀತಿಯ ಫ್ಯಾಷನ್ ಆಗಿದೆ. ಹುರುಳಿಲ್ಲದ ಕತೆಗಳನ್ನು ಕಟ್ಟಿ ಅವರು ವಿವರಣೆ ಕೊಡುತ್ತಾರೆ. ನನ್ನ ಬಗ್ಗೆ ಕೇಳಿಬಂದಿರುವ ಆರೋಪದಲ್ಲಿ ಕಿಂಚಿತ್ತೂ ಸತ್ಯವಿಲ್ಲ. ನಾನು ಮಾನನಷ್ಟ ಮೊಕದ್ದಮೆ ಹೂಡುವವನಿದ್ದೇನೆ. ಮಹಿಳೆಯರ ಬಗ್ಗೆ ನನಗೆ ಅಪಾರ ಗೌರವವಿದೆ,” ಎಂದಿದ್ದಾರೆ.

ಸಲೋನಿ ಚೋಪ್ರಾ ಅವರಲ್ಲದೆ, ಪತ್ರಕರ್ತೆ ಕರಿಷ್ಮಾ ಉಪಾಧ್ಯ ಅವರೂ ನಿರ್ದೇಶಕ ಸಾಜಿದ್ ಖಾನ್‌ ಮೇಲೆ ಲೈಂಗಿಕ ಶೋಷಣೆಯ ಆರೋಪ ಮಾಡಿದ್ದಾರೆ. ಸಂದರ್ಶನಕ್ಕಾಗಿ ಹೋಗಿದ್ದಾಗ ಸಾಜಿದ್ ತಮ್ಮನ್ನು ಚುಂಬಿಸಿದ್ದರು ಎಂದಿದ್ದಾರೆ ಕರಿಷ್ಮಾ. ಈ ಆರೋಪದ ಹಿನ್ನೆಲೆಯಲ್ಲಿ ನಿರ್ದೇಶಕ ಸಾಜಿದ್ ಖಾನ್‌ ‘ಹೌಸ್‌ಫುಲ್‌ 4’ ಹಿಂದಿ ಚಿತ್ರದ ನಿರ್ದೇಶನದಿಂದ ಹಿಂದೆ ಸರಿದಿದ್ದಾರೆ. “ನೈತಿಕತೆಯ ದೃಷ್ಟಿಯಿಂದ ನಾನು ಚಿತ್ರನಿರ್ದೇಶನದಿಂದ ಹಿಂದೆ ಸರಿಯುತ್ತಿದ್ದೇನೆ. ನನ್ನ ಮೇಲಿನ ಆರೋಪ ಸುಳ್ಳೆಂದು ಸಾಬೀತಾದ ನಂತರ ಮರಳುತ್ತೇನೆ,” ಎಂದಿದ್ದಾರೆ ಸಾಜಿದ್ ಖಾನ್‌. ಈ ಆರೋಪದ ಹಿನ್ನೆಲೆಯಲ್ಲಿ ನಟ ಅಕ್ಷಯ್ ಕುಮಾರ್ ‘ಹೌಸ್‌ಫುಲ್‌ 4’ ಚಿತ್ರದ ನಟನೆಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More