ಶಿವರಾಜ್‌, ಸುದೀಪ್‌ ಅಭಿಮಾನಿಗಳಿಂದ ‘ವಿಲನ್‌’ ಸಿನಿಮಾ ಅನಿಮೇಟೆಡ್‌ ಟೀಸರ್

ಶಿವ ರಾಜಕುಮಾರ್, ಸುದೀಪ್‌ ಅಭಿಮಾನಿಗಳು ‘ದಿ ವಿಲನ್‌’ ಚಿತ್ರಕ್ಕೆ ಅನಿಮೇಟೆಡ್‌ ಟೀಸರ್‌ಗಳನ್ನು ರೂಪಿಸಿದ್ದಾರೆ. ಟೀಸರ್‌ಗಳ ಗುಣಮಟ್ಟದ ಬಗ್ಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗಿದ್ದರೂ, ಹಲವರು ಈ ಪ್ರಯೋಗವನ್ನು ಮೆಚ್ಚಿ ತಲೆದೂಗಿದ್ದಾರೆ. ‘ದಿ ವಿಲನ್‌’ ಇದೇ 18ರಂದು ತೆರೆಕಾಣಲಿದೆ

ಪ್ರೇಮ್ ನಿರ್ದೇಶನದ ಮಲ್ಟಿ ಸ್ಟಾರರ್‌ ಚಿತ್ರ ‘ದಿ ವಿಲನ್’ ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಸೆಟ್ಟೇರಿದ ದಿನದಿಂದಲೂ ಚಿತ್ರದಲ್ಲಿ ವಿಲನ್ ಯಾರು ಎಂಬ ಕುತೂಹಲಗಳು, ಉಹಾಪೋಹಗಳು ಜಾರಿಯಲ್ಲಿವೆ. ನಟರಾದ ಶಿವ ರಾಜಕುಮಾರ್‌ ಹಾಗೂ ಸುದೀಪ್‌ ಅವರ ಲುಕ್‌ಗಳು ಹೊಸದೊಂದು ಟ್ರೆಂಡ್ ಸೃಷ್ಟಿಸಿವೆ. ಒಂದರ ಹಿಂದೆ ಒಂದರಂತೆ ಬಿಡುಗಡೆಗೊಂಡ ಹಾಡುಗಳು ಸದ್ದುಮಾಡುತ್ತಿವೆ.

ಇತ್ತೀಚೆಗಷ್ಟೇ ‘ದಿ ವಿಲನ್’ ಚಿತ್ರದ ಹಾಡುಗಳ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿತ್ತು. ಕಲಾವಿದರು ನೃತ್ಯ ಸಂಯೋಜಕರೊಡಗೂಡಿ ಹೆಜ್ಜೆ ಹಾಕಲು ತಾಲೀಮು ನಡೆಸುತ್ತಿದ್ದ ಮೇಕಿಂಗ್ ಟೀಸರ್ ಆತ್ಮಿಯವಾಗಿ ಕಂಡಿತ್ತು. ಇದೀಗ ಅಭಿಮಾನಿಗಳ ತಂಡವೊಂದು ‘ದಿ ವಿಲನ್’ ಚಿತ್ರದ ಇಬ್ಬರು ಹೀರೋಗಳಾದ ಶಿವ ರಾಜಕುಮಾರ್ ಮತ್ತು ಸುದೀಪ್‌ ಅವರ ಅನಿಮೇಟೆಡ್‌ ಟೀಸರ್‌ಗಳನ್ನು ರೂಪಿಸಿ ಬಿಡುಗಡೆ ಮಾಡಿದೆ.

ನಟ ಶಿವ ರಾಜಕುಮಾರ್‌ ಅಭಿನಯದ ‘ರಾವಣ..’ ಟೀಸರ್‌ನಲ್ಲಿ ಹಿರಿಯ ನಟ ರಾಜಕುಮಾರ್‌ ‘ಶಬ್ಧವೇದಿ’ ಗೆಟಪ್‌ನಲ್ಲಿ‌‌ ಕಾಣಿಸಿಕೊಂಡರೆ, ಸುದೀಪ್‌ರ ‘ಆನೆ ಬಂತೊಂದಾನೆ’ ಟೀಸರ್‌ನಲ್ಲಿ ನಟ ವಿಷ್ಣುವರ್ಧನ್ ‘ಆಪ್ತಮಿತ್ರ’ನಾಗಿ ಕಾಣಿಸಿಕೊಂಡಿದ್ದಾರೆ. ಮೇರು ನಟರಿಗೆ ಶಿವ ರಾಜಕುಮಾರ್‌ ಹಾಗೂ ಸುದೀಪ್‌ರನ್ನು ಹೋಲಿಸುವ ಬರದಲ್ಲಿ ಅಭಿಮಾನಿಗಳು ಟೀಸರ್‌ನ ಗುಣಮಟ್ಟ ಕಡೆಗಣಿಸಿದ್ದಾರೆಂಬುದು ಮೇಲ್ನೋಟಕ್ಕೆ ಮನದಟ್ಟಾಗುತ್ತದೆ. ಇದೇ ಅಭಿಮಾನಿಗಳ ತಂಡ ಈ ಹಿಂದೆ ನಟ ಯಶ್ ಅಭಿನಯದ ‘ಕೆಜಿಎಫ್’‌ ಚಿತ್ರದ ಅನಿಮೇಟೆಡ್ ಟೀಸರ್ ಅನ್ನು ತಯಾರಿಸಿತ್ತು. ‌

ಈ ಹಿಂದೆ ‘ದಿ ವಿಲನ್’ ಚಿತ್ರದ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನಿರ್ದೇಶಕ ಪ್ರೇಮ್, “ಸಿನಿಮಾ ವಿಚಾರದಲ್ಲಿ ನಾನು ಪ್ರಚಾರಪ್ರಿಯ ಎನ್ನುವ ಮಾತುಗಳು ಚಿತ್ರರಂಗದ ತುಂಬೆಲ್ಲ ಮತ್ತೆ-ಮತ್ತೆ ಹರಿದಾಡುತ್ತಲೇ ಇರುತ್ತವೆ. ಆದರೆ, ನಾನು ಎಲ್ಲಿಯೂ ನನ್ನ ಸಿನಿಮಾ ಪ್ರಚಾರ ಮಾಡಿಲ್ಲ. ಬದಲಿಗೆ, ನಮ್ಮ ಕೆಲಸಗಳಲ್ಲಿ ನಾವು ಮಗ್ನರಾಗಿರುತ್ತೇವೆ. ನಮ್ಮ ಪ್ರಯತ್ನಗಳು ಪ್ರತಿ ಬಾರಿ ಸುದ್ದಿಯಾಗುತ್ತಲಿರುತ್ತವೆ. ಅದು ಜನರಿಗೆ ನಮ್ಮ ಮೇಲಿರುವ ಅಭಿಮಾನ, ನಿರೀಕ್ಷೆಯಷ್ಟೇ,” ಎಂದಿದ್ದರು.

ಇದನ್ನೂ ಓದಿ : ಟೀಸರ್‌ | ಶಿವ ರಾಜಕುಮಾರ್‌, ಸುದೀಪ್‌ ‘ದಿ ವಿಲನ್‌’ ಸಾಂಗ್‌ ಮೇಕಿಂಗ್ ವಿಡಿಯೋ

ಅವರ ಮಾತಿನಿಂತೆ ಅಭಿಮಾನಿಗಳು ಸ್ವಯಂಪ್ರೇರಿತರಾಗಿ ತಮ್ಮ ನೆಚ್ಚಿನ ಚಿತ್ರಕ್ಕೆ ವಿಭಿನ್ನ ರೀತಿಯಲ್ಲಿ ಅಭಿಮಾನ ತೋರಿಸುತ್ತಿರುವುದು ವಿಶೇಷ. ಇನ್ನು ಅಭಿಮಾನಿಗಳ ಈ ಪ್ರಯತ್ನಕ್ಕೆ ನಿರ್ದೇಶಕ ಪ್ರೇಮ್‌ ಮೆಚ್ಚುಗೆ ವ್ಯಕ್ತಪಡಿಸಿದ್ದು, “ಶಿವಣ್ಣರನ್ನು ಅಣ್ಣಾವ್ರಿಗೆ ಹಾಗೂ ಸುದೀಪ್‌ರನ್ನು ವಿಷ್ಣು ದಾದಾ ಅವರಿಗೆ ಹೋಲಿಸಿ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿಗೆ ಶರಣು,” ಎಂದಿದ್ದಾರೆ. ‘ದಿ ವಿಲನ್’ ಇದೇ ತಿಂಗಳ 18ರಂದು ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More