#MeTooನಲ್ಲಿ ಬಚ್ಚನ್ ಪ್ರಸ್ತಾಪ; ಜೀವ ಬೆದರಿಕೆ ಇದೆ ಎಂದ ಸಪ್ನಾ ಭವ್ನಾನಿ

#MeToo ಅಭಿಯಾನದ ಹಿನ್ನೆಲೆಯಲ್ಲಿ ಬಾಲಿವುಡ್‌ ಹೇರ್‌ಸ್ಟೈಲಿಸ್ಟ್‌ ಸಪ್ನಾ ಭವ್ನಾನಿ ಅವರು ಹಿರಿಯ ನಟ ಅಮಿತಾಭ್ ಬಚ್ಚನ್‌ ಅವರನ್ನು ಟಾರ್ಗೆಟ್‌ ಮಾಡಿದ್ದರು. ಇಂದು ಅವರು ತಮಗೆ ಜೀವ ಬೆದರಿಕೆ ಇದೆ ಎಂದಿದ್ದಾರೆ. ಈ ಬೆಳವಣಿಗೆ ಬಾಲಿವುಡ್‌ನಲ್ಲಿ ಕುತೂಹಲ, ಅಚ್ಚರಿಗೆ ಕಾರಣವಾಗಿದೆ

ನಿನ್ನೆ (ಅ.12) ಬಾಲಿವುಡ್‌ ಹೇರ್‌ಸ್ಟೈಲಿಸ್ಟ್‌ ಸಪ್ನಾ ಭವ್ನಾನಿ ಅವರು ಹಿರಿಯ ನಟ ಅಮಿತಾಭ್ ಬಚ್ಚನ್‌ ಅವರನ್ನು #MeToo ಅಭಿಯಾನಕ್ಕೆ ಎಳೆದುತಂದಿದ್ದರು. “ದೊಡ್ಡ ಸತ್ಯ ಸದ್ಯದಲ್ಲೇ ಹೊರಬೀಳಲಿದೆ. ‘ಪಿಂಕ್‌’ ಸಿನಿಮಾದಿಂದ ನಿಮಗೆ ಚಳವಳಿಕಾರನ ಇಮೇಜು ಸಿಕ್ಕಿತು. ನಿಮ್ಮ ಬಗೆಗಿನ ನಿಜ ಸಂಗತಿ ಸದ್ಯದಲ್ಲೇ ಬಯಲಾಗಲಿದೆ. ನೀವೀಗ ಆತಂಕದಿಂದ ಉಗುರು ಕಚ್ಚಲು ಆರಂಭಿಸಿಬಹುದು’” ಎಂದು ಸಪ್ನಾ ಭವ್ನಾನಿ ಟ್ವೀಟ್ ಮಾಡಿದ್ದರು. #MeToo ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದ ಬಚ್ಚನ್‌ ಹೇಳಿಕೆಯ ಸ್ಕ್ರೀನ್‌ಶಾಟ್‌ನೊಂದಿಗೆ ಸಪ್ನಾ ಈ ಟ್ವೀಟ್ ಹಾಕಿದ್ದರು.

ಸೆಲೆಬ್ರಿಟಿ ಹೇರ್‌ ಸ್ಟೈಲಿಸ್ಟ್‌ ಆಗಿ ಜನಪ್ರಿಯತೆ ಗಳಿಸಿರುವ ಸಪ್ನಾ, ಬಿಗ್‌ಬಾಸ್‌ 6ನೇ ಸೀಸನ್‌ ಸ್ಪರ್ಧಿಯಾಗಿಯೂ ಪಾಲ್ಗೊಂಡಿದ್ದವರು. ಅವರ ಈ ಟ್ವೀಟ್ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಸಪ್ನಾ ಟ್ವೀಟ್‌ಗೆ ಟ್ವಿಟರ್‌ನಲ್ಲಿ ಖಾರವಾದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಹಲವರು ಅವರ ನಿಲುವನ್ನು ಖಂಡಿಸಿ ನಿಂದಿಸಿದ್ದಾರೆ. “ನೀವು ಅವರಿಂದ ಲೈಂಗಿಕ ಶೋಷಣೆ ಅನುಭವಿಸಿದ್ದೀರಾ? ಹಾಗಿದ್ದರೆ ವಿವರವಾಗಿ ಬರೆದು ಸಾಕ್ಷ್ಯ ಒದಗಿಸಿ,” ಎನ್ನುವಂಥ ಸಂದೇಶಗಳನ್ನೂ ಹಲವರು ಟ್ವೀಟ್ ಮಾಡಿದ್ದರು. “ಮೇರುನಟನ ಬಗ್ಗೆ ಆರೋಪ ಮಾಡುವಾಗ ಎಚ್ಚರವಿರಬೇಕು, ಬಹುಶಃ ನಿಮಗೆ ಬುದ್ಧಿಭ್ರಮಣೆ ಆಗಿರಬಹುದು,” ಎನ್ನುವಂತಹ ಕಮೆಂಟ್‌ಗಳೂ ಬಂದಿದ್ದವು.

ಸಪ್ನಾ ಭವ್ನಾನಿ ಪ್ರತಿಕ್ರಿಯೆ ರೂಪದಲ್ಲಿ ಇಂದು ಮತ್ತೆ ಮೂರು ಟ್ವೀಟ್ ಮಾಡಿದ್ದಾರೆ. “ಬಚ್ಚನ್‌ ವಿರುದ್ಧದ ಲೈಂಗಿಕ ಶೋಷಣೆ ಪ್ರಸ್ತಾಪದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನನ್ನ ಟ್ವೀಟ್‌ಗೆ ದೊಡ್ಡ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರಿಂದ ನನಗೇನೂ ತೊಂದರೆಯಾಗಿಲ್ಲ. ಇದನ್ನು ನಾನು ಸ್ಪಷ್ಟಪಡಿಸುತ್ತಿದ್ದೇನೆ. ಆದರೆ, ಅವರಿಂದ ಬೇರೆಯವರಿಗೆ ತೊಂದರೆಯಾಗಿದೆ. ನನ್ನ ಪೋಸ್ಟ್‌ ಅವರಿಗೆ ಧೈರ್ಯ ತುಂಬಲಿ. ಸಂತ್ರಸ್ತರು ಮಾತನಾಡುವಂತಾಗಲಿ. #MeToo ಅಭಿಯಾನದ ಬಗ್ಗೆ ಮಾಧ್ಯಮದವರು ಹಗುರವಾಗಿ ಮಾತನಾಡುವುದು ಸರಿಯಲ್ಲ,” ಎಂದಿದ್ದಾರವರು.

ಇನ್ನು, ಇಂದಿನ ಅವರ ಮತ್ತೊಂದು ಟ್ವೀಟ್ ಎಲ್ಲರ ಗಮನ ಸೆಳೆದಿದೆ. “ನನಗೆ ಜೀವ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಏಕೆ ಗೊತ್ತೇ? ಅವರ ಕತೆಗಳು ಸದ್ಯದಲ್ಲೇ ಹೊರಬೀಳಲಿವೆ ಎಂದು ನಾನು ಹೇಳಿದ್ದೆ. ಮಹಿಳೆಯರನ್ನು ಬಾಯಿ ಮುಚ್ಚಿಸುವುದೆಂದರೆ ಹೀಗೆ...” ಎಂದು ಸಪ್ನಾ ಟ್ವೀಟ್ ಮಾಡಿದ್ದಾರೆ. ಬಚ್ಚನ್‌ರಿಂದ ಈ ಕುರಿತು ಇಲ್ಲಿವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ನಟಿ ತನುಶ್ರೀ ದತ್ತಾ ಅವರ ಪ್ರಕರಣದಿಂದ ಆರಂಭವಾದ #MeToo ಅಭಿಯಾನ ದೊಡ್ಡ ರೂಪ ಪಡೆದುಕೊಳ್ಳುತ್ತಿದೆ. ಬಾಲಿವುಡ್‌ನ ನಾನಾ ಪಾಟೇಕರ್‌, ಅಲೋಕ್ ನಾಥ್‌, ರಜತ್ ಕಪೂರ್, ವರುಣ್ ಗ್ರೋವರ್‌, ಕರೀಂ ಮೊರಾನಿ, ಕೈಲಾಶ್ ಖೇರ್‌, ವಿಕಾಸ್ ಬೆಹ್ಲ್‌, ಸಾಜಿದ್ ಖಾನ್‌, ಸುಭಾಷ್ ಘೈ ಮೊದಲಾದವರು ಲೈಂಗಿಕ ಶೋಷಣೆಯ ಆರೋಪಕ್ಕೆ ಗುರಿಯಾಗಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More