ವಿಡಿಯೋ | ‘ಕೆಜಿಎಫ್‌’ ಬಿಡುಗಡೆ ಮುಂದೂಡಿಕೆ, ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಯಶ್

ವರ್ಷದ ಬಹುನಿರೀಕ್ಷಿತ ಸಿನಿಮಾ ‘ಕೆಜಿಎಫ್‌’ ಬಿಡುಗಡೆ ಮುಂದಕ್ಕೆ ಹೋಗಿದೆ. ಇದಕ್ಕಾಗಿ ಚಿತ್ರದ ಹೀರೋ ಯಶ್‌ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ. 5 ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ. ಬಾಲಿವುಡ್ ವಿತರಕರ ವಿನಂತಿ ಮೇರೆಗೆ ಸಿನಿಮಾ ಬಿಡುಗಡೆಯನ್ನು ಮುಂದೂಡಿರುವುದಾಗಿ ಹೇಳುತ್ತಾರೆ ಯಶ್‌

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನವೆಂಬರ್ 16ರಂದು ಯಶ್‌ ಅಭಿನಯದ ‘ಕೆಜಿಎಫ್‌’ ಸಿನಿಮಾ ತೆರೆಕಾಣಬೇಕಿತ್ತು. ಇದೇ ತಿಂಗಳಲ್ಲಿ ಟ್ರೈಲರ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ದುಬಾರಿ ಬಜೆಟ್‌ ಮತ್ತು ದೊಡ್ಡ ತಾರಾಗಣದ ಈ ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್‌. ‘ಉಗ್ರಂ’ ಚಿತ್ರದೊಂದಿಗೆ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ ತಂತ್ರಜ್ಞ. ಸಹಜವಾಗಿಯೇ ಅವರ ನಿರ್ದೇಶನದಲ್ಲಿ ತಯಾರಾಗಿರುವ ‘ಕೆಜಿಎಫ್‌’ ನಿರೀಕ್ಷೆ ಹುಟ್ಟುಹಾಕಿದೆ. ಯಶ್ ಸೇರಿದಂತೆ ಇಡೀ ಚಿತ್ರತಂಡ ಈ ಸಿನಿಮಾಗಾಗಿ ಎರಡು ವರ್ಷ ಅವಧಿ ಮೀಸಲಿಟ್ಟಿತ್ತು.

“ಸಿನಿಮಾ ಆರಂಭವಾಗಿ ಒಂದಷ್ಟು ಚಿತ್ರೀಕರಣ ನಡೆಯುತ್ತಿದ್ದಂತೆ ನಮಗೆ ಬೇರೆ ಆಯಾಮಗಳು ಗೋಚರಿಸತೊಡಗಿದವು. ನಿರ್ದೇಶಕರು ಎರಡು ಭಾಗಗಳನ್ನು (ಚಾಪ್ಟರ್‌ 1 ಮತ್ತು ಚಾಪ್ಟರ್‌ 2) ಚಿತ್ರಿಸಲು ನಿರ್ಧರಿಸಿದರು. ಕ್ಯಾನ್ವಾಸ್ ದೊಡ್ಡದಾಯಿತು. ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದರು. ಬಾಲಿವುಡ್‌ನ ಮುಂಚೂಣಿ ವಿತರಕ ಅನಿಲ್ ತಡಾನಿ ಅವರು ನಮ್ಮ ಸಿನಿಮಾ ವಿತರಿಸಲು ಮುಂದಾದರು. ಪ್ರಚಾರ ಹಾಗೂ ಇತರ ತಾಂತ್ರಿಕ ಕಾರಣಗಳಿಂದಾಗಿ ಅವರು ಸಿನಿಮಾ ಬಿಡುಗಡೆ ಮುಂದೂಡಲು ಹೇಳಿದಾಗ ನಾವು ಒಪ್ಪಬೇಕಾಯ್ತು,” ಎನ್ನುತ್ತಾರೆ ಯಶ್‌.

ಯೂನಿವರ್ಸಲ್ ವಿಷಯವಾದ್ದರಿಂದ ಇತರ ಭಾಷೆಗಳಲ್ಲಿ ಬಿಡುಗಡೆಗೊಳಿಸಲು ನೇಟಿವಿಟಿಯ ಸಮಸ್ಯೆ ಎದುರಾಗದು ಎನ್ನುತ್ತಾರೆ ನಿರ್ದೇಶಕರು. “ಹಸಿವು, ಹೋರಾಟ ಯಾವುದೇ ನೆಲಕ್ಕೆ ಹೊಸದಲ್ಲ. ನಮ್ಮ ಚಿತ್ರದ ವಸ್ತು ಇದೇ ಆಗಿದ್ದು, ನೇಟಿವಿಟಿ ಸಮಸ್ಯೆ ಎದುರಾಗದು. ಇದನ್ನು ಆಕ್ಷನ್‌-ಡ್ರಾಮಾ ವಿಭಾಗಕ್ಕೆ ಸೇರ್ಪಡೆಗೊಳಿಸಬಹುದಾದರೂ ತಾಯಿ-ಮಗನ ಸೆಂಟಿಮೆಂಟ್‌ ಕೂಡ ಇದೆ,” ಎನ್ನುತ್ತಾರೆ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್‌. ಯಶ್‌ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಅನಂತ ನಾಗ್‌, ಅಚ್ಯುತ್‌ ಕುಮಾರ್‌, ಬಿ ಸುರೇಶ್‌, ಮಾಳವಿಕಾ ಅವಿನಾಶ್‌ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
Editor’s Pick More