ಮೀಸೆ ಕಾಣದಂತೆ ಟೇಪ್ ಅಂಟಿಸಬಹುದು; ಪತಿ ಲೋಕೇಶ್‌ರನ್ನು ಸ್ಮರಿಸಿದ ಗಿರಿಜಾ

ಅಪ್ಪಟ ಕನ್ನಡ ನೆಲದ ಹೀರೋ ಎಂದು ಕರೆಸಿಕೊಂಡ ಲೋಕೇಶ್, ಎಲ್ಲ ವಯೋಮಾನದ ಪ್ರೇಕ್ಷಕರಿಗೂ ಪ್ರಿಯವಾಗುವ ನಟ. ಇಂದು (ಅ.14) ಅವರು ಅಗಲಿದ ದಿನ. ಅವರ ತಾರಾಪತ್ನಿ ಗಿರಿಜಾ, ಸಿನಿಮಾ ಚಿತ್ರೀಕರಣ ಸಂದರ್ಭಗಳ ಸನ್ನಿವೇಶಗಳ ಮೂಲಕ ಲೋಕೇಶ್‌ರನ್ನು ಸ್ಮರಿಸಿಕೊಂಡಿದ್ದಾರೆ

ಸಿನಿಮಾರಂಗದಲ್ಲಿ ವಿಚಿತ್ರ ಜನ, ವಿಶಿಷ್ಟ ಸಂದರ್ಭಗಳು ಎದುರಾಗಿವೆ. ಅಂಥದ್ದೊಂದು ಸನ್ನಿವೇಶವನ್ನಿಲ್ಲಿ ನೆನಪು ಮಾಡಿಕೊಳ್ಳಬಹುದು. ಸಿನಿಮಾ ಬಗ್ಗೆ ಹೆಚ್ಚೇನೂ ಅನುಭವವಿಲ್ಲದ ಕೆಲವರು ಚಿತ್ರವೊಂದನ್ನು (ಚಿತ್ರದ ಹೆಸರು ಬೇಡ) ಮಾಡುವುದೆಂದು ನಿರ್ಧರಿಸಿದ್ದರು. ಅವರ ಉತ್ಸಾಹ ನೋಡಿ ನಾನು ಹಾಗೂ ಪತಿ ಲೋಕೇಶ್ ಇಬ್ಬರೂ ಚಿತ್ರದಲ್ಲಿ ನಟಿಸುತ್ತೇವೆಂದು ಹೇಳಿದ್ದೆವು. ಆರಂಭದಲ್ಲಿ ಲೋಕೇಶ್ ಅಭಿನಯದ ಸನ್ನಿವೇಶಗಳು ಇರಲಿಲ್ಲವಾದ್ದರಿಂದ ಅವರು ಬಂದಿರಲಿಲ್ಲ.

ಮಂಡ್ಯ ಬಳಿಯ ಗ್ರಾಮವೊಂದರಲ್ಲಿ ಶೂಟಿಂಗ್. ಅಲ್ಲಿ ಕಲಾವಿದರ ಊಟೋಪಚಾರಕ್ಕೆ ಯಾವುದೇ ಸೌಲಭ್ಯ ಒದಗಿಸಿರಲಿಲ್ಲ. ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನ, ರಾತ್ರಿ ಊಟಕ್ಕೆ ಗ್ರಾಮದ ಒಂದೊಂದು ಮನೆ ಗೊತ್ತುಪಡಿಸುತ್ತಿದ್ದರು! ದೂರವಿದ್ದರೂ ನಡೆದೇಹೋಗಬೇಕಿತ್ತು. ನಡೆಯಲು ಸಾಧ್ಯವಾಗೋಲ್ಲ ಅಂದಾಗ ಎತ್ತಿನ ಗಾಡಿಯೊಂದರ ವ್ಯವಸ್ಥೆ ಮಾಡಿದ್ದರು. ನಾವು ಊಟಕ್ಕೆಂದು ಹೋದ ಕೆಲವು ಮನೆಗಳಲ್ಲಿ, “ಇನ್ನೂ ಅಡುಗೆ ಸಿದ್ಧವಾಗಿಲ್ಲ,” ಎನ್ನುತ್ತಿದ್ದರು! ಮುಜುಗರವಾದರೂ ಏನೂ ಮಾಡುವಂತಿರಲಿಲ್ಲ.

ಇನ್ನು, ಶೂಟಿಂಗ್ ಸಮಯದಲ್ಲೂ ವಿಚಿತ್ರಗಳು ಘಟಿಸುತ್ತಿದ್ದವು. ನಿರ್ಮಾಪಕರ ಜಿಪುಣತನ ನೋಡಿ ನಮಗೆ ಸಾಕುಸಾಕಾಗಿ ಹೋಗಿತ್ತು. ನಿರ್ದೇಶಕರು ಹೆಚ್ಚು ಅವಧಿಯ ಶಾಟ್‌ಗಳನ್ನು ಚಿತ್ರಿಸುತ್ತಿದ್ದರೆ ನಿರ್ಮಾಪಕರು ಕೈಕೈ ಹಿಸುಕಿಕೊಳ್ಳುತ್ತಿದ್ದರು. ರೀಲ್‌ಗಳು ಪೋಲಾಗುತ್ತವೆಂದು ಕೆಲವು ಬಾರಿ ಆ ನಿರ್ಮಾಪಕ ಕ್ಯಾಮರಾಗೆ ಅಡ್ಡ ಬಂದು ಬಿಡುತ್ತಿದ್ದ ! ಅಂತಿಮ ದಿನಗಳ ಚಿತ್ರೀಕರಣಗಳಿಗೆಂದು ಲೋಕೇಶ್ ಬಂದರು. “ನಮ್ಮ ಚಿತ್ರಕ್ಕೆ ನೀವು ಮೀಸೆ ತೆಗೆಯಬೇಕು” ಎಂದು ನಿರ್ದೇಶಕರು ಪಟ್ಟು ಹಿಡಿದರು. “ನಾನೀಗ ಬೇರೆ ಚಿತ್ರವೊಂದರಲ್ಲಿ (ಕ್ಷೀರಸಾಗರ) ನಟಿಸುತ್ತಿದ್ದೇನೆ. ಅಲ್ಲಿ ಕಂಟಿನ್ಯೂಟಿಗೆ ತೊಂದರೆಯಾಗುತ್ತೆ. ನಿಮಗೆ ಬೇರೆ ದಿನ ಡೇಟ್ ಕೊಡಬಹುದಾ?” ಎಂದು ಲೋಕೇಶ್ ಕೇಳಿದರು. “ಬೇರೆ ದಿನ ಯಾಕೆ ಸಾರ್? ಒಂದು ಕೆಲಸ ಮಾಡಿ, ಮೀಸೆ ಕಾಣದಂತೆ ಟೇಪ್ ಅಂಟಿಸಿಕೊಂಡು ನಮ್ಮ ಚಿತ್ರದಲ್ಲಿ ಅಭಿನಯಿಸಿ” ಎಂದಿದ್ದರು ನಿರ್ಮಾಪಕರು! ಅವರ ಮಾತಿಗೆ ಅಳಬೇಕೋ, ನಗಬೇಕೋ ನಮಗೆ ತಿಳಿಯಲಿಲ್ಲ! ನಮ್ಮ ಅದೃಷ್ಟಕ್ಕೆ ಈ ಚಿತ್ರ ತೆರೆಕಾಣಲಿಲ್ಲ.

ಯೂನಿಟ್‌ಗೆ ಅಡುಗೆ ಮಾಡಿ ಬಡಿಸಿದರು!: ಲೋಕೇಶ್ ಅತ್ಯಂತ ರುಚಿಯಾಗಿ ಅಡುಗೆ ಮಾಡುತ್ತಿದ್ದರು. ಅವರ ಕೈರುಚಿಯನ್ನು ಉದ್ಯಮದ ಬಹುತೇಕರು ಸವಿದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಒಂದು ಸಂಗತಿ ನೆನಪಾಗುತ್ತದೆ. ಎಸ್ ನಾರಾಯಣ್ ನಿರ್ದೇಶನದ ‘ಬೇವು ಬೆಲ್ಲ’ ಚಿತ್ರಕ್ಕೆ ಮಹದೇವಪುರದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಆ ದಿನಗಳಲ್ಲಿ ಬಾಬ್ರಿ ಮಸೀದಿ ಗಲಾಟೆ ಶುರುವಾಯ್ತು. ನಿಷೇಧಾಜ್ಞೆ ಜಾರಿಯಾದ್ದರಿಂದ ಇಡೀ ಯೂನಿಟ್ ಹಳ್ಳಿ ಬಿಟ್ಟು ಕದಲುವಂತಿರಲಿಲ್ಲ. ಅಡುಗೆಗೆ ಹೆಚ್ಚಿನ ದಿನಸಿಯೂ ಇರಲಿಲ್ಲ. ಆಗ ಹತ್ತು ದಿನಗಳ ಕಾಲ ಹಳ್ಳಿಯಲ್ಲಿ ಸಿಕ್ಕ ಅಕ್ಕಿ ಮತ್ತಿತರೆ ಅಲ್ಪ ಪದಾರ್ಥಗಳಲ್ಲೇ ಲೋಕೇಶ್ ಎಲ್ಲರಿಗೂ ಅಡುಗೆ ಮಾಡಿ ಬಡಿಸಿದ್ದಾರೆ! ಯಾವುದೇ ಕೊರತೆ ಕಾಡದಂತೆ ಇದ್ದುದರಲ್ಲೇ ವಿವಿಧ ತಿಂಡಿ, ತಿನಿಸು ಮಾಡಿಕೊಡುತ್ತಿದ್ದರಂತೆ ‘ಬಾಣಸಿಗ ಲೋಕೇಶ್’.

ರಂಗದ ಮೇಲೆ ಮದುವೆ: ಲೋಕೇಶ್ ಪ್ರಗತಿಪರ ವಿಚಾರಧಾರೆ ಹೊಂದಿದ್ದವರು. ರಂಗಭೂಮಿ ಬಗ್ಗೆ ಅವರಿಗೆ ಅಪಾರ ಒಲವಿತ್ತು. ರಂಗದ ಮೇಲೆಯೇ ತಮ್ಮ ವಿವಾಹ ನೆರವೇರಬೇಕು ಎನ್ನುವಷ್ಟರ ಮಟ್ಟಿಗೆ ಅವರು ರಂಗಭೂಮಿಯನ್ನು ಪ್ರೀತಿಸುತ್ತಿದ್ದರು. ಅಂತೆಯೇ ರಂಗದ ಮೇಲೆಯೇ ಅವರು ಗಿರಿಜಾರನ್ನು ವರಿಸಿದರು! ಮರಣಾನಂತರ ತಮ್ಮ ದೇಹ ದಾನ ಮಾಡಬೇಕೆಂದು ಅವರು ಸೂಚಿಸಿದ್ದರು. ಮನೆಯವರು ಲೋಕೇಶ್‌ರ ಬಯಕೆಯನ್ನು ಈಡೇರಿಸಿದರು. ಅಪ್ಪಟ ಕನ್ನಡ ನೆಲದ ಹೀರೋ ಎಂದು ಗುರುತಿಸಿಕೊಂಡ ಲೋಕೇಶ್ ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದ.

ಲೋಕೇಶ್‌ ಅಭಿನಯದ ಸಿನಿಮಾಗಳ ವಿಡಿಯೋ ತುಣುಕುಗಳು

ಎಲ್ಲಿಂದಲೋ ಬಂದವರು (1980)

ಬೂತಯ್ಯನ ಮಗ ಅಯ್ಯು (1974)

ಪರಸಂಗದ ಗೆಂಡೆತಿಮ್ಮ (1978)

ಭುಜಂಗಯ್ಯನ ದಶಾವತಾರ (1991)

ಗಾನಯೋಗಿ ಪಂಚಾಕ್ಷರಿ ಗವಾಯಿ (1995)

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More