ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು

ಖ್ಯಾತ ನಟಿ ಸ್ಮಿತಾ ಪಾಟೀಲ್‌ ಅವರನ್ನು ಕನ್ನಡಕ್ಕೆ ಕರೆತಂದವರು ನಿರ್ದೇಶಕ ಟಿ ಎಸ್ ನಾಗಾಭರಣ. ಎಂಬತ್ತರ ದಶಕದಲ್ಲಿ ಅವರು ನಿರ್ದೇಶಿಸಿದ ಅನ್ವೇಷಣೆ ಚಿತ್ರದಲ್ಲಿ ಅನಂತ್‌ನಾಗ್‌ ಅವರ ಜೊತೆಗೆ ನಟಿಸಿದ್ದರು. ಸ್ಮಿತಾ ಪಾಟೀಲ್‌ ಅವರ ಜನ್ಮ ದಿನ ಈ ಹೊತ್ತಲ್ಲಿ ಆ ದಿನದ ನೆನಪುಗಳನ್ನು ನಾಗಾಭರಣ ಮೆಲುಕು ಹಾಕಿದ್ದಾರೆ

ಸ್ಮಿತಾ ನನಗೆ ೧೯೭೯-೮೦ರಲ್ಲಿ ಪರಿಚಯ. ಆಗ ಗಿರೀಶ್‌ ಕಾರ್ನಾಡರು ಪೂನಾ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ ನಿರ್ದೇಶಕರಾಗಿದ್ದರು. ಆ ಸಮಯದಲ್ಲಿ ಅವರ ಜೊತೆ ಸುಮಾರು ಆರು ತಿಂಗಳು ಪೂನಾ ಇನ್‌ಸ್ಟಿಟ್ಯೂಟ್‌ನಲ್ಲಿ ಅಸೋಸಿಯೇಷನ್‌ ಕೋರ್ಸ್‌ ಮಾಡಬೇಕೆಂದು ಹೋದೆ. ಕೋರ್ಸ್‌ ಸೇರಲು ಆಗಲಿಲ್ಲ. ಆದರೆ ಅಲ್ಲಿನ ಲೈಬ್ರರಿಯಲ್ಲಿ ಕೂತು ಓದುತ್ತಾ, ಅಲ್ಲಿನ ಆಗುಹೋಗುಗಳನ್ನು ನೋಡಿ ಕಲಿತೆ. ಇದೇ ಸಂದರ್ಭದಲ್ಲಿ ಚಿನ್ನು ಪಟವರ್ಧನ್‌ ಅವರ ಪರಿಚಯವಾಯಿತು. ಅವರು 'ದಾನೊಂದು ಕಾಲದಲ್ಲಿ' ಚಿತ್ರಕ್ಕೆ ಕಲಾ ನಿರ್ದೇಶನ ಮಾಡಿದ್ದಾರೆ. ಅವರ ಮನೆಯಲ್ಲಿ ಸ್ಮಿತಾರನ್ನು ಮೊದಲು ಭೇಟಿಯಾದೆ. ಕಾರ್ನಾಡ್‌ ಸ್ಮಿತಾ ಬಗ್ಗೆ ಆಗಲೇ ಹೇಳಿದ್ದರು. 'ಆಕೆ ನಿಜವಾದ ಚಿತ್ರಪ್ರಿಯರು. ಜೊತೆಗೆ ರಂಗನಟಿ' ಎಂದಿದ್ದರು. ನಾನೂ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದವನು. ಅದು ಪರಿಚಯಕ್ಕೆ ಅಷ್ಟು ಸಾಕಿತ್ತು. ಆಗ ನಾನೊಂದು ಸಿನಿಮಾ ತಯಾರಿಯಲ್ಲಿದ್ದೆ. ಧಾರಾವಾಡದಲ್ಲಿ ಕೂತು ಆ ಚಿತ್ರದ ಕತೆಯ ಮೇಲೆ ಕೆಲಸ ಮಾಡುತ್ತಿದ್ದವು. ಆಗಲೇ ನಾನು ಈ ಕಥೆಯ ನಾಯಕಿ ಪಾತ್ರಕ್ಕೆ ಸ್ಮಿತಾ ಸೂಕ್ತವಾದವರು ಎಂದು ಹೇಳಿದ್ದೆ.

'ಅನ್ವೇಷಣೆ' ಚಿತ್ರದಲ್ಲಿರುವ ಏಕೈಕ ಗೀತೆ ಇದು. ದೊಡ್ಡರಂಗೇಗೌಡರು ಬರೆದಿದ್ದು ವಾಣಿಜಯರಾಂ ಹಾಡಿದ್ದಾರೆ.

ನನ್ನ ಮತ್ತು ಸ್ಮಿತಾ ಭೇಟಿಯಲ್ಲಿ ಈ ಬಗ್ಗೆ ಏನೂ ಹೇಳಲಿಲ್ಲ. ಎರಡು ಮೂರು ಭೇಟಿಗಳ ನಂತರ ಸಿನಿಮಾ ಕಥೆಯನ್ನು ಹೇಳಿ, ನಾಯಕಿಯ ಪಾತ್ರವನ್ನು ನಿರ್ವಹಿಸುವಿರಾ ಎಂದು ಕೇಳಿದೆ. 'ನಾನಿರುತ್ತೇನೆ?' ಎಂದು ತಕ್ಷಣವೇ ಉತ್ತರಿಸಿದರು. ಆ ಹೊತ್ತಿಗಾಗಲೇ ಸ್ಮಿತಾ ಜನಪ್ರಿಯ ನಟಿ. ಆಕೆಗೆ ಸಂಭಾವನೆ ಕೊಡಲು ನಮ್ಮಲ್ಲಿ ಹಣವಿರಲಿಲ್ಲ. ಅದನ್ನೇ ಆಕೆಗೆ ಹೇಳಿದೆ. " ಹಣ ಯಾರಿಗೆ ಬೇಕು'' ಎಂದು ಉತ್ತರಿಸಿ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಗೆಯನ್ನು ಸೂಚಿಸಿದರು. ಆದರೂ ನಾವೊಂದು ಸಂಭಾವನೆ ಕೊಡುವುದಾಗಿ ಹೇಳಿದ್ದೆವು. ಆದರೆ, ಆಕೆ ನಾವು ಕೊಡುವುದಕ್ಕಿಂತ ಹೆಚ್ಚು ಖರ್ಚು ಮಾಡಿಕೊಂಡು ಚಿತ್ರೀಕರಣಕ್ಕೆ ಬಂದು ಹೋದರು. ಬಾಂಬೆ, ಬೆಂಗಳೂರು, ಮೈಸೂರುಗಳಿಗೆ ಓಡಾಡಿದರು. ನಮ್ಮ ಪಕ್ಕದ ಮನೆಯ ಹುಡುಗಿಯಂತೆ ಎಲ್ಲರೊಂದಿಗೆ ಬೆರೆಯುತ್ತಿದ್ದರು.

ಚಿತ್ರ ನಿರ್ಮಾಣ ನಾವಂದುಕೊಂಡಿದ್ದಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದಕೊಂಡಿತು. ಹಣದ ಕೊರತೆಯೇ ಮುಖ್ಯ ಕಾರಣವಾಗಿತ್ತು. ಹಣ ಸಿಕ್ಕಾಗ ಚಿತ್ರೀಕರಿಸುವುದು, ನಂತರ ಸಿಗುವವರೆಗೆ ಕಾಯುವುದು. ಹೀಗಾಗಿತ್ತು. ಚಿತ್ರದ ನಾಯಕ ಮೈಸೂರಿನಲ್ಲಿ ಶೂಟಿಂಗ್‌ ಮುಗಿಸಿ ರೂಮಿಗೆ ಹೋಗುತ್ತಿದ್ದರು. ಬೆಳಗ್ಗೆ ಇರುತ್ತಿರಲಿಲ್ಲ. ಆಗ ಸ್ಮಿತಾ ಮತ್ತು ಅವರು ಮರಾಠಿಯಲ್ಲಿ ಜಗಳ ಆಡುತ್ತಿದ್ದರು. ಆದರೆ ಅನಂತ್‌ನಾಗ್‌ ಮರಳಿ ಬರುವವರೆಗೆ ಕಾದು ಚಿತ್ರೀಕರಣ ಮುಗಿಸಿಕೊಂಡು ಹೋಗುತ್ತಿದ್ದರು. ನಾವು ಕೊಡಲು ಸಾಧ್ಯವಾಗುತ್ತಿದ್ದುದು, ರೈಲಿ ಖರ್ಚು. ಆದರೆ ಆಕೆ ವಿಮಾನದಲ್ಲೇ ಬಂದು ಹೋಗುತ್ತಿದ್ದರು. ಜನಪ್ರಿಯ ನಟಿಯಾಗಿ ಬೆಳೆದಿದ್ದ ಸ್ಮಿತಾ ಅಥವಾ ಅಹಂ ತೋರಿಸಿದೆ, ನಮ್ಮ ಸಮಸ್ಯೆಗಳ ನಡುವೆ ಹೊಂದಿಕೊಂಡು ತಂಡದ ಭಾಗಿ ಹೋದರು. ಚಿತ್ರ ಹೊರಬಂದಾಗ, ತುಂಬಾ ಖುಷಿಪಟ್ಟರು, ಚಿತ್ರವನ್ನು ಮೆಚ್ಚಿಕೊಂಡರು. ಚಿತ್ರಕ್ಕೆ ಕಂಠದಾನವನ್ನು ವೈಶಾಲಿ ಕಾಸರವಳ್ಳಿಯವರು ಮಾಡಿದ್ದಾರೆ. ಸ್ವತಃ ಸ್ಮಿತಾ ಮಾಡಬೇಕೆಂಬ ಆಸೆ ಇತ್ತು. ಆದರೆ ಅದಕ್ಕಾಗಿ ಅವಕಾಶವಾಗಲಿಲ್ಲ.

ಇದನ್ನೂ ಓದಿ : ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ

ಸ್ಮಿತಾ ಅವರು ಅಕಾಲಿಕವಾಗಿ ತೀರಿಕೊಂಡರು. ಅವರ ಸಾವಿಗೆ ಅನಾರೋಗ್ಯವೇ ಕಾರಣ. ಅವರ ಅಂತಿಮ ದರ್ಶನಕ್ಕೆ ಹೋದಾಗ ಇದು ತಿಳಿಯಿತು. ಆದರೆ ಆಗ ನನಗೆ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಘಟನೆ ಹೊಳೆದು ಪಚ್ಚೆನಿಸಿತು. ಸ್ಮಿತಾ ಅವರಿಗೆ ರಕ್ತ ಹೆಪ್ಪುಗಟ್ಟುತ್ತಿರಲಿಲ್ಲ. ಸಣ್ಣ ಗಾಯವಾದರೂ ವಿಪರೀತ ರಕ್ತಸ್ರಾವ ಆಗುತ್ತಿತ್ತು. ಅದೇ ಅವರ ಸಾವಿಗೆ ಕಾರಣ ಎಂಬ ವಿಷಯ ಅವರ ಅಂತಿಮ ದರ್ಶನಕ್ಕೆ ಹೋದಾಗ ತಿಳಿಯಿತು. 'ಅನ್ವೇಷಣೆ' ಚಿತ್ರೀಕರಣದ ಸಂದರ್ಭದಲ್ಲಿ ಅನಂತ್‌ ನಾಗ್‌ ಶೇವಿಂಗ್ ಮಾಡಿಕೊಳ್ಳುತ್ತಿರುತ್ತಾರೆ. ಸ್ಮಿತಾ ಕಾಫಿ ತೆಗೆದುಕೊಂಡು ಬರುತ್ತಾರೆ. ಅನಂತ್ ನಾಗ್‌, ನಾನು ಶೇವ್ ಮಾಡಿಕೊಳ್ತಾ ಇದ್ದೀನಿ. ನೀನೇ ಕುಡಿಸು ಎನ್ನುತ್ತಾರೆ. ಆಗ ನಾನು ಕುಡಿಸೋಲ್ಲ ಎಂದು ತಿರುಗಿ ಕೊಳ್ತಾರೆ. ಆಗ ಅನಂತ್ ಹಿಡಿದುನಿಲ್ಲಿಸುತ್ತಾರೆ. ಆಗ ನೊರೆಯಿರುವ ಬ್ರಷ್ ಅನ್ನು ಆಕೆಯ ಕೆನ್ನೆಗೆ ಹಚ್ಚುತ್ತಾರೆ. ಇದು ದೃಶ್ಯ. ಶೂಟ್‌ ಮಾಡಿ ಮುಗಿಸಿದೆವು. ಸ್ಮಿತಾ ಅವರ ಕೈ ಬೆರಳು ಕೆಂಪಾಗಿದ್ದವು. ಏನೆಂದು ನೋಡಿದರೆ, ರಕ್ತ ಸೋರುತ್ತಿತ್ತು. ಅನಂತ್‌ ನಾಗ್‌ ಬ್ಲೇಡ್‌ ಹಾಕಿಕೊಂಡೇ ಶೇವ್ ಮಾಡಿದ್ದರು. ನಟಿಸುವಾಗ ಸ್ಮಿತಾ ಅವರ ಎರಡು ಬೆರಳು ಕತ್ತರಿಸಿ ಹೋಗಿತ್ತು. ರಕ್ತ ಬಳಬಳ ಎಂದು ಸೋರುತ್ತಲೇ ಇತ್ತು. ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೆ ರಕ್ತಸ್ರಾವ ನಿಲ್ಲಿಸುವುದಕ್ಕೆ ೨ ಗಂಟೆಗಳು ಬೇಕಾಯಿತು. ಈ ಘಟನೆ ನನ್ನ ಮನಸ್ಸಿನಲ್ಲಿ ಮಾಸದೇ ಉಳಿದುಬಿಟ್ಟಿದೆ.

ಆ ಕಾಲದಲ್ಲಿ ಶಬಾನಾ ಮತ್ತು ಸ್ಮಿತಾ ನಡುವೆ ಯಾವಾಗಲೂ ಹೋಲಿಕೆ. ಶಬಾನಾ ಅವರದ್ದು ಆಕರ್ಷಕವಾದ, ಮಾದಕ ರೂಪ. ಆದರೆ ಸ್ಮಿತಾಗೇ ಇದ್ದಿದ್ದು ಆತಂರಿಕವಾದ ಸೌಂದರ್ಯ. ಮಂಡಿ, ಭೂಮಿಕಾ ಮುಂತಾದ ಚಿತ್ರಗಳನ್ನೇ ನೋಡಿ. ಆ ಪಾತ್ರಗಳು ಸ್ಮಿತಾ ವ್ಯಕ್ತಿತ್ವವನ್ನು ಬಿಡಿಸಿಡುತ್ತವೆ. ಆಕೆಯನ್ನು ನನ್ನ ಚಿತ್ರದಲ್ಲಿ ನಟಿಸಲು ಕರೆತರಲು ಸಾಧ್ಯವಾಗಿದ್ದು ನಿಜಕ್ಕೂ ಖುಷಿ.

ಅನ್ವೇಷಣೆ ಚಿತ್ರದ ಕುರಿತು

ಅನ್ವೇಷಣೆ ಚಿತ್ರ ೧೯೮೩ರಲ್ಲಿ ಬಿಡುಗಡೆಯಾಯಿತು. ಟಿ ಎಸ್ ನಾಗಾಭರಣ ನಿರ್ದೇಶನದ ಈ ಚಿತ್ರದಲ್ಲಿ ಸ್ಮಿತಾ ಪಾಟೀಲ್, ಅನಂತ್‌ ನಾಗ್‌ ಅವರ ಜೊತೆಗೆ ಗಿರೀಶ್‌ ಕಾರ್ನಾಡ್‌, ಸುಂದರ್‌ ರಾಜ್‌, ಬಾಲಕೃಷ್ಣ, ರಮೇಶ್‌ ಭಟ್‌ ನಟಿಸಿದ್ದರು. ವಿಜಯ್‌ ಭಾಸ್ಕರ್‌ ಸಂಗೀತ ನಿರ್ದೇಶನ, ಎಸ್ ರಾಮಚಂದ್ರ ಛಾಯಾಗ್ರಹಣ. ದುಡಿಯುವ ದಂಪತಿಗಳು ಮತ್ತು ಅವರ ಇಬ್ಬರು ಮಕ್ಕಳು ಹಾಗೂ ಹಿರಿಯರುವ ಕುಟುಂಬದಲ್ಲಿ ಒಮ್ಮೆ ಇದ್ದಕ್ಕಿದ್ದಂತೆ ಅನಾಮಿಕ ವ್ಯಕ್ತಿಯ ಶವವೊಂದು ತಮ್ಮ ಮನೆಯಲ್ಲಿ ಪತ್ತೆಯಾಗುತ್ತದೆ. ಅದನ್ನು ಏನು ಮಾಡಬೇಕೆಂದು ತಿಳಿಯದೇ ಆತಂಕಕ್ಕೀಡಾಗುತ್ತಾರೆ. ಇಡೀ ರಾತ್ರಿ ಇದೇ ಚಿಂತೆಯಲ್ಲಿ ಕಳೆಯುತ್ತಾರೆ. ಕಡೆಗೆ ಅವನು ಯಾರು? ತನ್ನ ಮನೆಯಲ್ಲಿ ಯಾಕೆ ಸತ್ತು ಬಿದ್ದಿದ್ದ ಎಂಬುದನ್ನು ಹುಡುಕು ಆರಂಭಿಸುತ್ತಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More