#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್

ಸ್ಯಾಂಡಲ್‌ವುಡ್ ನಟಿಯರಾದ ಸಂಗೀತಾ ಭಟ್‌ ಹಾಗೂ ಸಂಜನಾ ಗರ್ಲಾನಿ ಚಿತ್ರರಂಗದಲ್ಲಿ ತಮ್ಮ ಮೇಲೆ ಲೈಂಗಿಕ ಕಿರುಕುಳ ಆಗಿರುವ ಕುರಿತು ಅಳಲು ತೋಡಿಕೊಂಡಿದ್ದರು. ಇದೀಗ ನಟಿ ಶ್ರುತಿ ಹರಿಹರನ್‌, ದಕ್ಷಿಣ ಭಾರತದ ಖ್ಯಾತ ನಟರೊಬ್ಬರ ಮೇಲೆ ಆರೋಪ ಮಾಡಿದ್ದು, ಗಂಭೀರ ಚರ್ಚೆಗೆ ನಾಂದಿ ಹಾಡಿದೆ

ಬಾಲಿವುಡ್‌ನಲ್ಲಿ ನಟಿ ತನುಶ್ರೀ ದತ್ತಾ ಅವರ ಲೈಂಗಿಕ ಕಿರುಕುಳ ಆರೋಪದಿಂದ ಬಿರುಸುಗೊಂಡ #MeToo ಅಭಿಯಾನ, ಭಾರತದಾದ್ಯಂತ ಗಣ್ಯಾತಿಗಣ್ಯರ ಮುಖವಾಡಗಳನ್ನು ಬಯಲಿಗೆಳೆಯುತ್ತಿದೆ. ಇದೀಗ ಸ್ಯಾಂಡಲ್‌ವುಡ್‌ನಲ್ಲೂ #MeToo ಅಭಿಯಾನ ಚುರುಕುಗೊಂಡಿದೆ. ಈ ಹಿಂದೆ ನಟಿಯರಾದ ಸಂಗೀತಾ ಭಟ್‌ ಹಾಗೂ ಸಂಜನಾ ಗರ್ಲಾನಿ ಚಿತ್ರರಂಗದಲ್ಲಿ ತಮ್ಮ ಮೇಲಾದ ಲೈಂಗಿಕ ಕಿರುಕುಳದ ಕುರಿತು ಅಳಲು ತೋಡಿಕೊಂಡಿದ್ದರು. ಇದೀಗ ನಟಿ ಶ್ರುತಿ ಹರಿಹರನ್‌ ಕೂಡ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಕುರಿತು ಹೇಳಿಕೊಂಡಿದ್ದು; ದಕ್ಷಿಣ ಭಾರತದ ಖ್ಯಾತ ನಟರೊಬ್ಬರ ಮೇಲೆ ಆರೋಪ ಮಾಡಿದ್ದಾರೆ.

“ಅರ್ಜುನ್‌ ಸರ್ಜಾರ 150ನೇ ಚಿತ್ರ 'ವಿಸ್ಮಯ'ದಲ್ಲಿ ನಾನು ಅವರ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಚಿತ್ರದ ಇಂಟಿಮೇಟ್ ಸೀನ್‌ವೊಂದಕ್ಕೆ ನಾನು ಅರ್ಜುನ್‌ರ ಜೊತೆಗೆ ರಿಹರ್ಸಲ್ ನಡೆಸುತ್ತಿದ್ದ ವೇಳೆಯಲ್ಲಿ ಅರ್ಜುನ್‌ ಸರ್ಜಾ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಚಿಕ್ಕಂದಿನಿಂದ ಅವರ ಚಿತ್ರಗಳನ್ನು ನೋಡಿಕೊಂಡು ಬೆಳೆದವಳು ನಾನು; ಅವರ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ನನಗೆ ಅತೀವ ಸಂತಸ ಉಂಟುಮಾಡಿತ್ತು. ಆದರೆ, ರಿಹರ್ಸಲ್‌ ವೇಳೆ ಯಾವ ಮುನ್ನೆಚ್ಚರಿಕೆಯನ್ನೂ ನೀಡದೆ ಅರ್ಜುನ್‌ ನನ್ನನ್ನು ತಬ್ಬಿಕೊಂಡು ಸ್ವಲ್ಪ ಹೊತ್ತು ಹಾಗೆಯೇ ಇರುವಂತೆ ಕೇಳಿಕೊಂಡರು. ಅವರ ಆ ವರ್ತನೆಯಿಂದ ನನಗೆ ಇರುಸುಮುರುಸು ಉಂಟಾಯಿತು. ತಕ್ಷಣವೇ ನಿರ್ದೇಶಕರ ಬಳಿ ಹೋಗಿ, ಇನ್ನು ಮುಂದೆ ನಾನು ರಿಹರ್ಸಲ್‌ಗೆ ಬರುವುದಿಲ್ಲ, ನೇರವಾಗಿ ಶೂಟಿಂಗ್‌‌ಗೆ ಬರುವುದಾಗಿ ತಿಳಿಸಿದೆ. ಹಾಗೇ ಮಾಡಿದೆ ಕೂಡ. ಚಿತ್ರೀಕರಣದ ಸಮಯದಲ್ಲೂ ಅರ್ಜುನ್‌ ಸರ್ಜಾ ತಮ್ಮೊಂದಿಗೆ ಡಿನ್ನರ್‌ಗೆ ಹಾಗೂ ರೆಸಾರ್ಟ್‌ಗೆ ಬರುವಂತೆ ಕೇಳುತ್ತಿದ್ದರು, ಅವರ ಮಾತುಗಳು ನನಗೆ ಅಸಭ್ಯ ಎನಿಸುತ್ತಿತ್ತು. ಆ ಕ್ಷಣಗಳಲ್ಲಿ ನೇರವಾಗಿಯೇ, ‘ನಿಮ್ಮೊಂದಿಗೆ ಬರಲಾಗುವುದಿಲ್ಲ’ ಎಂದು ಉತ್ತರಿಸುತ್ತಿದ್ದೆ. ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅಸಹ್ಯ ಎನಿಸುವ ವಾತಾವರಣವನ್ನು ಅರ್ಜುನ್‌ ಸರ್ಜಾ ನಿರ್ಮಿಸಿದ್ದರು,” ಎಂದು ನಟಿ ಶ್ರುತಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ : #MeToo | ಭಾರತದಲ್ಲಿ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿಯಾದ ಪ್ರಮುಖರ ಪಟ್ಟಿ

ನಟಿಯ ಆರೋಪದ ಕುರಿತು ಇದೀಗ ಮೌನ ಮುರಿದಿರುವ ಅರ್ಜುನ್‌ ಸರ್ಜಾ “ನನಗೆ #MeToo ಅಭಿಯಾನದ ಕುರಿತು ಬಹಳ ಗೌರವಿದೆ. ಈವರೆಗೂ ನನ್ನ ಸಿನಿ ಬದುಕಿನಲ್ಲಿ ಹಲವು ನಟಿಯರೊಂದಿಗೆ ಅಭಿನಯಿಸಿದ್ದೇನೆ ಯಾವತ್ತಿಗೂ ಯಾರೊಂದಿಗೂ ಅಸಭ್ಯವಾಗಿ ವರ್ತಿಸಿಲ್ಲ, ವಿಸ್ಮಯ ಚಿತ್ರದ ಚಿತ್ರೀಕರಣದ ವೇಳೆಯೂ ಶೃತಿಯ ನಟನೆಗೆ ಮೆಚ್ಚಿಗೆ ಸೂಚಿಸಿ ಒಂದಷ್ಟು ಸಲಹೆಗಳನ್ನೂ ನೀಡಿದ್ದೇನೆ. ಆದರೆ, ಆಕೆಯ ಈ ತರನಾದ ಆರೋಪ ನನಗೆ ನಂಬಲು ಕಷ್ಟಕರವಾಗಿದೆ. ನನ್ನಿಂದ ಕಿರುಕುಳ ಉಂಟಾಗಿದ್ದರೆ ಅಂದೇ ದೂರು ನೀಡಬೇಕಾಗಿತ್ತು. ಒಂದೂವರೆ ವರ್ಷಗಳ ನಂತರದ ಈ ಆರೋಪ ನನಗೆ ಬಾಲಿಶವೆನ್ನಿಸುತ್ತಿದೆ, ಈ ಅಪಾಧನೆಯಿಂದ ನನಗೆ ನೋವುಂಟಾಗಿದ್ದು ಮಾನ ನಷ್ಟ ಮೊಕದ್ದಮೆ ಹೂಡಬೇಕೆಂದಿದ್ದೇನೆ, #MeToo ಅಭಿಯಾನ ದೌರ್ಜನ್ಯಕ್ಕೊಳಗಾದ ಹಲವರಿಗೆ ಒಳ್ಳೆಯ ವೇದಿಕೆಯಾಗಿ ಬೆಳೆದು ನಿಂತಿದೆ. ಈ ರೀತಿಯ ಸುಳ್ಳು ಆರೋಪಗಳ ಮೂಲಕ ಅಭಿಯಾನವನ್ನು ದುರುಪಯೋಗ ಪಡಿಸಿಕೊಳ್ಳಬೇಡಿ ಎಂದು ಅರ್ಜುನ್‌ ಸರ್ಜಾ ಪ್ರತಿಕ್ರಿಯಿಸಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
Editor’s Pick More