#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ

ನಟಿ ಶೃತಿ ಹರಿಹರನ್‌, ಬಹುಭಾಷಾ ನಟ ಅರ್ಜುನ್‌ ಸರ್ಜಾ ವಿರುದ್ಧ ಮಾಡಿದ ಲೈಂಗಿಕ ದೌರ್ಜನ್ಯದ ಆರೋಪ ದಿನೇದಿನೇ ಹಲವು ತಿರುವು ಪಡೆಯುತ್ತಿದೆ. ಶೃತಿ ಹರಿಹರನ್‌ ತಮ್ಮ ಆರೋಪಕ್ಕೆ ಬದ್ಧವಾಗಿದ್ದು, ಸರ್ಜಾ ಕುಟುಂಬ ಸೇರಿದಂತೆ ಹಲವರು ಶೃತಿ ಅವರನ್ನೇ ತಪ್ಪಿತಸ್ಥೆ ಎನ್ನುತ್ತಿದ್ದಾರೆ

ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಗುರುವಾರ ನಟ ಅರ್ಜುನ್ ಸರ್ಜಾ ಹಾಗೂ ನಟಿ ಶ್ರುತಿ ಹರಿಹರನ್‌ ನಡುವೆ ನಡೆದ ಸಂಧಾನ ಸಭೆ ವಿಫಲವಾಗಿದೆ. ಹಿರಿಯ ನಟ ಅಂಬರೀಶ್, ಮಂಡಳಿಯ ಅಧ್ಯಕ್ಷ ಚಿನ್ನೇಗೌಡ, ನಿರ್ಮಾಪಕರಾದ ಮುನಿರತ್ನ, ರಾಕ್‌ಲೈನ್‌ ವೆಂಕಟೇಶ್, ಸಾ ರಾ ಗೋವಿಂದ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಮ್ಮ ಅಳಲು ತೋಡಿಕೊಂಡ ಅರ್ಜುನ್ ಸರ್ಜಾ ಆನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪದಿಂದ ಸಾಕಷ್ಟು ವೇದನೆ ಅನುಭವಿಸಿದ್ದೇನೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಸಂಧಾನ ಸಾಧ್ಯವೇ ಇಲ್ಲ ಎಂದು ಖಂಡತುಂಡವಾಗಿ ಹೇಳಿದ್ದಾರೆ.

ಲೈಂಗಿಕ ದೌರ್ಜನ್ಯ ಆರೋಪದಿಂದಾಗಿ ಕುಟುಂಬಸ್ಥರು, ಹಿತೈಷಿಗಳು ಹಾಗೂ ತಮಿಳು, ತೆಲುಗು, ಮಲೆಯಾಳಂ ಹಾಗೂ ಕನ್ನಡದ ಅಭಿಮಾನಿಗಳಿಗೆ ಸಾಕಷ್ಟು ನೋವಾಗಿದೆ. ಆದ್ದರಿಂದ ಪ್ರಕರಣವನ್ನು ಕಾನೂನಾತ್ಮಕವಾಗಿಯೇ ಎದುರಿಸುತ್ತೇನೆ. ನನ್ನ ತೇಜೋವಧೆಯ ಹಿಂದೆ ಕೆಲವರ ಪಿತೂರಿ ಇದೆ, ಮುಂದಿನ ದಿನಗಳಲ್ಲಿ ಅದು ಬಹಿರಂಗಗೊಳ್ಳಲಿದೆ ಎಂದರು.

#MeToo ಅಭಿಯಾನಕ್ಕೆ ನನ್ನ ಸಹಮತವಿದೆ. ಆದರೆ, ಈ ಅಭಿಯಾನ ನಡೆಸುತ್ತಿರುವ ಬಗೆಯು ತೀವ್ರ ನೋವುಂಟು ಮಾಡಿದೆ. ನನ್ನದೇ ಆದ ರೀತಿಯಲ್ಲಿ ಸಮಾಜದಲ್ಲಿ ಮಹಿಳೆಯರು ಹಾಗೂ ಶೋ‍ಷಿತರ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೆ, ಈ ಸಂದರ್ಭದಲ್ಲಿ ಅವುಗಳ ಬಗ್ಗೆ ಮಾತನಾಡುವುದು ಸೂಕ್ತವೆನ್ನಿಸುವುದಿಲ್ಲ ಎಂದರು.

ಆನಂತರ ಚಿತ್ರರಂಗದ ಹಿರಿಯ ಸಮ್ಮಖದಲ್ಲಿ ಮಾತನಾಡಿದ ಶ್ರುತಿ, “ಈ ಮೊದಲೇ ನಾನು ಹೇಳಿದಂತೆ ಚಿತ್ರರಂಗದ ಹಿರಿಯರ ಮಾತಿಗೆ ತಲೆದೂಗಿ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗದೆ ಕಾದಿದ್ದೇನೆ. ಹಿರಿಯರಾದ ಅಂಬರೀಶ್‌ ಅವರ ಮಾತಿಗೆ ಬೆಲೆ ನೀಡಿ ಶುಕ್ರವಾರ ಬೆಳಗ್ಗೆಯ ವರೆಗೂ ನಾನು ಕಾಯುತ್ತೇನೆ. ಅದಾದ ನಂತರ ಕಾನೂನಾತ್ಮವಾಗಿ ಉತ್ತರಿಸುತ್ತೇನೆ, ದೌರ್ಜನ್ಯಕ್ಕೊಳಗಾದ ಮಹಿಳೆ ತನ್ನ ನೋವನ್ನು ಸಮಾಜ ಎದುರು ವ್ಯಕ್ತಪಡಿಸಿದರೆ ಕೊನೆಗೆ ಆಕೆಯೇ ತಪ್ಪಿತಸ್ಥಳಾಗಿ ನಿಲ್ಲುತ್ತಾಳೆ. ಈಗ ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಮ್ಮ ಸಮಾಜ ಎಷ್ಟು ಕೆಳ ಮಟ್ಟಕ್ಕೆ ಇಳಿದಿದೆ ಎಂದು ತಿಳಿಯುತ್ತದೆ” ಎಂದು ಬೇಸರ ವ್ಯಕ್ತ ಪಡಿಸಿದರು.

ಕನ್ನಡ ಚಿತ್ರರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ನಟಿ ಶ್ರುತಿ ಹರಿಹರನ್‌ ಮೇಲಿನ ಲೈಂಗಿಕ ಕಿರುಕುಳದ #MeToo ಆರೋಪ ದಿನೇ ದಿನೇ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಆಪಾದನೆ ಎದುರಿಸುತ್ತಿರುವ ಬಹುಭಾಷಾ ನಟ ಅರ್ಜುನ್‌ ಸರ್ಜಾ ಹಾಗೂ ಸರ್ಜಾ ಕುಟುಂಬದ ಸದಸ್ಯರು, ಶ್ರುತಿ ಹರಿಹರನ್‌ರ ಆರೋಪವನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ನಟಿಯ ಆರೋಪದಿಂದಾಗಿ ತಮ್ಮ ಮಾನ ಹಾನಿಯಾಗಿದ್ದು, ಶೃತಿ ಹರಿಹರನ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದಿದ್ದ ನಟ ಅರ್ಜುನ್‌, ಇದೀಗ ತಮ್ಮ ಸೋದರಳೀಯ (ನಟ) ಧ್ರುವ ಸರ್ಜಾರ ಮೂಲಕ ಸಿಟಿ ಸಿವಿಲ್ ಕೋರ್ಟ್‌ನಲ್ಲಿ 5 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ. ಇದರ ಬೆನ್ನಲ್ಲೇ ಅರ್ಜುನ್‌ ಸರ್ಜಾರ ಆಪ್ತ ಸಹಾಯಕ ಶಿವಾರ್ಜುನ್‌ ಸೈಬರ್‌ ಕ್ರೈಮ್ ಪೋಲಿಸ್ ಠಾಣೆಯಲ್ಲಿ ನಟಿ ಶೃತಿ ಹರಿಹರನ್ ಸೇರಿದಂತೆ ಇತರರ ಮೇಲೆ‌ ಐಟಿ ಆಕ್ಟ್‌ 200 ಅಡಿಯಲ್ಲಿ ದೂರು ದಾಖಲಿಸಿದ್ದು, ಫೇಸ್‌ಬುಕ್‌, ಟ್ವಿಟ್ಟರ್‌, ಇನ್ಸ್ಟಗ್ರಾಂ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ನಟ ಅರ್ಜುನ್‌ ಸರ್ಜಾರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಹರಿಬಿಡಲಾಗಿದ್ದು, ಶೃತಿ ಹರಿಹರನ್‌ ಸೇರಿದಂತೆ ಹಲವರು ನಟನ ಗೌರವಕ್ಕೆ ಧಕ್ಕೆಯುಂಟುಮಾಡುವ ಪ್ರಯತ್ನ ಪಟ್ಟಿದ್ದಾರೆಂದು ದಾಖಲಿಸಲಾಗಿದೆ.

ಇದನ್ನೂ ಓದಿ : #MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್

ತಮ್ಮ ವಿರುದ್ಧ ದೂರು ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿರುವ ನಟಿ ಶೃತಿ ಹರಿಹಹರನ್,‌ ತಮ್ಮ ಬಳಿ ನ್ಯಾಯಲಯಕ್ಕೆ ಒದಗಿಸಬಹುದಾದ ಸಾಕ್ಷ್ಯಾಧಾರಗಳಿದ್ದು, ತಾವೂ ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಹೇಳಿಕೊಂಡಿದ್ದರು. ಪ್ರಕರಣದ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಅರ್ಜುನ್‌ ಸರ್ಜಾರ ಆಪ್ತ ಹಾಗು ಸರ್ಜಾ ಕುಟುಂಬದ ಹಿತೈಷಿ ಪ್ರಶಾಂತ್‌ ಸಂಬರಗಿ, “ನಟ ಅರ್ಜುನ್‌ ಸರ್ಜಾರ ವ್ಯಕ್ತಿತ್ವ ಹರಣಕ್ಕಾಗಿ ವ್ಯವಸ್ಥಿತವಾಗಿ ಸಂಚು ರೂಪಿಸಲಾಗಿದ್ದು, ಶೃತಿ ಹರಿಹರನ್‌ ಸೇರಿದಂತೆ ಕನ್ನಡ ಚಿತ್ರರಂಗದ ಇಬ್ಬರು ಖ್ಯಾತ ನಟರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಅರ್ಜುನ್‌ ವಿರುದ್ಧ ಅವಹೇಳನಕಾರಿ ಸುದ್ದಿ ಹರಡಲು ಸಾಮಾಜಿಕ ಜಾಲತಾಣಗಳಿಗೆ ನಟರೊಬ್ಬರ ಬ್ಯಾಂಕ್ ಖಾತೆಯಿಂದ ಹಣ ಸಂದಾಯವಾಗಿದೆ. ನಮ್ಮ ಬಳಿ ಸಾಕ್ಷ್ಯಾಧಾರಗಳಿದ್ದು, ಶೃತಿ ಹರಿಹರನ್ ಮೇಲೆ ಸದ್ಯದಲ್ಲೇ ಮತ್ತೆರೆಡು ದೂರು ದಾಖಲಿಸಿದ್ದೇವೆ ಎಂದಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಂತರ ಎಚ್ಚೆತ್ತುಕೊಂಡಿರುವ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಇದೀಗ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್ ನೇತೃತ್ವದಲ್ಲಿ ವಿಚಾರಣಾ ಸಭೆ ಏರ್ಪಡಿಸಿದೆ, ಪ್ರಕರಣದ ಸಂತ್ರಸ್ತೆ ನಟಿ ಶೃತಿ ಹರಿಹರನ್ ಹಾಗೂ ಆಪಾಧಿತ ನಟ ಅರ್ಜುನ್‌ ಸರ್ಜಾ ಸೇರಿದಂತೆ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಹಾಗೂ ಚಿತ್ರರಂಗದ ಹಲವು ಗಣ್ಯರು ಸಭೆಯಲ್ಲಿ ಪಾಲ್ಗೊಂಡಿದ್ದು, ಬಹುತೇಕ ವಿಚಾರಣೆ ಸಭೆಯಲ್ಲಿಯೇ ಪ್ರಕರಣದ ರಾಜಿ ಸಂಧಾನ ನಡೆಯುವ ಸಾಧ್ಯತೆಗಳಿವೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
Editor’s Pick More