ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್

‘ವಿಸ್ಮಯ’ ಚಿತ್ರೀಕರಣ ವೇಳೆ ನಟ ಅರ್ಜುನ್‌ ಸರ್ಜಾ ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಆರೋಪಿಸಿದ್ದ ನಟಿ ಶ್ರುತಿ ಹರಿಹರನ್‌, ಸರ್ಜಾ ವಿರುದ್ಧ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದೂರು ದಾಖಲಿಸುವ ಮೂಲಕ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದಾರೆ. ಎಫ್‌ಐಆರ್‌ ಕೂಡ ದಾಖಲಾಗಿದೆ

‘ವಿಸ್ಮಯ’ ಚಿತ್ರದ ಚಿತ್ರೀಕರಣ ವೇಳೆ ನಟ ಅರ್ಜುನ್‌ ಸರ್ಜಾ ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಆರೋಪಿಸಿದ್ದ ನಟಿ ಶ್ರುತಿ ಹರಿಹರನ್‌, ಇದೀಗ ಸರ್ಜಾ ವಿರುದ್ಧ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದೂರು ದಾಖಲಿಸುವ ಮೂಲಕ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದಾರೆ. ಶ್ರುತಿ ನೀಡಿರುವ ದೂರನ್ನು ಆಧರಿಸಿ ಎಫ್‌ಐಆರ್‌ ದಾಖಲಿಸಿರುವ ಪೋಲಿಸರು ತನಿಖೆಗೆ ಮುಂದಾಗಿದ್ದಾರೆ.

“ವಿಸ್ಮಯ’ ಚಿತ್ರದಲ್ಲಿ ನಾನು ಅರ್ಜುನ್ ಸರ್ಜಾರ‌ ಪತ್ನಿಯ ಪಾತ್ರದಲ್ಲಿ ನಟಿಸಿದ್ದೇನೆ. ಸಿನಿಮಾದ ಚಿತ್ರೀಕರಣ ಬಹುಪಾಲು ಹೆಬ್ಬಾಳ, ದೇವನಹಳ್ಳಿ, ಯುಬಿ ಸಿಟಿ ಮುಂತಾದ ಸ್ಥಳಗಳಲ್ಲಿ ನಡೆದಿದೆ. ನಾನು ಚಿತ್ರೀಕರಣಕ್ಕೆ ಹಾಜರಾದ ಸಂದರ್ಭಗಳಲ್ಲಿ ನಟ ಅರ್ಜುನ್‌ ಸರ್ಜಾರಿಂದ ಒಂದಿಲ್ಲೊಂದು ರೀತಿಯಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ,” ಎಂದು ಶ್ರುತಿ ದೂರಿದ್ದಾರೆ. “ಚಿತ್ರೀಕರಣದ ಸಂದರ್ಭದಲ್ಲಿ ಅರ್ಜುನ್‌ ತಮ್ಮೊಟ್ಟಿಗೆ ರೆಸಾರ್ಟ್‌ಗೆ ಬರುವಂತೆ, ಖಾಸಗಿಯಾಗಿ ಸಮಯ ಕಳೆಯುವಂತೆ ಪದೇಪದೇ ಒತ್ತಾಯಿಸುತ್ತಿದ್ದರು. ಅವರ ಈ ರೀತಿಯ ವರ್ತನೆಯಿಂದ ತೀವ್ರ ಆಘಾತಕ್ಕೊಳಗಾಗಿ ಕಣ್ಣೀರು ಹಾಕಿದ್ದೆ. ಒಮ್ಮೆಯುಬಿ ಸಿಟಿಯಲ್ಲಿ ಚಿತ್ರೀಕರಣದ ಸಂದರ್ಭದಲ್ಲಿ ನಾನು ಲಾಂಜ್‌ನಲ್ಲಿ ವಿರಮಿಸುತ್ತಿದ್ದ ವೇಳೆ ನನ್ನ ಬಳಿ ಬಂದ ಅರ್ಜುನ್‌ ಸರ್ಜಾ, ನನ್ನನ್ನು ಹಿಂದಿನಿಂದ ಗಟ್ಟಿಯಾಗಿ ಹಿಡಿದು ಅಸಭ್ಯವಾಗಿ ವರ್ತಿಸಿದ್ದಲ್ಲದೆ, ತಮ್ಮ ರೂಮ್‌ಗೆ ಬರುವಂತೆ ಕರೆದರು. ಮೊದಲಿಂದಲೇ ಅವರ ಉದ್ದೇಶವನ್ನು ಅರಿತಿದ್ದರಿಂದ ನಾನು ನಿರಾಕರಿಸಿದೆ. ನಂತರ ಇಂಟಿಮೇಟ್ ಸೀನ್‌ಗಾಗಿ ನಾನು ಅರ್ಜುನ್ ಸರ್ಜಾರೊಂದಿಗೆ ರಿಹರ್ಸಲ್ ನಡೆಸುತ್ತಿರುವಾಗಲು ನನ್ನನ್ನು ತಬ್ಬಿಕೊಂಡು ದೇಹದ ಹಿಂಭಾಗದ ತೊಡೆಯನ್ನು ಅಸಭ್ಯವಾಗಿ ಸ್ಪರ್ಶಿಸಿದ್ದರು. ಆ ಕ್ಷಣಗಳಲ್ಲಿ ನಾನು ತುಂಬಾ ಭಯಗ್ರಸ್ಥಳಾಗಿದ್ದೆ. ತಮ್ಮ ಬೇಡಿಕೆಗಳನ್ನು ನಾನು ಒಪ್ಪದಿದ್ದಾಗ ಸರ್ಜಾ ನನ್ನ ವೃತ್ತಿಬದುಕನ್ನು ಹಾಳುಮಾಡುವುದಾಗಿ ಬೆದರಿಕೆಯನ್ನೂ ಹಾಕಿದ್ದರು. ನನ್ನ ಮೇಲಾದ ದೌರ್ಜನ್ಯವನ್ನು ಎರಡು ವರ್ಷಗಳ ಕಾಲ ಸಹಿಸಿಕೊಂಡು ಅದೇಷ್ಟೋ ನಿದ್ದೆಗಳಿರದ ರಾತ್ರಿಗಳನ್ನು ಕಳೆದಿದ್ದೇನೆ. #MeToo ಅಭಿಯಾನ ಶುರುವಾದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕವಾಗಿ ನನ್ನ ನೋವನ್ನು ಹೇಳಿಕೊಳ್ಳಬೇಕಾಯಿತು,” ಎಂದು ದೂರಿನಲ್ಲಿ ಶ್ರುತಿ ಹರಿಹರನ್ ಹೇಳಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 354, 354A ಮತ್ತು 509ರ ಅಡಿ ದೂರು ದಾಖಲಿಸಿಕೊಂಡಿರುವ ಪೊಲೀಸರು, ತನಿಖೆಗೆ ಮುಂದಾಗಿದ್ದಾರೆ. ಅಗತ್ಯವಿದ್ದಲ್ಲಿ ಸರ್ಜಾ ಅವರನ್ನು ವಿಚಾರಣೆಗೊಳಪಡಿಸುವುದಾಗಿ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : #MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ

ಈ ಹಿಂದೆ, ತಮ್ಮ ಮೇಲಿನ ಶ್ರುತಿ ಆರೋಪವನ್ನು ಅಲ್ಲಗಳೆದಿದ್ದ ಸರ್ಜಾ ಅವರು, ಕಳೆದ ಗುರುವಾರ ಶ್ರುತಿ ಹರಿಹರನ್ ವಿರುದ್ಧ 5 ಕೋಟಿ ರುಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದರ ಬೆನ್ನಿಗೇ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯು ಹಿರಿಯ ನಟ ಅಂಬರೀಶ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್, ಮುನಿರತ್ನ ಸೇರಿದಂತೆ ಹಲವರ ಸಮ್ಮುಖದಲ್ಲಿ ಶ್ರುತಿ ಮತ್ತು ಸರ್ಜಾ ನಡುವೆ ಸಂಧಾನ ನಡೆಸಲು ಮುಂದಾದರೂ ಅದು ವಿಫಲವಾಯಿತು. ಇದೀಗ ಶ್ರುತಿ ಹರಿಹರನ್‌ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More