ಕ್ಯಾನ್ಸರ್ ದೈವಿಕ ನ್ಯಾಯ; ಇದು ಅಸ್ಸಾಂ ಆರೋಗ್ಯ ಸಚಿವರ ಸಂಶೋಧನೆ!

ಅಸ್ಸಾಂನ ಆರೋಗ್ಯ ಸಚಿವರಾದ ಹಿಮಂತ್‌ ಬಿಸ್ವಾ ಶರ್ಮಾ ಅವರು ಕ್ಯಾನ್ಸರ್‌ ಕಾಯಿಲೆ ಹೇಗೆ ಬರುತ್ತದೆ ಎಂಬುದಕ್ಕೆ ತಮ್ಮದೇ ವ್ಯಾಖ್ಯಾನ ನೀಡಿದ್ದರು. ಅವರ ಹೇಳಿಕೆ ವಿವಾದಕ್ಕೆ ತಿರುಗುತ್ತಿದ್ದಂತೆ, “ನಾನು ಹೇಳಿದ್ದು ಹಾಗಲ್ಲ,” ಎನ್ನುವ ಮೂಲಕ ಬಚಾವಾಗಲು ಯತ್ನಿಸಿದ್ದಾರೆ. ಆದರೆ ವಿಡಿಯೋ ವೈರಲ್ ಆಗಿದೆ

ಮಾರಣಾಂತಿಕ ಕಾಯಿಲೆ ಕ್ಯಾನ್ಸರ್‌ ಹೇಗೆ ಬರುತ್ತದೆ ಎಂಬುದನ್ನು ವೈದ್ಯಕೀಯ ಸಂಶೋಧಕರು ವ್ಯಾಖ್ಯಾನಿಸಿದ್ದಾರೆ. ಆದರೆ, ಇದೀಗ ಅಸ್ಸಾಂನ ಸಚಿವರಾದ ಹಿಮಂತ್‌ ಬಿಸ್ವಾ ಶರ್ಮಾ ಅವರು, “ಕ್ಯಾನ್ಸರ್‌ ದೈವಿಕ ನ್ಯಾಯ, ಅವರವರು ಮಾಡಿದ ಕರ್ಮದ ಫಲವಾಗಿ ಅದನ್ನು ಅನುಭವಿಸುತ್ತಾರೆ,” ಎಂದು ಹೇಳಿಕೆ ನೀಡಿದ್ದರು. ಅಂದಹಾಗೆ ಇವರು ಅಸ್ಸಾಂನ ಆರೋಗ್ಯ ಸಚಿವರು ಕೂಡ.

ಅಸ್ಸಾಂನಲ್ಲಿ ಈಚೆಗೆ ಆಯೋಜಿಸಲಾಗಿದ್ದ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಶರ್ಮಾ ಅವರು ಹೀಗೆ ಹೇಳಿಕೆ ನೀಡಿದ್ದರು. ಹೇಳಿಕೆ ವಿವಾದದ ಸ್ವರೂಪಕ್ಕೆ ತಿರುಗುತ್ತಿದ್ದಂತೆ, “ನಾನು ಹಾಗೆ ಹೇಳಲಿಲ್ಲ. ಅವರವರ ಪೂರ್ವಕರ್ಮದ ಫಲವನ್ನು ಅನುಭವಿಸುತ್ತಾರೆ ಅಷ್ಟೇ,” ಎಂದು ಟ್ವೀಟ್‌ ಮಾಡಿ, ವಿವಾದಕ್ಕೆ ತೇಪೆ ಹಚ್ಚಲು ಮುಂದಾದರು. ಆದರೆ, ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಶರ್ಮಾ ಏನು ಹೇಳಿದರು ಎಂಬುದಕ್ಕೆ ಅಂದು ಮಾತನಾಡಿರುವ ವಿಡಿಯೋ ಸಾಕ್ಷಿಯಾಗಿದೆ ಎಂದು ‘ಸ್ಕ್ರಾಲ್‌.ಇನ್‌’ ವರದಿ ಮಾಡಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಶರ್ಮಾ, “ದೈವಶಕ್ತಿಯಿಂದ ಯಾರೂ ಪಾರಾಗಲಾರರು. ಅವರವರು ಮಾಡಿದ ಪಾಪಕ್ಕೆ ದೇವರು ಶಿಕ್ಷೆ ನೀಡಿಯೇ ನೀಡುತ್ತಾನೆ. ಕೆಲವು ಸಂದರ್ಭದಲ್ಲಿ ಅದು ಕ್ಯಾನ್ಸರ್‌ ರೂಪದಲ್ಲಿ ಬಂದರೆ, ಇನ್ನು ಕೆಲ ಸಮಯದಲ್ಲಿ ಅಪಘಾತದ ರೂಪದಲ್ಲಿ ಬರುತ್ತದೆ. ಅದು ದೈವನ್ಯಾಯ. ಅದರಿಂದ ಯಾರೂ ತಪ್ಪಿಸಿಕೊಳ್ಳಲಾಗದು,” ಎಂದು ಹೇಳಿದ್ದರು.

ಇದನ್ನೂ ಓದಿ : “ಯಂತ್ರದಲ್ಲಿ ಆಲೂಗಡ್ಡೆ ಹಾಕಿದರೆ ಚಿನ್ನ ಬರುತ್ತದೆ” ಎಂದು ರಾಹುಲ್‌ ಹೇಳಿದರೆ?

ಈ ಹೇಳಿಕೆಯ ವಿಡಿಯೋವನ್ನು ಕಾಂಗ್ರೆಸ್‌ ಮುಖಂಡ ಪಿ ಚಿದಂಬರಂ ಅವರು ಟ್ವೀಟ್‌ ಮಾಡಿ, “ಈ ವ್ಯಕ್ತಿ ಏನನ್ನು ಬದಲಾಯಿಸಲು ಹೀಗೆ ಹೇಳುತ್ತಿದ್ದಾರೆ?” ಎಂದು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶರ್ಮಾ ಅವರು, “ಸರ್‌, ದಯವಿಟ್ಟು ನನ್ನ ಹೇಳಿಕೆಯನ್ನು ತಿರುಚಬೇಡಿ. ನಾನು ಹೇಳಿದ್ದು ಹಿಂದೂ ಧರ್ಮದಲ್ಲಿ ಪೂರ್ವಕರ್ಮದ ಬಗ್ಗೆ ನಂಬಿಕೆ ಇದೆ. ಮನುಷ್ಯ ಅನುಭವಿಸುವ ಸಂಕಟಗಳಿಗೆ ಈ ಕರ್ಮಗಳು ಸಂಬಂಧಿಸಿರುತ್ತವೆ. ನೀವು ಅದನ್ನು ನಂಬದಿದ್ದರೆ ಬಿಡಿ,” ಎಂಬುದಾಗಿ ಟ್ವೀಟ್‌ ಮಾಡಿದ್ದರು. ಆದರೆ, ಶರ್ಮಾ ಅವರು, “ಕ್ಯಾನ್ಸರ್‌, ಅಪಘಾತ ಎಲ್ಲವೂ ದೈವೇಚ್ಛೆ,” ಎಂದು ಹೇಳಿದ್ದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More