ಜಿಗ್ನೇಶ್‌ ಮೇವಾನಿಯ ಸುದ್ದಿಗೋಷ್ಠಿಯನ್ನು ಕಾಂಗ್ರೆಸ್‌ ಆಯೋಜಿಸಿದ್ದು ಸತ್ಯವೇ?

ದೆಹಲಿಯಲ್ಲಿ ಜನವರಿ ೫ರಂದು ಜಿಗ್ನೇಶ್‌ ಮೇವಾನಿ ಅವರು ನಡೆಸಿದ ಸುದ್ದಿಗೋಷ್ಠಿಯನ್ನು ಕಾಂಗ್ರೆಸ್‌ ಪಕ್ಷ ಆಯೋಜಿಸಿದ್ದು ಎಂದು ರಿಪಬ್ಲಿಕ್‌ ಸುದ್ದಿವಾಹಿನಿ ಆರೋಪಿಸಿತ್ತು. ಆದರೆ, ಈ ಗೋ‍ಷ್ಠಿಯನ್ನು ಆಯೋಜಿಸಿದ್ದು ಹವ್ಯಾಸಿ ಪತ್ರಕರ್ತ ರಾಜಾ ಹೈದರ್‌ ಎಂಬುವವರು ಎಂದು ತಿಳಿದುಬಂದಿದೆ

‘ಕಾಂಗ್ರೆಸ್‌-ಮೇವಾನಿ ಸಂಬಂಧ ಅನಾವರಣ’ ಎಂಬ ಶೀರ್ಷಿಕೆಯಡಿ ರಿಪಬ್ಲಿಕ್‌ ಸುದ್ದಿವಾಹಿನಿ ದೆಹಲಿಯ ಪ್ರೆಸ್‌ ಕ್ಲಬ್‌ ಆಫ್‌ ಇಂಡಿಯಾದಲ್ಲಿ ಜ.೫ರಂದು ಜಿಗ್ನೇಶ್‌ ಮೇವಾನಿ ನಡೆಸಿದ ಸುದ್ದಿಗೋ‍ಷ್ಠಿಯನ್ನು ಕಾಂಗ್ರೆಸ್‌ ಪಕ್ಷ ಆಯೋಜನೆ ಮಾಡಿದೆ ಎಂದು ಆರೋಪಿಸಿ ಸುದ್ದಿ ಪ್ರಸಾರ ಮಾಡಿತ್ತು. ಅಲ್ಲದೆ, ಇದನ್ನು ಪ್ರಮುಖ ಸುದ್ದಿಯಾಗಿ ಪದೇಪದೇ ತೋರಿಸುತ್ತಿತ್ತು. ವಾಹಿನಿಯ ಪ್ರಧಾನ ಸಂಪಾದಕರು ಈ ಸುದ್ದಿಯನ್ನು ವಿಶ್ಲೇಷಣೆಗೆ ಒಳಪಡಿಸಿ, ಜಿಗ್ನೇಶ್‌ ಅವರ ಸುದ್ದಿಗೋಷ್ಠಿಯನ್ನು ಕಾಂಗ್ರೆಸ್‌ ಪಕ್ಷ ಏಕೆ ಆಯೋಜಿಸಬೇಕು ಎಂದು ಚರ್ಚೆಯನ್ನೂ ನಡೆಸಿದರು. #CongSponsorsJignesh ಎಂದು ಹ್ಯಾಷ್‌ಟ್ಯಾಗ್‌ ಕೂಡ ಸೃಷ್ಟಿಸಲಾಗಿತ್ತು.

ಈ ಸುದ್ದಿ ನಿಜವೇ ಎಂದು ‘ಆಲ್ಟ್‌ ನ್ಯೂಸ್‌’ ಬೆನ್ನತ್ತಿದ್ದಾಗ, ಜಿಗ್ನೇಶ್‌ ಮೇವಾನಿ ಅವರ ಸುದ್ದಿಗೋಷ್ಠಿಯನ್ನು ಆಯೋಜಿಸಿದ್ದು ಹವ್ಯಾಸಿ ಪತ್ರಕರ್ತ ಮತ್ತು ಸಾಕ್ಷ್ಯಚಿತ್ರ ತಯಾರಕ ರಾಜಾ ಹೈದರ್‌ ಎಂಬುವವರು ಎಂದು ತಿಳಿದುಬಂತು. ಈ ಬಗ್ಗೆ ಹೈದರ್‌ ಅವರನ್ನು ‘ಆಲ್ಟ್‌ ನ್ಯೂಸ್‌’ ಸಂಪರ್ಕಿಸಿದಾಗ, “ಹೌದು, ಈ ಸುದ್ದಿಗೋಷ್ಠಿಯನ್ನು ಆಯೋಜಿಸಿದ್ದು ನಾನೇ. ನನ್ನ ಹೆಸರಿನಲ್ಲಿಯೇ ಪ್ರೆಸ್‌ ಕ್ಲಬ್‌ನಲ್ಲಿ ೬,೮೨೫ ರು. ಪಾವತಿಸಿ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು,” ಎಂದು ಪ್ರತಿಕ್ರಿಯಿಸಿದ್ದಾರೆ. ಈ ಸಂಬಂಧ ನಗದು ಪಾವತಿ ರಶೀದಿಯನ್ನೂ ಕಳಿಸಿಕೊಟ್ಟಿದ್ದಾರೆ.

ಇದನ್ನೂ ಓದಿ : ಸಚಿವೆ ಸ್ಮೃತಿ ಇರಾನಿ ಹೇಳಿದಂತೆ ಶ್ರೀನಗರದಿಂದ ಲೇಹ್‌ಗೆ ೧೫ ನಿಮಿಷ ಪ್ರಯಾಣವೇ?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಗ್ನೇಶ್‌ ಮೇವಾನಿ, “ಪ್ರೆಸ್‌ ಕ್ಲಬ್‌ ಆಫ್‌ ಇಂಡಿಯಾದಲ್ಲಿ ಸುದ್ದಿಗೋಷ್ಠಿ ಆಯೋಜಿಸುವಂತೆ ನಾನೇ ರಾಜಾ ಹೈದರ್‌ ಅವರನ್ನು ಕೇಳಿಕೊಂಡಿದ್ದೆ, ಅದರಂತೆ ಅವರು ಆಯೋಜನೆ ಮಾಡಿದ್ದಾರೆ,” ಎಂದಿದ್ದಾರೆ. ಅಷ್ಟೇ ಅಲ್ಲದೆ, ಕಾಂಗ್ರೆಸ್‌ ವಕ್ತಾರ ರಣದೀಪ್‌ ಸರ್ಜಿವಾಲ್‌ ಅವರೂ ಈ ಆರೋಪವನ್ನು ನಿರಾಕರಿಸಿದ್ದಾರೆ.

ರಿಪಬ್ಲಿಕ್‌ ಸುದ್ದಿವಾಹಿನಿ ಆರೋಪಿಸಿದಂತೆ, ಜಿಗ್ನೇಶ್ ಮೇವಾನಿ ಸುದ್ದಿಗೋ‍ಷ್ಠಿಯನ್ನು ಕಾಂಗ್ರೆಸ್‌ ಪಕ್ಷ ಆಯೋಜಿಸಿರಲಿಲ್ಲ ಎಂಬುದಕ್ಕೆ ಹಲವು ಸಾಕ್ಷ್ಯಗಳು ಲಭ್ಯವಾಗಿವೆ. ಈ ಮೂಲಕ, ರಿಪಬ್ಲಿಕ್‌ ವಾಹಿನಿಯ ಸುದ್ದಿ ಸುಳ್ಳು ಎಂಬುದನ್ನು ‘ಆಲ್ಟ್‌ ನ್ಯೂಸ್‌’ ಸುದ್ದಿ ಸಂಸ್ಥೆ ಬಯಲು ಮಾಡಿದೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More