ಕಾರ್ಖಾನೆಯಲ್ಲಿ ನಕಲಿ ನೋಟಿನ ಕಂತೆ ಜೋಡಿಸುತ್ತಿರುವ ದೃಶ್ಯದ ಅಸಲಿಯತ್ತೇನು?

ಆರ್‌ಬಿಐ ಏನೆಲ್ಲ ರಕ್ಷಣಾ ಕ್ರಮಗಳನ್ನು ಅಳವಡಿಸಿಕೊಂಡು ನೋಟು ಮುದ್ರಿಸಿದರೂ ಅದರ ತದ್ರೂಪಿ ರೂಪದಲ್ಲಿ ನಕಲಿ ನೋಟುಗಳು ಚಲಾವಣೆಗೆ ಬಂದು ಆತಂಕ ಸೃಷ್ಟಿಯಾಗುವುದು ಮಾತ್ರ ತಪ್ಪಿಲ್ಲ. ಅಂಥ ನಕಲಿ ನೋಟಿನ ತಯಾರಿಕೆ ಕುರಿತ ಒಂದು ವಿಡಿಯೋ ಇದೀಗ ಸದ್ದು ಮಾಡುತ್ತಿದೆ

ನಕಲಿ ನೋಟು ತಯಾರಿಕೆ ಭಾರತಕ್ಕೆ ಇಂದಿನ ಸಮಸ್ಯೆ ಏನಲ್ಲ. ಆರ್‌ಬಿಐ ಏನೆಲ್ಲ ರಕ್ಷಣಾ ಕ್ರಮಗಳನ್ನು ಅಳವಡಿಸಿಕೊಂಡು ನೋಟು ಮುದ್ರಿಸಿದರೂ ಅದರ ತದ್ರೂಪಿ ರೂಪದಲ್ಲಿ ಖದೀಮರು ನಕಲಿ ನೋಟುಗಳನ್ನು ತಯಾರಿಸಿ, ಮಾರುಕಟ್ಟೆಯಲ್ಲಿ ಚಲಾವಣೆಗೆ ತಂದುಬಿಡುತ್ತಾರೆ. ಇದೀಗ ಕಳೆದ ಒಂದು ವಾರದಿಂದ ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಅಚ್ಚರಿ ಜೊತೆಗೆ ಆತಂಕಕ್ಕೂ ಕಾರಣವಾಗಿದೆ.

ಕಾರ್ಖಾನೆಯೊಂದರಲ್ಲಿ ವ್ಯಕ್ತಿಯೊಬ್ಬ ೫೦ ಮತ್ತು ೨೦೦ ರು. ಮುಖಬೆಲೆಯ ಹೊಸ ನೋಟುಗಳ ಕಂತೆ ಜೋಡಿಸುತ್ತಿದ್ದಾನೆ. ಇಡೀ ಕಾರ್ಖಾನೆ ನೋಟುಗಳ ಬಂಡಲ್‌ಗಳಿಂದ ತುಂಬಿಹೋಗಿದೆ. ಈ ವಿಡಿಯೋಗೆ, ‘ಬಾಂಗ್ಲಾದೇಶದಲ್ಲಿ ನಕಲಿ ನೋಟುಗಳನ್ನು ತಯಾರಿಸುವ ಕಾರ್ಖಾನೆ’ ಎಂಬುದಾಗಿ ಅಡಿಬರಹ ನೀಡಲಾಗಿದೆ. ಈ ದೃಶ್ಯವನ್ನು ನೋಡಿದವರು, ಇಷ್ಟೊಂದು ಪ್ರಮಾಣದ ಖೋಟಾನೋಟುಗಳೇ ಎಂದು ಹುಬ್ಬೇರಿಸುವ ಜೊತೆಗೆ ಈ ನೋಟುಗಳು ಚಲಾವಣೆಗೆ ಬಂದರೆ ಗತಿಯೇನು ಎಂದು ಆತಂಕಕ್ಕೂ ಒಳಗಾಗುವುದು ಸಹಜ.

ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಆ ನೋಟುಗಳಲ್ಲಿ ‘ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ’ ಎಂದು ಬರೆಯುವ ಜಾಗದಲ್ಲಿ ‘ಚಿಲ್ಡ್ರನ್‌ ಬ್ಯಾಂಕ್‌ ಆಫ್‌ ಇಂಡಿಯಾ’ ಮತ್ತು ‘ಭಾರತೀಯ ಮನೋರಂಜನ್‌ ಬ್ಯಾಂಕ್‌’ ಎಂದು ಬರೆಯಲಾಗಿದೆ ಎಂಬುದು ಅರಿವಾಗುತ್ತದೆ. ಅಂದರೆ, ಇದು ನಕಲಿ ನೋಟುಗಳಲ್ಲ. ಬದಲಿಗೆ, ಮಕ್ಕಳಿಗಾಗಿ ತಯಾರಿಸುವ ನೋಟುಗಳು. ಮೇಲ್ನೋಟಕ್ಕೆ ನೈಜ ನೋಟಿನ ಸಾಮ್ಯತೆ ಹೊಂದಿರುವ ಈ ನೋಟುಗಳಿಗೂ ನೈಜ ನೋಟುಗಳಿಗೂ ಸಾಕಷ್ಟು ವ್ಯತ್ಯಾಸ ಇರುತ್ತದೆ. ಇಲ್ಲಿ ತೋರಿಸಲಾಗಿರುವ ನೋಟುಗಳು ಆರ್‌ಬಿಐ ಮುದ್ರಿಸುವ ನೋಟುಗಳಿಂದ ದೊಡ್ಡ ಆಕಾರದಲ್ಲಿವೆ. ಅಲ್ಲದೆ, ೫೦ ಮತ್ತು ೨೦೦ ಸಂಖ್ಯೆಯ ಮುಂದೆ ಬರುವ ರುಪಾಯಿ ಚಿಹ್ನೆ ಇಲ್ಲಿ ಇಲ್ಲ. ಹಾಗಾಗಿ ಈ ನೋಟುಗಳು ನಕಲಿ ನೋಟುಗಳೇ ಆದರೂ ಮಕ್ಕಳಿಗಾಗಿ ತಯಾರಿಸುವ ನೋಟುಗಳು ಎಂದು ‘ಬೂಮ್‌ ಲೈವ್‌’ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ : ನೃತ್ಯ ಮಾಡುತ್ತಿದ್ದ ಮಕ್ಕಳ ಮೇಲೆ ಕಬ್ಬಿಣದ ಕಂಬ ಬಿದ್ದ ಘಟನೆ ನಡೆದದ್ದು ಯಾವಾಗ?

ಈ ವಿಡಿಯೋವನ್ನು ಯಾವ ಸ್ಥಳದಲ್ಲಿ ಚಿತ್ರೀಕರಿಸಿದ್ದು ಎಂಬ ಖಚಿತತೆ ಇಲ್ಲದಿದ್ದರೂ ದೃಶ್ಯದಲ್ಲಿ ಮರಾಠಿ ಭಾಷೆ ಮಾತನಾಡುತ್ತಿರುವುದು ಕೇಳಿಬರುತ್ತದೆ. ಈ ವಿಡಿಯೋವನ್ನು ಮಹಾರಾಷ್ಟ್ರದ ಕಾಂಗ್ರೆಸ್‌ ಬೆಂಬಲಿಗ ಗೌರವ್‌ ಪಾಂಡಿ ಅವರು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರಿಗೆ ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿದ್ದರು. ಈ ವಿಡಿಯೋದ ಅಸಲಿಯತ್ತನ್ನು ‘ಬೂಮ್‌ಲೈವ್‌’ ಮತ್ತು ‘ಎಸ್‌ಎಂ ಹೋಕ್ಸ್‌ಸ್ಲೇಯರ್‌’ ಸುದ್ದಿಸಂಸ್ಥೆಗಳು ಬಯಲು ಮಾಡಿದ ನಂತರ, ಗೌರವ್‌ ಅವರು ಈ ಎರಡು ಸಂಸ್ಥೆಗಳ ಹೆಸರನ್ನು ಉಲ್ಲೇಖಿಸಿ, “ಇಷ್ಟು ಪ್ರಮಾಣದಲ್ಲಿ ಈ ತರಹದ ನೋಟುಗಳನ್ನು ಮುದ್ರಿಸಲು ಸರ್ಕಾರ ಏಕೆ ಅನುಮತಿ ನೀಡಬೇಕು?” ಎಂದು ಮತ್ತೆ ಟ್ವೀಟ್‌ ಮಾಡಿದ್ದಾರೆ.

ದೆಹಲಿಯ ಸಂಗಮ್‌ ವಿಹಾರ್‌ನಲ್ಲಿ ಕಳೆದ ವರ್ಷದ ಫೆಬ್ರವರಿಯಂದು ಎಸ್‌ಬಿಐ ಎಟಿಎಂನಲ್ಲಿ ವ್ಯಕ್ತಿಯೊಬ್ಬರಿಗೆ ‘ಭಾರತೀಯ ಮನೋರಂಜನ್‌ ಬ್ಯಾಂಕ್‌’ ಎಂದು ಬರೆದಿದ್ದ ಎರಡು ಸಾವಿರ ರು. ಮುಖಬೆಲೆಯ ನೋಟು ಸಿಕ್ಕಿದ್ದಾಗಿ ‘ದಿ ಹಿಂದೂ’ ಪತ್ರಿಕೆ ವರದಿ ಮಾಡಿತ್ತು. ಈ ಪ್ರಕರಣಕ್ಕೂ ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ದೃಶ್ಯದ ನೋಟುಗಳಿಗೂ ಏನಾದರೂ ಸಂಬಂಧ ಇದೆಯೇ ಎಂಬುದು ಮಾತ್ರ ತಿಳಿದುಬಂದಿಲ್ಲ.

ವಾಜಪೇಯಿ ನಿಧನದ ಸಂದರ್ಭದಲ್ಲಿ ಪ್ರಧಾನಿ ಮೋದಿ ನಗುತ್ತ ನಿಂತಿದ್ದು ನಿಜವೇ?
ಪ್ರವಾಹದಿಂದ ಕಂಗಲಾದ ರಾಜ್ಯಗಳಿಗೆ ತಲೆನೋವಾದ ಸುಳ್ಳು ಸುದ್ದಿಗಳ ಅವಾಂತರ
ವಾಜಪೇಯಿ ಅವರಿಗೆ ಏಮ್ಸ್ ವೈದ್ಯರ ಅಂತಿಮ ನಮನದ ಫೋಟೊ ಅಸಲಿ ಅಲ್ಲ!
Editor’s Pick More