ಇವಿಎಂ ತಿರುಚಿ ಬಿಜೆಪಿ ಚುನಾವಣೆ ಗೆದ್ದಿದೆ ಎಂದು ನಿವೃತ್ತ ಸಿಇಸಿ ಹೇಳಿದ್ದು ಸತ್ಯವೇ?

“ಇವಿಎಂಗಳನ್ನು ತಿರುಚಿ ಬಿಜೆಪಿ ಪಕ್ಷ ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಗೆದ್ದಿದೆ,” ಎಂದು ನಿವೃತ್ತ ಮುಖ್ಯ ಚುನಾವಣಾಧಿಕಾರಿ ಟಿ ಎಸ್‌ ಕೃಷ್ಣಮೂರ್ತಿ ಹೇಳಿದ್ದಾರೆಂಬ ವರದಿ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಆದರೆ, ಈ ಬಗ್ಗೆ ಕೃಷ್ಣಮೂರ್ತಿ ಅವರು ಹೇಳುವುದೇ ಬೇರೆ

“ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳನ್ನು ತಿರುಚಿ ಬಿಜೆಪಿ ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದೆ,” ಎಂದು ನಿವೃತ್ತ ಮುಖ್ಯ ಚುನಾವಣಾಧಿಕಾರಿ ಟಿ ಎಸ್‌ ಕೃಷ್ಣಮೂರ್ತಿ ಅವರು ಹೇಳಿದ್ದಾರೆ ಎಂದು 'ದಿ ಡೈಲಿ ಟೆಲಿಗ್ರಾಫ್‌.ಕೋ.ಇನ್‌’ ವರದಿ ಮಾಡಿತ್ತು. ಆ ಲೇಖನದಲ್ಲಿ “ಉತ್ತರಪ್ರದೇಶ, ಉತ್ತರಾಖಂಡ, ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಇವಿಎಂಗಳನ್ನು ತಿರುಚಿಯೇ ಬಿಜೆಪಿ ಗೆದ್ದಿದೆ,” ಎಂದು ಹೇಳಿತ್ತು.

ದಿ ಡೈಲಿ ಟೆಲಿಗ್ರಾಫ್ ಸುದ್ದಿತಾಣದ ಈ ವರದಿ ಫೇಸ್‌ಬುಕ್‌ನಲ್ಲಿ ೨೫೭೧ ಮಂದಿ ಶೇರ್‌ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಈ ಸುದ್ದಿ ಸಾಕಷ್ಟು ವೈರಲ್‌ ಕೂಡ ಆಯಿತು. ಈ ವರದಿಯನ್ನು ಡಿಸೆಂಬರ್‌ ೨೧ರಂದು ಪ್ರಕಟಿಸಲಾಗಿತ್ತು. ಅಂದರೆ ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ಚುನಾವಣೆಯ ಫಲಿತಾಂಶ ಪ್ರಕಟವಾದ ಮೂರು ದಿನದ ನಂತರ. ಇದೇ ಸುದ್ದಿಯನ್ನು ಹಿಂದಿ ಪತ್ರಿಕೆಯೊಂದು ಕೂಡ ಯಥಾವತ್‌ ಪ್ರಕಟಿಸಿತ್ತು. ಆದರೆ ಈ ಪತ್ರಿಕೆ ಯಾವುದು ಎಂಬುದು ತಿಳಿದುಬಂದಿಲ್ಲ ಎಂದು ‘ಆಲ್ಟ್‌ ನ್ಯೂಸ್‌’ ಸುದ್ದಿಸಂಸ್ಥೆ ತಿಳಿಸಿದೆ.

ಈ ಬಗ್ಗೆ ಸ್ವತಃ ಟಿ ಎಸ್‌ ಕೃಷ್ಣಮೂರ್ತಿ ಅವರನ್ನು ‘ಆಲ್ಟ್‌ನ್ಯೂಸ್‌’ ಸಂಪರ್ಕಿಸಿದಾಗ ಅವರು “ಈ ವರದಿ ಶುದ್ಧ ಸುಳ್ಳು. ನಾನು ಎಂದಿಗೂ ಇವಿಎಂಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮಾತನಾಡಿದ್ದೇ ಇಲ್ಲ. ಇವಿಎಂಗಳ ಪ್ರಾಮಾಣಿಕತೆ ಬಗ್ಗೆ ನನಗೆ ನೂರಕ್ಕೆ ನೂರರಷ್ಟು ನಂಬಿಕೆ ಇದೆ. ಇಷ್ಟಕ್ಕೂ ಮೊದಲಿನಿಂದಲೂ ನಾನು ಇವಿಎಂಗಳ ಪರವಾಗಿ ಮಾತನಾಡಿಕೊಂಡು ಬಂದಿದ್ದೇನೆ. ಇದೀಗ ಯಾರೋ ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡು ಸುಳ್ಳುಸುದ್ದಿ ಹಬ್ಬಿಸಿದ್ದಾರೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ : ಕಾರ್ಖಾನೆಯಲ್ಲಿ ನಕಲಿ ನೋಟಿನ ಕಂತೆ ಜೋಡಿಸುತ್ತಿರುವ ದೃಶ್ಯದ ಅಸಲಿಯತ್ತೇನು?

೧೯೯೯ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ವಿದ್ಯುನ್ಮಾನ ಮತಯಂತ್ರವನ್ನು ಬಳಸಲಾಯಿತು. ಆನಂತರದ ದಿನಗಳಲ್ಲಿ ಇವಿಎಂ ಬಳಕೆ ಹೆಚ್ಚಾಯಿತು. ಪ್ರಸ್ತುತ ಭಾರತದ ಎಲ್ಲ ಚುನಾವಣೆಗಳಲ್ಲೂ ಮತಪತ್ರಗಳನ್ನು ನಿಲ್ಲಿಸಿ, ಇವಿಎಂಗಳನ್ನೇ ಬಳಸಲಾಗುತ್ತಿದೆ. ಆದರೆ, ಇವಿಎಂ ಬಂದ ದಿನದಿಂದ ಹಿಡಿದು ಇಂದಿನವರೆಗೂ ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ಆರೋಪಗಳು ಕೇಳಿಬರುತ್ತಲೇ ಇವೆ. ಆದರೆ, ಯಾರೊಬ್ಬರೂ ಕೂಡ ಇವಿಎಂಗಳನ್ನು ತಿರುಚಬಹುದು ಎಂದು ಸಾಕ್ಷ್ಯಸಮೇತ ರುಜುವಾತು ಮಾಡಿಲ್ಲ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More