ಹಿಂದೂಗಳು ಜಾತ್ಯತೀತತೆ ಕಲಿಯಬೇಕು ಎಂದು ನಟ ಪ್ರಕಾಶ್‌ ರೈ ಹೇಳಿದ್ದು ನಿಜವೇ?

ಧರ್ಮ ಹಾಗೂ ಬಿಜೆಪಿ ವಿಚಾರವಾಗಿ ಪ್ರಕಾಶ್‌ ರೈ ಅವರು ಈ ಹಿಂದೆ ನೀಡಿದ್ದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದವು. ಇದೀಗ ಮತ್ತೆ ಹಿಂದೂ ಧರ್ಮವನ್ನು ಛೇಡಿಸಿ ಪ್ರಕಾಶ್‌ ರೈ ನೀಡಿದ್ದಾರೆ ಎನ್ನಲಾದ ಹೇಳಿಕೆ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಪ್ರಕಾಶ್‌ ರೈ ಅವರು ಸ್ಪಷ್ಟನೆ ನೀಡಿದ್ದಾರೆ

“ಪಾಕಿಸ್ತಾನ, ಬಾಂಗ್ಲಾದೇಶ, ಕಾಶ್ಮೀರದಲ್ಲಿ ಹಿಂದೂಗಳು ನಾಶವಾದರೂ ಅವರು ಎಂದಿಗೂ ಮುಸ್ಲಿಮರ ವಿರುದ್ಧ ಸೇಡಿಗೆ ಹಪಹಪಿಸದೆ ಸಾವನ್ನು ಒಪ್ಪಿಕೊಂಡರು. ಆ ಹಿಂದೂಗಳಿಂದ ಕೆಲ ಹಿಂದೂಗಳು ಜಾತ್ಯತೀತತೆ, ಸಹಿಷ್ಣುತೆ ಕಲಿಯಬೇಕು,” ಎಂಬುದರೊಂದಿಗೆ, ನಟ ಪ್ರಕಾಶ್‌ ರೈ ಅವರ ಭಾವಚಿತ್ರವಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಧರ್ಮ ಹಾಗೂ ಬಿಜೆಪಿ ವಿಚಾರವಾಗಿ ಪ್ರಕಾಶ್‌ ರೈ ಅವರು ಈ ಹಿಂದೆ ನೀಡಿದ್ದ ಹೇಳಿಕೆಗಳು ಸಾಕಷ್ಟು ಸದ್ದು ಮಾಡಿ, ವಿವಾದದ ಸ್ವರೂಪವನ್ನೂ ಪಡೆದುಕೊಂಡಿದ್ದವು. ಇದೀಗ ಮತ್ತೆ ಹಿಂದೂ ಧರ್ಮವನ್ನು ಛೇಡಿಸಿ ಪ್ರಕಾಶ್‌ ರೈ ನೀಡಿರುವ ಹೇಳಿಕೆ ಎಂದು ಬಿಂಬಿಸುವ ಚಿತ್ರವೊಂದು ಜಾಲತಾಣದಲ್ಲಿ ಹರಿದಾಡುತ್ತಿದೆ.

ಆದರೆ, ಈ ಬಗ್ಗೆ ಸ್ವತಃ ಪ್ರಕಾಶ್‌ ರೈ ಅವರೇ ಟ್ವಿಟರ್‌ನಲ್ಲಿ ಸ್ಪಷ್ಟ ಉತ್ತರ ನೀಡಿದ್ದಾರೆ. ವೈರಲ್‌ ಆಗಿರುವ ಚಿತ್ರವನ್ನು ಟ್ಯಾಗ್‌ ಮಾಡಿ, ಆ ಚಿತ್ರದ ಮೇಲೆ ‘ಫೇಕ್‌’ ಎಂದು ಬರೆದು, “ನನ್ನ ವಿಚಾರವನ್ನು ನನ್ನೊಂದಿಗೆ ಚರ್ಚಿಸದೆ, ಈ ರೀತಿಯ ಸುಳ್ಳು ಹೇಳಿಕೆಗಳನ್ನು ಹಬ್ಬಿಸುವುದು ಅವರ ಹತಾಶೆ, ನಿರಾಶೆ ಮತ್ತು ಕೀಳುಮಟ್ಟವನ್ನು ಮತ್ತಷ್ಟು ಕೆಳಗೆ ಕೊಂಡೊಯ್ಯುತ್ತದೆ. ಪ್ರೀತಿಯ ನಾಗರಿಕರು ಈ ಟ್ವೀಟ್‌ ಅನ್ನು ಲೈಕ್‌ ಮತ್ತು ರಿಟ್ವೀಟ್‌ ಮಾಡುವ ಮೂಲಕ ಹೇಡಿಗಳ ಇಂತಹ ಕೃತ್ಯಕ್ಕೆ ತಕ್ಕ ಉತ್ತರ ನೀಡಬೇಕು. ಪ್ರಶ್ನೆ ಮಾಡುವ ಮೂಲಕ ಭಯಮುಕ್ತ ಸಮಾಜ ನಿರ್ಮಾಣದತ್ತ ಹಜ್ಜೆ ಇರಿಸಬೇಕು,” ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ : ತಾಯಂದಿರು, ಶಿಕ್ಷಕರನ್ನು ಅರುಂಧತಿ ರಾಯ್‌ ಅವಮಾನಿಸಿದರೆಂಬ ಸುದ್ದಿ ನಿಜವೇ?

ಪ್ರಧಾನಿ ಮತ್ತು ಹಿಂದೂಪರ ಸಂಘಟನೆಗಳ ಬಗ್ಗೆ ಹೇಳಿಕೆ ನೀಡುವ ಮೂಲಕ ಪ್ರಕಾಶ್‌ ರೈ ಅವರು ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈಚೆಗೆ, ಶಿರಸಿ ಪಟ್ಟಣದಲ್ಲಿ ಪ್ರಕಾಶ್‌ ರೈ ಪಾಲ್ಗೊಂಡಿದ್ದ ವೇದಿಕೆಯನ್ನು ಮಾರನೆಯ ದಿನ ಬಿಜೆಪಿ ಕಾರ್ಯಕರ್ತರು ಗಂಜಲ ಹಾಕಿ ಶುಚಿಗೊಳಿಸಿದ್ದರು. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಕಾಶ್‌ ರೈ ಅವರು, "ನಾನು ಹಿಂದೂ ವಿರೋಧಿಯಲ್ಲ. ನಾನು ಮೋದಿ ವಿರೋಧಿ, ಅಮಿತ್‌ ಶಾ ವಿರೋಧಿ, ಅನಂತ್‌ ಕುಮಾರ್‌ ಹೆಗ್ಡೆ ವಿರೋಧಿ,” ಎಂದು ಹೇಳಿಕೆ ನೀಡಿದ್ದರು. ಅಲ್ಲದೆ, ಸಮಾಜದಲ್ಲಿ ಎದ್ದಿರುವ ಅಸಹಿಷ್ಣುತೆ ಬಗ್ಗೆ ದನಿ ಎತ್ತಲು #JustAsking ಎಂಬ ಅಭಿಯಾನವನ್ನೂ ಆರಂಭಿಸಿದ್ದಾರೆ.

ಇದೀಗ ಕೆಲ ಕಿಡಿಗೇಡಿಗಳು ಹೀಗೆ ಪ್ರಕಾಶ್‌ ರೈ ಹೆಸರಿನಲ್ಲಿ ಹಿಂದೂ ಧರ್ಮವನ್ನು ಅವಹೇವಳನ ಮಾಡಿ, ಅವರ ಮೇಲೆ ಹಿಂದೂ ಧರ್ಮದವರಲ್ಲಿ ನಕಾರಾತ್ಮಕ ಅಭಿಪ್ರಾಯ ಮೂಡಿಸುವ ಕೆಲಸ ಮಾಡಿದ್ದಾರೆ. ಆದರೆ, ಈ ಬಗ್ಗೆ ಸ್ವತಃ ಪ್ರಕಾಶ್‌ ರೈ ಅವರೇ ನೇರವಾಗಿ ಉತ್ತರ ನೀಡಿರುವುದರಿಂದ ಈ ವಿಚಾರ ತಣ್ಣಗಾಗಿದೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More