ಭಾರತದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳು ಆಧಾರ್‌ ಪಡೆಯುವುದು ಅಪರಾಧವೇ?

“ಸ್ಟಡಿ ವೀಸಾ ಮೇಲೆ ಮಂಗಳೂರಿನಲ್ಲಿ ನೆಲೆಸಿರುವ ಮಲೇಷ್ಯಾ ಯುವಕನಿಗೆ ‘ಆಧಾರ್‌’ ಕಾರ್ಡ್‌ ಮಾಡಿಕೊಟ್ಟು ದೇಶದ್ರೋಹದ ಕೃತ್ಯ ಎಸಗಲಾಗಿದೆ,” ಎಂದು ‘ಉದಯವಾಣಿ’ ಪತ್ರಿಕೆ ವರದಿ ಮಾಡಿತ್ತು. ಆದರೆ, “೧೮೨ ದಿನ ಭಾರತದಲ್ಲಿ ನೆಲೆಸಿದ ವಿದೇಶಿಗರು ಆಧಾರ್‌ ಪಡೆದುಕೊಳ್ಳಬಹುದು. ಹಾಗಾಗಿ ಈ ಸುದ್ದಿ ಸುಳ್ಳು,” ಎಂದು ‘ಕರಾವಳಿ ಅಲೆ’ ಪತ್ರಿಕೆ ಸುದ್ದಿ ಮಾಡಿದೆ

“ಮಲೇಷ್ಯಾ ಮೂಲದ ವ್ಯಕ್ತಿಗೆ ಮಂಗಳೂರಿನಲ್ಲಿ ‘ಆಧಾರ್‌’ ಚೀಟಿ ಮಾಡಿಕೊಟ್ಟಿರುವ ಆತಂಕಕಾರಿ ವಿದ್ಯಮಾನ ಬೆಳಕಿಗೆ ಬಂದಿದೆ. ವಿದೇಶಿ ಪ್ರಜೆಗೆ ಬಹು ಸುಲಭವಾಗಿ ಭಾರತೀಯ ಗುರುತಿನ ಚೀಟಿ ನೀಡಿರುವ ಈ ದೇಶ ವಿರೋಧಿ ಚಟುವಟಿಕೆಗೆ ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಾಥ್‌ ನೀಡಿರುವ ಅನುಮಾನದ ಆರೋಪವೂ ಕೇಳಿಬಂದಿದೆ!” ಎಂದು ರಾಜ್ಯ ಮಟ್ಟದ ಕನ್ನಡ ದೈನಿಕವೊಂದು ಇತ್ತೀಚೆಗೆ (ಜ.೩೦) ಮುಖಪುಟದಲ್ಲಿ ವರದಿ ಪ್ರಕಟಿಸಿತ್ತು.

“ಮಲೇಷ್ಯಾ ಮೂಲದ ಹೋಹ್‌ ಜಿಯಾಂಗ್‌ ಮೆಂಗ್ (೨೫) ಎಂಬ ಯುವಕ ವೈದ್ಯ ಶಿಕ್ಷಣ ಪಡೆಯುವುದಕ್ಕಾಗಿ ಸ್ಟಡಿ ವೀಸಾ ಪಡೆದು ಮಂಗಳೂರಿನಲ್ಲಿ ನೆಲೆಸಿದ್ದಾರೆ. ವಿದೇಶಿ ಪ್ರಜೆ ಸಲ್ಲಿಸಿದ್ದ ಅರ್ಜಿಯನ್ನು ಆತನ ಪೂರ್ವಾಪರ ವಿಚಾರಿಸದೆ ಪುರಸ್ಕರಿಸಿ, ಏಕಾಏಕಿ ಆಧಾರ್‌ ಕಾರ್ಡ್‌ ನೀಡಿರುವುದು ಈ ಜಾಲದ ಹಿಂದೆ ರಾಜ್ಯ ಸರ್ಕಾರದ ಅಧಿಕಾರಿಗಳ ಕೈವಾಡ ಹಾಗೂ ಸ್ಥಳೀಯ ರಾಜಕೀಯ ಮುಖಂಡರ ಕುಮ್ಮಕ್ಕು ಇರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ,” ಎಂದು ಉದಯವಾಣಿ ಆರೋಪಿಸಿದೆ.

ಈ ಸುದ್ದಿ ಮಂಗಳೂರಿನಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಿತು. ಆದರೆ, ಈ ಸುದ್ದಿ ‘ಪೂರ್ವಗ್ರಹಪೀಡಿತ ವರದಿ’ ಎಂದು ಅಭಿಪ್ರಾಯಪಟ್ಟಿರುವ ಸ್ಥಳೀಯ ‘ಕರಾವಳಿ ಅಲೆ’ ಪತ್ರಿಕೆ, ‘ಬಿಜೆಪಿಯ ‘ಆಧಾರ’ವಿಲ್ಲದ ಸುದ್ದಿ ಪ್ರಕಟಿಸಿ ಯಡವಟ್ಟು ಮಾಡಿಕೊಂಡ ಉದಯವಾಣಿ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿದೆ. “ಆಧಾರ್‌ ಕಾರ್ಡ್‌ ಮಂಗಳೂರಿನಲ್ಲಿ ನೆಲೆಸಿರುವ ವಿದೇಶಿಯರ ಮನೆ ಬಾಗಿಲಿಗೆ ಬಂದುಬೀಳುತ್ತಿವೆ. ಮಲೇಷ್ಯಾ ಮೂಲದ ವ್ಯಕ್ತಿಗೆ ಮಂಗಳೂರಿನಲ್ಲಿ ಆಧಾರ್‌ ಚೀಟಿ ಮಾಡಿಕೊಡಲಾಗಿದೆ ಎಂದು ಉದಯವಾಣಿ ಆಧಾರರಹಿತ ವರದಿ ಮಾಡಿದೆ,” ಎಂದು ಪತ್ರಿಕೆ ಹೇಳಿದೆ.

‘ಉದಯವಾಣಿ’ ಪತ್ರಿಕೆ ಬರೆದಿರುವ ವರದಿ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ

‘ಕರಾವಳಿ ಅಲೆ’ ಪತ್ರಿಕೆ ಪ್ರಕಟಿಸಿರುವ ವರದಿ ಓದಿಲು ಈ ಲಿಂಕ್‌ ಕ್ಲಿಕ್‌ ಮಾಡಿ

‘ಕರಾವಳಿ ಅಲೆ’ ಪತ್ರಿಕೆ, “೧೮೨ ದಿನ ಭಾರತದಲ್ಲೇ ನೆಲೆಸಿದ ಯಾವುದೇ ವಿದೇಶಿ ವ್ಯಕ್ತಿ ಆಧಾರ್‌ ಪಡೆದುಕೊಳ್ಳಬಹುದು. ಆಧಾರ್ ಎಂಬುದು ಗುರುತಿನ ಚೀಟಿಯೇ ಹೊರತು ಭಾರತದ ಪೌರತ್ವವಲ್ಲ. ಹೀಗಾಗಿ ಇದೊಂದು ಶುದ್ಧ ಸುಳ್ಳಿನಿಂದ ಕೂಡಿರುವ ವರದಿ,” ಎಂದಿದೆ. ಅಲ್ಲದೆ, ಈ ವರದಿಯ ಹಿಂದೆ ಸ್ಥಳೀಯ ರಾಜಕಾರಣಿಗಳ ಕೈವಾಡವೂ ಇದೆ ಎಂಬ ಅನುಮಾನವನ್ನು ‘ಕರಾವಳಿ ಅಲೆ’ ವ್ಯಕ್ತಪಡಿಸಿದೆ. “ಇದು ಬಿಜೆಪಿಯ ಮೂಲಗಳಿಂದಲೇ ಲೀಕ್‌ ಆಗಿರುವ ಸುದ್ದಿ ಎನ್ನುವುದಕ್ಕೆ ಮೊದಲನೆಯದಾಗಿ ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ ಮತ್ತು ಅಕ್ರಮ ಸೇರ್ಪಡೆಯನ್ನು ಬಿಜೆಪಿ ಇತ್ತೀಚೆಗೆ ಪತ್ತೆ ಮಾಡಿತ್ತು ಎಂದು ಹಲವು ಬಾರಿ ಉಲ್ಲೇಖಗಳು ಬಂದಿರುವುದು ಸಾಕ್ಷಿ. ಎರಡನೆಯದಾಗಿ, ಈ ವರದಿಯ ಆಧಾರದಲ್ಲೇ ಬಿಜೆಪಿ ನಗರಾಧ್ಯಕ್ಷರು ಸುದ್ದಿಗೋಷ್ಠಿ ಕರೆದಿದ್ದು, ಆನಂತರ ವಿಷಯಾಂತರ ಮಾಡಲಾಗಿತ್ತು,” ಎಂದು ಹೇಳಿದೆ.

182 ದಿನ ಭಾರತದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಅಥವಾ ವಿದೇಶಿ ಪ್ರಜೆಗಳು ಆಧಾರ್‌ ಕಾರ್ಡ್‌ ಪಡೆದುಕೊಳ್ಳಬಹುದೇ ಎಂಬುದನ್ನು ಪರಿಶೀಲಿಸಿದಾಗ, ಆಧಾರ್‌ ಕಾಯ್ದೆ ೨೦೧೬ರ ಪ್ರಕಾರ, “೧೮೨ ದಿನ ಭಾರತದಲ್ಲಿ ನೆಲೆಸಿದ ಅನಿವಾಸಿ ಭಾರತೀಯರು ಅಥವಾ ವಿದೇಶಿ ಪ್ರಜೆಗಳು ಆಧಾರ್‌ ಪಡೆದುಕೊಳ್ಳಲು ಅರ್ಹರು,” ಎಂಬ ಮಾಹಿತಿ ಲಭ್ಯವಾಗುತ್ತದೆ. ಅಲ್ಲಿಗೆ, ‘ಕರಾವಳಿ ಅಲೆ’ ಪತ್ರಿಕೆ ಹೇಳಿದಂತೆ ‘ಉದಯವಾಣಿ’ ಪ್ರಕಟಿಸಿದ ಸುದ್ದಿಯು ಸುಳ್ಳು ಎಂಬುದು ರುಜುವಾತಾಗಿದೆ.

ಕಾಂಗ್ರೆಸ್‌ ಬಗ್ಗೆ ಬಾಲಿವುಡ್‌ ನಟ ನಾನಾ ಪಾಟೇಕರ್‌ ಹೀಗೆ ಹೇಳಿದ್ದು ನಿಜವೇ?
ಪ್ರಿಯಾ ವಾರಿಯರ್‌ ವಿರುದ್ಧ ಫತ್ವಾ ಹೊರಡಿಸಿದ ಸುದ್ದಿಯಲ್ಲಿ ಹುರುಳೆಷ್ಟಿದೆ?
ರಾಹುಲ್‌ ಮಾಂಸಾಹಾರ ತಿಂದು ದೇಗುಲಕ್ಕೆ ಹೋದರೆಂಬ ಸುಳ್ಳು ಹುಟ್ಟಿದ್ದು ಹೀಗೆ!
Editor’s Pick More