ವಕೀಲ ಉಮ್ರಾವ್‌ ವಿರುದ್ಧ ರಾಜ್‌ದೀಪ್‌ ಸರ್ದೇಸಾಯಿ ದೂರು ದಾಖಲಿಸಿದ್ದು ಏಕೆ?

ವೈದ್ಯ ಸೀಟು ಹಂಚಿಕೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಅಭಿಯಾನ ಆರಂಭಿಸಿದ್ದ ‘ಸೂಪರ್‌ ಜರ್ನಲಿಸ್ಟ್‌’ ರಾಜ್‌ದೀಪ್‌ ಸರ್ದೇಸಾಯಿ, ತಮ್ಮ ಮಗನಿಗೆ ಅದೇ ಅನ್ಯಮಾರ್ಗದಲ್ಲಿ ವೈದ್ಯಕೀಯ ಸೀಟು ಕೊಡಿಸಿದ್ದಾರೆ,” ಎಂದು ಸುಳ್ಳು ಸುದ್ದಿ ಹಬ್ಬಿಸಿದ ವಕೀಲ ಪ್ರಶಾಂತ್‌ ಉಮ್ರಾವ್‌ ವಿರುದ್ಧ ಸರ್ದೇಸಾಯಿ ದೂರು ದಾಖಲಿಸಿದ್ದಾರೆ

ಸರಣಿ ಟ್ವೀಟ್‌ ಮಾಡುವ ಮೂಲಕ ಸುಳ್ಳು ಸುದ್ದಿ ಹಬ್ಬಿಸಿದ ಕಾರಣಕ್ಕೆ ಹಿರಿಯ ಪತ್ರಕರ್ತ ರಾಜ್‌ದೀಪ್‌ ಸರ್ದೇಸಾಯಿ ಅವರು ವಕೀಲ ಪ್ರಶಾಂತ್‌ ಉಮ್ರಾವ್‌ ಎಂಬುವರ ವಿರುದ್ಧ ದೂರು ದಾಖಲಿಸಿದ್ದಾರೆ.

ಉಮ್ರಾವ್‌ ಅವರು, “ರಾಜ್‌ದೀಪ್ ಸರ್ದೇಸಾಯಿ ನಂತರ ಅವರ ಮಗನ ಬಗ್ಗೆ ಕೆಲ ಸತ್ಯಗಳನ್ನು ಬಿಚ್ಚಿಡುತ್ತೇನೆ. ಮಣಿಪಾಲ್‌ ವಿಶ್ವವಿದ್ಯಾಲಯದಲ್ಲಿ ಸರ್ದೇಸಾಯಿ ಮಗ ವೈದ್ಯಕೀಯ ಶಿಕ್ಷಣಕ್ಕೆ ಪಡೆದ ದಾಖಲಾತಿಯಲ್ಲಿ ಹಲವು ಸಂಶಯಗಳಿವೆ ಎಂಬುದು ಸತ್ಯವೇ ಸರ್ದೇಸಾಯಿ ಅವರೇ,” ಎಂದು ಟ್ವಿಟರ್‌ನಲ್ಲಿ ಪ್ರಶ್ನಿಸಿ, “ಮಣಿಪಾಲ್‌ ವಿವಿಯ ಕಸ್ತೂರಾ ಬಾ ವೈದ್ಯಕೀಯ ಕಾಲೇಜಿನಲ್ಲಿ ೨೦೧೩ರಲ್ಲಿ ಸರ್ದೇಸಾಯಿ ಅವರು ತಮ್ಮ ಮಗ ಇಶಾನ್‌ ಅವರನ್ನು ೧ ಕೋಟಿ ಹಣ ರು. ನೀಡಿ, ಎನ್‌ಆರ್‌ಐ ಕೋಟಾ ಮೇಲೆ ಪ್ರವೇಶ ಕೊಡಿಸುವ ಮೂಲಕ ಕಾನೂನು ಉಲ್ಲಂಘಿಸಿದ್ದಾರೆ,” ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ ೯ ಸಾವಿರಕ್ಕೂ ಹೆಚ್ಚು ಬಾರಿ ರಿಟ್ವೀಟ್‌ ಆಗಿದೆ.

ಇದೇ ವಿಚಾರವಾಗಿ ಪ್ರಶಾಂತ್‌ ಉಮ್ರಾವ್‌ ಅವರು ಸರಣಿ ಟ್ವೀಟ್‌ ಮಾಡಿದರು. “ಸರ್ದೇಸಾಯಿ ಅವರು ಸಾಧಾರಣ ವಿದ್ಯಾರ್ಥಿಯಾದ ತಮ್ಮ ಮಗನಿಗೆ ವೈದ್ಯಕೀಯ ಪದವಿ ಕೊಡಿಸಲು ಕಾಲೇಜಿನ ಆಡಳಿತ ಮಂಡಳಿಯನ್ನು ಹೆದರಿಸಿದ್ದಾರೆ. ವೈದ್ಯಕೀಯ ಶಿಕ್ಷಣ ಸೀಟು ಹಂಚಿಕೆಯಲ್ಲಿ ನಡೆಯುವ ಅವ್ಯವಹಾರ, ಅಕ್ರಮದ ವಿರುದ್ಧ ಅಭಿಯಾನವನ್ನೇ ಮಾಡಿದ್ದ ‘ಸೂಪರ್‌ ಜರ್ನಲಿಸ್ಟ್‌’ ಸರ್ದೇಸಾಯಿ ಅವರು ಈಗ ಅದೇ ಅನ್ಯಮಾರ್ಗದಲ್ಲಿ ತಮ್ಮ ಮಗನಿಗೆ ವೈದ್ಯಕೀಯ ಸೀಟು ಕೊಡಿಸಿದ್ದಾರೆ,” ಎಂದು ಆರೋಪಿಸಿದ್ದಾರೆ.

ಸರ್ದೇಸಾಯಿ ವಿರುದ್ಧ ಉಮ್ರಾವ್ ಮಾಡಿದ ಆರೋಪಗಳನ್ನು ಆಧಾರವಾಗಿಟ್ಟುಕೊಂಡು ‘ಪೋಸ್ಟ್‌ಕಾರ್ಡ್‌ ನ್ಯೂಸ್‌’ ಎಂಬ ಸುಳ್ಳುಸುದ್ದಿಗಳ ವೆಬ್‌ತಾಣ ಕೂಡ ಸರ್ದೇಸಾಯಿ ಅವರ ಮಗನ ದಾಖಲಾತಿ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಸುದ್ದಿ ಪ್ರಕಟಿಸಿತು. ಅ‍‍ಷ್ಟೇ ಅಲ್ಲದೆ, ಆಮ್‌ ಆದ್ಮಿ ಪಕ್ಷದ ಶಾಸಕ ಕಪಿಲ್‌ ಮಿಶ್ರಾ ಅವರೂ ಈ ಬಗ್ಗೆ ವಿಡಿಯೋ ಟ್ವೀಟ್‌ ಮಾಡಿದರು. ಆನಂತರ ಅವರ ಖಾತೆಯನ್ನು ಟ್ವಿಟರ್‌ ನಿರ್ಬಂಧಿಸಿತು. ಇದೇ ವಿಚಾರವಾಗಿ ರಾಜ್‌ದೀಪ್‌ ಸರ್ದೇಸಾಯಿ ಮತ್ತು ಅವರ ಪತ್ನಿ ಸಾಗರಿಕಾ ಘೋಷ್‌ ಅವರು ಬಲಪಂಥೀಯ ವಿಚಾರಧಾರೆಯ ಟ್ವೀಟಿಗರಿಂದ ಟ್ರೋಲ್‌ಗೆ ಒಳಗಾದರು.

ಪ್ರಶಾಂತ್‌ ಉಮ್ರಾವ್‌ ಆರೋಪಕ್ಕೆ ಟ್ವಿಟರ್‌ನಲ್ಲಿ ಪ್ರತ್ಯುತ್ತರ ನೀಡಿರುವ ಸರ್ದೇಸಾಯಿ ಅವರು, ವಕೀಲ ಪ್ರಶಾಂತ್‌ ಉಮ್ರಾನ್‌ ಮತ್ತು ಟ್ವಿಟರ್ ಇಂಡಿಯಾ ಮೇಲೆ ೧೦೦ ಕೋಟಿ ರು. ಮಾನಹಾನಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಭಾರತದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳು ಆಧಾರ್‌ ಪಡೆಯುವುದು ಅಪರಾಧವೇ?

ರಾಜ್‌ದೀಪ್‌ ಅವರ ಪುತ್ರ ಇಶಾನ್‌ ಅವರು ನಿಜವಾಗಿಯೂ ಎನ್‌ಆರ್‌ಐ ಕೋಟಾ ಮೇಲೆ ವೈದ್ಯಕೀಯ ಸೀಟು ಪಡೆದರೋ, ಇಲ್ಲವೋ ಎಂಬುದರ ಬೆನ್ನುಹತ್ತಿದ ‘ಆಲ್ಟ್‌ ನ್ಯೂಸ್’ ಸುದ್ದಿಸಂಸ್ಥೆ ಈ ಬಗ್ಗೆ ವಾಸ್ತವಗಳನ್ನು ಜನರ ಮುಂದಿಟ್ಟಿದೆ. ಇಶಾನ್‌ ಅವರು ಮಣಿಪಾಲ್‌ ವಿವಿ ಪ್ರವೇಶ ಪರೀಕ್ಷೆ ಬರೆದು, ೧೦೫೦ನೇ ರ್ಯಾಂಕ್‌ ಪಡೆದು, ಜನರಲ್‌ ಕೆಟಗರಿಯಲ್ಲಿ ಸೀಟು ಪಡೆದಿದ್ದಾರೆ. ಅಲ್ಲದೆ, ಎನ್‌ಇಇಟಿಯಲ್ಲೂ ಉತ್ತಮ ಅಂಕ ಗಳಿಸಿದ್ದಾರೆ. ಆದರೆ, ಮಣಿಪಾಲ್‌ ವಿವಿಯಲ್ಲಿ ದಾಖಲಾತಿಗೆ ಎನ್‌ಇಇಟಿ ಅಂಕದ ಅವಶ್ಯಕತೆ ಇಲ್ಲ.

ಮಣಿಪಾಲ್‌ ವಿವಿಯ ಆಡಳಿತ ಮಂಡಳಿ ಮುಖ್ಯಸ್ಥ ಟಿ ವಿ ಮೋಹದಾಸ್‌ ಪೈ ಅವರು ಕೂಡ, “ಪ್ರಶಾಂತ್‌ ಉಮ್ರಾವ್‌ ಅವರು ಮಾಡುತ್ತಿರುವ ಆರೋಪಗಳು ಸುಳ್ಳು, ಇಶಾನ್‌ ಅವರು ಮೆರಿಟ್‌ ಆಧಾರದ ಮೇಲೆ ಸೀಟು ಪಡೆದಿದ್ದಾರೆ,” ಎಂದು ಟ್ವೀಟ್‌ ಮಾಡಿದ್ದಾರೆ. ಮಣಿಪಾಲ್‌ ಆಡಳಿತ ಮಂಡಳಿ ಜೊತೆಗೆ ನಿಕಟ ಸಂಪರ್ಕ ಇರಿಸಿಕೊಂಡಿರುವ ಟ್ವಿಟರ್‌ ಬಳಕೆದಾರರು ರಾಜ್‌ದೀಪ್‌ ಸರ್ದೇಸಾಯಿ ಪರ ನಿಂತಿದ್ದಾರೆ.

ದುರದೃಷ್ಟಕ್ಕೆ ಟ್ವಿಟರ್‌ ವೇದಿಕೆ ಇಂದು ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ತಾಣವಾಗಿ ಹೆಚ್ಚು ಬಳಕೆಯಾಗುತ್ತಿದೆ. ವ್ಯಕ್ತಿಗತ ನಿಂದನೆ, ದೊಂಬಿ-ಗಲಭೆಗೆ ಪ್ರಚೋದನೆ, ಗಾಳಿಸುದ್ದಿಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಟ್ವಿಟರ್‌ ಬಳಕೆದಾರರು ಯಾವುದೇ ಸುದ್ದಿಯನ್ನು ಸಲೀಸಾಗಿ ನಂಬದೆ, ಅದರ ಸತ್ಯಾಸತ್ಯತೆ ಅರಿಯಲು ಪ್ರಯತ್ನಿಸಬೇಕಿದೆ.

ಕಾಂಗ್ರೆಸ್‌ ಬಗ್ಗೆ ಬಾಲಿವುಡ್‌ ನಟ ನಾನಾ ಪಾಟೇಕರ್‌ ಹೀಗೆ ಹೇಳಿದ್ದು ನಿಜವೇ?
ಪ್ರಿಯಾ ವಾರಿಯರ್‌ ವಿರುದ್ಧ ಫತ್ವಾ ಹೊರಡಿಸಿದ ಸುದ್ದಿಯಲ್ಲಿ ಹುರುಳೆಷ್ಟಿದೆ?
ರಾಹುಲ್‌ ಮಾಂಸಾಹಾರ ತಿಂದು ದೇಗುಲಕ್ಕೆ ಹೋದರೆಂಬ ಸುಳ್ಳು ಹುಟ್ಟಿದ್ದು ಹೀಗೆ!
Editor’s Pick More