ತ್ರಿಪುರದಲ್ಲಿ ರಾಜೀವ್‌ ಪ್ರತಿಮೆ ಒಡೆದು ಲೆನಿನ್‌ ಪುತ್ಥಳಿ ನಿರ್ಮಿಸಲಾಗಿತ್ತೇ?

“ತ್ರಿಪುರದ ಕಮ್ಯುನಿಸ್ಟ್‌ ಸರ್ಕಾರ ಲೆನಿನ್‌ ಪುತ್ಥಳಿ ಸ್ಥಾಪಿಸಲು ರಾಜೀವ್‌ ಗಾಂಧಿ ಅವರ ಪ್ರತಿಮೆಯನ್ನು ೨೦೦೮ರಲ್ಲಿ ಉರುಳಿಸಿತ್ತು,” ಎಂಬ ಸಂದೇಶದ ಜೊತೆಗೆ ಪೋಟೋವೊಂದು ಹರಿದಾಡುತ್ತಿದೆ. ಆದರೆ, ಈ ಘಟನೆ ನಡೆದಿದ್ದು ತ್ರಿಪುರದಲ್ಲಿ ಅಲ್ಲ, ಬದಲಿಗೆ ಆಂಧ್ರಪ್ರದೇಶದಲ್ಲಿ ಎಂಬ ಸಂಗತಿ ಬೆಳಕಿಗೆ ಬಂದಿದೆ

ತ್ರಿಪುರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮರುದಿನವೇ ಹಿಂದಿನ ಕಮ್ಯುನಿಸ್ಟ್‌ ಸರ್ಕಾರ ನಿರ್ಮಿಸಿದ್ದ ಲೆನಿನ್‌ ಪ್ರತಿಮೆಯನ್ನು ಧರಾಶಾಹಿಗೊಳಿಸಿತು. ಅನಂತರ ತಮಿಳುನಾಡಿನಲ್ಲಿ ಪೆರಿಯಾರ್‌ ರಾಮಸ್ವಾಮಿ ಪುತ್ಥಳಿ, ಉತ್ತರ ಪ್ರದೇಶದಲ್ಲಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಪ್ರತಿಮೆಯನ್ನೂ ಒಡೆದುಹಾಕಲಾಯಿತು. ಈ ಘಟನೆಗಳು ಈಗ ದೇಶವ್ಯಾಪಿ ಚರ್ಚೆಯಲ್ಲಿದ್ದು, ಬಿಜೆಪಿ ಕಾರ್ಯಕರ್ತರ ಕ್ರೌರ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಇದರ ನಡುವೆಯೇ, ರಾಜೀವ್‌ ಗಾಂಧಿ ಅವರ ಪುತ್ಥಳಿ ಉರುಳಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. “೨೦೦೮ರಲ್ಲಿ ತ್ರಿಪುರದ ಕಮ್ಯುನಿಸ್ಟ್‌ ಸಿಪಿಐಎಂ ಸರ್ಕಾರ ಲೆನಿನ್‌ ಪುತ್ಥಳಿ ಸ್ಥಾಪಿಸುವ ಸಲುವಾಗಿ ರಾಜೀವ್‌ ಗಾಂಧಿ ಅವರ ಪ್ರತಿಮೆಯನ್ನು ಉರುಳಿಸಿತ್ತು,” ಎಂದು ಬರೆದು ಫೋಟೋವನ್ನು ಪ್ರಫುಲ್‌ ಕೆಟ್ಕರ್‌ ಎಂಬುವವರು ಟ್ವೀಟ್‌ ಮಾಡಿದ್ದರು. ಅಂದಹಾಗೆ, ಕೆಟ್ಕರ್‌ ಅವರು ಆರ್‌ಎಸ್‌ಎಸ್‌ ಮುಖವಾಣಿಯೊಂದರ ಸಂಪಾದಕ.

“ತ್ರಿಪುರದ ಬೆಲೊನಿಯಾದಲ್ಲಿದ್ದ ಲೆನಿನ್‌ ಪ್ರತಿಮೆಯನ್ನು ಉರುಳಿಸಿದ್ದಕ್ಕೆ ಕಮ್ಯುನಿಸ್ಟ್‌ ನಾಯಕರು ಕಣ್ಣೀರು ಹಾಕುತ್ತಿದ್ದಾರೆ. ಆದರೆ, ಇದೇ ಕೆಲಸವನ್ನು ಅವರು ಮಾಡುವಾಗಿ ಅವರಿಗೆ ಆ ಕೀಳೆರಿಮೆ ಕಾಣಲಿಲ್ಲವೇ?” ಎಂದು ಕೆಟ್ಕರ್‌ ಸೇರಿದಂತೆ ಹಲವು ಬಲಬಂಥೀಯ ವಾದದ ಪ್ರತಿಪಾದಕರು, ನಾಯಕರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಫಾಲೋವರ್‌ ಆಗಿರುವ ಗೌರವ್‌ ಪ್ರಧಾನ್‌ ಅವರು ಕೂಡ ಇದೇ ಟ್ವೀಟ್‌ ಮಾಡಿದ್ದು, ಇದು, ೮೦೦ಕ್ಕೂ ಅಧಿಕ ಬಾರಿ ರಿಟ್ವೀಟ್‌ ಆಗಿದೆ.

ಇದನ್ನೂ ಓದಿ : ಹರಿದ್ವಾರ ರೈಲು ನಿಲ್ದಾಣದಲ್ಲಿ ಪ್ರದರ್ಶನಕ್ಕಿಟ್ಟ ಕಲಾಕೃತಿ ರಚಿಸಿದ್ದು ಯಾರು?

ಹಾಗಾದರೆ, ಬಿಜೆಪಿ ಭಕ್ತರು ಆರೋಪಿಸಿದಂತೆ, ೨೦೦೮ರಲ್ಲಿ ಕಮ್ಯುನಿಸ್ಟ್‌ ಸರ್ಕಾರ ರಾಜೀವ್‌ ಗಾಂಧಿ ಅವರ ಪ್ರತಿಮೆಯನ್ನು ಉರುಳಿಸಿದ್ದು ನಿಜವೇ ಎಂದು ‘ಆಲ್ಟ್‌ನ್ಯೂಸ್‌’ ಸುದ್ದಿಸಂಸ್ಥೆ ಪರಿಶೀಲಿಸಿದಾಗ ಇದು ಕಟ್ಟುಕತೆ ಎಂದು ತಿಳಿದುಬಂದಿದೆ.

ಬಲಪಂಥೀಯ ಪ್ರತಿಪಾದಕರು ಹಬ್ಬಿಸಿದ ಈ ಫೋಟೋದ ಸತ್ಯಾಸತ್ಯತೆ ಪರಿಶೀಲಿಸಿದಾಗ, ೨೦೧೩ರಲ್ಲಿ ಆಂಧ್ರಪ್ರದೇಶದಿಂದ ತೆಲಂಗಾಣವನ್ನು ಪ್ರತ್ಯೇಕಿಸಿದ ಕಾರಣಕ್ಕೆ ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ಆಕ್ರೋಶ ತೀರಿಸಿಕೊಳ್ಳಲು ಆಂಧ್ರ ಬೆಂಬಲಿಗರು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಪುತ್ಥಳಿಯನ್ನು ಧರಾಶಾಹಿಗೊಳಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ‘ಡೆಕ್ಕನ್‌ ಕ್ರಾನಿಕಲ್‌’ ಪತ್ರಿಕೆ ವರದಿ ಮಾಡಿತ್ತು ಕೂಡ.

ಲೆನಿನ್‌, ಪೆರಿಯಾರ್‌, ಅಂಬೇಡ್ಕರ್‌ ಅವರ ಪುತ್ಥಳಿಗಳನ್ನು ಒಡೆದುಹಾಕಿ, ದೇಶಾದ್ಯಂತ ಒಂದು ಧರ್ಮ, ಒಂದು ಸಂಸ್ಕೃತಿ ಹೇರಲು ಮುಂದಾಗಿರುವ ಬಿಜೆಪಿ ಬೆಂಬಲಿಗರ ವಿರುದ್ಧ ಅಸಮಾಧಾನದ ಕೂಗು ಎದ್ದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಅಸಮಾಧಾನವನ್ನು ಬೇರೆಡೆಗೆ ತಿರುಗಿಸಲು ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಈ ಮೂಲಕ ಮತ್ತೊಂದು ರೀತಿಯಲ್ಲಿ ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More