ನಟ ಇರ್ಫಾನ್‌ ಖಾನ್‌ಗೆ ಕ್ಯಾನ್ಸರ್‌ ಇದೆ ಎಂದು ಹಬ್ಬಿರುವ ಸುದ್ದಿ ನಿಜವೇ?

ತಾವು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಬಾಲಿವುಡ್‌ ನಟ ಇರ್ಫಾನ್‌ ಖಾನ್‌ ಇರ್ಫಾನ್‌ ಖಾನ್‌ ಟ್ವೀಟ್‌ ಮಾಡಿದ್ದರು. ನಂತರ ಮಾಧ್ಯಮಗಳು, ಅವರು ಮೆದುಳು ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ಸುಳ್ಳು ಸುದ್ದಿ ಮಾಡಿ ಮತ್ತೆ ಸಾರ್ವಜನಿಕರ ಅಪನಂಬಿಕೆಗೆ ಪಾತ್ರವಾಗಿವೆ

ಬಾಲಿವುಡ್‌ನ ಹೆಸರಾಂತ ನಟ ಇರ್ಫಾನ್‌ ಖಾನ್‌ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ವಿಚಾರವನ್ನು ಸ್ವತಃ ಅವರೇ ಟ್ವೀಟ್‌ ಮಾಡಿದ್ದರು. ಆದರೆ, ಅವರ ಟ್ವೀಟ್‌ನಲ್ಲಿ ಅಪರೂಪದ ಕಾಯಿಲೆ ಎಂದಷ್ಟೇ ತಿಳಿಸಿದ್ದರು. ಇದರ ಪರಿಣಾಮವನ್ನೂ ಊಯಿಸಿದ್ದ ಖಾನ್‌, ತಮ್ಮ ಟ್ವೀಟ್‌ನಲ್ಲೇ “ಈ ವಿಚಾರವಾಗಿ ಬೇರೆ ಏನನ್ನೂ ಬೆರೆಸಬೇಡಿ, ಇನ್ನೊಂದು ವಾರದಲ್ಲಿ ನಾನೇ ಕಾಯಿಲೆ ಬಗ್ಗೆ ಬಹಿರಂಗ ಮಾಡುತ್ತೇನೆ,” ಎಂದು ಕೂಡ ಮನವಿ ಮಾಡಿದ್ದರು. ಆದರೆ, ಅವರು ಏನು ಬಯಸಿದ್ದರೋ ಅದರ ವಿರುದ್ಧವಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಗಾಳಿಸುದ್ದಿ ಹಬ್ಬಿದೆ.

ಇರ್ಫಾನ್‌ ಖಾನ್‌ ಅವರು ಟ್ವೀಟ್‌ ಮಾಡಿದ ನಂತರ, ಟ್ವೀಟ್‌ನ ಸ್ಕ್ರೀನ್‌ಶಾಟ್‌ ಬಳಸಿಕೊಂಡು, “ಇರ್ಫಾನ್‌ ಖಾನ್‌ ಅವರು ಮಾರಣಾಂತಿಕ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದಾರೆ,” ಎಂಬ ಸುದ್ದಿ ವಾಟ್ಸಾಪ್‌ನಲ್ಲಿ ಹರಿದಾಡಲಾರಂಭಿಸಿತು.

ಮುಂದುವರಿದು ‘ನ್ಯೂಸ್‌ಎಕ್ಸ್‌’, “ಇರ್ಫಾನ್‌ ಖಾನ್‌ ಮೆದುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ, ಕೋಕಿಲ ಬೆನ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ,” ಎಂದು ವರದಿ ಮಾಡಿದೆ. ‘ನ್ಯೂಸ್‌ಎಕ್ಸ್‌’ ಆಂಗ್ಲ ಸುದ್ದಿವಾಹಿನಿಯ “ಇರ್ಫಾನ್‌ ಖಾನ್‌ ಅವರು ಮೆದುಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ; ಅವರ ಅಭಿಮಾನಿಗಳು ದಿಗ್ಭ್ರಾಂತರಾಗಿದ್ದು, ಶೀಘ್ರ ಗುಣಮುಖರಾಗಲೆಂದು ವಿಶ್ವದಾದ್ಯಂತ ಪ್ರಾರ್ಥನೆ ಮಾಡುತ್ತಿದ್ದಾರೆ,” ಎಂಬ ಶೀರ್ಷಿಕೆಯ ಸ್ಕ್ರೀನ್‌ಶಾಟ್‌ ಕೂಡ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. "ಇರ್ಫಾನ್‌ ಖಾನ್‌ ‘ಗ್ಲಿಯೋಬ್ಲಾಸ್ಟ್ರೋಮಾ ಮಲ್ಟಿಫಾರ್ಮಿ’ (ಜಿಬಿಎಂ) ೪ನೇ ಹಂತದಲ್ಲಿದ್ದಾರೆ,” ಎಂದೂ ಆ ವರದಿಯಲ್ಲಿ ಹೇಳಲಾಗಿದೆ. ವಾಟ್ಸಾಪ್‌ನಲ್ಲಿ “ಇರ್ಫಾನ್‌ ಖಾನ್‌ ಬ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿದ್ದು, ಸಾವಿನ ಕಡೆಕ್ಷಣದಲ್ಲಿ ಇದ್ದಾರೆ,” ಎಂಬ ಸುದ್ದಿ ಹಬ್ಬಿದೆ. ಆನಂತರ ಎಚ್ಚೆತ್ತುಕೊಂಡ ನ್ಯೂಸ್‌ ಎಕ್ಸ್‌ ವಾಹಿನಿ, “ಇರ್ಫಾನ್‌ ಖಾನ್‌ ಅವರಿಗೆ ಕ್ಯಾನ್ಸರ್‌ ಇರುವ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಖಚಿತಪಡಿಸಿಲ್ಲ. ಇರ್ಫಾನ್‌ ಅವರೇ ತಮಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಗೊಳಿಸಲಿದ್ದಾರೆ,” ಎಂದು ಮತ್ತೊಂದು ಸುದ್ದಿ ಮಾಡಿತು.

ಮಾಧ್ಯಮ ಹಾಗೂ ಜಾಲತಾಣದಲ್ಲಿ ಈ ಸುದ್ದಿ ಹಬ್ಬುತ್ತಿದ್ದಂತೆ ಕೋಕಿಲ ಬೆನ್‌ ಆಸ್ಪತ್ರೆ, “ಚಿಕಿತ್ಸೆಗಾಗಿ ನಟ ಇರ್ಫಾನ್‌ ಖಾನ್‌ ಅವರು ಆಸ್ಪತ್ರೆಗೆ ದಾಖಲಾಗಿಲ್ಲ,” ಎಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಅಲ್ಲದೆ, ನಿರ್ದೇಶಕ ವಿಶಾಲ್‌ ಭಾರದ್ವಾಜ್‌ ಅವರು ಕೂಡ ಫೇಸ್‌ಬುಕ್‌ನಲ್ಲಿ “ನಟ ಇರ್ಫಾನ್‌ ಖಾನ್‌ ಆರೋಗ್ಯವಾಗಿದ್ದಾರೆ, ಅವರು ಯಾವುದೇ ಗಂಭೀರ ಕಾಯಿಲೆಯಿಂದ ಬಳಲುತ್ತಿಲ್ಲ,” ಎಂದು ಹೇಳಿದ್ದಾರೆ.

ಇದನ್ನೂ ಓದಿ : ತ್ರಿಪುರದಲ್ಲಿ ರಾಜೀವ್‌ ಪ್ರತಿಮೆ ಒಡೆದು ಲೆನಿನ್‌ ಪುತ್ಥಳಿ ನಿರ್ಮಿಸಲಾಗಿತ್ತೇ?

ಮಾಧ್ಯಮಗಳು ಸುದ್ದಿ ಹಿಂದೆ ಬೀಳಬೇಕು ನಿಜ. ಆದರೆ, ಸುದ್ದಿ ಹೆಕ್ಕುವ ಬರದಲ್ಲಿ ಅಧಿಕೃತ ಮಾಹಿತಿ ಇಲ್ಲದೆ ತಪ್ಪು ಮಾಹಿತಿ ಬಿತ್ತರಿಸಿದರೆ, ಅದರಿಂದ ಅನನುಕೂಲವೇ ಹೆಚ್ಚು. ಸೆಲೆಬ್ರೆಟಿಗಳ ವಿಚಾರದಲ್ಲಿ ಮಾಧ್ಯಮಗಳು ಮಿತಿಮೀರಿದ ಆಸಕ್ತಿ ತೋರುತ್ತವೆ. ಇತ್ತೀಚೆಗೆ ನಿಧನರಾದ ಶ್ರೀದೇವಿ ಸಾವಿನ ವಿಷಯದಲ್ಲೂ ಹೀಗೆ ನಡೆದುಕೊಂಡು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದವು. ಇದೀಗ ಇರ್ಫಾನ್‌ ಖಾನ್‌ ಅವರ ಆರೋಗ್ಯ ವಿಚಾರದಲ್ಲೂ ಹೀಗೆ ನಡೆದುಕೊಂಡು, ಮತ್ತಷ್ಟು ಅಪನಂಬಿಕೆಗೆ ಪಾತ್ರವಾಗಿವೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More