ಮುಖ್ಯಮಂತ್ರಿ ಸಿದ್ದರಾಮಯ್ಯ ಸಿನಿಮಾ ಹಾಡಿಗೆ ನೃತ್ಯ ಮಾಡಿದ್ದು ನಿಜವೇ?

ಸಿನಿಮಾ ಹಾಡಿಗೆ ಸಿಎಂ ಸಿದ್ದರಾಮಯ್ಯ ಅವರು ಮಾಡಿರುವ ನೃತ್ಯ ಎಂಬ ಬರೆಹದೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ನೃತ್ಯ ಮಾಡುತ್ತಿರುವ ವ್ಯಕ್ತಿ ರೈತನಾಗಿದ್ದು, ಸಿದ್ದರಾಮಯ್ಯ ಅವರನ್ನೇ ಹೋಲುವ ಕಾರಣಕ್ಕೆ ಹೀಗೆ ಸುದ್ದಿ ಹಬ್ಬಿಸಲಾಗಿದೆ

ಕಳೆದ ಎರಡು ದಿನಗಳಿಂದ ಫೇಸ್‌ಬುಕ್‌, ವಾಟ್ಸಾಪ್‌ನಲ್ಲಿ ವಿಡಿಯೋವೊಂದು ವೈರಲ್‌ ಆಗಿದೆ. “ಚೌಕ ಸಿನಿಮಾದ ‘ಜೀವನ ಟಾನಿಕ್‌ ಬಾಟ್ಲಿ ಕುಡಿಯೋಕ್ ಮುಂಚೆ ಅಲ್ಲಾಡ್ಸು...’ ಹಾಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿರುವ ನೃತ್ಯ ಇದು,” ಎಂದು ಬಿಜೆಪಿ ಬೆಂಬಲಿಗರು ಈ ವಿಡಿಯೋವನ್ನು ಶೇರ್‌ ಮಾಡಿದ್ದರು. “ಇದೊಂದು ಕಮ್ಮಿ ಇತ್ತು ನಮ್ಮ ಸಿಎಂಗೆ,” ಎಂಬ ಕಾಮೆಂಟ್‌ಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.

ಸುಮಾರು ೩೬ ಸೆಕೆಂಡ್‌ನ ಈ ವಿಡಿಯೋದಲ್ಲಿ ತೆರೆದ ಮಂಟಪದಲ್ಲಿ ಬಿಳಿ ಪಂಚೆ, ಬಿಳಿ ಅಂಗಿ ತೊಟ್ಟ ವ್ಯಕ್ತಿಯೊಬ್ಬರು ನೃತ್ಯ ಮಾಡುತ್ತಿದ್ದಾರೆ. ಅವರ ಸುತ್ತ ನೂರಾರು ಮಂದಿ ಕುಳಿತು, ಚಪ್ಪಾಳೆ, ಶಿಳ್ಳೆ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ. ನೃತ್ಯ ಮಾಡುವ ವ್ಯಕ್ತಿಯ ಹೆಸರು ಚನ್ನಮಹಾಗೌಡ. ಮೂಲತಃ ರೈತರಾದ ಅವರ ಚಹರೆ, ವೇಷಭೂಷಣ ಎಲ್ಲವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೋಲುವಂತೆಯೇ ಇವೆ. ಈ ಕಾರಣಕ್ಕಾಗಿಯೇ ಚನ್ನಮಹಾಗೌಡರನ್ನು ಜೂನಿಯರ್‌ ಸಿದ್ದರಾಮಯ್ಯ ಎಂದು ಕರೆಯುತ್ತಾರೆ. ಈ ನೃತ್ಯ ರಾತ್ರಿ ವೇಳೆ ನಡೆದಿದ್ದರಿಂದ ನೃತ್ಯ ಮಾಡುವ ವ್ಯಕ್ತಿಯ ಮುಖ ಸ್ಪಷ್ಟವಾಗಿ ಕಂಡುಬರುತ್ತಿಲ್ಲ. ಈ ದೃಶ್ಯ ನೋಡಿದಾಕ್ಷಣ ಥಟ್ಟನೆ ಮುಖ್ಯಮಂತ್ರಿ ಸಿದ್ದರಾಮುಯ್ಯ ಅವರೇ ನೆನಪಿಗೆ ಬರುತ್ತಾರೆ. ಹಾಗಾಗಿ, ಅದನ್ನೇ ಬಳಸಿಕೊಂಡು, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೀಗೆ ಕುಣಿದಿದ್ದಾರೆ,” ಎಂಬ ಸುದ್ದಿ ಹಬ್ಬಿಸಲಾಗಿದೆ.

ಅಸಲಿಗೆ ಈ ಕಾರ್ಯಕ್ರಮ ಯಾವುದು, ನೃತ್ಯ ಮಾಡಿದವರು ಯಾರು ಎಂಬುದನ್ನು ಅಣೆಕಟ್ಟೆ ವಿಶ್ವನಾಥ ಎಂಬುವರು ತಿಳಿಸಿದ್ದಾರೆ. “ಬಿಜೆಪಿ ಭಕ್ತರ ಹಸಿ ಸುಳ್ಳಿಗೆ ಇದೊಂದು ಸ್ಪಷ್ಟ ಉದಾಹರಣೆ. ನಾನು ಭಾಗವಹಿಸಿದ್ದ ಸಿರಿಧಾನ್ಯ ಕುರಿತಾದ ಕಾರ್ಯಾಗಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೋಲುವ ರೈತರೊಬ್ಬರು ನೃತ್ಯ ಮಾಡಿದ್ದರು. ಅದನ್ನು ನಾನು ಲೈವ್ ಮಾಡಿದ್ದೆ. ಇದನ್ನು ಕದ್ದು ಶಿರಸಿಯ ಅನಂತ ಕುಮಾರ್ ಹೆಗಡೆ ಭಕ್ತರು ತಮ್ಮ ಪೇಜಿನಲ್ಲಿ ‘ಸಿದ್ದರಾಮಯ್ಯನವರು ನೃತ್ಯ ಮಾಡಿದ್ದಾರೆ’ ಎಂದು ಅಪಪ್ರಚಾರ ಮಾಡಿದ್ದಾರೆ. ಆ ರೈತರ ಜೀವನೋತ್ಸಾಹ ನೋಡಿ ನಾನು ಇದಕ್ಕೆ ಕುಣಿದಿದ್ದೆ. ಬಿಜೆಪಿ ಅಂದರೆ ಸುಳ್ಳು ಎಂದು ಮತ್ತೊಮ್ಮೆ ಸಾಬೀತಾಗಿದೆ,” ಎಂದು ತಮ್ಮ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಈ ಬರೆಹವನ್ನು ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿ ದಿನೇಶ್‌ ಅಮಿನ್‌ಮಟ್ಟು ತಮ್ಮ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಕೆಲ ಮಾಧ್ಯಮಗಳಲ್ಲೂ ಈ ವಿಚಾರವನ್ನು ಸುದ್ದಿ ಮಾಡಿದ್ದು, ನೃತ್ಯ ಮಾಡುತ್ತಿದ್ದ ವ್ಯಕ್ತಿ ಮುಖ್ಯಮಂತ್ರಿಯಲ್ಲ ಎಂದು ಹೇಳಿವೆ. ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಅಪಪ್ರಚಾರಕ್ಕೆ ಮುಂದಾದ ಬಿಜೆಪಿಗರ ಈ ಕೃತ್ಯಕ್ಕೆ ಸಾರ್ವಜನಿಕರಿಂದಲೇ ಟೀಕೆ ವ್ಯಕ್ತವಾಗಿದೆ.

Posted by Anekatte Vishwanath on Tuesday, March 6, 2018
ಇದನ್ನೂ ಓದಿ : ನಟ ಇರ್ಫಾನ್‌ ಖಾನ್‌ಗೆ ಕ್ಯಾನ್ಸರ್‌ ಇದೆ ಎಂದು ಹಬ್ಬಿರುವ ಸುದ್ದಿ ನಿಜವೇ?

ಈ ವಿಡಿಯೋ ಕುರಿತಾಗಿ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಕೂಡ ನಡೆದಿದ್ದು, ಎಲ್ಲರೂ ಬಿಜೆಪಿ ಬೆಂಬಲಿಗರ ವಿರುದ್ಧ ಹರಿಹಾಯ್ದಿದ್ದಾರೆ. “ಮೊಸರಲ್ಲಿ ಕಲ್ಲು ಹುಡುಕುವ ಜಾಯಮಾನ ಬಿಜೆಪಿಗರದ್ದು,” ಎಂದು ಒಬ್ಬರು ಹೇಳಿದ್ದರೆ, “ಸಿದ್ದರಾಮಯ್ಯ ಅವರೂ ಮನಷ್ಯರು, ಅವರು ನೃತ್ಯ ಮಾಡಬಾರದು ಎಂದೇನಿಲ್ಲ,” ಎಮದು ಮತ್ತೊಬ್ಬರು ಹಾಗೂ “ಒಂದು ಸುಳ್ಳನ್ನು ನೂರು ಬಾರಿ ಹೇಳಿ, ಅದನ್ನೇ ಸತ್ಯ ಮಾಡಲು ಬಿಜೆಪಿಗರು ಪ್ರಯತ್ನಿಸುತ್ತಾರೆ,” ಎಂದು ಇನ್ನೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಗ್ರಾಮೀಣ ಸೊಗಡಿನ ವ್ಯಕ್ತಿತ್ವ ಹೊಂದಿದ್ದು, ಅದನ್ನು ಈಗಲೂ ಉಳಿಸಿಕೊಂಡಿರುವವರು. ಹಲವು ಸಂದರ್ಭಗಳಲ್ಲಿ ಸಿದ್ದರಾಮಯ್ಯ ಅವರೂ ನೃತ್ಯ ಮಾಡಿದ ಉದಾಹರಣೆಗಳಿವೆ. ೨೦೧೨ರಲ್ಲಿ ಬಿಜೆಪಿ ಭ್ರಷ್ಟಾಚಾರ ವಿರೋಧಿಸಿ, ಬೆಂಗಳೂರಿನಿಂದ ಬಳ್ಳಾರಿಗೆ ತಮ್ಮ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಂಡ ಸಂದರ್ಭದಲ್ಲಿ ವೀರಗಾಸೆ ಕಲಾವಿದರಿಂದ ಕತ್ತಿ ಪಡೆದು, ತಾವೇ ವೀರಗಾಸೆ ನೃತ್ಯ ಮಾಡಿದ್ದು, ಎಲ್ಲರ ಗಮನ ಸೆಳೆದಿತ್ತು.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More