ಪಂಜಾಬ್ ಬ್ಯಾಂಕ್ ಹಗರಣ ಕುರಿತು ೨೦೧೪ರಲ್ಲೇ ರಾಜನ್‌ ಎಚ್ಚರಿಸಿದ್ದು ಸತ್ಯವೇ?

ಪಿಎನ್‌ಬಿ ಹಗರಣದ ಬಗ್ಗೆ ೨೦೧೪ರ ಹಿಂದೆಯೇ ಅಂದಿನ ಆರ್‌ಬಿಐ ಗವರ್ನರ್‌ ರಘುರಾಂ ರಾಜನ್‌ ಅವರು ಕಾಂಗ್ರೆಸ್‌ ಮುಖಂಡರಿಗೆ ಎಚ್ಚರಿಸಿದ್ದರು ಎಂಬ ಹೇಳಿಕೆ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ರಾಜನ್‌ ಅವರನ್ನು ಕೇಳಿದಾಗ, “ಇದು ತೀರಾ ಅಸಂಬದ್ಧ,” ಎಂದು ಪ್ರತಿಕ್ರಿಯಿಸಿದ್ದಾರೆ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ನಡೆದ ೧೨,೮೦೦ ಕೋಟಿ ರು. ಮೊತ್ತದ ಹಗರಣ ದೇಶದ ಇಡೀ ಬ್ಯಾಂಕಿಂಗ್‌ ವಲಯದಲ್ಲಿ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿದೆ. ನೀರವ್‌ ಮೋದಿ ಮತ್ತು ಮೇಹುಲ್‌ ಚೋಕ್ಸಿ ಎಂಬ ಇಬ್ಬರು ಉದ್ಯಮಿಗಳು ಇಷ್ಟು ಮೊತ್ತದ ಸಾಲ ಪಡೆದು, ವಿದೇಶಕ್ಕೆ ಪರಾರಿಯಾಗಿದ್ದಾರೆ. ಹಗರಣದ ವಿಚಾರವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಆರೋಪ- ಪ್ರತ್ಯಾರೋಪಗಳು ಭರ್ಜರಿಯಾಗಿಯೇ ನಡೆಯುತ್ತಿವೆ. “ಯುಪಿಎ ಸರ್ಕಾರದ ಅವಧಿಯಲ್ಲಿಯೇ ಈ ಹಗರಣ ನಡೆದಿದೆ,” ಎಂದು ಬಿಜೆಪಿ ಆರೋಪಿಸಿದರೆ, “ಬಿಜೆಪಿ ನೇತೃತ್ವದ ಎನ್‌ಡಿಎ ಅವಧಿಯಲ್ಲಿಯೇ ಈ ಹಗರಣ ನಡೆದಿದೆ,” ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ.

ಈ ನಡುವೆ, ಪಿಎನ್‌ಬಿ ಹಗರಣಕ್ಕೆ ಸಂಬಂಧಿಸಿದಂತೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಮಾಜಿ ಗವರ್ನರ್‌ ರಘುರಾಂ ರಾಜನ್‌ ಅವರ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. “ನೀರವ್‌ ಮೋದಿ ಸಾಲದ ಬಗ್ಗೆ ಈ ಹಿಂದೆಯೇ ನಾನು ರಾಹುಲ್‌ ಗಾಂಧಿ ಮತ್ತು ಅಂದಿನ ಹಣಕಾಸು ಸಚಿವ ಪಿ ಚಿದಂಬರಂ ಅವರಿಗೆ ಎಚ್ಚರಿಕೆ ನೀಡಿದ್ದೆ. ಆದರೆ, ಅವರು ೨೦೧೪ರ ಮೇವರೆಗೆ ಈ ವಿಚಾರವಾಗಿ ಮೌನವಾಗಿ ಇರುವಂತೆ ನನಗೆ ಹೇಳಿದರು. ಆದ್ದರಿಂದ ಈಗ ಏಕೆ ನಾನು ಪಿಎನ್‌ಬಿ ಹಗರಣದ ಬಗ್ಗೆ ದೂರಲಿ?” ಎಂಬ ರಘುರಾಂ ರಾಜನ್‌ ಅವರ ಚಿತ್ರವಿರುವ ಹೇಳಿಕೆ ವೈರಲ್‌ ಆಗಿದೆ. ಅಂದರೆ, ಈ ಹೇಳಿಕೆ ಪ್ರಕಾರ, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬರುವ ಮುಂಚೆಯೇ ನೀರವ್‌ ಮೋದಿ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದ. ಅಂದರೆ, ಕಾಂಗ್ರೆಸ್‌ ಸರ್ಕಾರದಲ್ಲಿ. ವೃತ್ತಿಯಲ್ಲಿ ಪ್ರಾಮಾಣಿಕ, ನಿಷ್ಠುರ ವ್ಯಕ್ತಿ ಎಂದೇ ಖ್ಯಾತಿ ಗಳಿಸಿದ್ದ ರಘುರಾಂ ರಾಜನ್‌ ಅವರೇ ಹೀಗೆ ಹೇಳಿದ್ದಾರೆ ಎಂದರೆ ಅದು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿಯೇ ನಡೆದಿದೆ ಎಂಬುದನ್ನು ಎಲ್ಲರೂ ಒಪ್ಪಿಕೊಂಡುಬಿಡಬಹುದು. ಆದರೆ, ಸಮಸ್ಯೆ ಇರುವುದು ಈ ಹೇಳಿಕೆಯನ್ನು ರಘುರಾಂ ರಾಜನ್‌ ಅವರು ನಿಜವಾಗಿಯೂ ಹೇಳಿದ್ದಾರೆಯೇ ಎಂಬುದರಲ್ಲಿ.

ಸಾಮಾಜಿಕ ಜಾಲತಾಣದಲ್ಲಿ ರಘುರಾಂ ರಾಜನ್‌ ಅವರ ಹೇಳಿಕೆ ಹರಿದಾಡುತ್ತಿದ್ದಂತೆ ಈ ಬಗ್ಗೆ ಅವರಿಂದಲೇ ಸ್ಪಷ್ಟನೆ ಪಡೆಯಲು ಮುಂದಾದ ‘ಬೂಮ್‌ ಲೈವ್‌’ ಸುದ್ದಿಸಂಸ್ಥೆ, “ನೀವು ಹೀಗೆ ಹೇಳಿದ್ದು ನಿಜವೇ?” ಎಂದು ಕೇಳಿ ರಘುರಾಂ ರಾಜನ್‌ ಅವರಿಗೆ ಇಮೇಲ್‌ ಮೂಲಕ ಪ್ರಶ್ನೆ ಮಾಡಿತ್ತು. ಇದಕ್ಕೆ ರಾಜನ್‌ ಅವರು, “ಇದು ನಿಜಕ್ಕೂ ತೀರಾ ಅವಿವೇಕ ಮತ್ತು ಅಸಂಬದ್ಧತೆಯಿಂದ ಕೂಡಿದೆ. ಕುಚೋದ್ಯ ಮೂಲದಿಂದ ಈ ರೀತಿ ಸುದ್ದಿ ಹಬ್ಬಿಸಲಾಗುತ್ತಿದೆ,” ಎಂದು ಉತ್ತರಿಸಿದ್ದಾರೆ.

ಆರ್‌ಬಿಐ ಗವರ್ನರ್‌ ಸ್ಥಾನದಿಂದ ಕಳೆದ ವರ್ಷ ನಿವೃತ್ತಿಯಾದ ನಂತರ ರಘುರಾಂ ರಾಜನ್‌ ಚಿಕಾಗೋ ಯೂನಿವರ್ಸಿಟಿಯ ಸ್ಕೂಲ್‌ ಆಫ್‌ ಬ್ಯುಸಿನೆಸ್‌ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಿಎನ್‌ಬಿ ಹಗರಣ ಬಯಲಿಗೆ ಬಂದ ದಿನದಿಂದಲೂ ರಘುರಾಂ ರಾಜನ್‌ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದು, ಈ ಬಗ್ಗೆ ಮೌನವಾಗೇ ಇದ್ದಾರೆ. ಇದೇ ಸಮಯದಲ್ಲಿ ರಾಜನ್‌ ಅವರ ಈ ಹೇಳಿಕೆ ವಾಟ್ಸಾಪ್‌ನಲ್ಲಿ ಹರಿದಾಡಲು ಆರಂಭಿಸಿದೆ.

ಇದನ್ನೂ ಓದಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಸಿನಿಮಾ ಹಾಡಿಗೆ ನೃತ್ಯ ಮಾಡಿದ್ದು ನಿಜವೇ?

ಈ ಹೇಳಿಕೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಇದರ ಅಸಲಿತನ ಬಯಲಾಗುತ್ತದೆ. ಏಕೆಂದರೆ, ೨೦೦೪ರಿಂದ ೨೦೧೪ರವರೆಗೆ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇತ್ತು. ಒಂದು ವೇಳೆ, ಈ ಹಗರಣ ಅದೇ ಅವಧಿಯಲ್ಲಿ ನಡೆದಿದೆ ಎಂದಾದಲ್ಲಿ ರಘುರಾಂ ರಾಜನ್‌ ಅವರು ಅದನ್ನು ಪ್ರಧಾನಿ ಮತ್ತು ಹಣಕಾಸು ಸಚಿವರ ಗಮನಕ್ಕೆ ತರಬೇಕು. ಅದನ್ನು ಬಿಟ್ಟು ಅಂದು ಕಾಂಗ್ರೆಸ್‌ ಪಕ್ಷದ ಉಪಾಧ್ಯಕ್ಷರಾಗಿದ್ದ ರಾಹುಲ್‌ ಗಾಂಧಿ ಅವರ ಗಮನಕ್ಕೆ ಏಕೆ ತರಬೇಕು. ಅಲ್ಲದೆ, ರಘುರಾಂ ರಾಜನ್‌ ಅವರ ಹೇಳಿಕೆಯಲ್ಲಿ ‘ಎಕ್ಸ್‌ ಗವರ್ನರ್‌’ ಮತ್ತು ‘ಫ್ರಾಡ್ಸ್‌’ ಪದಗಳಲ್ಲಿ ವ್ಯಾಕರಣ ದೋಷ ಇದೆ!

ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿಕೊಂಡಿರುವ ಈ ಸಮಯದಲ್ಲಿ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿಯೇ ಈ ಹಗರಣ ನಡೆದಿದೆ ಎಂದು ಬಿಂಬಿಸುವ ಸಲುವಾಗಿಯೇ ಈ ರೀತಿಯ ಸುಳ್ಳು ಹೇಳಿಕೆಯನ್ನು ಸೃಷ್ಟಿಸಿ, ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಇಂತಹ ಸುದ್ದಿಗಳನ್ನು ಸತ್ಯವೆಂದು ತಕ್ಷಣಕ್ಕೆ ಒಪ್ಪಿಕೊಳ್ಳದೇ, ಅಧಿಕೃತ ಮೂಲದಿಂದ ಅದರ ಸತ್ಯಾಸತ್ಯತೆ ಪರಿಶೀಲಿಸಬೇಕಿದೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More