ಮಮತಾ ಬ್ಯಾನರ್ಜಿ ಎದುರು ಟಿಎಂಸಿ ಪಕ್ಷದ ಕಾರ್ಯಕರ್ತರು ಗಲಭೆ ಎಬ್ಬಿಸಿದರೇ?

“ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಪಕ್ಷದ ಸಭೆಯಲ್ಲಿ ‘ವಂದೇ ಮಾತರಂ’ ಗೀತೆಯನ್ನು ಹಾಡದಂತೆ ಸೂಚನೆ ನೀಡಿದ್ದರಿಂದ ಪಕ್ಷದ ಕಾರ್ಯಕರ್ತರು ಗಲಭೆ ಎಬ್ಬಿಸಿ, ಪಿಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ,” ಎಂಬ ಸುಳ್ಳು ಮಾಹಿತಿಯೊಂದಿಗೆ ವಿಡಿಯೋವೊಂದು ವೈರಲ್‌ ಆಗಿದೆ

“ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಕ್ಷದ (ಟಿಎಂಸಿ) ಸಭೆಯಲ್ಲಿ ‘ವಂದೇ ಮಾತರಂ’ ಗೀತೆಯನ್ನು ಹಾಡದಂತೆ ಸೂಚನೆ ನೀಡಿದ್ದರಿಂದ ಪಕ್ಷದ ಕಾರ್ಯಕರ್ತರು ಗಲಭೆ ಎಬ್ಬಿಸಿ, ಪಿಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ,” ಎಂಬ ಮಾಹಿತಿಯೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ವಿಡಿಯೋದಲ್ಲಿ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯುತ್ತಿರುವಾಗ, ರೊಚ್ಚಿಗೆದ್ದ ಕೆಲವು ಮಂದಿ ಅಲ್ಲಿದ್ದ ಕುರ್ಚಿ, ಟೇಬಲ್‌ಗಳನ್ನು ಧ್ವಂಸ ಮಾಡುತ್ತಾರೆ. ಮಮತಾ ಅವರು ಅಸಹಾಯಕರಾಗಿ ಈ ದೃಶ್ಯವನ್ನು ನೋಡುತ್ತ ಕುಳಿತುಕೊಳ್ಳುತ್ತಾರೆ. ಅಸಲಿಗೆ ಇದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಎದುರೇ ನಡೆದ ಘಟನೆ. ಆದರೆ, ನಡೆದ ವೇಳೆ ಮತ್ತು ಕಾರಣ ಬೇರೆಯದೇ ಇದೆ.

೨೦೦೬ ನ.೩೦ರಂದು ‘ಟಾಟಾ ಮೋಟಾರ್‌ನ ಸಿಂಗೂರ್’ ಚಳವಳಿ ಉಗ್ರರೂಪ ತಾಳಿದ್ದ ವೇಳೆ ಮಮತಾ ಬ್ಯಾನರ್ಜಿ ಅವರು ನಿಷೇಧಿತ ಸ್ಥಳ ಸಿಂಗೂರ್‌ಗೆ ಅತಿಕ್ರಮವಾಗಿ ಪ್ರವೇಶ ನೀಡಿದ ಕಾರಣಕ್ಕೆ ಪೊಲೀಸರು ಬಂಧಿಸಿದ್ದರು. ಹೀಗಾಗಿ, ರೊಚ್ಚಿಗೆದ್ದ ತೃಣಮೂಲ ಕಾಂಗ್ರೆಸ್‌ನ ಕಾರ್ಯಕರ್ತರು ಪಶ್ಚಿಮ ಬಂಗಾಳದ ವಿಧಾನಸೌಧ ಲಾಬಿಯನ್ನು ಧ್ವಂಸಗೊಳಿಸಿದ್ದರು. ಅಲ್ಲಿದ್ದ, ಕುರ್ಚಿ, ಟೇಬಲ್‌ಗಳನ್ನು ನಾಶ ಮಾಡಿದ್ದರು. ಈ ಘಟನೆಯಲ್ಲಿ ಆರು ಮಂದಿ ಶಾಸಕರು, ವಿಧಾನಸೌಧದ ಇಬ್ಬರು ಸಿಬ್ಬಂದಿ ಹಾಗೂ ಇಬ್ಬರು ಪತ್ರಕರ್ತರು ಗಾಯಗೊಂಡಿದ್ದರು.

ಈ ವಿಡಿಯೋವನ್ನು ಈಗ ಬೇರೆಯದೇ ಕಾರಣ ನೀಡಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಲಾಗಿದೆ. ಇದೇ ವಿಡಿಯೋ ಇದೇ ರೀತಿಯ ತಪ್ಪು ಮಾಹಿತಿಯೊಂದಿಗೆ ಕಳೆದ ವರ್ಷ ವಾಟ್ಸಾಪ್‌, ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲಿ ಹರಿದಾಡಿತ್ತು.

ಇದನ್ನೂ ಓದಿ : ಟಿ ಎನ್ ಶೇಷನ್‌ ಬದುಕಿದ್ದಾಗಲೇ ಶ್ರದ್ಧಾಂಜಲಿ ಸಲ್ಲಿಸಿದ ಸಚಿವೆ ಸ್ಮೃತಿ ಇರಾನಿ

ರತನ್‌ ಟಾಟಾ ಅವರ ಕನಸಿನ ಯೋಜನೆಯಾಗಿದ್ದ ನ್ಯಾನೋ ಕಾರು ತಯಾರಿಕೆ ಕಾರ್ಖಾನೆ ಆರಂಭಿಸಲು ಜಾಗಕ್ಕಾಗಿ ಮೊದಲು ಪಶ್ಚಿಮ ಬಂಗಾಳದ ಮುಂದೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಸಿಪಿಐ (ಎಂ) ಪಕ್ಷದ ಬುದ್ಧದೇವ್ ಭಟ್ಟಾಚಾರ್ಯ ಮತ್ತು ಟಾಟಾ ಮೋಟಾರ್ಸ್‌ ಲಿಮಿಟೆಡ್‌ ನಡುವೆ ಒಪ್ಪಂದವಾಗಿತ್ತು. ಆದರೆ, ಈ ಒಪ್ಪಂದಕ್ಕೆ ತೃಣಮೂಲ ಕಾಂಗ್ರೆಸ್‌ ತೀವ್ರ ವಿರೋಧ ವ್ಯಕ್ತಪಡಿಸಿ, ಉಗ್ರ ಪ್ರತಿಭಟನೆ ಆರಂಭಿಸಿತ್ತು. ಈ ಸುದ್ದಿ ಅಂದು ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಆನಂತರ ಈ ಯೋಜನೆ ಗುಜರಾತ್‌ಗೆ ವರ್ಗಾವಣೆಯಾಯಿತು.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More