ಒಂದೇ ವಾರದಲ್ಲಿ ೮.೫ ಲಕ್ಷ ಶೌಚಾಲಯ ಕಟ್ಟಲಾಗಿದೆ ಎಂಬ ಪ್ರಧಾನಿ ಮಾತು ಸತ್ಯವೇ?

ಪ್ರಧಾನಿ ಮೋದಿ ಹೇಳಿದಂತೆ ಒಂದೇ ವಾರದಲ್ಲಿ ಬಿಹಾರದಲ್ಲಿ ೮.೫ ಲಕ್ಷ ಶೌಚಾಲಯ ಕಟ್ಟಲಾಗಿದೆಯೇ ಎಂಬುದನ್ನು ಪರಿಶೀಲಿಸಿದಾಗ ಸ್ವಚ್ಛ ಭಾರತ ಮಿಷನ್‌ ದಾಖಲೆಗಳು, “ಹೌದು, ೮.೫ ಲಕ್ಷ ಶೌಚಾಲಯಗಳನ್ನು ಕಟ್ಟಲಾಗಿದೆ. ಆದರೆ, ಅದು ಒಂದು ವಾರದ ಅವಧಿಯಲ್ಲಿ ಅಲ್ಲ,” ಎಂದು ಹೇಳುತ್ತವೆ

“ಬಿಹಾರ ರಾಜ್ಯದಲ್ಲಿ ಒಂದು ವಾರದಲ್ಲಿ ೮.೫ ಲಕ್ಷ ಶೌಚಾಲಯ ನಿರ್ಮಿಸಲಾಗಿದೆ,” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ಮೋತಿಹರಿನಲ್ಲಿ ಏ.೧೦ರಂದು ಆಯೋಜನೆಗೊಂಡಿದ್ದ ಸ್ವಚ್ಛತಾ ಸಮ್ಮೇಳನದಲ್ಲಿ ಹೇಳಿದ್ದರು. ಅಲ್ಲದೆ, ಈ ಸಾಧನೆಗೆ ನೆರವಾದ ಸ್ವಚ್ಛತಾ ರಾಯಭಾರಿಗಳಿಗೆ ಧನ್ಯವಾದ ಸಲ್ಲಿಸಿದರು.

ಪ್ರಧಾನಿ ಮೋದಿ ಅವರು ಹೇಳಿದಂತೆ ಬಿಹಾರದಲ್ಲಿ ಒಂದು ವಾರದಲ್ಲಿ ೮.೫ ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆಯೇ ಎಂಬುದನ್ನು ‘ಬೂಮ್‌ ಲೈವ್‌’ ಪರಿಶೀಲಿಸಿದಾಗ ಸಿಕ್ಕ ಮಾಹಿತಿ ಬೇರೆಯೇ ಆಗಿತ್ತು.

೨೦೧೮ರ ಏಪ್ರಿಲ್‌ನಲ್ಲಿ ಸ್ವಚ್ಛ ಭಾರತ ಯೋಜನೆಯ ರಾಜ್ಯಗಳ ಪ್ರಗತಿಯ ಅಂಕಿ-ಅಂಶ ಗಮನಿಸಿದಾಗ ಬಿಹಾರದ ಸಾಧನೆ ಕಳಪೆಯಾಗಿರುವುದು ತಿಳಿದುಬರುತ್ತದೆ. ಬಿಹಾರದಲ್ಲಿ ಶೇ.೫೨.೭೩ ಮಂದಿ ಮಾತ್ರ ಮನೆಯಲ್ಲಿ ಶೌಚಾಲಯ ಹೊಂದುವ ಮೂಲಕ ದೇಶದಲ್ಲಿಯೇ ಅತಿ ಕಡಿಮೆ ಶೌಚಾಲಯ ಹೊಂದಿರುವ ರಾಜ್ಯವಾಗಿದೆ. ಒಡಿಶಾ ಶೇ.೫೨.೭೫ ಅಂಕ ಪಡೆಯುವ ಮೂಲಕ ಬಿಹಾರದ ನಂತರದ ಸ್ಥಾನದಲ್ಲಿದೆ. ಪುದುಚೇರಿ ಶೇ.೫೮.೭೨ ಹಾಗೂ ಉತ್ತರಪ್ರದೇಶ ಶೇ.೬೩.೦೨ ಅಂಕ ಪಡೆದಿವೆ (ಇಲ್ಲಿ ಇರುವ ಅಂಕಗಳು ಅಂದರೆ, ಆಯಾ ರಾಜ್ಯದಲ್ಲಿ ಮನೆಗಳು ಹೊಂದಿರುವ ಶೌಚಾಲಯದ ಶೇಕಡಾವಾರು ಪ್ರಮಾಣ).

ಸ್ವಚ್ಛ ಭಾರತ ಯೋಜನೆ ೨೦೧೪ರ ಅ.೨ರಂದು ಉದ್ಘಾಟನೆಯಾಯಿತು. ಈ ಯೋಜನೆಯ ಮುಖ್ಯ ಉದ್ದೇಶ ೨೦೧೯ರ ಅ.೨ರ ವೇಳೆಗೆ ಭಾರತವನ್ನು ಸಂಪೂರ್ಣ ಬಯಲು ಶೌಚಮುಕ್ತ ದೇಶವನ್ನಾಗಿ ಮಾಡುವುದಾಗಿತ್ತು. ಯೋಜನೆ ಆರಂಭವಾದ ಮೂರೂವರೆ ವರ್ಷದಲ್ಲಿ ಆದ ಪ್ರಗತಿಯನ್ನು ಗಮನಿಸುವುದಾದರೆ, ಯೋಜನೆ ಆರಂಭವಾದಾಗ ಬಿಹಾರದಲ್ಲಿ ಶೇ.೨೧.೬೧ರಷ್ಟಿದ್ದ ಶೌಚಾಲಯ ಪ್ರಮಾಣ ಈಗ ಶೇ.೫೨.೭೩ ಪ್ರಮಾಣ ತಲುಪಿದೆ. ಒಟ್ಟಾರೆ, ರಾಷ್ಟ್ರೀಯ ಪ್ರಗತಿ ನೋಡುವುದಾದರೆ ಶೇ.೮೧.೯೫ ಪ್ರಮಾಣ ಇದೆ.

ಪ್ರಧಾನಿ ಹೇಳಿದಂತೆ ಒಂದು ವಾರದಲ್ಲಿ ಬಿಹಾರದಲ್ಲಿ ೮.೫ ಲಕ್ಷ ಶೌಚಾಲಯಗಳನ್ನು ಕಟ್ಟಲಾಗಿದೆಯೇ ಎಂಬುದನ್ನು ಪರಿಶೀಲಿಸಿದಾಗ ಸ್ವಚ್ಛ ಭಾರತ ಮಿಷನ್‌ ಅಧಿಕೃತ ದಾಖಲೆಗಳು, “ಹೌದು, ಬಿಹಾರದಲ್ಲಿ ೮.೫ ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ಅದು ಒಂದು ವಾರದ ಅವಧಿಯಲ್ಲಿ ಅಲ್ಲ,” ಎಂದು ಹೇಳುತ್ತವೆ.

ಸ್ವಚ್ಛ ಭಾರತ ಮಿಷನ್‌ನ ಅಧಿಕೃತ ದಾಖಲೆಗಳ ಪ್ರಕಾರ, ಬಿಹಾರದಲ್ಲಿ ೨೦೧೮ರ ಮಾ.೧೩ರಿಂದ ಏ.೯ರವರೆಗಿನ ೨೮ ದಿನದ ಅವಧಿಯಲ್ಲಿ ೯.೬ ಲಕ್ಷ ಶೌಚಾಲಯ ನಿರ್ಮಿಸಲಾಗಿದೆ. ಪ್ರಧಾನಿ ಹೇಳಿದ ಒಂದು ವಾರದ ಅವಧಿಯಲ್ಲಿ ನಿರ್ಮಾಣವಾದ ಶೌಚಾಲಯಗಳ ಸಂಖ್ಯೆ ೫.೮೮ ಲಕ್ಷ. ಅಂದರೆ, ಮೋದಿ ಅವರು ಹೇಳಿದ ೮.೫ ಲಕ್ಷ ಅಂಕಿಗೆ ಸಂಪೂರ್ಣ ತದ್ವಿರುದ್ಧ ಅಂಕಿ. ಮೋದಿ ಅವರು ಹೇಳಿದ ಸಂಖ್ಯೆಗಳ ಶೌಚಾಲಯವನ್ನು ಮಾ.೨೧ರಿಂದ ಏ.೯ರವರೆಗೆ ನಿರ್ಮಿಸಲಾಗಿದೆ.

ಸ್ವಚ್ಛ ಭಾರತ ಮಿಷನ್ ವೆಬ್‌ಸೈಟ್‌ ಮಾಹಿತಿ ಪ್ರಕಾರ, ೧.೬೯ ಕೋಟಿ ಮನೆಗಳಿರುವ ಬಿಹಾರ ರಾಜ್ಯ ಸಂಪೂರ್ಣ ಬಯಲುಶೌಚ ಮುಕ್ತ ರಾಜ್ಯ ಆಗಬೇಕಾದರೆ, ಇನ್ನು ೮೦.೩೩ ಲಕ್ಷ ಶೌಚಾಲಯ ನಿರ್ಮಾಣ ಆಗಬೇಕಿದೆ. ಅಂದರೆ, ಮೋದಿ ಅವರ ಸ್ವಚ್ಛ ಭಾರತ ಯೋಜನೆಯ ಮುಖ್ಯ ಉದ್ದೇಶ ಈಡೇರಿಕೆಗೆ ಇನ್ನೂ ಒಂದೂವರೆ ವರ್ಷ ಮಾತ್ರ ಬಾಕಿ ಇದೆ. ಈ ಅವಧಿಯಲ್ಲಿ ಶೇ.೪೮ರಷ್ಟು ಪ್ರಗತಿ ಸಾಧ್ಯವೇ ಎಂಬ ಅನುಮಾನ ಮೂಡುತ್ತದೆ. ಅಲ್ಲದೆ, ಒಂದು ವಾರದಲ್ಲಿ ಇಷ್ಟು ಶೌಚಾಲಯ ನಿರ್ಮಿಸಿದೆವು ಎಂದು ಪ್ರಧಾನಿ ಮೋದಿ ಅವರು ಸುಳ್ಳು ಮಾಹಿತಿ ನೀಡುವ ಮೂಲಕ ಈ ಅನುಮಾನ ಮೂಡದಂತೆ ಜನರ ದಾರಿ ತಪ್ಪಿಸುತ್ತಿದ್ದಾರೆ.

ಇದನ್ನೂ ಓದಿ : ಜಾಲತಾಣದಲ್ಲಿ ಹರಿದಾಡಿತು ೧೩೧ ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳ ಸುಳ್ಳು ಪಟ್ಟಿ

ಪ್ರಧಾನಿ ಹೇಳಿಕೆ ಟ್ವಿಟರ್‌ನಲ್ಲಿ ಚರ್ಚೆಗೆ ಒಳಗಾಗಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರು, “ಪ್ರಧಾನಿ ಅವರು ಎಲ್ಲರನ್ನೂ ಪೆದ್ದುಗಳನ್ನಾಗಿ ಮಾಡುತ್ತಿದ್ದಾರೆ,” ಎಂದು ಟ್ವೀಟ್‌ ಮಾಡಿದ್ದಾರೆ. “ಹಾಗೊಂದು ವೇಳೆ, ಪ್ರಧಾನಿ ಮೋದಿ ಅವರು ಹೇಳಿದಂತೆ ಒಂದು ವಾರದಲ್ಲಿ ೮.೫ ಲಕ್ಷ ಶೌಚಾಲಯ ನಿರ್ಮಾಣ ಸಾಧ್ಯವಾಗಬೇಕಾದರೆ, ಒಂದು ಸೆಕೆಂಡ್‌ಗೆ ೧.೪ ಶೌಚಾಲಯ ಕಟ್ಟಬೇಕಾಗುತ್ತದೆ,” ಎಂದು ನಿಶಾದ್‌ ಕುಲಕರ್ಣಿ ಅವರು ಪ್ರಶ್ನೆ ಮಾಡಿ ಟ್ವೀಟ್‌ ಮಾಡಿದ್ದಾರೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More