ವಶಪಡಿಸಿಕೊಂಡ ೧೬೦ ಲ್ಯಾಪ್‌ಟಾಪ್‌ ಮೇಲೆ ಮೇವಾನಿ ಚಿತ್ರವಿದ್ದದ್ದು ನಿಜವೇ?

೧೬೦ ಲ್ಯಾಪ್‌ಟಾಪ್‌ ಮೇಲೆ ಗುಜರಾತ್‌ ಶಾಸಕ ಜಿಗ್ನೇಶ್ ಮೇವಾನಿ ಚಿತ್ರವಿದ್ದ ಕಾರಣಕ್ಕೆ ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆದು, ಜಿಗ್ನೇಶ್‌ರನ್ನು ಬಂಧಿಸಲಾಗಿದೆ ಎಂಬ ಸುದ್ದಿ ‘ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌’ನಲ್ಲಿ ಪ್ರಕಟಗೊಂಡಿತ್ತು. ಆದರೆ, ಇದು ಸುಳ್ಳುಸುದ್ದಿ ಎಂದು ‘ಆಲ್ಟ್‌ ನ್ಯೂಸ್‌’ ಬಹಿರಂಗ ಮಾಡಿದೆ

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ರಾಜ್ಯದಲ್ಲಿ ನೀತಿಸಂಹಿತೆ ಜಾರಿಯಲ್ಲಿದೆ. ಇದೇ ವೇಳೆ, ಗುಜರಾತ್‌ ಶಾಸಕ ಜಿಗ್ನೇಶ್ ಮೇವಾನಿ ಅವರು ನೀತಿಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಏ.೧೦ರಂದು ‘ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌’ ಬೆಂಗಳೂರು ಆವೃತಿಯಲ್ಲಿ ಪ್ರಕಟಗೊಂಡಿತ್ತು. ಪತ್ರಿಕೆಯ ಏಳನೇ ಪುಟದಲ್ಲಿ ಈ ವರದಿ ಪ್ರಕಟಗೊಂಡಿದ್ದು, ಅದರ ಪ್ರಕಾರ, “ಚುನಾವಣಾಧಿಕಾರಿಗಳು ೧೬೦ ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆದಿದ್ದು, ಈ ಲ್ಯಾಪ್‌ಟಾಪ್‌ಗಳ ಮೇಲೆ ಜಿಗ್ನೇಶ್ ಮೇವಾನಿ ಅವರ ಚಿತ್ರವಿದೆ,” ಎಂದು ಹೇಳಲಾಗಿದೆ.

“ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಶಿವಮೊಗ್ಗ ಕ್ಷೇತ್ರದ ಚುನಾವಣಾಧಿಕಾರಿಗಳು ಜಿಗ್ನೇಶ್‌ ಮೇವಾನಿ ವಿರುದ್ದ ದೂರು ದಾಖಲಿಸಿದ್ದಾರೆ,” ಎಂದು ಸುದ್ದಿಯಲ್ಲಿ ವಿವರಿಸಲಾಗಿತ್ತು. ಈ ಸುದ್ದಿ ಪ್ರಕಟವಾದ ನಂತರ ಜಿಗ್ನೇಶ್‌ ಮೇವಾನಿ ವಿರೋಧಿಗಳು ಇದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿದರು.

‘ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌’ನಲ್ಲಿ ಪ್ರಕಟಗೊಂಡ ಸುದ್ದಿ ಸತ್ಯವೇ ಎಂಬುದನ್ನು ಪರಿಶೀಲಿಸುವ ಸಲುವಾಗಿ ‘ಆಲ್ಟ್‌ ನ್ಯೂಸ್‌’, ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಶಶಿ ಸಾದುದ್ದೀನ್‌ ಅವರನ್ನು ಸಂಪರ್ಕಿಸಿದಾಗ, “ಲ್ಯಾಪ್‌ಟಾಪ್‌ಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರವಿದ್ದ ಕಾರಣಕ್ಕೆ ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳ ಮೇಲೆ ಜಿಗ್ನೇಶ್‌ ಮೇವಾನಿ ಅವರ ಭಾವಚಿತ್ರವಿರಲಿಲ್ಲ. ಇವುಗಳನ್ನು ಶಿವಮೊಗ್ಗದ ಶಾಲೆಯೊಂದಕ್ಕೆ ಕೊಂಡೊಯ್ಯಲಾಗುತ್ತಿತ್ತು. ಆದರೆ, ನೀತಿಸಂಹಿತೆ ಜಾರಿಯಲ್ಲಿರುವ ಕಾರಣಕ್ಕೆ ಸರ್ಕಾರದ ಯಾವುದೇ ಯೋಜನೆಗಳನ್ನು ಜಾರಿಗೊಳಿಸುವಂತಿಲ್ಲ ಮತ್ತು ಫಲಾನುಭವಿಗೆ ಯಾವುದೇ ಪರಿಹಾರ ನೀಡುವಂತಿಲ್ಲ. ಲ್ಯಾಪ್‌ಟಾಪ್‌ನಲ್ಲಿ ಸಿಎಂ ಭಾವಚಿತ್ರವಿದ್ದ ಕಾರಣಕ್ಕೆ ೧೬೦ ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ,” ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ : ಒಂದೇ ವಾರದಲ್ಲಿ ೮.೫ ಲಕ್ಷ ಶೌಚಾಲಯ ಕಟ್ಟಲಾಗಿದೆ ಎಂಬ ಪ್ರಧಾನಿ ಮಾತು ಸತ್ಯವೇ?

ಮಾ.೩೧ರಂದು ಈ ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣಕ್ಕೂ ಜಿಗ್ನೇಶ್‌ ಮೇವಾನಿಗೂ ಯಾವುದೇ ಸಂಬಂಧವಿಲ್ಲ. ಆದರೂ ಪ್ರಕರಣದಲ್ಲಿ ಜಿಗ್ನೇಶ್ ಹೆಸರನ್ನು ತಪ್ಪಾಗಿ ಬಳಸಲಾಗಿದೆ. ಏ.೬ರಂದು ಪ್ರಧಾನಿ ಮೋದಿ ಅವರು ಚಿತ್ರದುರ್ಗಕ್ಕೆ ಭೇಟಿ ನೀಡುವ ಸಂಬಂಧ ಜಿಗ್ನೇಶ್‌ ಬೆಂಗಳೂರಿನಲ್ಲಿ ನೀಡಿದ್ದ ಹೇಳಿಕೆ ಸಂಬಂಧ ಅವರ ಮೇಲೆ ದೂರು ದಾಖಲಿಸಿಕೊಳ್ಳಲಾಗಿತ್ತು.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More