‘ಸುನಾ ತಾ ಕೆ ಬೆಹಾದ್‌ ಸುನೇರಿ’ ಎಂದು ಹಾಡಿದ ಬಾಲಕಿ ಕಟುವಾ ಆಸೀಫಾಳೇ?

ಇತ್ತೀಚೆಗೆ ಜಮ್ಮು-ಕಾಶ್ಮೀರದ ಕಟುವಾದಲ್ಲಿ ಕುಕೃತ್ಯಕ್ಕೆ ಜೀವತೆತ್ತ ಆಸೀಫಾ ಹಾಡಿದ ಕೊನೆಯ ಹಾಡು ಎಂಬ ಅಡಿಬರೆಹದಲ್ಲಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆದರೆ, ಈ ವಿಡಿಯೋದಲ್ಲಿ ಇರುವ ಬಾಲಕಿ ಕಟುವಾ ಸಂತ್ರಸ್ತೆ ಅಲ್ಲ ಎಂಬುದು ಸಾಬೀತಾಗಿದೆ

ಬಾಲಕಿಯೊಬ್ಬಳು ‘ಸುನಾ ತಾ ಕೆ ಬೆಹಾದ್‌ ಸುನೇರಿ ಹೈ ಡೆಲ್ಲಿ’ ಎಂಬ ಸಾಲಿನ ಕವಿತೆಯನ್ನು ಹಾಡುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ‘ಜಮ್ಮು-ಕಾಶ್ಮೀರದ ಕಟುವಾದಲ್ಲಿ ಕಾಮುಕರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಆಸೀಫಾ ಹಾಡಿದ ಕೊನೆಯ ಹಾಡು’ ಎಂದು ಅಡಿಬರೆಹ ವಿಡಿಯೋದಲ್ಲಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಆದರೆ, ಈ ವಿಡಿಯೋದಲ್ಲಿ ಹಾಡುತ್ತಿರುವ ಬಾಲಕಿ ಕುಟುವಾ ಸಂತ್ರಸ್ತೆಯಲ್ಲ ಎಂದು ಈ ಹಾಡನ್ನು ಬರೆದಿರುವ ಕವಿ ಇಮ್ರಾನ್‌ ಪ್ರತಾಪ್‌ಗಾರ್ತಿ ಅವರು ಸ್ಪಷ್ಟಪಡಿಸಿದ್ದಾರೆ. ಏಕೆಂದರೆ, ಇಮ್ರಾನ್‌ ಅವರು ಈ ವಿಡಿಯೋವನ್ನು ೨೦೧೭ರ ಜು.೧೮ರಂದು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಅದಕ್ಕೆ ಸಾಕ್ಷಿಯಾಗಿ, ಅಂದು ಅವರು ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ್ದ, ದಿನಾಂಕವಿರುವ ಸ್ಕ್ರೀನ್‌ ಶಾಟ್‌ಗಳನ್ನು ತಮ್ಮ ಫೇಸ್‌ಬುಕ್‌, ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ವಾಸ್ತವ ಅರಿಯದೆ ಕೆಲವರು ವಿಡಿಯೋದಲ್ಲಿ ಇರುವ ಬಾಲಕಿ ಕಟುವಾದ ಸಂತ್ರಸ್ತೆ ಎಂದು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಅಸಲಿಗೆ ವಿಡಿಯೋದಲ್ಲಿ ಹಾಡು ಹೇಳುತ್ತಿರುವ ಬಾಲಕಿ ಕಟುವಾ ಸಂತ್ರಸ್ತೆಯನ್ನು ಹೋಲುತ್ತಾಳೆಯೇ ಹೊರತು, ಆಕೆಯಲ್ಲ ಎಂದು ಇಮ್ರಾನ್‌ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಯಾವುದೇ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುವಾಗ ಅದನ್ನು ಮರುಪರಿಶೀಲಿಸಿಕೊಳ್ಳಬೇಕು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಇದನ್ನೂ ಓದಿ : ವಶಪಡಿಸಿಕೊಂಡ ೧೬೦ ಲ್ಯಾಪ್‌ಟಾಪ್‌ ಮೇಲೆ ಮೇವಾನಿ ಚಿತ್ರವಿದ್ದದ್ದು ನಿಜವೇ?

‘ನಜ್ಮಾ’ ಹೆಸರಿನ ಈ ಕವಿತೆ ರಚನೆಗೆ ಹಿನ್ನೆಲೆಯೂ ಇದೆ. ಜವಹರಲಾಲ್‌ ನೆಹರು ವಿವಿಯ ವಿದ್ಯಾರ್ಥಿ ನಜೀಬ್ ಅಹ್ಮದ್‌ ಅವರು ನಾಪತ್ತೆಯಾದಾಗ ಇಮ್ರಾನ್‌ ಅವರು ನಜೀಬ್‌ ಅವರ ತಾಯಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆಗ ನಜೀಬ್‌ ಅವರ ತಾಯಿ, ಮಗನನ್ನು ಹುಡುಕುತ್ತಿರುವುದಾಗಿ ಹೇಳಿದ್ದರು ಮತ್ತು ‘ನಜೀಬ್‌ ಕಹಾ ಹೈನಾ’ (ನಜೀಬ್‌ ಏಲ್ಲಿದ್ದಾನೆ?) ಎಂದು ಕೇಳಿದ್ದರು. ಈ ಹಿನ್ನೆಲೆಯಲ್ಲಿ ಉರ್ದುವಿನಲ್ಲಿ ಈ ಕವಿತೆ ರಚಿಸಲಾಗಿತ್ತು.

ಜೆಎನ್‌ಯುನಲ್ಲಿ ಮೊದಲ ವರ್ಷದಲ್ಲಿ ಓದುತ್ತಿದ್ದ ನಜೀಬ್‌, ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಿದ್ದರು. ನಾಪತ್ತೆಗೂ ಮುನ್ನ ೨೦೧೬ರ ಅಕ್ಟೋಬರ್‌ನಲ್ಲಿ ನಜೀಬ್‌ಗೂ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಸದಸ್ಯರಿಗೂ ಮನಸ್ತಾಪ ಉಂಟಾಗಿತ್ತು. ಆದಾಗ್ಯೂ ಈವರೆಗೂ ನಜೀಬ್‌ ಏಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More