ಪ್ರಧಾನಿ ಮೋದಿಯವರು ನಿಜವಾಗಿಯೂ ಉಡುಪಿಯಲ್ಲಿ ರೋಡ್‌ ಶೋ ಮಾಡಿದರೇ?

ಬಿಜೆಪಿ ಕರ್ನಾಟಕದಲ್ಲಿ ನಿತ್ಯವೂ ತನ್ನ ಜನಪ್ರಿಯತೆಯನ್ನು ಮುಟ್ಟಿಸುವುದಕ್ಕೆ ಹಲವು ರೀತಿಯ ಪ್ರಯತ್ನಗಳಲ್ಲಿ ತೊಡಗಿದೆ. ಘಟಾನುಘಟಿಗಳು ಪ್ರಚಾರ ಮಾಡುತ್ತಿದ್ದಾರೆ. ಜೊತೆಗೆ ಅವರ ಭಕ್ತರು ಹಳೆಯ ವಿಡಿಯೋಗಳನ್ನು ಕರ್ನಾಟಕದ ಪ್ರಚಾರಯಾತ್ರೆಯ ವಿಡಿಯೋ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಸುತ್ತಿದ್ದಾರೆ

ಸದ್ಯ ಪ್ರಧಾನಿ ನರೇಂದ್ರ ಮೋದಿಯವರು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡತೊಡಗಿದ್ದಾರೆ. ಮೇ ೧ನೇ ತಾರೀಖಿನಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಈಗಾಗಲೇ ಭಾರಿ ಪ್ರಚಾರ ನಡೆಸಿದ್ದಾರೆ. ಪ್ರಚಾರ ಭಾಷಣದ ವಿಡಿಯೋಗಳು, ಸುದ್ದಿಗಳು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇವುಗಳ ಜೊತೆಗೆ ನಕಲಿ ವಿಡಿಯೋಗಳನ್ನೂ ಹಂಚಿಕೊಳ್ಳಲಾಗುತ್ತಿದೆ.

“ಮೇ ೧ರಂದು ನರೇಂದ್ರ ಮೋದಿಯವರು ಉಡುಪಿಯಲ್ಲಿ ಪ್ರಚಾರ ಯಾತ್ರೆ ನಡೆಸಿದ್ದರು. ಕರ್ನಾಟಕದಲ್ಲಿ ಒಟ್ಟು ನಡೆಸಲಿದ್ದ ೨೧ ಪ್ರಚಾರಯಾತ್ರೆ ಆರಂಭವಾಗಿದ್ದು ಅಲ್ಲಿಂದಲೇ. ಈ ಸಂದರ್ಭದಲ್ಲಿ ಮೋದಿಯವರು ರೋಡ್‌ ಶೋ ಕೂಡ ನಡೆಸಿದರು,” ಅವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಪ್ರಕಟಿಸಿದರು. ಜೊತೆಗೆ, “ಉಡುಪಿಯಲ್ಲಿ ಮೋದಿ ಪರವಾದ ಅಲೆಯೇ ಇದೆ, ಬೆಂಬಲ ವ್ಯಕ್ತವಾಗುತ್ತಿದೆ,” ಎಂದು ಭಾರತ್‌ ರಾವತ್‌ ಹೆಸರಿನ ಮುಂಬೈ ವಾಸಿಯೊಬ್ಬರು ಟ್ವೀಟ್‌ ಮಾಡಿದ್ದಾರೆ. ರಾವತ್‌ ಮಹಾರಾಷ್ಟ್ರ ಬಿಜೆಪಿಯ ಪದಾಧಿಕಾರಿ.

ಸಿನಿಮಾ ನಿರ್ದೇಶಕ, ಮೋದಿ ಬೆಂಬಲಿಗ ಅಶೋಕ್‌ ಪಂಡಿತ್‌ ಕೂಡ ಮೇ ೩ರಂದು ಈ ವಿಡಿಯೋ ಪ್ರಕಟಿಸಿದ್ದರು. ನಂತರದಲ್ಲಿ ಡಿಲೀಟ್‌ ಮಾಡಿದರು. ಹೀಗೆ ಟ್ವಿಟರ್‌ನಲ್ಲಿ ಪ್ರಕಟವಾದ ವಿಡಿಯೋವನ್ನು ಅನೇಕ ಬಲಪಂಥೀಯ ಟ್ವೀಟಿಗರು ತಮ್ಮ ಟೈಮ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಮೋದಿಯವರು ಫಾಲೋ ಮಾಡುವ ಪವನ್‌ ದುರಾನಿ ಅವರೂ ಟ್ವೀಟ್‌ ಮಾಡಿದ್ದಾರೆ. ದೆಹಲಿ ಮಾಜಿ ಶಾಸಕ, ಬಿಜೆಪಿ ಮುಖಂಡ ಅನಿಲ್‌ ಶರ್ಮಾ ಸೇರಿದಂತೆ ಅನೇಕರು ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿದ್ದಾರೆ. ಅಲ್ಲದೆ, ವಾಟ್ಸ್‌ಆಪ್‌ನಲ್ಲೂ ಅಧಿಕ ಸಂಖ್ಯೆಯಲ್ಲಿ ವಿನಿಮಯವಾಗಿದೆ.

ವಾಸ್ತವದಲ್ಲಿ ಈ ವಿಡಿಯೋ ಉಡುಪಿಯದ್ದಲ್ಲ ಎಂದು ಈ ಕುರಿತು ವಿಶ್ಲೇಷಣಾ ವರದಿ ಪ್ರಕಟಿಸಿರುವ ‘ಆಲ್ಟ್‌ ನ್ಯೂಸ್‌’ ಹೇಳಿದೆ. ವಿಡಿಯೋದ ಒಂದು ದೃಶ್ಯದಲ್ಲಿ ಕಾಣಿಸುವ ‘ಎಂ ಸಿ ಸ್ಯಾರೀಸ್‌’ ಹೆಸರನ್ನು ಗೂಗಲ್‌ನಲ್ಲಿ ಹುಡುಕಿದಾಗ, ಅದು ವಾರಾಣಸಿಯ ಮದನ್‌ಪುರದಲ್ಲಿರುವುದು ತಿಳಿಯಿತು. ಇದನ್ನು ಆಧರಿಸಿ, 'ವಾರಾಣಸಿ ರೋಡ್ ಶೋ ಮೋದಿ ಮದನ್‌ಪುರ್‌' ಎಂದು ಹುಡುಕಿದಾಗ ಹಲವು ವಿಡಿಯೋಗಳು ದೊರೆತಿವೆ ಅವುಗಳಲ್ಲಿ ಒಂದನ್ನು ಈ ಕೆಳಗೆ ನೋಡಬಹುದು.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಗ್ಗೆ ಸುಳ್ಳು ಹೇಳಿದ ಮೋದಿಗೆ ಟ್ವೀಟಿಗರ ಪಾಠ

ಮೋದಿ ಭಕ್ತರು ಟ್ವೀಟ್‌ ಮಾಡಿರುವ ದೃಶ್ಯ ಮತ್ತು ಸಂದರ್ಭಗಳೆರಡನ್ನೂ ಮೇಲಿನ ವಿಡಿಯೋದಲ್ಲೂ ಕಾಣಬಹುದು. ಈ ವಿಡಿಯೋ ಯೂಟ್ಯೂಬ್‌ನಲ್ಲಿ ಪ್ರಕಟವಾಗಿದ್ದು ೨೦೧೭ರ ಮಾರ್ಚ್‌ನಲ್ಲಿ. ಉತ್ತರ ಪ್ರದೇಶದ ಚುನಾವಣೆಯ ವೇಳೆ ನಡೆಸಿದ ರೋಡ್‌ ಶೋನ ವಿಡಿಯೋ ಇದು. ‘ಆಲ್ಟ್‌ ನ್ಯೂಸ್‌’ ಪತ್ತೆಮಾಡಿರುವ ವಿಡಿಯೋದಲ್ಲೂ 'ಎಂ ಸಿ ಸ್ಯಾರೀಸ್‌' ಹೆಸರಿನ ಬೋರ್ಡನ್ನು ಕಾಣಬಹುದು.

ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಬಿಜೆಪಿ, ರಾಜ್ಯದ ಜನರಲ್ಲಿ ಬಿಜೆಪಿ ಮತ್ತು ಮೋದಿಯವರ ಪರವಾದ ಒಲವಿದೆ ಎಂಬ ಅಭಿಪ್ರಾಯವನ್ನು ಸೃಷ್ಟಿಸಲು ಇಂಥ ಪ್ರಯತ್ನ ನಡೆಸಿದಂತೆ ಕಾಣುತ್ತದೆ ಎಂದು ‘ಆಲ್ಟ್‌ ನ್ಯೂಸ್‌’ ತನ್ನ ವರದಿಯಲ್ಲಿ ವಿಶ್ಲೇಷಿಸಿದೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More