ಎಸ್ ನಿಜಲಿಂಗಪ್ಪನವರನ್ನು ದಲಿತ ನಾಯಕ ಎಂದು ಕರೆದು ಎಡವಟ್ಟು ಮಾಡಿದ ಬಿಜೆಪಿ

ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಲವೀಯ ಅವರು ಆಗಾಗ ಎಡವಟ್ಟು ಮಾಡುತ್ತಲೇ ಇರುತ್ತಾರೆ. ಭಾನುವಾರ ಪ್ರಧಾನಿ ಮೋದಿಯವರ ಭಾಷಣವನ್ನು ಟ್ವೀಟ್‌ ಮಾಡುವಾಗ ಕರ್ನಾಟಕದ ಮುಖ್ಯಮಂತ್ರಿ, ಲಿಂಗಾಯತ ಸಮುದಾಯದ ಎಸ್‌ ನಿಜಲಿಂಗಪ್ಪನವರನ್ನು ದಲಿತ ಎಂದು ಕರೆದಿದ್ದಾರೆ!

ಬಿಜೆಪಿ ಈಗ ದಲಿತರನ್ನು ಓಲೈಸುವ ಕೆಲಸವನ್ನು ಭರದಿಂದ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ರಾಯಚೂರಿನಲ್ಲಿ ಭಾ‍ಷಣ ಮಾಡುವಾಗಲೂ ದಲಿತರ ವಿಷಯಗಳನ್ನು ಹೆಚ್ಚು ಪ್ರಸ್ತಾಪಿಸಿದರು. ಈ ಭಾಷಣವನ್ನು ಟ್ವೀಟ್‌ ಮಾಡುತ್ತಿದ್ದ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಲವೀಯ, ಎಡವಟ್ಟೊಂದನ್ನು ಮಾಡಿದ್ದು ವಿವಾದಕ್ಕೆ ಸಿಲುಕಿದ್ದಾರೆ.

"ಪ್ರಧಾನಿ ಮೋದಿಯವರು ಕಾಂಗ್ರೆಸ್‌ನ ಹುಸಿ ದಲಿತ ಪ್ರೇಮವನ್ನು ಛಿದ್ರ ಮಾಡಿದರು. ನೆಹರು-ಗಾಂಧಿ ಕುಟುಂಬವು ದಲಿತ ನಾಯಕರಾದ ಅಂಬೇಡ್ಕರ್‌ ಮತ್ತು ಶ್ರೀ ನಿಜಲಿಂಗಪ್ಪನವರು ಹೇಗೆ ನಡೆಸಿಕೊಂಡಿತು ಎಂಬುದನ್ನು ಮೋದಿ ಪ್ರಸ್ತಾಪಿಸಿದರು,” ಎಂದು ಅಮಿತ್ ಟ್ವೀಟ್‌ ಮಾಡಿದ್ದಾರೆ.

ಏಕೀಕೃತ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ, ಎಐಸಿಸಿ ಅಧ್ಯಕ್ಷರಾಗಿದ್ದ ಏಕೈಕ ಕನ್ನಡಿಗ, ಎರಡು ಅವಧಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದ ಲಿಂಗಾಯತ ಸಮುದಾಯದ ಪ್ರಮುಖ ನಾಯಕರು ಎಸ್ ನಿಜಲಿಂಗಪ್ಪ. ಆದರೆ, ಅಮಿತ್‌ ಮಾಲವೀಯ ದಲಿತ ಮತದಾರರನ್ನು ಓಲೈಸುವ ಭರದಲ್ಲಿ ನಿಜಲಿಂಗಪ್ಪನವರನ್ನೂ ದಲಿತರೆಂದು ಕರೆದಿದ್ದಾರೆ. ಜೊತೆಗೆ ನಿಜಲಿಂಗಪ್ಪ ಅವರನ್ನು ‘ನಿಂಜಲಿಂಗಪ್ಪ’ ಎಂದು ತಪ್ಪಾಗಿ ಬರೆದಿದ್ದಾರೆ. ನಿಂಜಾ ಒಂದು ಗುಪ್ತ ಪಡೆಯ ಸೈನಿಕನ ಹೆಸರು. ಜಪಾನಿನ ಊಳಿಗಮಾನ್ಯ ವ್ಯವಸ್ಥೆಯಲ್ಲಿದ್ದ ಈ ಪಡೆ ಗೆರಿಲ್ಲಾ ಯುದ್ಧ, ಹತ್ಯೆ ಮುಂದಾವುಗಳಿಗೆ ಬಳಕೆಯಾಗುತ್ತಿತ್ತು.

ನಿಜಲಿಂಗಪ್ಪನವರನ್ನು ದಲಿತರೆಂದು ಕರೆಯುವುದು ತಪ್ಪೆಂದಲ್ಲ. ಆದರೆ ಹೀಗೆ ಕರೆಯುವ ಮೂಲಕ ಅಮಿತ್‌ ಏನನ್ನೋ ಸಾಧಿಸುವ ಉದ್ದೇಶವಿರುವುದು, ಅಲ್ಲೂ ತಪ್ಪು ಮಾಹಿತಿ ನೀಡುತ್ತಿರುವುದು ಟ್ವೀಟಿಗರ ಕೋಪಕ್ಕೆ ಕಾರಣವಾಗಿದೆ.

ಯೋಗಿ ಆದಿತ್ಯನಾಥ, ಬಿಪ್ಲವ್‌ ದೇವ್‌ ಅವರಂಥವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡುವ ಪಕ್ಷದವರಾದ ಅಮಿತ್‌ ಮಾಲವೀಯರಿಂದ ಏನೂ ನಿರೀಕ್ಷಿಸಲು ಸಾಧ್ಯವೆಂದು ಟ್ವೀಟಿಗರು ಕಾಲೆಳೆದಿದ್ದಾರೆ.

ಈಗಾಗಲೇ ಲಿಂಗಾಯತ ಪ್ರತ್ಯೇಕ ಧರ್ಮದ ಚರ್ಚೆಯಲ್ಲಿ ಬಿಜೆಪಿ ತಳೆದ ನಿಲುವು ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯಗಳಲ್ಲಿ ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಅಮಿತ್‌ ಮಾಲವೀಯ ಲಿಂಗಾಯತ ಸಮುದಾಯರ ನಾಯಕರೊಬ್ಬರನ್ನು ತಮ್ಮ ಹಿತಾಸಕ್ತಿಯ ರಾಜಕಾರಣಕ್ಕೆ ದಲಿತರೆಂದು ಸುಳ್ಳು ಹೇಳಿರುವುದು ಮತ್ತಷ್ಟು ಕೋಪಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ತುಮಕೂರು ಆಹಾರ ಸಂಸ್ಕರಣ ಘಟಕದ ನೈಜ ಉದ್ಯೋಗಿಗಳೆಷ್ಟು, ಮೋದಿ ಹೇಳಿದ್ದೆಷ್ಟು?
ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More