ರಘುರಾಮ್‌ ರಾಜನ್‌ ಬ್ಯಾಂಕ್‌ ಆಫ್‌ ಇಂಗ್ಲೆಂಡಿನ ಗವರ್ನರ್‌ ಆಗಿಲ್ಲ!

ಆರ್‌ಬಿಐ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಅವರನ್ನು ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಗವರ್ನರ್‌ ಆಗಿ ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಸದ್ದು ಮಾಡುತ್ತಿದೆ. ಆದರೆ, ಇದು ಸುಳ್ಳು ಎಂದು ಸ್ವತಃ ರಾಜನ್‌ ಸ್ಪಷ್ಟಪಡಿಸಿದ್ದಾರೆ

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗವರ್ನರ್‌ ಆಗಿ ಸೇವೆ ಸಲ್ಲಿಸಿದ್ದ ರಘುರಾಮ್‌ ರಾಜನ್‌ ತಮ್ಮ ಅವಧಿ ಮುಗಿದ ಬಳಿಕ ಶಿಕಾಗೋದಲ್ಲಿ ನೆಲೆಸಿದ್ದಾರೆ. ಅಲ್ಲಿನ ಬೂತ್‌ ಸ್ಕೂಲ್‌ ಆಫ್‌ ಬ್ಯುಸಿನೆಸ್‌ನಲ್ಲಿ ಪಾಠ ಮಾಡುತ್ತಿದ್ದಾರೆ. ದೇಶದ ಅರ್ಥವ್ಯವಸ್ಥೆಯ ಬಗ್ಗೆ ತಿಳಿವಳಿಕೆ ಮತ್ತು ಸ್ಪಷ್ಟ ನಿಲುವುಗಳಿಂದಾಗಿ ಆಪ್ತರೆನಿಸಿದ್ದ ರಾಜನ್‌, ಮತ್ತೊಂದು ಅವಧಿಗೆ ಗವರ್ನರ್‌ ಆಗುತ್ತಾರೆಂಬ ಸುದ್ದಿಯೂ ಇತ್ತು. ಆದರೆ ಆಗಲಿಲ್ಲ. ಈಗ ಅವರನ್ನು ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಗವರ್ನರ್‌ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಮೊದಲು ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು ಸತ್ಪ್ರಕಾಶ್‌ ಶರ್ಮಾ ಹೆಸರಿನ ವ್ಯಕ್ತಿ. ಪಂಜಾಬ್‌ ಮೂಲದ ಫೈನಾನ್ಷಿಯಲ್‌ ಅನಾಲಿಸಿಸ್ಟ್‌ ಎಂದು ಹೇಳಿಕೊಂಡಿರುವ ಇವರು, ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಏ.೨೮ರಂದು, "ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಗವರ್ನರ್‌ ಆಗಿ ಚುನಾಯಿತರಾಗಿರುವುದಕ್ಕೆ ಅಭಿನಂದಿಸುತ್ತೇನೆ. ಎಂದಿನಂತೆ ಭಾರತೀಯರು ಅಮೂಲ್ಯವಾದದ್ದನ್ನು ಏನೇ ಹೊಂದಿದ್ದರೂ ಪಾಶ್ಚಿಮಾತ್ಯರು ಅದನ್ನು ಗುರುತಿಸಿ ಒಯ್ದುಬಿಡುತ್ತಾರೆ,'' ಎಂದು ಬರೆದುಕೊಂಡಿದ್ದರು.

ಈ ಸುದ್ದಿಯನ್ನು ನಂಬಿದ ಹಲವರು ತಮ್ಮ ಫೇಸ್‌ಬುಕ್‌ ವಾಲ್‌ಗಳಲ್ಲಿ ಅಭಿನಂದಿಸಿ ಪೋಸ್ಟ್‌ ಬರೆದರು. ಟ್ವಿಟರ್‌ಗೂ ಹಬ್ಬಿದ ಈ ಸುದ್ದಿಯನ್ನು ಅನೇಕರು ಟ್ವೀಟ್‌, ರೀಟ್ವಿಟ್‌ ಮಾಡಿ ಸಂಭ್ರಮಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದ ಈ ಸುದ್ದಿಯನ್ನು ‘ಸಿಯಾಸತ್‌’ ಪತ್ರಿಕೆ ವರದಿ ಮಾಡಿತು. ಈ ವರದಿಯನ್ನು ಅನೇಕರು ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್‌ ಆಪ್‌ಗಳಲ್ಲಿ ಶೇರ್‌ ಮಾಡಿದರು. ಹಾಗೆ ಶೇರ್‌ ಮಾಡಿದವರಲ್ಲಿ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಕೂಡ ಒಬ್ಬರು.

ಇದನ್ನೂ ಓದಿ : ಬ್ಯಾಂಕ್ ಆಫ್ ಇಂಗ್ಲೆಂಡ್ ಗವರ್ನರ್ ಹುದ್ದೆಗೆ ರಘುರಾಮ್ ರಾಜನ್?

ಆದರೆ, ವಾಸ್ತವದಲ್ಲಿ ರಘುರಾಮ್‌ ರಾಜನ್‌ ಈ ಹುದ್ದೆಗೆ ಚುನಾಯಿತರೂ ಅಲ್ಲ, ನೇಮಕಗೊಂಡವರೂ ಅಲ್ಲ. ಈ ಕುರಿತು ವರದಿ ಪ್ರಕಟಿಸಿರುವ 'ಆಲ್ಟ್‌ ನ್ಯೂಸ್‌', ರಾಜನ್‌ ಅವರನ್ನ ಸಂಪರ್ಕಿಸಿ ಪ್ರತಿಕ್ರಿಯೆಯನ್ನು ಪಡೆದಿದೆ. ಈ ಬಗ್ಗೆ ಅವರು ಹೇಳಿವುದು: “ಕ್ಷಮಿಸಿ, ಇದು ಸುಳ್ಳು ಸುದ್ದಿ. ಪ್ರಸ್ತುತ ನನ್ನ ಉದ್ಯೋಗದಿಂದ ಸಂತೋಷದಿಂದ ಇರುವೆ,” ಎಂದು ಸ್ಪಷ್ಟಪಡಿಸಿದ್ದಾರೆ.

ಹೀಗೆ ಸುದ್ದಿ ಹುಟ್ಟಿಕೊಳ್ಳಲು ಏನು ಕಾರಣ? ಜಗತ್ತಿನ ಪ್ರಮುಖ ಆರ್ಥಿಕ ತಜ್ಞರಲ್ಲಿ ಒಬ್ಬರೆಂದು ರಾಜನ್‌ ಗುರುತಿಸಲ್ಪಡುತ್ತಾರೆ. ಇಂಗ್ಲೆಂಡಿನ ‘ದಿ ಫೈನಾನ್ಷಿಯಲ್‌ ಟೈಮ್‌’ ಪತ್ರಿಕೆ ಕೂಡ, ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಗವರ್ನರ್‌ ಹುದ್ದೆಯ ಸ್ಪರ್ಧಿಗಳಲ್ಲಿ ರಾಜನ್‌ ಕೂಡ ಒಬ್ಬರು ಎಂದು ವರದಿ ಮಾಡಿತ್ತು. ವರದಿಯಲ್ಲಿ, “ಮಾರ್ಕ್‌ ಕಾರ್ನೆಯ ಅವಧಿ ಮುಂದಿನ ವರ್ಷ ಮುಗಿಯುತ್ತಿದ್ದು, ಮುಂದಿನ ಗವರ್ನರ್‌ ಆಯ್ಕೆಗೆ ಸೂಕ್ತ ವ್ಯಕ್ತಿಗಳ ಹುಡುಕಾಟ ನಡೆದಿದೆ,” ಎಂಬ, ಇಂಗ್ಲೆಂಡಿನ ಚಾನ್ಸಲರ್‌ ಫಿಲಿಪ್‌ ಹ್ಯಾಮಂಡ್‌ ಹೇಳಿಕೆಯನ್ನು ಉಲ್ಲೇಖಿಸಿದೆ. ಇದೇ ವರದಿಯಲ್ಲಿ, "ಶಿಕಾಗೋದಲ್ಲಿ ನೆಲೆಸಿರುವ ಆರ್ಥಿಕ ತಜ್ಞ, ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಅವರನ್ನು ಈ ಹುದ್ದೆಗೆ ಸೆಳೆಯುವುದು ಒಂದು ಕ್ರಾಂತಿಕಾರಿ ನಡೆಯಲಾಗಲಿದ್ದು, ಮೆಕ್ಸಿಕೋದ ಸೆಂಟ್ರಲ್‌ ಬ್ಯಾಂಕ್‌ ಮುಖ್ಯಸ್ಥ ಮತ್ತು ಬ್ಯಾಂಕ್‌ ಆಫ್‌ ಇಂಟರ್‌ ನ್ಯಾಷನಲ್‌ ಸೆಟಲ್‌ಮೆಂಟ್ಸ್‌ನ ಹೊಸ ವ್ಯವಸ್ಥಾಪಕ ನಿರ್ವಾಹಕ ಆಗಸ್ಟಿನ್‌ ಕಾರ್ಸ್ಟೆನ್ಸ್‌ ಈ ಸ್ಪರ್ಧೆಯಲ್ಲಿದ್ದಾರೆ,'' ಎಂದೂ ಹೇಳಿತ್ತು. ಜೊತೆಗೆ ಕೆಳಗಿನ ವ್ಯಂಗ್ಯಚಿತ್ರವನ್ನು ಪ್ರಕಟಿಸಿತ್ತು.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More