ಅಮೆರಿಕದ ರಾಯಭಾರಿ ಕಚೇರಿಯ ಹೆಸರಲ್ಲೊಂದು ಚುನಾವಣಾಪೂರ್ವ ಸುಳ್ಳು ಸರ್ವೆ!

ಬಿಜೆಪಿ ಹೆಚ್ಚು ಸೀಟುಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದ ಹಲವು ಸುಳ್ಳು ಸರ್ವೆಗಳು ಸದ್ದು ಮಾಡಿದ್ದಾಯಿತು. ಈಗ ಜೆಡಿಎಸ್‌ ಪರ ಭವಿಷ್ಯ ನುಡಿಯುವ ಸರ್ವೆಯೊಂದು ಗಮನ ಸೆಳೆದಿದೆ. ಅಮೆರಿಕದ ರಾಯಭಾರಿ ಕಚೇರಿ ಮಾಡಿದೆ ಎನ್ನಲಾಗಿರುವ ಈ ಸರ್ವೆಯ ಮಾಹಿತಿ ವಾಟ್ಸ್‌ ಆಪ್‌ನಲ್ಲಿ ಓಡಾಡುತ್ತಿದೆ

ಅಮೆರಿಕದ ರಾಯಭಾರಿ ಕಚೇರಿ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆ ಬಗ್ಗೆ ಕುತೂಹಲ ಇಟ್ಟುಕೊಂಡಿದೆಯೇ? ಈ ಪ್ರಶ್ನೆ ಏಳಲು ಕಾರಣ, ವಾಟ್ಸ್‌ ಆಪ್‌ ಗ್ರೂಪ್‌ಗಳಲ್ಲಿ ಗಮನ ಸೆಳೆಯುತ್ತಿರುವ ಅಮೆರಿಕ ರಾಯಭಾರಿ ಕಚೇರಿಯ ಪತ್ರ!

ರಿಪಬ್ಲಿಕನ್‌ ಪಕ್ಷದ ಮುಖಂಡ, ರಾಜ್ಯ ಕಾರ್ಯದರ್ಶಿ ಮೈಕ್‌ ಪಾಂಪೋ ಅವರಿಗೆ, ದೆಹಲಿಯ ಚಾಣಕ್ಯಪುರಿಯಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಕಳಿಸಿರುವ ಪತ್ರವಿದು. ಇದರಲ್ಲಿ ಖಾಸಗಿ ಕಂಪನಿಯೊಂದರ ಮೂಲಕ ಸಮೀಕ್ಷೆ ಮಾಡಿಸಿರುವುದಾಗಿ ರಾಯಭಾರಿ ಕಚೇರಿ ತಿಳಿಸಿದೆ.

ಸಮೀಕ್ಷೆ ವಿವರಗಳನ್ನು ನೀಡುತ್ತ, ಸಣ್ಣ ಪಕ್ಷ ಜಾತ್ಯತೀತ ಜನತಾದಳ ಅತಿ ಹೆಚ್ಚು ಸೀಟುಗಳನ್ನು ಪಡೆಯುವ ಪಕ್ಷವಾಗಿ ಹೊಮ್ಮಲಿದೆ. ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಭಾರತೀಯ ಜನತಾ ಪಕ್ಷ ಮೂರನೇ ಸ್ಥಾನಕ್ಕೆ ಕುಸಿಯಲಿದ್ದು, ಕಾಂಗ್ರೆಸ್‌ ಸ್ಥಾನದಲ್ಲಿದೆ ಎಂದು ಹೇಳಿದೆ.

ಚರ್ಚೆಗೆ ಕಾರಣವಾದ ಸುಳ್ಳು ಸಮೀಕ್ಷೆಯ ಪತ್ರದ ಪ್ರತಿ

ಒಟ್ಟು ೨೨೪ ಕ್ಷೇತ್ರಗಳಲ್ಲಿ ೨೨೩ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಜೆಡಿಎಸ್‌ ೯೦ ಸ್ಥಾನಗಳನ್ನು ಕಾಂಗ್ರೆಸ್‌ ೭೦ ಸ್ಥಾನಗಳನ್ನು ಬಿಜೆಪಿ ೬೩ ಸ್ಥಾನಗಳನ್ನು ನಡೆಯಲಿದೆ ಎಂದು ಸಮೀಕ್ಷೆಯ ಅಂಕಿ-ಅಂಶಗಳನ್ನು ಪತ್ರ ಉಲ್ಲೇಖಿಸಿದೆ. ಜೊತೆಗೆ, ಜೆಡಿಎಸ್‌ ನಾಯಕ ಎಚ್ ಡಿ ದೇವೇಗೌಡರೊಂದಿಗೆ ಉತ್ತಮ ರಾಜಕೀಯ ಸಂಬಂಧ ಇಟ್ಟುಕೊಳ್ಳುವುದು ಒಳ್ಳೆಯದು ಎಂಬ ಸಲಹೆಯನ್ನೂ ನೀಡಿದೆ. ಜೊತೆಗೆ ಜೆಡಿಎಸ್‌, ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳು ಗೆಲ್ಲಬಹುದಾದ ಸಂಭಾವ್ಯ ಕ್ಷೇತ್ರಗಳ ಹೆಸರುಗಳನ್ನೂ ಉಲ್ಲೇಖಿಸಿವೆ.

ಇದನ್ನೂ ಓದಿ : ಸುಳ್ಳು ಸುದ್ದಿ ಹರಡುತ್ತಿರುವ ‘ಬೆಂಗಳೂರು ಹೆರಾಲ್ಡ್‌’ ವೆಬ್‌ಸೈಟ್‌ ಮೂಲವೇನು?

ರಹಸ್ಯ ದಾಖಲೆ ಎಂದು ಮುದ್ರಿಸಲಾಗಿರುವ ಈ ಪತ್ರ ಹೇಗೆ ಸೋರಿಕೆಯಾಯಿತು? ವಾಟ್ಸ್‌ ಆಪ್‌ ಗ್ರೂಪ್‌ಗಳಲ್ಲಿ ಹರಿದಾಡುತ್ತಿರುವ ಈ ಪತ್ರದಲ್ಲಿ ಯಾವುದೇ ಅಧಿಕಾರಿಯ ಸಹಿ ಇಲ್ಲ, ಮುದ್ರೆ ಇಲ್ಲ. ಅಮೆರಿಕದ ಲಾಂಛನ ಹಾಗೂ ದೆಹಲಿಯ ರಾಯಭಾರಿ ಕಚೇರಿಯ ವಿಳಾಸದ ಹೊರತು ಅಧಿಕೃತಗೊಳಿಸುವ ಯಾವುದೇ ಅಂಶಗಳಿಲ್ಲ. ಇದೊಂದು ನಕಲಿ ಪತ್ರವಾಗಿದ್ದು, ಮತದಾರರನ್ನು ಗೊಂದಲಕ್ಕೆ ತಳ್ಳುವ ಅಥವಾ ಪ್ರಭಾವಿಸುವ ಉದ್ದೇಶದಿಂದ ಸೃಷ್ಟಿಸಲಾಗಿದೆ ಎಂಬುದು ಸ್ಪಷ್ಟ.

ಗಮನಿಸಿಬೇಕಾದ ಇನ್ನೂ ಕೆಲವು ಅಂಶಗಳೆಂದರೆ; ದೆಹಲಿಯಲ್ಲಿ ರಾಯಭಾರಿ ಕಚೇರಿ ಇದೆ. ಆದರೆ ರಾಜತಾಂತ್ರಿಕ ಪ್ರತಿನಿಧಿ ಕಚೇರಿ ಇಲ್ಲ. ಅಂಥ ಐದು ಕಚೇರಿಗಳು ಹೈದರಾಬಾದ್, ಚೆನ್ನೈ, ಮುಂಬೈ, ಕೋಲ್ಕತಾ ಮತ್ತು ಬೆಂಗಳೂರಿನಲ್ಲಿವೆ.

ಪತ್ರದಲ್ಲಿ ಉಲ್ಲೇಖಿಸಿರುವ ಕಾನ್ಸುಲೇಟ್‌ ಜನರಲ್‌ ಅನ್ನು ವಾಸ್ತವದಲ್ಲಿ ಕಾನ್ಸುಲ್‌ ಜನರಲ್‌ ಎಂದು ಕರೆಯಲಾಗುತ್ತದೆ. ಇವರಿಗೆ ತುರ್ತು ಸಂದರ್ಭಗಳ ಹೊರತು ಯಾವುದೇ ಸಂದರ್ಭದಲ್ಲಿ ಕಾರ್ಯದರ್ಶಿಗಳಿಗೆ ನೇರ ಪತ್ರವ್ಯವಹಾರ ನಡೆಸುವ ಅವಕಾಶವಿರುವುದಿಲ್ಲ.

ಈ ಪತ್ರವನ್ನು ಯಾರೇ ಸೃಷ್ಟಿಸಿರಲಿ, ಅಮೆರಿಕದ ಕಾನೂನುಗಳ ಪ್ರಕಾರ ಅಪರಾಧವಾಗಿದ್ದು, ಸೃಷ್ಟಿಸಿದವರು ಎಲ್ಲಿಯೇ ಇದ್ದರೂ ಅಪರಾಧಿ ಎನಿಸಿಕೊಳ್ಳುತ್ತಾರೆ ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More