ಬಿಬಿಸಿ ಹೆಸರಿನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ಸುಳ್ಳು ಸಮೀಕ್ಷೆ!

ಈಗಾಗಲೇ ಹಲವು ಸುಳ್ಳು ಸಮೀಕ್ಷೆಗಳು ಕರ್ನಾಟಕ ಚುನಾವಣೆಯ ಭವಿಷ್ಯ ಬರೆಯುವ ಪ್ರಯತ್ನ ಮಾಡಿವೆ. ಈಗ ‘ಜನ್‌ ಕಿ ಬಾತ್‌’ ಹೆಸರಿನ ಸಮೀಕ್ಷೆ ಈಗ ವಾಟ್ಸ್‌ ಆಪ್‌ಗಳಲ್ಲಿ ಓಡಾಡುತ್ತಿದೆ. ಇದನ್ನು ಪ್ರತಿಷ್ಠಿತ ಬಿಬಿಸಿ ಸಂಸ್ಥೆ ಮಾಡಿಸಿದೆ ಎಂದು ಈ ಸಂದೇಶ ಹೇಳುತ್ತದೆ. ಆದರೆ ಬಿಬಿಸಿ ಇದನ್ನು ನಿರಾಕರಿಸಿದೆ

ಈಗಾಗಲೇ ಹಲವು ಸುಳ್ಳು ಸಮೀಕ್ಷೆಗಳು ಕರ್ನಾಟಕ ಚುನಾವಣೆಯ ಭವಿಷ್ಯ ಬರೆಯುವ ಪ್ರಯತ್ನ ಮಾಡಿವೆ. ಈಗ ಮತ್ತೊಂದರ ಸರದಿ.

‘ಜನ್‌ ಕಿ ಬಾತ್‌’ ಹೆಸರಿನ ಸಮೀಕ್ಷೆಯೊಂದು ಈಗ ವಾಟ್ಸ್‌ ಆಪ್‌ಗಳಲ್ಲಿ ಓಡಾಡುತ್ತಿದೆ. ಇದನ್ನು ಪ್ರತಿಷ್ಠಿತ ಬಿಬಿಸಿ ಸಂಸ್ಥೆ ಮಾಡಿಸಿದೆ ಎಂದು ಈ ಸಂದೇಶ ಹೇಳುತ್ತದೆ. ಬಿಬಿಸಿ ಲೋಗೊ, ವೆಬ್‌ಸೈಟ್‌ನ ಲಿಂಕ್‌ಗಳೊಂದಿಗೆ ಹರಿದಾಡುತ್ತಿರುವ ಈ ಸಂದೇಶವು ಬಿಜೆಪಿ ಅತಿ ಹೆಚ್ಚು ಸೀಟುಗಳನ್ನು ಗಳಿಸಲಿದೆ ಎಂದು ಭವಿಷ್ಯ ನುಡಿದಿದೆ.

ಹತ್ತು ಲಕ್ಷ ಮಂದಿಯನ್ನು ಸಂಪರ್ಕಿಸಿ ಮಾಡಿರುವ ಈ ಸಮೀಕ್ಷೆಯಲ್ಲಿ ಬಿಜೆಪಿ ೧೩೫, ಜೆಡಿಎಸ್‌ ೪೫, ಕಾಂಗ್ರೆಸ್‌ ೩೫ ಹಾಗೂ ಇತರರು ೧೯ ಸೀಟುಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. "ಇದರರ್ಥ, ಬಿಜೆಪಿಯು ಸ್ಪಷ್ಟ ಬಹುಮತದೊಂದಿಗೆ ಗೆದ್ದುಬರಲಿದೆ,” ಎಂದೂ ಉಲ್ಲೇಖಿಸಿದೆ. ಜೊತೆಗೆ, ಪ್ರಧಾನಿ ಮೋದಿ, ಅಮಿತ್‌ ಶಾ, ಯೋಗಿ ಆದಿತ್ಯನಾಥ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಬಿ ಎಸ್‌ ಯಡಿಯೂರಪ್ಪ ಬಿಡುವಿಲ್ಲದೆ ರಾಜ್ಯದಲ್ಲಿ ಪ್ರಚಾರ ಕಾರ್ಯ ನಡೆಸುತ್ತಿರುವುದಾಗಿಯೂ ಹೇಳಿದೆ.

ಆದರೆ, ನಿಜಕ್ಕೂ ಬಿಬಿಸಿ ಸಮೀಕ್ಷೆ ನಡೆಸಿತ್ತೇ? ಈ ಕುರಿತು ಬಿಬಿಸಿಯ ಸಾಮಾಜಿಕ ಜಾಲತಾಣಗಳಲ್ಲಿ, ವೆಬ್‌ಸೈಟ್‌ನಲ್ಲಿ ಯಾವುದೇ ವಿವರಗಳಿಲ್ಲ. ಆದರೆ, ವಾಟ್ಸ್‌ ಆಪ್‌ನಲ್ಲಿ ಬಿಬಿಸಿ ಹೆಸರು ಹೊತ್ತ ಈ ಸಂದೇಶ ವಿನಿಮಯವಾಗುತ್ತಿದೆ ಎಂದಮೇಲೆ ಇದು ಸುಳ್ಳು ಸಮೀಕ್ಷೆಯಲ್ಲದೆ ಮತ್ತೇನು?

ಬಿಬಿಸಿಯಂತಹ ಸಂಸ್ಥೆಗಳು ಸಮೀಕ್ಷೆಯನ್ನು ನಡೆಸಿದಾಗ, ಅದಕ್ಕೆ ತೆಗೆದುಕೊಂಡ ಕಾಲ, ನಡೆಸಿದ ವಿಧಾನಗಳ ಜೊತೆಗೆ ಸಮೀಕ್ಷೆಯ ವಿವಿಧ ಆಯಾಮದ ಸಂಗತಿಗಳನ್ನು ಪ್ರಸ್ತುತಪಡಿಸುತ್ತವೆ. ಆದರೆ ಇಲ್ಲಿ ಸೀಟುಗಳ ವಿವರದ ಹೊರತು ಮತ್ತೇನೂ ಇಲ್ಲ.

ಈ ಸಂದೇಶವನ್ನು ವಿಶ್ವಾಸಾರ್ಹಗೊಳಿಸುವುದಕ್ಕೆ ಸಮೀಕ್ಷೆಯ ವಿವರಗಳ ಜೊತೆಗೆ ಬಿಬಿಸಿಯ ವೆಬ್‌ಸೈಟ್‌ ಲಿಂಕ್‌ ನೀಡಲಾಗಿದೆ. ಅದನ್ನು ಕ್ಲಿಕ್‌ ಮಾಡಿದರೆ ಬಿಬಿಸಿಯ ಹೋಮ್‌ ಪೇಜ್‌ ತಲುಪುತ್ತದೆ. ಅಲ್ಲಿ ಯಾವುದೇ ಸಮೀಕ್ಷೆಯ ಪ್ರಸ್ತಾಪವೂ ಕಾಣಿಸುವುದಿಲ್ಲ. ಸಾಮಾನ್ಯವಾಗಿ, ವಾಟ್ಸ್ ಆಪ್‌ಗಳಲ್ಲಿ ಇಂಥ ಸಂದೇಶಗಳೊಂದಿಗೆ ಬರುವ ಲಿಂಕ್‌ಗಳನ್ನು ಕ್ಲಿಕ್‌ ಮಾಡಿ ನೋಡುವವರ ಸಂಖ್ಯೆಯೂ ಹೆಚ್ಚಿಲ್ಲ. ಇದನ್ನು ಬಲ್ಲ ಸುಳ್ಳು ಸಮೀಕ್ಷೆಯ ಸೃಷ್ಟಿಕರ್ತರು ನಕಲಿ ಸುದ್ದಿಗೆ ಅಧಿಕೃತತೆ ಸೋಗು ಹೊರಿಸಲು ವೆಬ್‌ಸೈಟ್‌ ಲಿಂಕ್‌ ಬಳಸಿದ್ದಾರೆ.

ಈ ಕುರಿತು ಬಿಬಿಸಿ, “ಯಾವುದೇ ಸಮೀಕ್ಷೆ ನಡೆಸಿಲ್ಲ,” ಎಂದು ಸ್ಪಷ್ಟಪಡಿಸಿದ್ದು, ಬಿಬಿಸಿ ಭಾರತದ ಪ್ರತಿನಿಧಿ ಸೌತಿಕ್ ಬಿಸ್ವಾಸ್‌ ಈ ಕುರಿತು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ : ಎಸ್ ನಿಜಲಿಂಗಪ್ಪನವರನ್ನು ದಲಿತ ನಾಯಕ ಎಂದು ಕರೆದು ಎಡವಟ್ಟು ಮಾಡಿದ ಬಿಜೆಪಿ

ವಾಟ್ಸ್‌ ಆಪ್‌ ಗ್ರೂಪ್‌ಗಳಲ್ಲಿ ಇಂಥ ಸುಳ್ಳು ಮಾಹಿತಿ, ಸುದ್ದಿಗಳು ಹರಿದಾಡುವುದು ಅತ್ಯಂತ ಅಪಾಯಕಾರಿ. ಟ್ವಿಟರ್ ಮತ್ತು ಫೇಸ್‌ಬುಕ್‌ಗಳಲ್ಲಿ ಯಾವುದೇ ತಪ್ಪು ಮಾಹಿತಿ ಪ್ರಕಟವಾದರೂ ನಾಲ್ಕು ಮಂದಿ ಅದನ್ನು ಎತ್ತಿ ತೋರಿಸಿ, ತಿದ್ದುವ ಅಥವಾ ಸುಳ್ಳು ಬಯಲು ಮಾಡುವ ಅವಕಾಶವಿರುತ್ತದೆ. ಆದರೆ ವಾಟ್ಸ್‌ ಆಪ್‌ ಒಂದು ಮುಚ್ಚಿದ ವ್ಯವಸ್ಥೆಯಾಗಿದ್ದು, ಅದರೊಳಗೆ ಮಾತು-ಕತೆ ಚರ್ಚೆಗಳನ್ನು ನಿಯಂತ್ರಿಸುವುದು ಸುಲಭವಲ್ಲ. ಸುಳ್ಳು ಸುದ್ದಿಯನ್ನು ಹರಡುವ ಉದ್ದೇಶವಿರುವವರು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More