ಸಿದ್ದರಾಮಯ್ಯ ಮಗನನ್ನು ಗೆಲ್ಲಿಸಲು ಅಮಿತ್‌ ಶಾರನ್ನು ಭೇಟಿಯಾದರೆಂಬ ಕಟ್ಟುಕತೆ!

ಚುನಾವಣೆಯ ರಂಗು ಏರುತ್ತಿರುವಂತೆ ಸುಳ್ಳುಸುದ್ದಿಗಳ ಸದ್ದು ಕೂಡ ಹೆಚ್ಚಾಗುತ್ತಿದೆ. ಬುಧವಾರ ಅಂಥದ್ದೇ ಒಂದು ಸುದ್ದಿ ಫೇಸ್‌ಬುಕ್‌ನಲ್ಲಿ ಗಮನ ಸೆಳೆದಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಭೇಟಿಯಾದರು ಎಂಬುದೇ ಆ ಸುದ್ದಿ. ಆದರೆ ಈ ಸುದ್ದಿ ನಿಜವಲ್ಲ

ಕನ್ನಡದಲ್ಲಿ.ಕಾಂ ಎಂಬ ವೆಬ್‌ಸೈಟ್‌ನಲ್ಲೊಂದು ಸುದ್ದಿ ಪ್ರಕಟವಾಗಿದೆ. ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ ಎನ್ನಲಾದ, ಅಮಿತ್‌ ಶಾ ಮತ್ತು ಸಿದ್ದರಾಮಯ್ಯ ಭೇಟಿ ಕುರಿತು ಒಂದು ವರದಿಯನ್ನು ಅದರಲ್ಲಿ ಪ್ರಕಟಿಸಲಾಗಿದೆ. ವಿಶೇಷವೆಂದರೆ, ಭೇಟಿಯ ಚಿತ್ರದ ಮೇಲೆ ಇಂಗ್ಲಿಷ್‌ನಲ್ಲಿ 'ವಿಕಿಲೀಕ್ಸ್‌ ಎಕ್ಸ್‌ಕ್ಲೂಸಿವ್' ಎಂಬ ವಾಟರ್‌ ಮಾರ್ಕ್‌ ಕೂಡ ಇದೆ.

“ಸಿದ್ದರಾಮಯ್ಯ ಅವರು ಅಮಿತ್ ಶಾರನ್ನು ರಹಸ್ಯ ಜಾಗದಲ್ಲಿ ಭೇಟಿ ಮಾಡಿದ್ದಾರೆ, ಅವರು ಚುನಾವಣೆ ಮುಗಿದ ಮೇಲೆ ಬಿಜೆಪಿ ಸೇರಲಿದ್ದಾರೆ ಎನ್ನುವ ಮಾತುಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ,” ಎಂಬುದು ವೆಬ್‌ಸೈಟ್‌ನಲ್ಲಿರುವ ಸುದ್ದಿ!

ಇಷ್ಟಕ್ಕೆ ನಿಲ್ಲದೆ, ಈ ವರದಿ ಇನ್ನೊಂದು ಆಯಾಮವನ್ನೂ ನೀಡುವ ಪ್ರಯತ್ನ ಮಾಡಿದೆ. ಅದೇನೆಂದರೆ, “ಈ ಮಾತುಕತೆ ಕೆಲವು ದಿನಗಳ ಹಿಂದೆಯೇ ನಡೆದಿದ್ದು, ಅದಕ್ಕಾಗಿಯೇ ವರುಣಾದಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ತಪ್ಪಿಸುವುದಕ್ಕೆ ಕಾರಣ ಎಂದು ಕೂಡ ಇಲ್ಲಿ ಓದುಗರು ಅಭಿಪ್ರಾಯಪಟ್ಟಿದ್ದಾರೆ,’’ ಎಂದು ವಿಶ್ಲೇಷಿಸುವ ಯತ್ನಿಸಿದೆ.

ಸುದ್ದಿಯ ಕಡೆಯ ಪ್ಯಾರಾ ಹೀಗಿದೆ: "ಆದರೆ ಇಲ್ಲಿಯವರೆಗೂ ಸಿದ್ದರಾಮಯ್ಯನವರು ಮೋದಿ, ಅಮಿತ್ ಶಾ, ಯಡಿಯೂರಪ್ಪ ಎಲ್ಲರ ಮೇಲೂ ಸುಳ್ಳು ಆರೋಪ ಮಾಡಿದ್ದಾರೆ ಅಂತ ನೋಟಿಸ್ ನೀಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಜೊತೆಯಲ್ಲಿ ರಾಜ್ಯಕ್ಕೆ ಬರುವ ಪ್ರಧಾನಿ ಮೋದಿ ಅವರು ನೇರವಾಗಿ ಸಿಎಂ ಸಿದ್ದರಾಮಯ್ಯನವರ ಸರ್ಕಾರವನ್ನು ಸೀದಾ ರುಪಾಯ ಎಂದು ಮೂದಲಿಸುತ್ತಾರೆ. ಅಂತಹದರಲ್ಲಿ ಅವರು ಬರುತ್ತೇವೆ ಎಂದರು ಕೂಡ ಬಿಜೆಪಿಯವರು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ ಎನ್ನುವುದೇ ಪ್ರಶ್ನೆಯಾಗಿದೆ."

ಈ ಸುದ್ದಿಯ ಜೊತೆಗಿರುವ ಫೋಟೋ ಎರಡು ಭಿನ್ನ ಫೋಟೋಗಳನ್ನು ಸೇರಿಸಿ ಸೃಷ್ಟಿಸಿದ್ದು. ಗೂಗಲ್‌ ಇಮೇಜ್‌ ಮೂಲಕ ಹುಡುಕುವ ಪ್ರಯತ್ನ ಮಾಡಿದೆವು. ಅಮಿತ್‌ ಶಾ ಭೇಟಿಯಲ್ಲಿ ಕಾಣುವ ಸಿದ್ದರಾಮಯ್ಯನವರ ಫೋಟೋವನ್ನು ಖರ್ಗೆಯೊಂದಿಗಿನ ಫೋಟೋದಿಂದ ಕತ್ತರಿಸಿ ತೆಗೆದಿರುವುವಂಥದ್ದು. ಮೂಲಚಿತ್ರ ಇಲ್ಲಿದೆ ನೋಡಿ.

ಈ ಸುದ್ದಿಯನ್ನು ಫೇಸ್‌ಬುಕ್‌ನಲ್ಲಿ ಸೃಷ್ಟಿಸಿದ ಫೊಟೋದೊಂದಿಗೆ ಪ್ರಕಟಿಸಲಾಗಿದೆ. ವೈರಲ್‌ ಮಾಡುವ ಯತ್ನ ಮಾಡಲಾಗಿದೆ. ಇದನ್ನು ಹರಡಲು ಯತ್ನಿಸಿರುವವರಲ್ಲಿ ಒಬ್ಬರು ಹರೀಶ್‌ ಗೌಡ. ಇವರು ಕುಮಾರಸ್ವಾಮಿಯವರ ಅಭಿಮಾನಿ.

ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರ ಭೇಟಿಯ ಸುಳ್ಳು ಸುದ್ದಿಯನ್ನು ಜೆಡಿಎಸ್‌ ವಲಯದವರು ವೈರಲ್‌ ಮಾಡಲು ಯತ್ನಿಸುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ರಣತಂತ್ರಗಳನ್ನು ತಾವೂ ಬಳಸುವಲ್ಲಿ ಹಿಂದೆ ಇಲ್ಲ ಎಂಬುದನ್ನು ತೋರಿಸಲು ಹೊರಟಂತಿದೆ. ಈ ಸುಳ್ಳು ಸುದ್ದಿ ಈಗ ವಾಟ್ಸ್‌ ಆಪ್‌ನಲ್ಲೂ ಹರಿದಾಡುತ್ತಿದೆ.

ವಾಜಪೇಯಿ ನಿಧನದ ಸಂದರ್ಭದಲ್ಲಿ ಪ್ರಧಾನಿ ಮೋದಿ ನಗುತ್ತ ನಿಂತಿದ್ದು ನಿಜವೇ?
ಪ್ರವಾಹದಿಂದ ಕಂಗಲಾದ ರಾಜ್ಯಗಳಿಗೆ ತಲೆನೋವಾದ ಸುಳ್ಳು ಸುದ್ದಿಗಳ ಅವಾಂತರ
ವಾಜಪೇಯಿ ಅವರಿಗೆ ಏಮ್ಸ್ ವೈದ್ಯರ ಅಂತಿಮ ನಮನದ ಫೋಟೊ ಅಸಲಿ ಅಲ್ಲ!
Editor’s Pick More