ಲಿಂಗಾಯತ ಧರ್ಮ ಕುರಿತ ಫೇಕ್ ಇಮೇಲ್ ಶೇರ್ ಮಾಡಿದ ಸುಬ್ರಮಣಿಯನ್ ಸ್ವಾಮಿ

ನಿಶ್ಚಲಾನಂದ ಸ್ವಾಮಿ ‘ಲಿಂಗಾಯತ ಧರ್ಮದ ವಿಚಾರದ ಹಿಂದೆ ಚರ್ಚ್ ಕೈವಾಡವಿದೆ’ ಎಂದು ಬಿಂಬಿಸುವ ಟ್ವೀಟ್ ಪೋಸ್ಟ್ ಮಾಡಿದ್ದರು. ನಂತರದಲ್ಲಿ ಇದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿತ್ತು. ಇದನ್ನು ಸುಬ್ರಮಣಿಯನ್‌ ಸ್ವಾಮಿ ರೀಟ್ವೀಟ್ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ

“ಹಿಂದೂಗಳಿಂದ ಲಿಂಗಾಯತರನ್ನು ಪ್ರತ್ಯೇಕಿಸುವುದರ ಹಿಂದೆ ಚರ್ಚ್ ಕೈವಾಡವಿದೆ. ಸಿಬಿಸಿಐ ಕಾರ್ಯದರ್ಶಿಯವರಿಂದ ಬೆಂಗಳೂರು ಆರ್ಚ್ ಬಿಷಪ್‌ಗೆ ಕಳುಹಿಸಲಾಗಿದೆ ಎನ್ನಲಾದ ಇಮೇಲ್‌ನಲ್ಲಿ ಈ ವಿಚಾರ ಬಹಿರಂಗವಾಗಿದೆ,” ಎಂದು ಸ್ವಾಮಿ ನಿಶ್ಚಲಾನಂದ ಟ್ವೀಟ್‌ ಮಾಡಿದ್ದರು. ಇದನ್ನು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ರೀಟ್ವೀಟ್ ಮಾಡಿದ ನಂತರ ಈ ವಿಚಾರವೀಗ ವಿವಾದಕ್ಕೆ ಗ್ರಾಸವಾಗಿದೆ. ‘ರೈಟ್ ಆಕ್ಷನ್ ಡಾಟ್ ಇನ್‌‌’ ಎಂಬ ವೆಬ್‌ಸೈಟ್ ಕೂಡ ಇದನ್ನು ಪೋಸ್ಟ್ ಮಾಡಿದೆ. ಸಿಬಿಸಿಐ ಕಾರ್ಯದರ್ಶಿ ಬಿಷಪ್ ಥಿಯೋಡೋರ್ ಮಸ್ಕರೆನ್ಹಾಸ್ ಈ ಸುದ್ದಿ ಸುಳ್ಳು ಎಂದಿದ್ದಾರೆ.

‘ನಮ್ಮ ಪ್ರಾರ್ಥನೆಗಳು ಫಲಿಸಿವೆ’ ಎಂದು ಆರಂಭವಾಗುವ ಇಮೇಲ್‌‌, ಭಾರತೀಯ ಕೆಥೋಲಿಕ್ ಬಿಷಪ್ ಸಭಾದಿಂದ ಬೆಂಗಳೂರು ಆರ್ಚ್‌ ಬಿಷಪ್‌ಗೆ ಕಳುಹಿಸಿದ್ದಾಗಿ ಹೇಳಲಾಗಿದೆ. ಇದರಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ಶ್ಲಾಘನೆ ವ್ಯಕ್ತಪಡಿಸಲಾಗಿದ್ದು, ಕರ್ನಾಟಕದಲ್ಲಿ ಇನ್ನಷ್ಟು ಶ್ರಮವಹಿಸಿ ಕೆಲಸ ಮಾಡುವಂತೆಯೂ ಪತ್ರದಲ್ಲಿ ಸೂಚಿಸಲಾಗಿದೆ.

2013ರ ಡಿ.21ರಂದು ಪೋಪ್ ಪ್ರತಿನಿಧಿಗಳು ದೆಹಲಿಯಲ್ಲಿ ಕರ್ನಾಟಕದ ಆಡಳಿತ ಪಕ್ಷದ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ್ದರು. ನಂತರದಲ್ಲಿ ಸತತ ಸಭೆಗಳು ನಡೆದವು ಎಂದೂ ಇಮೇಲ್‌ನಲ್ಲಿ ತಿಳಿಸಲಾಗಿದೆ. ಲಿಂಗಾಯತರನ್ನು ಕೆಥೋಲಿಕ್ ಕ್ರಿಶ್ಚಿಯನ್ನರಾಗಿ ಮತಾಂತರಿಸುವ ಕುರಿತ ಹಲವು ವಿಧಾನಗಳನ್ನು ಇಮೇಲ್‌ನಲ್ಲಿ ನಮೂದಿಸಲಾಗಿದೆ. 2043ರ ಒಳಗೆ ಶೇ.5ರಷ್ಟು ಲಿಂಗಾಯತರನ್ನು ಮತಾಂತರ ಮಾಡಬೇಕು, 2020ರ ಒಳಗಾಗಿ ಲಿಂಗಾಯತ ಗುರುಗಳು ಹಾಗೂ ಮಠಗಳೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಬೇಕು ಎಂದು ಬರೆಯಲಾಗಿದೆ.

ಆರಂಭದಲ್ಲಿ ಸ್ವಾಮೀಜಿಯವರ ಟ್ವೀಟ್ ಸತ್ಯ ಎಂಬಂತೆ ಬಿಂಬಿತವಾಗಿತ್ತು. ಅಧಿಕೃತ ಸ್ಪಷ್ಟನೆಯೊಂದನ್ನು ನೀಡಿದ ಬಿಷಪ್ ಥಿಯೋಡೋರ್ ಮಸ್ಕರೇನಸ್, ಪತ್ರದ ಪ್ರಚಾರಕ್ಕೆ ಕಾರಣರಾದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ತಮ್ಮ ಟ್ವೀಟನ್ನು ಡಿಲೀಟ್ ಮಾಡಿದ್ದು, ಅದೊಂದು ಸುಳ್ಳು ಮಾಹಿತಿ ಎಂಬುದಕ್ಕೆ ಪೂರಕವಾಗಿತ್ತು.

“ಚುನಾವಣಾ ಸಮಯದಲ್ಲಿ ದುರುದ್ದೇಶದಿಂದ ಸುಳ್ಳು ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕರ್ನಾಟಕದಲ್ಲಿ ಹರಿಬಿಡಲಾಗುತ್ತಿದೆ. ಇದರಿಂದಾಗಿ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಚರ್ಚ್ ಪಾತ್ರ ವಹಿಸಿದೆ ಎಂದು ಗಂಭೀರ ಆರೋಪಗಳನ್ನು ಮಾಡಲಾಗುತ್ತಿದೆ,” ಎಂದು ಮಸ್ಕರೇನಸ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಬಿಷಪ್ ಥಿಯೋಡೋರ್ ಮಸ್ಕರೇನಸ್ ಹೇಳಿದ್ದೇನು?

  • ಬಹಳ ಮುಖ್ಯವಾಗಿ ಕಾರ್ಡಿನಲ್ ಒಸ್ವಾಲ್ಡ್ ಗ್ರೇಸಿಯಾಸ್ ಕೆಥೋಲಿಕ್ ಬಿಷಪ್‌ ಸಭೆಯ ಅಧ್ಯಕ್ಷರೇ ಹೊರತು ಕಾರ್ಯದರ್ಶಿಯಲ್ಲ.
  • ಪತ್ರದಲ್ಲಿ ಕಾರ್ಡಿನಲ್ ಒಸ್ವಾಲ್ಡ್ ಗ್ರೇಸಿಯಾಸ್ ಎಂದು ಸಂಬೋಧಿಸಬೇಕಾದ ಜಾಗದಲ್ಲಿ ಒಸ್ವಾಲ್ಡ್ ಕಾರ್ಡಿನಲ್ ಗ್ರೇಸಿಯಾಸ್ ಎಂದು ಸಂಬೋಧಿಸಲಾಗಿದೆ.
  • ಭಾಷೆಯ ಸಂವಹನ ರೂಪ ಹಾಗೂ ಬರೆಯುವ ರೀತಿಯಲ್ಲಿ ದೊಡ್ಡ ಮಟ್ಟದ ಅಂತರ ಕಾಣುತ್ತಿರುವುದು ಇದೊಂದು ಸುಳ್ಳುಪತ್ರ ಎಂಬುದಕ್ಕೆ ಬಲವಾದ ಸಾಕ್ಷಿ.
ಭಾರತೀಯ ಕೆಥೋಲಿಕ್‌ ಬಿಷಪ್ ಮಹಾಸಭಾದ ಬಿಷಪ್ ಥಿಯೋಡೋರ್ ಮಸ್ಕರೇನಸ್ ಬರೆದ ಅಧಿಕೃತ ಸ್ಪಷ್ಟನೆ

ಭಾರತೀಯ ಕೆಥೋಲಿಕ್ ಬಿಷಪ್ ಸಮಿತಿ ಅಥವಾ ಕಾರ್ಡಿನಲ್ ಗ್ರೇಸಿಯಾಸ್ ಪತ್ರದಲ್ಲಿ ತಿಳಿಸಿದಂತಹ, ಜನರನ್ನು ವಿಭಜಿಸುವಂತಹ ವಂಚನಾತ್ಮಕ ಕೆಲಸಗಳನ್ನು ಎಂದಿಗೂ ಮಾಡುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ದೇವರು ಕರ್ನಾಟಕ ಹಾಗೂ ಭಾರತವನ್ನು ರಕ್ಷಿಸಲಿ ಎಂದಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಮಹತ್ವ ಪಡೆದುಕೊಂಡಿದ್ದು, ಬಹುದೊಡ್ಡ ಸಮುದಾಯದ ಮತಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಬಿಜೆಪಿ ಇಂತಹ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More