ಲಿಂಗಾಯತ ಧರ್ಮ ವಿಚಾರವಾಗಿ ಎಂ ಬಿ ಪಾಟೀಲ್‌ ಹೆಸರಲ್ಲಿ ಹರಿದಾಡಿದ ಸುಳ್ಳುಪತ್ರ

ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಅವರು ಕಾಂಗ್ರೆಸ್‌ ನಾಯಕಿಗೆ ಬರೆದರೆನ್ನಲಾದ ಪತ್ರವನ್ನು ‘ಪೋಸ್ಟ್‌ ಕಾರ್ಡ್‌’ ವೆಬ್‌ಸೈಟ್‌ ಪ್ರಕಟಿಸಿದೆ. ಆದರೆ, ಈ ವರದಿ ಸತ್ಯಕ್ಕೆ ದೂರವೆಂಬ ಕಾರಣಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಾಲತಾಣವು ವರದಿಯನ್ನು ಡಿಲೀಟ್‌ ಮಾಡಿದೆ!

ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಸೃಷ್ಟಿಯಾಗುತ್ತಲೇ ಇವೆ. ಆರ್ಚ್‌ ಬಿಷಪ್‌ ಪತ್ರದ ಹೆಸರಿನಲ್ಲಿ ಸುಳ್ಳು ಇಮೇಲ್‌ ಹರಿದಾಡಿದ ಬೆನ್ನಲ್ಲೇ ಲಿಂಗಾಯತ ಧರ್ಮ ಕುರಿತ ಮತ್ತೊಂದು ಸುದ್ದಿ ಎಂ ಬಿ ಪಾಟೀಲ್‌ ಹೆಸರಿನಲ್ಲಿ ಹರಿದಾಡಿದ್ದು, ಈ ಸುದ್ದಿಯನ್ನು ವಿವಾದಗ್ರಸ್ತ ಜಾಲತಾಣ ‘ಪೋಸ್ಟ್‌ ಕಾರ್ಡ್‌’ ಪ್ರಕಟಿಸಿತ್ತು.

ಎಂ ಬಿ ಪಾಟೀಲ್‌ ಅವರ ಒಡೆತನದ ಬಿಎಲ್‌ಡಿ ಸಂಸ್ಥೆ ಮೂಲಕ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಲಿಂಗಾಯತ ಧರ್ಮ ವಿಚಾರವಾಗಿ ಪತ್ರ ರವಾನೆ ಆಗಿರುವುದಾಗಿ ‘ಪೋಸ್ಟ್‌ ಕಾರ್ಡ್‌’ ವರದಿ ಮಾಡಿತ್ತು. ಜಾಲತಾಣದ ಸಂಪಾದಕ ಮಹೇಶ್‌ ವಿಕ್ರಂ ಹೆಗ್ದೆ ಅವರು ಈ ವರದಿಯನ್ನು ಟ್ವೀಟಿಸಿದ್ದರು. ಆದರೆ, ವರದಿ ಸತ್ಯಕ್ಕೆ ದೂರವೆಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾದ ತಕ್ಷಣ ವರದಿಯನ್ನು ಡಿಲೀಟ್‌ ಮಾಡಲಾಗಿದೆ. ಪೋಸ್ಟ್‌ ಕಾರ್ಡ್‌ ಸಂಪಾದಕರು ಇದಕ್ಕೆ ಸಂಬಂಧಿಸಿದ ತಮ್ಮ ಟ್ವೀಟ್‌‌ ಅನ್ನೂ ತೆಗೆದುಹಾಕಿದ್ದಾರೆ.

ಮಹೇಶ್ ವಿಕ್ರಂ ಹೆಗಡೆ ಮಾಡಿದ್ದ ಟ್ವೀಟ್

ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿರುವ ಸಚಿವ ಎಂ ಬಿ ಪಾಟೀಲ್‌, “ಸಿದ್ದಗಂಗಾ, ಚಿತ್ರದುರ್ಗ, ಕೂಡಲಸಂಗಮ, ತರಳಬಾಳು, ನಾಗನೂರು, ಮಾತಾಜೀ ಮತ್ತು ಎಲ್ಲ ಲಿಂಗಾಯತ ಶ್ರೀಗಳು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಆದರೆ, ಬಿಜೆಪಿ ಮತ್ತು ಆರೆಸ್ಸೆಸ್, ಪೋಸ್ಟ್‌‌‌ ಕಾರ್ಡ್‌ ನ್ಯೂಸ್‌ ಲಿಂಗಾಯತರಿಗೆ ಹಾಗೂ ಲಿಂಗಾಯತ ಶ್ರೀಗಳಿಗೆ ಅವಮಾನ ಮಾಡಿದೆ,” ಎಂದಿದ್ದಾರೆ.

ಪೋಸ್ಟ್‌ ಕಾರ್ಡ್‌ ಪ್ರಕಟಿಸಿರುವ ಪತ್ರದಲ್ಲೇನಿದೆ?

ಎಂ ಬಿ ಪಾಟೀಲ್‌ ಒಡೆತನದ ಬಿಎಲ್‌ಡಿ ಸಂಸ್ಥೆಯ ಮೂಲಕ ಸೋನಿಯಾ ಗಾಂಧಿ ಅವರಿಗೆ ಕಳುಹಿಸಲಾಗಿದೆ ಎಂಬ ಪತ್ರದಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದ ಬಗ್ಗೆ ಹೇಳಲಾಗಿದೆ. ಶಿವಕುಮಾರ್‌ ಕಾಸರಗುಪ್ಪೆ ಎಂಬುವವರು ಶೇರ್‌ ಮಾಡಿಕೊಂಡಿರುವ ಪತ್ರವನ್ನು ಪೋಸ್ಟ್‌ ಕಾರ್ಡ್‌ ಪ್ರಕಟಿಸಿ, ವರದಿ ಮಾಡಿದೆ.

“ಲಿಂಗಾಯತ ಸಮುದಾಯಕ್ಕೆ ಸೇರಿದ ಐವರು ಸಚಿವರು ಗ್ಲೋಬಲ್‌ ಕ್ರಿಶ್ಚಿಯನ್ ಕೌನ್ಸಿಲ್‌ ಹಾಗೂ ವಲ್ಡ್‌‌ ಇಸ್ಲಾಮಿಕ್ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿ 2018 ವಿಧಾನಸಭೆ ಚುನಾವಣೆಗೆ ತಂತ್ರ ರೂಪಿಸಿದ್ದೇವೆ. ಮುಂಬರುವ ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಗೆ ಸಹಾಯವಾಗಲು ರಾಜ್ಯದಲ್ಲಿ ಆರೆಸ್ಸೆಸ್‌ನ ಬೆಳವಣಿಗೆಯನ್ನು ತಡೆಯುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗಿದೆ,” ಎಂದು ಪತ್ರದಲ್ಲಿ ಹೇಳಲಾಗಿದೆ. ಈ ಮೂಲಕ, ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಮುಸ್ಲಿಂ ಹಾಗೂ ಕ್ರಿಶ್ಚಿಯನ್‌ ಧರ್ಮಿಯರನ್ನು ಒಂದುಗೂಡಿಸುವುದು, ಜಾತಿ, ಉಪಜಾತಿ ಹಾಗೂ ಪಂಗಡಗಳ ಆಧಾರದಲ್ಲಿ ಹಿಂದೂ ಧರ್ಮವನ್ನು ಒಡೆಯುವುದರ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಶಿವಕುಮಾರ್‌ ಕಾಸರಗುಪ್ಪೆ ಎಂಬುವವರು ಶೇರ್‌ ಮಾಡಿಕೊಂಡಿರುವ ಪತ್ರದ ಪ್ರತಿ
ಇದನ್ನೂ ಓದಿ : ಸಿದ್ದರಾಮಯ್ಯ ಮಗನನ್ನು ಗೆಲ್ಲಿಸಲು ಅಮಿತ್‌ ಶಾರನ್ನು ಭೇಟಿಯಾದರೆಂಬ ಕಟ್ಟುಕತೆ!

ಆಂಗ್ಲಭಾಷೆಯಲ್ಲಿರುವ ಪತ್ರವನ್ನು ಶಿವಕುಮಾರ್‌ ಕಾಸರಗುಪ್ಪೆ ಎಂಬುವವರು ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಶೇರ್‌ ಮಾಡಿಕೊಂಡಿದ್ದರು. ಈ ಪತ್ರವನ್ನು ಆಧಾರವಾಗಿಟ್ಟುಕೊಂಡು ‘ಪೋಸ್ಟ್‌‌ ಕಾರ್ಡ್‌‌’ ವೆಬ್‌ಸೈಟ್‌ನಲ್ಲಿ ವರದಿ ಪ್ರಕಟಿಸಲಾಗಿತ್ತು. ಈ ವರದಿ ಸತ್ಯಕ್ಕೆ ದೂರವೆಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಯಿತು. ಲಿಂಗಾಯತ ಮಹಾಸಭಾದ ಸದಸ್ಯರು ಕೂಡ ಇದನ್ನು ಖಂಡಿಸಿದರು. ಹಾಗಾಗಿ, ವರದಿ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಡೀಲಿಟ್‌ ಮಾಡಲಾಗಿದೆ. ಸಮಾಜದಲ್ಲಿ ಶಾಂತಿ ಕದಡುವ ವರದಿಗಳನ್ನು ಪ್ರಕಟಿಸಿದ್ದಕ್ಕಾಗಿ ‘ಪೋಸ್ಟ್‌ ಕಾರ್ಡ್‌’ ಜಾಲತಾಣದ ಸಂಪಾದಕರನ್ನು ಇತ್ತೀಚೆಗೆ ಬಂಧಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More