ಜಾವಡೇಕರ್‌ ಹೇಳಿದಂತೆ ನಿಜಕ್ಕೂ 80 ಸಾವಿರ ನಕಲಿ ಉಪನ್ಯಾಸಕರು ಇದ್ದಾರೆಯೇ?

ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರಲ್ಲಿ 80 ಸಾವಿರ ನಕಲಿ ಉಪನ್ಯಾಸಕರಿದ್ದಾರೆಂದು ಹೇಳಿದ್ದರು. ಆದರೆ, ಮಾನವ ಸಂಪನ್ಮೂಲ ಇಲಾಖೆಯು ಈ ಆರೋಪಕ್ಕೆ ಪುರಾವೆ ಒದಗಿಸುವಲ್ಲಿ ವಿಫಲವಾಗಿದೆ!

“ಆಧಾರ್‌ ಜೋಡಣೆ ವೇಳೆಯಲ್ಲಿ ದೇಶಾದ್ಯಂತ 80 ಸಾವಿರ ನಕಲಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವುದು ಬಯಲಾಗಿದೆ,” ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವೆಂಬುದು ಈಗ ಸಾಬೀತಾಗಿದೆ.

“ಸರ್ಕಾರಿ ಸ್ವಾಮ್ಯದ ಶಾಲಾ-ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿರುವ 80 ಸಾವಿರ ಉಪನ್ಯಾಸಕರು ಹಾಗೂ ಅಧ್ಯಾಪಕರು ಒಂದಕ್ಕಿಂತ ಹೆಚ್ಚು ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ತಿಳಿದುಬಂದಿದೆ. ಆಧಾರ್‌ ಜೋಡಣೆ ವೇಳೆಯಲ್ಲಿ ಈ ವಿಷಯ ಹೊರಬಂದಿದ್ದು, ಇದು ಮಾನವ ಸಂಪನ್ಮೂಲ ಸಚಿವಾಲಯದ ನಿಯಮಾವಳಿಗಳ ಪ್ರಕಾರ ಅಪರಾಧವಾದ್ದರಿಂದ, ಈ ಬಗ್ಗೆ ತನಿಖೆಗೆ ಆದೇಶಿಸಿಲಾಗಿದೆ,” ಎಂದು ಕೇಂದ್ರ ಸಚಿವ ಜಾವಡೇಕರ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

“ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಅಕ್ರಮ ಕಂಡುಬಂದಿದ್ದು, ಇದನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಪತ್ತೆಮಾಡಿದ್ದಾರೆ. ಈ ಅಕ್ರಮದ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಲು ಆದೇಶಿಸಲಾಗಿದ್ದು, ಅಕ್ರಮದಲ್ಲಿ ಭಾಗಿಯಾಗಿರುವ ಅಧ್ಯಾಪಕರ ಮೇಲೆ ಕಠಿಣ ಕ್ರಮ ಜರಗಿಸಲಾಗುವುದು,” ಎಂದು ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್‌ ತಿಳಿಸಿದ್ದರು.

ಈ ಪ್ರಕರಣದ ಸತ್ಯಾಸತ್ಯತೆ ಅರಿಯಲು ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಎಂಬುವವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಈ ವಿಷಯದ ಬಗ್ಗೆ ಸ್ಪಷ್ಟೀಕರಣ ಕೋರಿ ಮಾನವ ಸಂಪನ್ಮೂಲ ಇಲಾಖೆಗೆ ಆರ್‌ಟಿಐ ಪತ್ರ ಬರೆದಿತ್ತು. ಅಧ್ಯಾಪಕರ ಅಕ್ರಮದ ಬಗ್ಗೆ ಸಚಿವ ಜಾವಡೇಕರ್‌ ಹೇಳಿರುವ ಬಗ್ಗೆ ಯಾವುದೇ ಪುರಾವೆ ಒದಗಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ವಿಫಲಗೊಂಡಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ಆರ್‌ಟಿಐಗೆ ನೀಡಿರುವ ಪ್ರತಿಕ್ರಿಯೆ ಪ್ರತಿಯನ್ನು ಅಂಜಲಿ ಭಾರದ್ವಾಜ್‌ ಟ್ವೀಟ್‌ ಮಾಡಿದ್ದು, 80 ಸಾವಿರ ನಕಲಿ ಶಿಕ್ಷಕರಿಗೆ ಯಾರು ಸಂಬಳ ಕೊಡುತ್ತಿದ್ದಾರೆಂದು ಪ್ರಶ್ನಿಸಿದ್ದಾರೆ. ಆಧಾರರಹಿತ ಅಕ್ರಮದ ಬಗ್ಗೆ ಮಾತನಾಡಿರುವುದರ ಹಿಂದೆ ಬಲವಾದ ರಹಸ್ಯ ಕಾರ್ಯಸೂಚಿ ಇದೆಯೆಂದು ತಿಳಿಸಿದ್ದಾರೆ.

ಇದನ್ನೂ ಓದಿ : ‘ಸಿಮ್‌ ಕಾರ್ಡ್‌ಗೆ ಆಧಾರ್‌ ಕಡ್ಡಾಯ’ ಎಂದು ಸುಳ್ಳು ಹೇಳಿತೇ ಕೇಂದ್ರ ಸರ್ಕಾರ?

ಉನ್ನತ ಶಿಕ್ಷಣ ಸಂಸ್ಥೆಗಳ ಅಧ್ಯಾಪಕರು ಹಾಗೂ ಉಪನ್ಯಾಸಕರು ಆಧಾರ್‌ ಜೋಡಣೆ ಮಾಡಬೇಕೆಂದು ಸರ್ಕಾರ ಆದೇಶ ಹೊರಡಿಸಿತ್ತು. ಈ ಬಗ್ಗೆ ವಿರೋಧಗಳು ಕೇಳಿಬಂದಿದ್ದವು. ಇದು ದೇಶಾದ್ಯಂತ ಚರ್ಚೆಗೂ ಗ್ರಾಸವಾಗಿತ್ತು. ಆಧಾರ್‌ ಜೋಡಣೆಯ ಬಗ್ಗೆ ತಮ್ಮ ಸರ್ಕಾರ ಹೊರಡಿಸಿದ ಆದೇಶವನ್ನು ಜಾವಡೇಕರ್ ಜ.7ರಂದು‌ ಸಮರ್ಥನೆ ಮಾಡಿಕೊಂಡಿದ್ದರು.

ವಾಜಪೇಯಿ ನಿಧನದ ಸಂದರ್ಭದಲ್ಲಿ ಪ್ರಧಾನಿ ಮೋದಿ ನಗುತ್ತ ನಿಂತಿದ್ದು ನಿಜವೇ?
ಪ್ರವಾಹದಿಂದ ಕಂಗಲಾದ ರಾಜ್ಯಗಳಿಗೆ ತಲೆನೋವಾದ ಸುಳ್ಳು ಸುದ್ದಿಗಳ ಅವಾಂತರ
ವಾಜಪೇಯಿ ಅವರಿಗೆ ಏಮ್ಸ್ ವೈದ್ಯರ ಅಂತಿಮ ನಮನದ ಫೋಟೊ ಅಸಲಿ ಅಲ್ಲ!
Editor’s Pick More