ಪ್ರಣಬ್‌ ಮುಖರ್ಜಿ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ವಂದಿಸಿದ ಫೋಟೋ ಅಸಲಿಯೇ?

ಗುರುವಾರ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ನಾಗಪುರದ ಆರೆಸ್ಸೆಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಚರ್ಚೆಯ ಕೇಂದ್ರವಾಗಿತ್ತು. ಈ ಕುರಿತು ಸ್ವತಃ ಅವರ ಪುತ್ರಿ ಶರ್ಮಿಷ್ಠಾ ಎಚ್ಚರಿಸಿದ್ದರು. ಅವರ ಊಹೆಯಂತೆಯೇ ಪ್ರಣಬ್‌ ಅವರ ಫೋಟೋಶಾಪ್‌ ಮಾಡಿದ ಚಿತ್ರವೊಂದು ವೈರಲ್‌ ಆಗಿದೆ

ಹಲವು ಕುತೂಹಲ, ಚರ್ಚೆ, ಎಚ್ಚರಿಕೆಗಳ ನಡುವೆಯೂ ಗುರುವಾರ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿಯವರು ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಚೇರಿಯ ವಾರ್ಷಿಕ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಇಪ್ಪತ್ತು ನಿಮಿಷಗಳಿಗೂ ಹೆಚ್ಚು ಕಾಲ ಮಾತಾಡಿದ ಪ್ರಣಬ್‌ ಅವರು ರಾಷ್ಟ್ರೀಯತೆ, ದೇಶಭಕ್ತಿ, ಬಹುತ್ವ, ಜಾತ್ಯತೀತತೆಗಳ ಕುರಿತು ಮಾತನಾಡಿದ ಅವರು, ಭಾರತದ ವೈವಿಧ್ಯತೆಯನ್ನು ಎತ್ತಿಹಿಡಿಯುವ ಸಂಗತಿಗಳನ್ನು, ಸಂವಿಧಾನದ ಘನತೆಯನ್ನು ಪ್ರಸ್ತಾಪಿಸಿದರು.

ಸಮಾವೇಶದಲ್ಲಿ ಸ್ವಯಂಸೇವಕರಿಂದ ವಂದನೆ ಸ್ವೀಕರಿಸಿದ ಪ್ರಣಬ್‌ ಮುಖರ್ಜಿ ಎಲ್ಲೂ, ಆರ್‌ಎಸ್‌ಎಸ್‌ನ ಶಿಷ್ಟಾಚಾರಗಳನ್ನು ಅನುಸರಿಸದೆ ಸಭಾ ಮರ್ಯಾದೆಗೆ ತಕ್ಕಂತೆ ನಡೆದುಕೊಂಡರು. ಆದರೆ, ಸಮಾವೇಶ ಮುಗಿದ ಕೆಲವೇ ನಿಮಿಷಗಳಲ್ಲಿ ಆರ್‌ಎಸ್‌ಎಸ್‌ ಪದ್ಧತಿಯಂತೆ ವಂದನೆ ಸಲ್ಲಿಸಿದ ಚಿತ್ರವೊಂದು ವೈರಲ್‌ ಆಗಲಾರಂಭಿಸಿತು!

ಎಡದಲ್ಲಿರುವುದು ಮೂಲ ಚಿತ್ರ, ಬಲದಲ್ಲಿರುವುದು ಫೋಟೋಶಾಪ್‌ ಮಾಡಿದ ಚಿತ್ರ

ಫೋಟೋಶಾಪ್‌ ಬಳಸಿ ಸೃಷ್ಟಿಸಲಾದ ಪ್ರಣಬ್‌ ಮುಖರ್ಜಿಯವರು ನಮಿಸುತ್ತಿರುವ ಫೋಟೋವನ್ನು ಪರಿಶೀಲಿಸಿದ ‘ಇಂಡಿಯಾ ಟುಡೆ’ ಹಿರಿಯ ಸಂಪಾದಕ ಬಾಲಕೃಷ್ಣ, ಈ ಫೋಟೋಗಳನ್ನು ವೈರಲ್‌ ಮಾಡಿದವರನ್ನು ಗುರುತಿಸಿದ್ದಾರೆ. ಬಿಜೆಪಿ ಐಟಿ ಮುಖ್ಯಸ್ಥ ಅಮಿತ್‌ ಮಾಲವೀಯಾ ಸೇರಿದಂತೆ ಬಿಜೆಪಿ ಒಲವಿನ ಟ್ವೀಟಿಗರು ಈ ಫೋಟೋವನ್ನು ಟ್ವೀಟ್‌ ಮಾಡಿದ್ದಾರೆ. ಈ ಪೈಕಿ ಕೆಲವರನ್ನು ಪ್ರಧಾನಿ ನರೇಂದ್ರ ಮೋದಿಯವರು ಫಾಲೋ ಮಾಡುತ್ತಿರುವುದನ್ನು ಬಾಲಕೃಷ್ಣ ಗುರುತಿಸಿದ್ದಾರೆ.

ಅನುಪಮ್‌ ಹೆಸರಿನ ವ್ಯಕ್ತಿ ಪ್ರಣಬ್‌ ಮುಖರ್ಜಿಯವರ ನಕಲಿ ಫೋಟೋವನ್ನು ಟ್ವೀಟ್‌ ಮಾಡಿದ್ದಾನೆ. ಇದು ಫೋಟೋಶಾಪ್‌ ಮಾಡಿದ ಚಿತ್ರವೆಂದು ಟ್ವೀಟಿಗರು ಪ್ರತಿಕ್ರಿಯೆ ಬರೆದಾಗ, “ಗೊತ್ತಿದೆ,” ಎಂದು ಅನುಪಮ್‌ ಪ್ರತಿಕ್ರಿಯಿಸಿದ್ದಾರೆ. ಅಂದರೆ, ಈ ತಿರುಚಿದ ಚಿತ್ರವನ್ನು ಹರಡುವುದು ಯೋಜಿತ ಕ್ರಿಯೆ ಎಂಬುದು ಸ್ಪಷ್ಟವಾಗುತ್ತದೆ. ಈ ಬೆಳವಣಿಗೆಗಳು ಗಮನಕ್ಕೆ ಬರುತ್ತಿದ್ದಂತೆ ಸ್ವತಃ ಆರ್‌ಎಸ್‌ಎಸ್‌ ತನ್ನ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನಿಂದ ಬೆಳಗಿನ ಜಾವ ಸ್ಪಷ್ಟನೆ ಪ್ರಕಟಿಸಿದೆ.

ಈ ಕಾರ್ಯಕ್ರಮಕ್ಕೂ ಮುನ್ನಾದಿನ ಪ್ರಣಬ್‌ ಮುಖರ್ಜಿಯವರ ಪುತ್ರಿ ಶರ್ಮಿಷ್ಠಾ ಮುಖರ್ಜಿ, “ಕಾರ್ಯಕ್ರಮದಲ್ಲಿ ಮಾತನಾಡಿದ ವಿಷಯಗಳು ಮರೆತುಹೋಗುತ್ತವೆ. ಆದರೆ ಅದರ ಬಿಂಬಗಳಷ್ಟೇ ಉಳಿಯುತ್ತವೆ,” ಎಂದು ತಂದೆಗೆ ಎಚ್ಚರಿಸಿದ್ದರು. ಅವರ ಮಾತಿನಂತೆ ಚಿತ್ರಗಳನ್ನು ಕೆಲವರು ದುರುದ್ದೇಶದಿಂದ ಸೃಷ್ಟಿಸಿ ಮುಖರ್ಜಿಯವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಾರೆ ಎಂಬ ದೂರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಯಿತು. ಈ ಚಿತ್ರ ವೈರಲ್‌ ಆದಮೇಲೆ ಶರ್ಮಿಷ್ಠಾ ಟ್ವೀಟ್‌ ಮಾಡಿ, "ನಾನು ಯಾವ ವಿಷಯದಲ್ಲಿ ಆತಂಕಗೊಂಡಿದ್ದೆನೋ ಮತ್ತು ನನ್ನ ತಂದೆಗೆ ಎಚ್ಚರಿಸಿದ್ದೆನೋ ಅದೇ ಆಗಿದೆ. ಕಾರ್ಯುಕ್ರಮಕ್ಕೆ ಹೋಗಿ ಬಂದು ಇನ್ನೂ ಗಂಟೆಗಳು ಕಳೆದಿಲ್ಲ. ಆಗಲೇ ಬಿಜೆಪಿ/ಆರ್‌ಎಸ್‌ಎಸ್‌ನ ಡರ್ಟಿ ಟ್ರಿಕ್‌ ಡಿಪಾರ್ಟ್‌ ಭಾರಿ ಉತ್ಸಾಹದಲ್ಲಿ ಕೆಲಸ ಮಾಡಿದೆ,'' ಎಂದು ಟೀಕಿಸಿದರು.

ಮತ್ತೊಂದು ಟ್ವೀಟ್‌ನಲ್ಲಿ, "ಈಗ ಪ್ರಣಬ್‌ ಮುಖರ್ಜಿಯವರಿಗೆ ಇಂದಿನ ಘಟನೆಯಿಂದ ಬಿಜೆಪಿಯ ಡರ್ಟಿ ಟ್ರಿಕ್‌ ಡಿಪಾರ್ಟ್‌ ಹೇಗೆ ಕೆಲಸ ಮಾಡುತ್ತದೆ ಎಂಬುದು ಮನವರಿಕೆಯಾಗಿರುತ್ತದೆ ಎಂದು ನಂಬಿದ್ದೇನೆ,” ಎಂದೂ ಶರ್ಮಿಷ್ಠಾ ಹೇಳಿದ್ದಾರೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More