ಗಡ್ಕರಿ ವಿವಾದದಲ್ಲಿ ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್ ಬಂಧನ ಸುದ್ದಿ ನಿಜವೇ?

ಶೆಹ್ಲಾ ರಶೀದ್ ಬಂಧನಕ್ಕೊಳಗಾಗಿದ್ದಾರೆ ಎಂಬ ವದಂತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಾರತೀಯ ದಂಡಸಂಹಿತೆಯ ನಾನಾ ಸೆಕ್ಷನ್ ಅಡಿ ದೂರು ದಾಖಲಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ಇದೊಂದು ಸುಳ್ಳು ಸುದ್ದಿ ಎಂದು ‘ಆಲ್ಟ್ ನ್ಯೂಸ್’ ವರದಿ ಮಾಡಿದೆ

ಬಲಪಂಥೀಯ ಸಂಘಟನೆಗಳಿಂದ ನಿರಂತರ ಟ್ರಾಲ್‌ಗೆ ಒಳಗಾಗುತ್ತಿರುವ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್ ಬಂಧನವಾಗಿದೆ ಎಂಬ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ನಿತಿನ್ ಗಡ್ಕರಿ ಸಂಚು ರೂಪಿಸಿದ್ದಾರೆ ಎಂದು ಆಕೆ ಟ್ವೀಟ್ ಮಾಡಿದ ಬೆನ್ನಲ್ಲೇ, ಆಕೆಯನ್ನು ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಬಂಧಿಸಲಾಗಿದೆ ಎಂಬ ಸುದ್ದಿಯನ್ನು ಹರಿಬಿಡಲಾಗಿದೆ. ಈ ಬಗ್ಗೆ ಆಲ್ಟ್ ನ್ಯೂಸ್ ವರದಿಯೊಂದನ್ನು ಪ್ರಕಟಿಸಿದೆ.

“ನಿತಿನ್ ಗಡ್ಕರಿ ಅವರು ಐಪಿಸಿಯ 153 ಎ, 295 ಹಾಗೂ 295ಎ ಸೆಕ್ಷನ್‌ಗಳಡಿ ಶೆಹ್ಲಾ ರಶೀದ್ ವಿರುದ್ಧ ದೂರು ದಾಖಲಿಸಿದ್ದಾರೆ. ಅವರಿಗೆ ಧನ್ಯವಾದಗಳು. ಈಗ ಆಕೆಯ ವಿರುದ್ಧ ಕ್ರಮ ಕೈಗೊಳ್ಳುವುದು ಮತ್ತು ತೆರಿಗೆದಾರರ ಹಣವನ್ನು ಆಕೆಗಾಗಿ ವ್ಯಯಿಸುವುದನ್ನು ತಡೆಯುವುದು ಜೆಎನ್‌ಯು ಜವಾಬ್ದಾರಿ,” ಎಂದು ಹೇಳುವ ಟ್ವೀಟ್ ಒಂದು ಬಲಪಂಥೀಯ ಸಂಘಟನೆಗಳ ಸಾಮಾಜಿಕ ಜಾಲತಾಣಗಳ ಪ್ರಮುಖ ಖಾತೆಯಾಗಿರುವ ದಿಗಿನಿಖಾನ್ @giniromet ಸಾರಿದೆ. ಈ ಹೇಳಿಕೆಯನ್ನು 3,500ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಮಾಡಲಾಗಿದೆ ಹಾಗೂ 7,300 ಬಾರಿ ಲೈಕ್ ಮಾಡಲಾಗಿದೆ. ‘ದಿಗಿನಿಖಾನ್’ ಮುಸ್ಲಿಂ ಮುಖವಾಡ ಹೊತ್ತ ಬಿಜೆಪಿಯನ್ನು ಬೆಂಬಲಿಸುವ ನಕಲಿ ಟ್ವಿಟರ್ ಹ್ಯಾಂಡಲ್ ಎಂದು ಈ ಹಿಂದೆ ‘ಆಲ್ಟ್ ನ್ಯೂಸ್’ ಬಹಿರಂಗಪಡಿಸಿತ್ತು.

ಸೆಕ್ಷನ್ 153ಎ ವಿವಿಧ ಗುಂಪುಗಳೊಡನೆ ವೈರತ್ವ ಉಂಟುಮಾಡುವುದಕ್ಕೆ ಸಂಬಂಧಿಸಿದ್ದಾದರೆ, ಸೆಕ್ಷನ್ 295 ಧಾರ್ಮಿಕ ಕೇಂದ್ರಗಳಿಗೆ ಹಾನಿ ಮಾಡುವುದು ಹಾಗೂ ಸೆಕ್ಷನ್ 295ಎ ಭಾವನಾತ್ಮಕವಾಗಿ ಕೆರಳಿಸಲು ಉದ್ದೇಶಪೂರ್ವಕವಾಗಿ ದುರುದ್ದೇಶಪೂರ್ವಕ ಕೃತ್ಯಗಳನ್ನು ಎಸಗುವುದಕ್ಕೆ ಸಂಬಂಧಿಸಿದ್ದಾಗಿವೆ.

7500 ಫಾಲೋವರ್‌ಗಳನ್ನು ಹೊಂದಿರುವ ಟ್ವಿಟರ್ ಹ್ಯಾಂಡಲ್ ಸನಾತನ ಧರ್ಮ @HinduDharma1 ಕೂಡ ಇಂತಹುದೇ ಟ್ವೀಟ್ ಮಾಡಿದ್ದು, 370ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ, 580 ಲೈಕ್‌ಗಳನ್ನು ಪಡೆದಿದೆ. ಝೀ ಬ್ಯುಸಿನೆಸ್ ನಿರೂಪಕಿ ಸ್ವಾತಿ ರೈನಾರ ಹೆಸರಿನಲ್ಲಿರುವ ಅಕೌಂಟ್ ಕೂಡ ಇಂತಹುದೇ ಹೇಳಿಕೆ ಪ್ರಕಟಿಸಿದೆ. ಆದರೆ, ಇದು ಪತ್ರಕರ್ತೆಯ ಅಧಿಕೃತ ಖಾತೆ ಅಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಪ್ರಣಬ್‌ ಮುಖರ್ಜಿ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ವಂದಿಸಿದ ಫೋಟೋ ಅಸಲಿಯೇ?

ಈ ಸಂಬಂಧ ದೂರು ಬಂದಿದೆಯಾದರೂ ಶೆಹ್ಲಾ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆ, ‘ಆಲ್ಟ್ ನ್ಯೂಸ್’ಗೆ ತಿಳಿಸಿದೆ. ‘ಬ್ಯುಸಿನೆಸ್ ಸ್ಟಾಂಡರ್ಡ್’ ಮಾಹಿತಿ ಪ್ರಕಾರ, ಬಿಜೆಪಿಯ ಯುವ ಘಟಕ ಮಾತ್ರ ಶೆಹ್ಲಾ ವಿರುದ್ಧ ದೂರು ನೀಡಿದೆ ಎಂದು ತಿಳಿದುಬಂದಿದೆ.

“ಆರೆಸ್ಸೆಸ್/ಗಡ್ಕರಿ ಮೋದಿಯವರನ್ನು ಹತ್ಯೆ ಮಾಡಲು ಸಂಚು ರೂಪಿಸಿರುವಂತೆ ತೋರುತ್ತಿದ್ದು, ನಂತರ ಇದನ್ನು ಮುಸ್ಲಿಮರು/ಕಮ್ಯುನಿಸ್ಟರ ತಲೆಗೆ ಕಟ್ಟಿ ಮುಸ್ಲಿಮರನ್ನು ಮುಗಿಸುವ ತಂತ್ರವಿದು,” ಎಂದು ಶೆಹ್ಲಾ ಈ ಹಿಂದೆ ಟ್ವೀಟ್ ಮಾಡಿದ್ದರು. ಬಳಿಕ ಇದು ವಿವಾದದ ಸ್ವರೂಪ ಪಡೆದುಕೊಂಡಿತ್ತು. ವಿಡಂಬನೆಯ ಧಾಟಿಯಲ್ಲಿ ಹೀಗೆ ಹೇಳಿದ್ದೆ ಎಂದು ಶೆಹ್ಲಾ ಸ್ಪಷ್ಟನೆ ನೀಡಿದ್ದರು. ಈ ಮಧ್ಯೆ, ನಿತಿನ್ ಗಡ್ಕರಿ ತಮ್ಮ ಟ್ವಿಟರ್ ಖಾತೆ ಮೂಲಕ “ಮೋದಿ ಹತ್ಯೆ ಕುರಿತಂತೆ ನನ್ನ ಹೆಸರನ್ನು ಪ್ರಸ್ತಾಪಿಸಿರುವ ಸಮಾಜವಿರೋಧಿ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವೆ,” ಎಂದು ಹೇಳಿದ್ದರು.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More