ಮಂಡ್ಸೂರ್‌ ಅತ್ಯಾಚಾರಿಗೆ ಶಿಕ್ಷೆ ಆಗಬೇಕೆಂಬ ಭಿತ್ತಿಪತ್ರ ತಿರುಚಿದ ಕಿರಾತಕರು

“ಕುರಾನ್‌ನಲ್ಲಿ ಮುಸ್ಲಿಮೇತರ ಮಹಿಳೆಯನ್ನು ಅತ್ಯಾಚಾರ ಮಾಡಲು ಅವಕಾಶ ನೀಡಲಾಗಿದೆ. ಹೀಗಾಗಿ ಬಂಧಿತ ಆರೋಪಿಯನ್ನು ಕೂಡಲೇ ಬಿಡುಗಡೆ ಮಾಡಬೇಕು,” ಎಂದು ಆಗ್ರಹಿಸಿ ನೂರಾರು ಮಂದಿ ಮುಸ್ಲಿಮರು ಮಂಡ್ಸೂರ್‌ನಲ್ಲಿ ಬೀದಿಗಳಿದು ಪ್ರತಿಭಟನೆ ನಡೆಸಿದ್ದಾರೆ ಎಂಬ ಸುದ್ದಿ ನಿಜವೇ?

ಮಧ್ಯಪ್ರದೇಶದ ಮಂಡ್ಸೂರ್‌ ಜಿಲ್ಲೆಯಲ್ಲಿ ಕಳೆದ ತಿಂಗಳು ನಡೆದ ಏಳು ವರ್ಷದ ಬಾಲಕಿ ಮೇಲಿನ ಅತ್ಯಾಚಾರ-ಕೊಲೆ ಪ್ರಕರಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ಕೋಮುವಾದದ ಬಣ್ಣ ಪಡೆದುಕೊಂಡಿದೆ. “ಕುರಾನ್‌ನಲ್ಲಿ ಮುಸ್ಲಿಮೇತರ ಮಹಿಳೆಯನ್ನು ಅತ್ಯಾಚಾರ ಮಾಡಲು ಅವಕಾಶ ನೀಡಲಾಗಿದೆ. ಹೀಗಾಗಿ, ಬಂಧಿತ ಆರೋಪಿಯನ್ನು ಕೂಡಲೇ ಬಿಡುಗಡೆ ಮಾಡಬೇಕು,” ಎಂದು ಆಗ್ರಹಿಸಿ ನೂರಾರು ಮಂದಿ ಮುಸ್ಲಿಂ ಸಮುದಾಯದ ಸದಸ್ಯರು ಮಂಡ್ಸೂರ್‌ನಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್ಬುಕ್, ಟ್ವಿಟರ್‌ನಲ್ಲಿ ಹರಿದಾಡುತ್ತಿದೆ.

www.indiaflare.com ಎಂಬ ಲಿಂಕ್ ಕ್ಲಿಕ್ಕಿಸಿದಾಗ ಸಿಗುವ ವರದಿಯ ಆಧಾರ ಹೊಂದಿರುವ ಈ ಸಂದೇಶದಲ್ಲಿ, “ಕುರಾನ್ ಪ್ರಕಾರ ಮುಸ್ಲಿಮೇತರ ಮಹಿಳೆಯರನ್ನುಅತ್ಯಾಚಾರ ಮಾಡಲು ಅವಕಾಶವಿದೆ. ಹೀಗಾಗಿ, ಬಂಧಿತ ಇರ್ಫಾನ್ ಖಾನ್‌ನನ್ನು ಕೂಡಲೇ ಬಿಡುಗಡೆಗೊಳಿಸಬೇಕು,” ಎಂಬ ಅಡಿಬರಹವಿರುವ ಫೋಟೋದಲ್ಲಿ ಮುಸಲ್ಮಾನರು ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನಾ ಮೆರವಣಿಗೆ ಸಾಗುತ್ತಿದ್ದಾರೆ. ಜು.1ರಂದು ಈ ಸುದ್ದಿಯನ್ನು 16 ಸಾವಿರ ಮಂದಿ ಶೇರ್ ಮಾಡಿದ್ದಾರೆ.

‘ಆಲ್ಟ್ ನ್ಯೂಸ್’ ತಂಡ ಈ ಸುದ್ದಿ ಸುಳ್ಳು ಎಂದು ಬಯಲು ಮಾಡಿದೆ. ಮಂಡ್ಸೂರ್‌ನಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಹಾಗೂ ಅಪರಾಧಿಗಳಿಗೆ ಕಠಿಣ ಶಿಕ್ಷಗೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಆದರೆ, ಫೋಟೋಶಾಪ್‌ ಮೂಲಕ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ. ಈ ಸುಳ್ಳು ಸುದ್ದಿಯನ್ನು 16 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ. ವಾಸ್ತವದಲ್ಲಿ ಈ ಪ್ರತಿಭಟನೆಯ ವೇಳೆ ಹಿಡಿಯಲಾಗಿದ್ದ ಭಿತ್ತಿಪತ್ರಗಳ ಮೇಲೆ, “ಮಗಳ ಮೇಲೆ ಇಂತಹ ಘಟನೆಯನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಕ್ರೌರ್ಯವನ್ನು ನಿಲ್ಲಿಸಿ,” ಎಂದು ಬರೆಯಲಾಗಿತ್ತು. ಆದರೆ, ಫೋಟೋಶಾಪ್ ಮೂಲಕ ಇದನ್ನು ತಿರುಚಲಾಗಿದೆ. “ಕುರಾನಿನಲ್ಲಿ ಮುಸಲ್ಮಾನೇತರ ಮಹಿಳೆಯರನ್ನು ಅತ್ಯಾಚಾರ ಮಾಡಲು ಅವಕಾಶವಿದೆ,” ಎನ್ನುವ ಸಂದೇಶವನ್ನು ಭಿತ್ತಿಪತ್ರದ ಮೇಲೆ ಅಂಟಿಸಲಾಗಿದೆ. ‘ಫಸ್ಟ್ ಪೋಸ್ಟ್’ ಸುದ್ದಿ ಪ್ರಸಾರ ಮಾಡಿದಂತೆ, “ಬಾಲಕಿ ಮೇಲಿನ ಅತ್ಯಾಚಾರವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದ ಮುಸಲ್ಮಾನ್ ಸಮುದಾಯ ಬಾಲಕಿಯನ್ನು ಕ್ರೂರವಾಗಿ ಹತ್ಯೆ ಮಾಡಿದ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಬೇಕು,” ಎಂದು ಆಗ್ರಹಿಸಿತ್ತು.

ಕಾಂಗ್ರೆಸ್ ನಾಯಕನ ಹೇಳಿಕೆಯನ್ನೂ ತಿರುಚಲಾಯಿತು

ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧ್ಯಾ, “ಬಂಧಿತ ಆರೋಪಿಗಳ ಪೈಕಿ ಇಬ್ಬರು ನಿರಪರಾಧಿಗಳಾಗಿದ್ದು, ಘಟನೆ ಬಗ್ಗೆ ಸಿಬಿಐ ತನಿಖೆಯಾಗಬೇಕು,” ಎಂದು ಹೇಳಿದ್ದಾರೆ ಎನ್ನುವ ಸುದ್ದಿಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇದೂ ಸುಳ್ಳು ಎನ್ನುವುದು ಸಾಬೀತಾಗಿದೆ. ಅಂದಹಾಗೆ ಸಿಂಧ್ಯಾ ಮಂಡಸೂರ್‌ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ನಡೆದ ರಾಲಿಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಿದ ತಮ್ಮ ಫೋಟೋವನ್ನು ಅವರು ಟ್ವೀಟ್ ಮಾಡಿ,  “ಅಪರಾಧಿಗಳಿಗೆ ಗಲ್ಲು ಶಿಕ್ಷೆವಿಧಿಸಬೇಕು,” ಎಂದು ಆಗ್ರಹಿಸಿದ್ದರು. ಇದನ್ನು ಕೂಡ ತಿರುಚಿ ಸುಳ್ಳುಸುದ್ದಿ ಹಬ್ಬಿಸಲಾಗಿದೆ.

ಸುಳ್ಳು ಸುದ್ದಿ ಹಬ್ಬಿಸಿರುವ www.indiaflare.com ವೆಬ್‌ಸೈಟ್ ಕಳೆದ ಜೂನ್ 22ರಂದು ನೋಂದಣಿಯಾಗಿದ್ದು, ತಾಣದಾದ್ಯಂತ ಸಂಶಯಾಸ್ಪದ ಸುದ್ದಿಗಳೇ ತುಂಬಿವೆ. ಅಷ್ಟೇ ಅಲ್ಲದೆ, @indiaflarecom ಟ್ವಿಟರ್ ಅಕೌಂಟ್ ಕೂಡ 2018ರಲ್ಲಿ ರಚನೆಯಾಗಿದೆ. ಇದರ ತುಂಬೆಲ್ಲ ಸತ್ಯಕ್ಕೆ ದೂರವಾದ ಸುದ್ದಿಗಳೇ ತುಂಬಿಕೊಂಡಿವೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More