ಮಕ್ಕಳ ಕಳ್ಳರ ಕುರಿತ ಸುಳ್ಳು ಸುದ್ದಿಗೆ ಬಲಿಯಾಗಿದ್ದು 20 ಮಂದಿ ಅಮಾಯಕರು!

ಮಕ್ಕಳ ಕಳ್ಳರ ಬಗ್ಗೆ ಹರಡುತ್ತಿದ್ದ ಸುಳ್ಳು ಸುದ್ದಿಯಿಂದ ಆತಂಕಗೊಂಡ ಜನರು, ಮಹಾರಾಷ್ಟ್ರದಲ್ಲಿ ಐವರು ಮುಗ್ಧರನ್ನು ಹೊಡೆದು ಸಾಯಿಸಿದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತು. ಅಂದಹಾಗೆ, ಮಹಾರಾಷ್ಟ್ರದ ಜನರನ್ನು ರೊಚ್ಚಿಗೆಬ್ಬಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಫೇಕ್ ವಿಡಿಯೋ!

ಸಾಮಾಜಿಕ ಜಾಲತಾಣವೊಂದು ಸಮಾಜದಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದಕ್ಕೆ ಜುಲೈ ಒಂದರಂದು ಮಹಾರಾಷ್ಟ್ರದ ಧುಲೆ ಜಿಲ್ಲೆಯ ರೈನ್ಪಾದಾ ಗ್ರಾಮದಲ್ಲಿ ನಡೆದ ಘಟನೆಯೇ ಸಾಕ್ಷಿ. ಮಕ್ಕಳ ಕಳ್ಳರ ಬಗ್ಗೆ ಹರಡುತ್ತಿದ್ದ ಸುಳ್ಳು ಸುದ್ದಿಯಿಂದ ಆತಂಕಗೊಂಡ ಜನರು, ಐವರು ಮುಗ್ಧರನ್ನು ಹೊಡೆದು ಸಾಯಿಸಿದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತು. ಅಂದಹಾಗೆ, ಮಹಾರಾಷ್ಟ್ರದ ಜನರನ್ನು ರೊಚ್ಚಿಗೆಬ್ಬಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಫೇಕ್ ವಿಡಿಯೋ. ವಿಡಿಯೋದಲ್ಲಿ ಮಕ್ಕಳ ಮೃತದೇಹವನ್ನು ಸಾಲಾಗಿ ಮಲಗಿಸಿದ ದೃಶ್ಯ ಹಾಗೂ ಮಾನವ ಸಾಗಾಣಿಕೆ ಜಾಲವೊಂದು ಮಕ್ಕಳ ಅಪಹರಣ ಕೃತ್ಯದಲ್ಲಿ ತೊಡಗಿದೆ ಎಂಬ ಸುಳ್ಳು ಸುದ್ದಿ ಇತ್ತು.

ರಾಸಾಯನಿಕ ಅನಿಲ ದಾಳಿಯಿಂದಾಗಿ ಸಿರಿಯಾದಲ್ಲಿ ಮಕ್ಕಳ ಮೃತದೇಹದ ಚಿತ್ರವನ್ನೇ ತಿರುಚಿರುವ ಕಿರಾತಕರು, ಭಾರತದಲ್ಲಿ ಮಕ್ಕಳ ಅಪಹರಣ ದಂಧೆ ಜೋರಾಗಿದೆ ಎಂದು ಸುದ್ದಿ ಹಬ್ಬಿಸಿದ್ದರು. ಮಕ್ಕಳ ಅಂಗಾಗಗಳನ್ನುಕದಿಯುವ ಜಾಲವೊಂದು ಅಪಹರಣದಲ್ಲಿ ತೊಡಗಿದೆ ಎಂಬ ಅಡಿಬರಹದಲ್ಲಿ ವಾಟ್ಸ್ ಆಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಈ ವಿಡಿಯೋಗೆ ದೇಶಾದ್ಯಂತ ಬಲಿಯಾಗಿದ್ದು ಬರೋಬ್ಬರಿ 20 ಮಂದಿ.

ಇನ್ನು, ಮಾಲೆಗಾಂವ್‌ನಲ್ಲಿ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವ ವಿಡಿಯೋವೊಂದು ಹರಿದಾಡಿತು. ದುಲೆಯ ಸಕ್ರಿ ಗ್ರಾಮದಲ್ಲಿ ಮಕ್ಕಳ ಅಪಹರಣ ಯತ್ನ ನಡೆಯುತ್ತಿದೆ ಎಂದು ಆರೋಪಿಸಲಾಯಿತು. ಆದರೆ, ಮಕ್ಕಳ ಅಪಹರಣದಂತಹ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂಬುದು ಪೊಲೀಸರ ಸ್ಪಷ್ಟನೆ.

ಇದನ್ನೂ ಓದಿ : ಮಕ್ಕಳ ಅಪಹರಣ ವದಂತಿ ನಿರಾಕರಿಸಿದ ಪೊಲೀಸರು, ಸುಳ್ಳು ಹಬ್ಬಿಸಿದರೆ ಕಠಿಣ ಕ್ರಮ

ವಿಪರ್ಯಾಸವೆಂದರೆ, ಮಕ್ಕಳ ಕಳ್ಳತನದ ಸುದ್ದಿ ಹರಡಿರುವ ಧುಲೆ, ನಾಸಿಕ್ ಮತ್ತು ನಂದರ್‌ಬರ್ ಸೇರಿದಂತೆ ಹಲವು ಪ್ರದೇಶಗಳು ಕುಗ್ರಾಮವಾಗಿದ್ದು, ಇಲ್ಲಿ ಇಂಟರ್ನೆಟ್ ಸಂಪರ್ಕ ಸರಿಯಾಗಿಲ್ಲ. ಇಷ್ಟಾದರೂ, ಇಂತಹ ಸುಳ್ಳು ಸುದ್ದಿಗಳು ಬಹುಬೇಗನೆ ಹರಡಿ ಮಹಾರಾಷ್ಟ್ರವೊಂದರಲ್ಲೇ 10 ಜನ ಬಲಿಯಾದರು. ಕಳೆದ ಜು.1ರಂದು ಬಸ್ಸಿನಲ್ಲಿ ಗ್ರಾಮಕ್ಕೆ ಬಂದಿದ್ದ ಐವರು ಅಲ್ಲಿಯೇ ಇದ್ದ ಆರು ವರ್ಷದ ಬಾಲಕಿಯೊಂದಿಗೆ ಮಾತನಾಡಲು ಯತ್ನಿಸಿದ್ದನ್ನೇ ನೆಪ ಮಾಡಿಕೊಂಡ ಗುಂಪು, ಕೋಲು ಮತ್ತು ಚಪ್ಪಲಿಗಳಿಂದ ಹಿಗ್ಗಾಮುಗ್ಗಾ ಥಳಿಸಿ ಕೊಂದುಹಾಕಿತ್ತು. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಅನಾಹುತ ನಡೆದೇಹೋಗಿತ್ತು. ಘಟನೆ ಸಂಬಂಧ ಪೊಲೀಸರು 3 ಮಂದಿಯನ್ನು ಬಂಧಿಸಿದ್ದಾರೆ. ಆದರೆ, ಇಂತಹ ಸುಳ್ಳು ಸುದ್ದಿಯ ಮೂಲ ಹುಡುಕಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಯೇ ಇಲ್ಲ.

ಸಾಮಾಜಿಕ ಮಾಧ್ಯಮಗಳಿಂದ ಪ್ರಭಾವಿತರಾಗಿ ಹಿಂಸಾಚಾರ ಎಸಗುವ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಕೇಂದ್ರ ಸರ್ಕಾರ ಗುರುವಾರ ಮಹಾರಾಷ್ಟ್ರಕ್ಕೆ ಸೂಚಿಸಿದೆ. ಈ ನಡುವೆ, ವಾಟ್ಸಾಪ್ ಕೂಡ ಸುಳ್ಳು ಸುದ್ದಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More