ಸುಳ್ಳುಸುದ್ದಿ ನಿಯಂತ್ರಣಕ್ಕೆ ಹೊಸ ಮಾರ್ಗ ಪರಿಚಯಿಸಲು ಮುಂದಾದ ವಾಟ್ಸ್ ಆಪ್

ಸುಳ್ಳುಸುದ್ದಿಗಳು ಎಂತಹ ದುರಂತಗಳಿಗೆ ನಾಂದಿ ಹಾಡುತ್ತವೆ ಎಂಬುದಕ್ಕೆ ಇತ್ತೀಚೆಗೆ ತಲ್ಲಣ ಸೃಷ್ಟಿಸಿದ ಮಕ್ಕಳ ಕಳ್ಳರ ವದಂತಿ ಸ್ಪಷ್ಟ ನಿದರ್ಶನ. ಸದ್ಯ ಸುಳ್ಳುಸುದ್ದಿ ಕಡಿವಾಣಕ್ಕೆ ಮುಂದಾಗಿರುವ ವಾಟ್ಸ್ ಆಪ್ ಕ್ರಮಗಳ ಕುರಿತ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯ ಭಾವಾನುವಾದ ಇಲ್ಲಿದೆ

ಸಾಮಾಜಿಕ ಜಾಲತಾಣಗಳ ಅಬ್ಬರದಿಂದಾಗಿ ಜಗತ್ತಿನ ವಿದ್ಯಮಾನಗಳು ಅಂಗೈಯಲ್ಲೇ ಲಭ್ಯವಾಗುತ್ತಿರುವುದರಿಂದ ಸುಳ್ಳುಸುದ್ದಿಗಳು ವೇಗವಾಗಿ ನಮ್ಮನ್ನು ಆವರಿಸುತ್ತಿರುವುದಲ್ಲದೆ, ನಮಗೆ ಗೊತ್ತಿಲ್ಲದಂತೆ ನಮ್ಮನ್ನೇ ನಯವಾಗಿ ವಂಚಿಸುತ್ತಿದೆ. ಇತ್ತೀಚೆಗಂತೂ ಈ ಸುಳ್ಳುಸುದ್ದಿಗಳು ಹುಟ್ಟುತ್ತಲೇ ಇದ್ದು, ಕ್ಷಣಮಾತ್ರದಲ್ಲಿ ದೇಶಾದ್ಯಂತ ವ್ಯಾಪಿಸಿ ಅಲ್ಲೋಲಕಲ್ಲೋಲ ಉಂಟುಮಾಡುತ್ತಿವೆ. ಈ ಸುದ್ದಿಗಳು ಎಲ್ಲಿ ಹುಟ್ಟಿದವು, ಇದರ ಹಿನ್ನೆಲೆ ಏನು, ಉದ್ದೇಶವೇನು ಎಂಬುದರ ಪರಿವೇ ಇಲ್ಲದೆ ನಾವದನ್ನು ಪಾರ್ವರ್ಡ್ ಮಾಡುತ್ತಿರುತ್ತೇವೆ. ಆದರೆ, ಇಂತಹ ಸುಳ್ಳುಸುದ್ದಿಗಳು ಎಂತಹ ಸಮಾಜಘಾತುಕ ಕೃತ್ಯಕ್ಕೆ ನಾಂದಿ ಹಾಡುತ್ತವೆ ಎಂಬುದಕ್ಕೆ ಇತ್ತೀಚೆಗೆ ದೇಶದಲ್ಲಿ ನಡೆದ ಮಕ್ಕಳ ಕಳ್ಳರ ವದಂತಿ ಸ್ಪಷ್ಟ ನಿದರ್ಶನ. ಮಕ್ಕಳ ಕಳ್ಳರ ವದಂತಿಯಿಂದ ದೇಶದಲ್ಲಿ 20ಕ್ಕೂ ಹೆಚ್ಚು ಮಂದಿಯನ್ನು ಹೊಡೆದು ಸಾಯಿಸಿದ ಬಳಿಕ, ವಾಟ್ಸ್ ಆಪ್‌ಗೆ ಸಾಮಾಜಿಕ ಜಾಲತಾಣ ನಕಲಿ ಸುದ್ದಿ ಹರಡುವ ವೇಗವರ್ಧಕ ಎಂಬ ಹಣೆಪಟ್ಟಿ ಕಟ್ಟಲಾಯಿತು.

ಈ ಎಲ್ಲ ಬೆಳವಣಿಗೆಗಳ ನಡುವೆ ಪ್ರಚೋದನಕಾರಿ ಹಾಗೂ ಸುಳ್ಳುಸುದ್ದಿಗಳಿಗೆ ಕಡಿವಾಣ ಹಾಕಲು ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರವೂ ವಾಟ್ಸ್ ಆಪ್‌ಗೆ ಮನವಿ ಸಲ್ಲಿಸಿತು. ಹೀಗಾಗಿ, ಕೆಲವೊಂದು ಸೆಕ್ಯುರಿಟಿ ಫೀಚರ್‌ಗಳನ್ನು ಪರಿಚಯಿಸಲು ಮುಂದಾಗಿರುವ ಸಂಸ್ಥೆ, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಸುಳ್ಳುಸುದ್ದಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಂತ್ರಜ್ಞಾನ ಕಂಪನಿಗಳು, ಸರ್ಕಾರ ಕೂಡ ಪರಸ್ಪರ ಕೈಜೋಡಿಸಬೇಕಿದೆ ಎಂದು ಮನವಿ ಮಾಡಿದೆ ವಾಟ್ಸ್ ಆಪ್ ಸಂಸ್ಥೆ,

ಇದನ್ನೂ ಓದಿ : ಸುಳ್ಳು ಸುದ್ದಿಗಾರರಿಗೆ ಚುರುಕು ಮುಟ್ಟಿಸಿದ ಟ್ವಿಟರ್; 70 ಮಿಲಿಯನ್ ಖಾತೆ ಅಮಾನತು

ವಾಟ್ಸ್ ಆಪ್ ವೇದಿಕೆಯನ್ನು ಸಮಾಜಘಾತುಕ ಕೆಲಸಗಳಿಗೆ ಬಳಸಿಕೊಳ್ಳಲು ಸಾಧ್ಯವಾಗದಂತಹ ಕೆಲವು ಫೀಚರ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಗ್ರಾಹಕ ಸ್ವತಃ ಟೈಪ್ ಮಾಡದೆ ಪಾರ್ವರ್ಡ್ ಮಾಡಿದ ಸಂದೇಶಗಳು ತನ್ನಿಂದತಾನೇ ಹೈಲೈಟ್ ಆಗಲಿದ್ದು, ಇದರಿಂದಾಗಿ ಇದು ಫಾರ್ವರ್ಡ್ ಆಗಿರುವ ಸುದ್ದಿ ಎಂಬುದು ಸಂದೇಶ ಸ್ವೀಕರಿಸಿದವರಿಗೆ ತಿಳಿಯಲು ಅನುಕೂಲವಾಗಲಿದೆ ಎಂಬುದು ಸಂಸ್ಥೆಯ ವಾದ.

ಈ ಹೊಸ ತಂತ್ರಜ್ಞಾನ ಭಾರತದಲ್ಲಿ ಪ್ರಯೋಗಿಕವಾಗಿ ಆರಂಭವಾಗಲಿದ್ದು, ಹೈಲೈಟರ್ ಇರುವುದರಿಂದ, ಸಂದೇಶ ಸ್ವೀಕರಿಸಿದ ಗ್ರಾಹಕರು, ಆ ಸಂದೇಶವನ್ನು ಪಾರ್ವರ್ಡ್ ಮಾಡುವ ಮೊದಲು ಎರಡು ಬಾರಿ ಯೋಚಿಸಲು ಅನುಕೂಲವಾಗುತ್ತದೆ. ಇದರಿಂದ ಸುಳ್ಳು ಸುದ್ದಿಯು ಹರಡುವುದನ್ನು ಕೊಂಚ ಮಟ್ಟಿಗೆ ನಿಯಂತ್ರಿಸಬಹುದಾಗಿದೆ ಎಂಬುದು ವಾಟ್ಸಾ ಆಪ್ ಪ್ರತಿಪಾದನೆ.

ಇನ್ನು, ವಾಟ್ಸ್‌ ಆಪ್‌ಗೆ ಬಂದಿರುವ ಸುದ್ದಿಗಳನ್ನು ಫಾರ್ವರ್ಡ್ ಮಾಡುವ ಮುಂಚೆ, ಅದರ ಸತ್ಯಾಸತ್ಯತೆಯನ್ನು ತಿಳಿಯಲು, ಸುದ್ದಿ ಜಾಲತಾಣಗಳು ಹಾಗೂ ಇನ್ನಿತರ ಗುಂಪುಗಳಲ್ಲಿ ಚರ್ಚಿಸುವುದರಿಂದ, ಬಂದಿರುವ ಸುದ್ದಿ, ಆಧಾರ ಸಹಿತವಾಗಿರುವುದೋ ಅಥವಾ ಆಧಾರ ರಹಿತವಾಗಿರುವುದೋ ಎಂದು ಗೊತ್ತಾಗಲಿದೆ ಎಂದಿದೆ ವಾಟ್ಸ್ ಆಪ್ ಕಂಪನಿ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More