ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಹಿಂದೂ ಹಬ್ಬಗಳನ್ನು ನಿಜಕ್ಕೂ ಆಚರಿಸೋದಿಲ್ಲವೇ?

ಬೆಂಗಳೂರು ಕೆಂಪೇಗೌಡ ಅಂತಾರಾ‍ಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ರಿಶ್ಚಿಯನ್ ಹಬ್ಬಗಳನ್ನು ಮಾತ್ರ ಆಚರಿಸಲಾಗುತ್ತಿದೆ, ಹಿಂದೂ ಹಬ್ಬಗಳನ್ನು ಆಚರಿಸುವುದಿಲ್ಲ ಎಂಬ ಟ್ವೀಟೊಂದು ಇತ್ತೀಚೆಗೆ ವೈರಲ್ ಆಗುತ್ತಿದೆ. ಆದರೆ ಈ ಟ್ವೀಟ್‌ನಲ್ಲಿರುವ ಅಂಶಗಳು ಎಷ್ಟು ನಿಜ? ಈ ಕುರಿತ ಸತ್ಯಾಂಶ ಇಲ್ಲಿದೆ

ಬೆಂಗಳೂರು ಕೆಂಪೇಗೌಡ ಅಂತಾರಾ‍ಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇವಲ ಕ್ರಿಶ್ಚಿಯನ್ ಧಾರ್ಮಿಕ ಹಬ್ಬಗಳನ್ನು ಆಚರಿಸಲಾಗುತ್ತಿದೆ, ಹಿಂದೂ ಹಬ್ಬಗಳಾದ ರಾಮನವಮಿ, ದಸರಾ, ದೀಪಾವಳಿಯಂತಹ ಹಬ್ಬಗಳನ್ನು ಆಚರಿಸುವುದಿಲ್ಲ ಎಂಬ ಟ್ವೀಟೊಂದು ಇತ್ತೀಚೆಗೆ ವೈರಲ್ ಆಗುತ್ತಿದೆ. ಆದರೆ, ಈ ನಿಜವಾಗಿಯೂ ಕೆಂಪೇಗೌಡ ನಿಲ್ದಾಣದಲ್ಲಿ ಯಾವ್ಯಾವ ಹಬ್ಬಗಳನ್ನು ಆಚರಿಸಲಾಗುತ್ತಿದೆ ಎಂಬುದನ್ನು ‘ಬೂಮ್‌ ಲೈವ್’ ಜಾಲತಾಣ ಬಹಿರಂಗಪಡಿಸಿದೆ.

ನೋ ಕನ್ವರ್ಷನ್ (@noconversion) ಹೆಸರಿನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಕಳೆದ ತಿಂಗಳು ಜು.೨೮ರಂದು ಕೆಂಪೇಗೌಡ ವಿಮಾನ ನಿಲ್ದಾಣದ ಕುರಿತಾಗಿ ‘ಸೀಸನ್ ಆಫ್ ಸ್ಮೈಲ್ಸ್’ ಎಂದು ಒಂದು ಲೇಖನವನ್ನು ಟ್ವೀಟ್ ಮಾಡಲಾಗಿತ್ತು. ವರ್ಷಾಂತ್ಯದಲ್ಲಿ ೧೦ ದಿನಗಳ ಕಾಲ ನಡೆಯುವ ಹಬ್ಬದಲ್ಲಿ ಮನುಷ್ಯಾಕೃತಿಯ ನಿಲುಕಂಬಗಳು, ಸಾಂತಾಕ್ಲಾಸ್‌ ಚಿತ್ರಗಳು ಇದ್ದವು. ಆ ಟ್ವೀಟನ್ನು ಕ್ರಿಶ್ಚಿಯನ್ ಧರ್ಮ ವಿರೋಧಿಯೊಬ್ಬರು ಹಂಚಿಕೊಂಡಿದ್ದರು. ಲೇಖನದಲ್ಲಿ ‘ಬ್ಯುಸಿನೆಸ್‌ ಲೈನ್’ ಪತ್ರಿಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದ ‘ಸೀಸನ್‌ ಆಫ್ ಸ್ಮೈಲ್ಸ್’ ಕಾರ್ಯಕ್ರಮದ ವರದಿ ಇದೆ. ಅದನ್ನು ಪೂರಕ ಮಾಹಿತಿಯಾಗಿ ಇಟ್ಟುಕೊಂಡು ಕ್ರಿಸ್ಚಿಯನ್ ವಿರೋಧಿ ಟ್ವೀಟನ್ನು ಹರಿಬಿಡಲಾಗಿದೆ.

ಟ್ವೀಟ್‌ನಲ್ಲಿ, “ಕ್ರಿಶ್ಚಿಯನ್ ಧರ್ಮವನ್ನು ಉತ್ತೇಜಿಸಲು ಸಾರ್ವಜನಿಕ ಹಣವನ್ನು ಏಕೆ ಉಪಯೋಗಿಸುತ್ತಿದ್ದೀರಿ? ಬೆಂಗಳೂರು ವಿಮಾನ ನಿಲ್ದಾಣವು ಕ್ರಿಸ್‌ಮಸ್ ಹಬ್ಬವನ್ನು ಮಾತ್ರ ಆಚರಿಸುತ್ತದೆ, ಕೃಷ್ಣ ಜನ್ಮಾಷ್ಠಮಿ, ರಾಮನವಮಿ, ದೀಪಾವಳಿ ಹಬ್ಬಗಳನ್ನು ಆಚರಿಸುವುದಿಲ್ಲ,” ಎಂದು ಬರೆದುಕೊಂಡಿದ್ದಾರೆ. ಹಾಗೆ ಬರೆದುಕೊಂಡ ಟ್ವೀಟ್ ೫೩೭ ರೀಟ್ವೀಟ್ ಆಗಿದ್ದು, ೬೦೦ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.

ನೋ ಕನ್ವರ್ಷನ್ ಟ್ವಿಟ್ಟರ್ ಹ್ಯಾಂಡಲ್‌ ೨೦೧೪ರ ಸೆ.೨೧ರಲ್ಲಿ ಅಕೌಂಟ್ ಓಪನ್ ಆಗಿದ್ದು, ೯೬,೦೦೦ ಜನ ಫಾಲೋವರ್‌ಗಳಿದ್ದಾರೆ. ಈ ಹ್ಯಾಂಡಲ್‌ನಿಂದ ಕ್ರಿಶ್ಚಿಯನ್ ವಿರೋಧಿ ಟ್ವೀಟ್‌ಗಳೇ ಹೆಚ್ಚು ಟ್ವೀಟ್ ಆಗಿವೆ.

‘ಬೂಮ್ ಲೈವ್‌’ ತಂಡ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ವೈರಲ್ ಆಗುತ್ತಿರುವ ಟ್ವೀಟ್ ಕುರಿತಾಗಿ ಅಭಿಪ್ರಾಯ ಕಲೆ ಹಾಕಿದೆ. ನಿಲ್ದಾಣದ ಅಧಿಕಾರಿಗಳು ಮಾತನಾಡಿ, “ಸಾಂಸ್ಕೃತಿಕ ಬೇರುಗಳ ಭಾಗವಾಗಿರುವ ಬೆಂಗಳೂರು ವಿಮಾನ ನಿಲ್ದಾಣವು ಯಾವುದೇ ಒಂದು ಸಮುದಾಯದ ನಂಬಿಕೆಗಳ ಜೊತೆ ಗುರುತಿಸಿಕೊಂಡಿಲ್ಲ. ಇಲ್ಲಿ ಎಲ್ಲ ಹಬ್ಬಗಳನ್ನು ಆಚರಿಸಲಾಗುತ್ತಿದೆ. ದಸರಾ, ದೀಪಾವಳಿ ಹಬ್ಬಗಳ ಸಮಯದಲ್ಲಿ ಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ,” ಎಂದಿದ್ದಾರೆ

"ದಸರಾ ಕರ್ನಾಟಕದ ನಾಡಹಬ್ಬವಾಗಿದೆ. ಈ ಸಂದರ್ಭದಲ್ಲಿ ಮೈಸೂರಿನಲ್ಲಿ 9 ದಿನಗಳ ಆಚರಣೆ ಇರುತ್ತದೆ. ಅದೇ ರೀತಿ, ಇಲ್ಲಿಯೂ 9 ದಿನಗಳ ಕಾಲ ಉತ್ಸವ ಆಚರಿಸಲಾಗುತ್ತದೆ. ೨೦೧೭ರಲ್ಲಿ ‘ಗೊಂಬೆ ಹಬ್ಬ’ ಎಂದು ಹೆಸರಿಸಿ ದುರ್ಗೆಯ 9 ಅವತಾರಗಳನ್ನು ಪ್ರತಿಮೆ ಮಾಡಿ ಪ್ರದರ್ಶನ ಮಾಡಲಾಗಿತ್ತು. ೨೦೧೬ರಲ್ಲಿ ದಸರಾ ಹಬ್ಬದಂದು 9 ದಿನಗಳ ಕಾಲ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಲ್ಲದೆ, ೧೩.೫ ಅಡಿ ಎತ್ತರದ ದಸರಾ ಜಂಬೂ ಸವಾರಿಯ ತದ್ರೂಪವನ್ನು ಮಾಡಿ ಪ್ರದರ್ಶನಕ್ಕಿಡಲಾಗಿತ್ತು,” ಎಂದೂ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಫೇಕ್‌ ನ್ಯೂಸ್‌ ತಡೆಗೆ ನೋಂದಣಿ ತಂತ್ರಕ್ಕೆ ಮೊರೆಹೋದ ಜಮ್ಮು-ಕಾಶ್ಮೀರ

ವಾರ್ಷಿಕ ಹಬ್ಬ ‘ಸೀಸನ್ ಆಫ್ ಸ್ಮೈಲ್ಸ್’ ಬಗ್ಗೆ ಮಾತನಾಡಿ, “ಅದೊಂದು ಶಾಂಪಿಂಗ್ ಫೆಸ್ಟಿವಲ್, ರಜೆ ದಿನಗಳಲ್ಲಿ ಅಂದರೆ, ಡಿಸೆಂಬರ್ ಕ್ರಿಸ್ಮಸ್ ಸಮಯದಲ್ಲಿ ಜನರು ಶಾಂಪಿಗ್‌ ಮಾಡಲು ಆಯೋಜಿಸಿದ ಕಾರ್ಯಕ್ರಮ. ಯಾವಾಗಲೂ ಹತ್ತು ದಿನಗಳ ಕಾಲ ನಡೆಯುವ ಶಾಪಿಂಗ್ ಫೆಸ್ಟಿವಲ್ ಕ್ರಿಸ್ಮಸ್ ಹಬ್ಬದ ಸಹಯೋಗದಲ್ಲಿ ನಡೆಯುತ್ತದೆ,” ಎಂದು ಹೇಳಿದ್ದಾರೆ.

ವೈರಲ್ ಆಗುತ್ತಿರುವ ಸುಳ್ಳು ಸುದ್ದಿಗೆ ಪ್ರತಿಯಾಗಿ ಕೆಂಪೇಗೌಡ ನಿಲ್ದಾಣದ ಅಧಿಕಾರಿಗಳು ಈವರೆಗೆ ಆಚರಿಸಿದ ಹಬ್ಬಗಳ ಕೆಲ ಫೋಟೋಗಳನ್ನು ‘ಬೂಮ್‌ಲೈವ್’ ಸುದ್ದಿತಾಣಕ್ಕೆ ನೀಡಿದ್ದಾರೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More