ಗುಂಡಿನ ದಾಳಿ ನಡೆದಾಗ ಉಮರ್ ಖಾಲಿದ್ ಸ್ಥಳದಲ್ಲಿ ಇರಲಿಲ್ಲ ಎಂಬ ಸುದ್ದಿ ನಿಜವೇ?

ದೆಹಲಿಯ ಸಂಸದ್ ಮಾರ್ಗ್ ಪ್ರದೇಶದಲ್ಲಿರುವ ಕಾನ್ಸ್ಟಿಟ್ಯೂಷನ್ ಕ್ಲಬ್ ಬಳಿ ನಡೆದ ಗುಂಡಿನ ದಾಳಿಯ ಸಂದರ್ಭದಲ್ಲಿ , ದೆಹಲಿಯ ಜವಹರಲಾಲ್ ನೆಹರೂ ವಿವಿ ವಿದ್ಯಾರ್ಥಿ ಉಮರ್ ಖಾಲಿದ್ ಸ್ಥಳದಲ್ಲೇ ಇರಲಿಲ್ಲ ಎಂದಿರುವ ಓಪಿಂಡಿಯಾ, ಮೈನೇಷನ್ ಮತ್ತು ಪೋಸ್ಟ್ ಕಾರ್ಡ್ ಸುದ್ದಿಗಳು ನಿಜವೇ?

ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಉಮರ್ ಖಾಲಿದ್ ಮೇಲೆ ಆಗಸ್ಟ್ 13ರಂದು ಅಪರಿಚಿತ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಘಟನೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ. ದೆಹಲಿಯ ಸಂಸದ್ ಮಾರ್ಗ್ ಪ್ರದೇಶದಲ್ಲಿರುವ ಕಾನ್ಸ್ಟಿಟ್ಯೂಷನ್ ಕ್ಲಬ್ ಬಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೊರಬರುತ್ತಿದ್ದ ಖಾಲಿದ್ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿ ಬಳಿಕ ಪರಾರಿಯಾಗಿದ್ದ. ಅದೃಷ್ಟವಶಾತ್ ಖಾಲಿದ್ ಅಪಾಯದಿಂದ ಪಾರಾಗಿದ್ದರು. ಪ್ರಕರಣದ ಕುರಿತಂತೆ ಪೊಲೀಸರು ಕೂಡ ಸ್ಪಷ್ಟನೆ ನೀಡಿ, ಖಾಲಿದ್ ಮೇಲೆ ಗುಂಡಿನ ದಾಳಿ ನಡೆದಿರುವುದು ನಿಜವೆಂದೂ, ತನಿಖೆ ಕೈಗೊಂಡಿರುವುದಾಗಿಯೂ ಹೇಳಿದ್ದಾರೆ.

ಇಷ್ಟೆಲ್ಲ ಆದರೂ, ಓಪಿಂಡಿಯಾ, ಮೈನೇಷನ್ ಮತ್ತು ಪೋಸ್ಟ್ ಕಾರ್ಡ್ ಸುದ್ದಿತಾಣಗಳು ಮಾತ್ರ ಸುಳ್ಳುಸುದ್ದಿಯನ್ನು ಪ್ರಕಟಿಸಿವೆ. ಈ ಮೂರು ಸುದ್ದಿಮಾಧ್ಯಮಗಳು ಕೂಡ, 'ಗುಂಡಿನ ದಾಳಿ ನಡೆದ ಸಂದರ್ಭದಲ್ಲಿ ಖಾಲಿದ್ ಸ್ಥಳದಲ್ಲಿ ಇರಲೇ ಇಲ್ಲ' ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿವೆ.

"ಗುಂಡಿನ ದಾಳಿ ನಡೆದ ಸಂದರ್ಭದಲ್ಲಿ ಉಮರ್ ಖಾಲಿದ್ ಆ ಸ್ಥಳದಲ್ಲಿ ಇರಲಿಲ್ಲ. ದಾಳಿ ನಡೆದ ಬಳಿಕವಷ್ಟೇ ಅವರು ಕಾನ್ಸ್ಟಿಟ್ಯೂಷನ್ ಕ್ಲಬ್ ಹೊರಗೆ ಬಂದಿದ್ದಾರೆ,” ಎಂದು ‘ದೈನಿಕ್ ಭಾಸ್ಕರ್’ ಪತ್ರಿಕೆಯ ವರದಿಗಾರ ಹಾಗೂ ಘಟನೆಯ ಪ್ರತ್ಯಕ್ಷದರ್ಶಿ ಸಂತೋಷ್ ಕುಮಾರ್ ಹೇಳಿಕೆ ನೀಡಿದ್ದಾರೆ ಎಂದು ಎಬಿಪಿ ಪತ್ರಕರ್ತ ವಿಕಾಸ್ ಭುಡೋರಿಯಾ ಸುದ್ದಿ ಮಾಡಿದ್ದು, ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಸುದ್ದಿಯ ಕುರಿತಂತೆ ಸಾಕಷ್ಟು ಗೊಂದಲ ಸೃಷ್ಟಿಯಾಗಿದ್ದರಿಂದ, ‘ಆಲ್ಟ್ ನ್ಯೂಸ್’ ತಂಡ, ಉಮರ್ ಖಾಲಿದ್ ಅವರನ್ನು ಸಂಪರ್ಕಿಸಿದೆ. ಈ ಸಂದರ್ಭ ಪ್ರತಿಕ್ರಿಯೆ ನೀಡಿರುವ ಖಾಲಿದ್, “ಕಾನ್ಸ್ಟಿಟ್ಯೂಷನ್ ಕ್ಲಬ್ ಹೊರಭಾಗದಲ್ಲಿರುವ ಟೀ ಸ್ಟಾಲ್ ಬಳಿ ಈ ಘಟನೆ ನಡೆದಿದ್ದು, ನಾನು ಕ್ಲಬ್‌ನಿಂದ ಹೊರಬರುತ್ತಿದ್ದಂತೆ ವ್ಯಕ್ತಿಯೊಬ್ಬ ನನ್ನ ಹಿಂದಿನಿಂದ ಬಂದು, ಕತ್ತನ್ನು ಹಿಡಿದುಕೊಂಡು ನನ್ನ ಮೇಲೆ ಬಲಪ್ರಯೋಗ ಮಾಡಿದ. ಹೀಗಾಗಿ ನಾನು ಆಯತಪ್ಪಿ ಕೆಳಗೆ ಬಿದ್ದೆ. ಬಳಿಕ ಅಪರಿಚಿತ ವ್ಯಕ್ತಿ ನನ್ನ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದ. ಆತನ ಗುರಿಯಿಂದ ನಾನು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದೆ. ಈ ಸಂದರ್ಭ ನನ್ನ ಸಹಾಯಕ್ಕೆ ಸ್ನೇಹಿತರೂ ಧಾವಿಸಿದರು. ಹೀಗಾಗಿ ಆ ವ್ಯಕ್ತಿ ಅಲ್ಲಿಂದ ಓಡಿಹೋದ,” ಎಂದು ವಿವರಣೆ ನೀಡಿದ್ದಾರೆ.

ಇದಾದ ಬಳಿಕ, ಈ ಹಿಂದೆ ಹೇಳಿಕೆ ನೀಡಿದ್ದ ಸಂತೋಷ್ ಕುಮಾರ್, ವಿಡಿಯೋವೊಂದನ್ನು ಟ್ವೀಟ್ ಮಾಡಿ, "ಗುಂಡಿನ ದಾಳಿಯ ಸಂದರ್ಭದಲ್ಲಿ ಕೆಳಗೆ ಬಿದ್ದ ವ್ಯಕ್ತಿ ಉಮರ್ ಹೌದೋ ಅಲ್ಲವೋ ಎಂಬುದು ನನಗೆ ತಿಳಿದಿಲ್ಲ,” ಎಂದು ಸ್ಪಷ್ಟನೆ ನೀಡಿದ್ದಾರೆ.

ಪ್ರತ್ಯಕ್ಷದರ್ಶಿಯ ಹೇಳಿಕೆ ಆಧರಿಸಿ ಸುದ್ದಿ ಮಾಡಿದ್ದ ಓಪ್ ಇಂಡಿಯಾ, ಮೈ ನೇಷನ್ ಮತ್ತು ಪೋಸ್ಟ್ ಕಾರ್ಡ್ ನ್ಯೂಸ್, ಆತ ಸ್ಪಷ್ಟನೆ ನೀಡಿದ ಬಳಿಕವೂ, ಘಟನೆಯ ಕುರಿತಂತೆ ಮಾಡಿದ್ದ ಸುದ್ದಿಯನ್ನು ಬದಲಿಸುವ ಪ್ರಯತ್ನ ಮಾಡಿಲ್ಲ!

ಮತ್ತೊಂದೆಡೆ, ಖಾಲಿದ್ ಮೇಲೆ ಗುಂಡಿನ ದಾಳಿ ನಡೆಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ದೆಹಲಿ ಪೊಲೀಸರು, ಶಸ್ತ್ರಾಸ್ತ್ರ ಕಾಯ್ದೆ 307 ಡಿ ದೂರು ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಈ ನಡುವೆ, ಗುಂಡಿನ ದಾಳಿ ನಡೆದ ಸಂದರ್ಭದಲ್ಲಿ ಖಾಲಿದ್ ಸ್ಥಳದಲ್ಲಿ ಇರಲಿಲ್ಲ ಎಂದು ಹೇಳಿಕೆ ನೀಡಿದ್ದ ಪ್ರತ್ಯಕ್ಷದರ್ಶಿ ಸಂತೋಷ್ ಕುಮಾರ್ ಹೇಳಿಕೆ 25 ಸಾವಿರ ವ್ಯೂ ಹಾಗೂ 3 ಸಾವಿರ ಶೇರ್ ಆಗಿದ್ದರೆ, ಸ್ಪಷ್ಟನೆ ನೀಡಿ ಪೋಸ್ಟ್ ಮಾಡಿರುವ ವಿಡಿಯೋ ಕೇವಲ 184 ಬಾರಿಯಷ್ಟೇ ರೀಟ್ವೀಟ್ ಆಗಿದೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More