ವಾಜಪೇಯಿ ಅವರಿಗೆ ಏಮ್ಸ್ ವೈದ್ಯರ ಅಂತಿಮ ನಮನದ ಫೋಟೊ ಅಸಲಿ ಅಲ್ಲ!

ಮಾಜಿ ಪ್ರಧಾನಿ ವಾಜಪೇಯಿ ಮರಣದ ನಂತರ ‘ಜೀ’ ಸುದ್ದಿಸಂಸ್ಥೆ ಲೇಖನವೊಂದನ್ನು ಪ್ರಕಟಿಸಿದೆ. ಲೇಖನದಲ್ಲಿರುವ, ಏಮ್ಸ್ ಆಸ್ಪತ್ರೆಯ ಹಿರಿಯ ವೈದ್ಯರು ವಾಜಪೇಯಿ ಅವರಿಗೆ ಅಂತಿಮ ಗೌರವ ಸಲ್ಲಿಸುತ್ತಿರುವ ದೃಶ್ಯ ಎಂದು ಹೇಳಲಾದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಮರಣದ ನಂತರ ‘ಜೀ’ ಸುದ್ದಿಸಂಸ್ಥೆಯು ಲೇಖನವೊಂದನ್ನು ಪ್ರಕಟಿಸಿದೆ. ಲೇಖನದಲ್ಲಿರುವ, ಏಮ್ಸ್ ಆಸ್ಪತ್ರೆಯ ಹಿರಿಯ ವೈದ್ಯರು ವಾಜಪೇಯಿ ಅವರಿಗೆ ಅಂತಿಮ ಗೌರವ ಸಲ್ಲಿಸುತ್ತಿರುವ ದೃಶ್ಯ ಎಂದು ಹೇಳಲಾದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂತೆಯೇ, ‘ಡಿಎನ್‌ಎ’ ಸುದ್ದಿತಾಣವು ಅದೇ ಅರ್ಥದಲ್ಲಿ ಚಿತ್ರ ಬಳಸಿಕೊಂಡು ಸುದ್ದಿ ಪ್ರಕಟಿಸಿದೆ. ಚಿತ್ರದಲ್ಲಿರುವುದು ಏಮ್ಸ್ ಆಸ್ಪತ್ರೆಯ ವೈದ್ಯರು ಎಂದು ಬರೆದು ಟ್ವೀಟ್ ಕೂಡ ಮಾಡಿದೆ. ಆದರೆ, ಆ ಚಿತ್ರದ ಸುತ್ತ ಹುಟ್ಟಿಕೊಂಡಿರುವ ಅನುಮಾನಗಳನ್ನು ‘ಆಲ್ಟ್ ನ್ಯೂಸ್’ ಬಹಿರಂಗಪಡಿಸಿದೆ.

ಕನ್ನಡ ಮಾಧ್ಯಮಗಳಲ್ಲೂ ಈ ಫೋಟೊ ಬಳಸಿಕೊಂಡು ಸುದ್ದಿ ಮಾಡಲಾಗಿದೆ. ‘ಕನ್ನಡಪ್ರಭ’ ಪತ್ರಿಕೆಯು, “ಕಳೆದ ೯ ವಾರಗಳಿಂದ ತಾವೇ ಚಿಕಿತ್ಸೆ ನೀಡಿದ್ದ ಮಾಜಿ ಪ್ರಧಾನಿ ಅಟಲ್ ಗುರುವಾರ ನಿಧನರಾದ ಬಳಿಕ, ಅವರಿಗೆ ಚಿಕಿತ್ಸೆ ನೀಡಿದ ಏಮ್ಸ್ ವೈದ್ಯರು ಒಂದಾಗಿ ನಿಂತು ನಮನ ಸಲ್ಲಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ,” ಎಂದು ಚಿತ್ರವನ್ನು ಬಳಸಿಕೊಂಡಿದೆ.

ಚೀನಾ ಮೂಲದ ಫೋಟೋ

ಏಮ್ಸ್ ಆಸ್ಪತ್ರೆಯ ವೈದ್ಯರ ಅಂತಿಮ ನಮನ ಎಂದು ಹೇಳಲಾದ ಆ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿರುವುದು ಭಾರತದ ವೈದ್ಯರು ಅಲ್ಲ ಎಂದು ತಿಳಿದಿದೆ. ೨೦೧೨ರಲ್ಲಿ ಚೀನಾ ಮಹಿಳೆಯೊಬ್ಬರು ತನ್ನ ಅಂಗಾಂಗಗಳನ್ನು ದಾನ ಮಾಡಿದ್ದರ ಗೌರವಾರ್ಥವಾಗಿ ಚೀನಾ ಆಸ್ಪತ್ರೆಯೊಂದರ ವೈದ್ಯರು ನಮಿಸಿದ್ದ ಸಂದರ್ಭದ ಚಿತ್ರವದು. ಆಕೆಯ ಅಂಗಾಂಗಗಳನ್ನು ಗುವಾಂಗ್ಡಾಂಗ್ ಪ್ರಾಂತ್ಯದ ೧೭ ವರ್ಷದ ವು ಹುಯಾಜಿಂಗ್ ಎಂಬ ಮಹಿಳೆಗೆ ದಾನವಾಗಿ ನೀಡಲಾಯಿತು ಎಂದು ‘ಆಲ್ಟ್ ನ್ಯೂಸ್’ ವರದಿ ಮಾಡಿದೆ.

ಇದನ್ನೂ ಓದಿ : ಜಿನ್ನಾರನ್ನು ಮರೆತ ದಲಾಯ್‌ ಲಾಮಾ ನೆಹರು ಬಗ್ಗೆ ಸುಳ್ಳು ಹೇಳಿದರೇ?

ಈ ಸುಳ್ಳು ಸುದ್ದಿಯನ್ನು ಪ್ರಕಟಿಸಿದ ‘ಡಿಎನ್‌ಎ’ ಹಾಗೂ ‘ಜೀ’ ಸುದ್ದಿಸಂಸ್ಥೆಗಳು ಸುದ್ದಿಯನ್ನು ಮರು ಪ್ರಕಟಿಸಿವೆ ಹಾಗೂ ‘ಡಿಎನ್‌ಎ’ ಸುದ್ದಿತಾಣವು ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೊ ಹೊಂದಿದ ಟ್ವೀಟನ್ನು ಡಿಲಿಟ್ ಮಾಡಿದೆ.

‘ಜೀ’ ಸುದ್ದಿಸಂಸ್ಥೆ ಮರುಪ್ರಕಟಿಸಿದ ಸುದ್ದಿಯಲ್ಲಿ, “ವಾಜಪೇಯಿ ಅವರಿಗೆ ಕೊನೆಯ ನಮನ ಸಲ್ಲಿಸುತ್ತಿರುವ ಏಮ್ಸ್‌ ವೈದ್ಯರು. ಆದರೆ ಫೋಟೋ ಬೇರೆನೋ ಹೇಳುತ್ತಿದೆ. ಅದರ ಹಿಂದಿನ ಸತ್ಯವೇ ಬೇರೆ ಇದೆ,” ಎಂದು ಬದಲಾಯಿಸಿದೆ ಹಾಗೂ ತಮ್ಮ ತಪ್ಪಿಗೆ ಕ್ಷಮೆ ಯಾಚಿಸಿದೆ.

ಇನ್ನು ‘ಡಿಎನ್‌ಎ’ ಸುದ್ದಿತಾಣದ ಪರಿಷ್ಕೃತ ಲೇಖನದಲ್ಲಿ, ಚಿತ್ರವನ್ನು ಪರಿಶೀಲಿಸಲು ಪ್ರಯತ್ನಿಸಿಲ್ಲ ಎಂದು ತಪ್ಪನ್ನು ಒಪ್ಪಿಕೊಳ್ಳಲಾಗಿದೆ.

ವಾಜಪೇಯಿ ಅವರ ಮರಣ ವಾರ್ತೆ ಅಧಿಕೃತವಾಗಿ ವೈದ್ಯರ ಮೂಲಕ ಬೆಳಕಿಗೆ ಬರುವ ಮುನ್ನವೇ ಮುಖ್ಯವಾಹಿನಿ ಮಾಧ್ಯಮಗಳು ‘ವಾಕಪೇಯಿ ಇನ್ನಿಲ್ಲ’ ಎಂಬ ಸುಳ್ಳು ಸುದ್ದಿಯನ್ನು ಹರಡಿದ್ದನ್ನು ಸ್ಮರಿಸಬಹುದು.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More