ರಾಖಿ ಕಟ್ಟಿದ ಮಹಿಳೆ ಮೇಲೆ ಕಾಂಗ್ರೆಸ್ ನಾಯಕ ಹಲ್ಲೆ ನಡೆಸಿದ್ದು ನಿಜವೇ?

ರಾಖಿ ಕಟ್ಟಿದ ಕಾರಣಕ್ಕಾಗಿ ಮಹಿಳೆಯೊಬ್ಬರ ಮೇಲೆ ಉ.ಪ್ರದೇಶದ ಮುಸ್ಲಿಂ ಕಾಂಗ್ರೆಸ್ ನಾಯಕ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಕುರಿತಂತೆ ಸ್ಪಷ್ಟನೆ ನೀಡಿರುವ ಉ.ಪ್ರದೇಶ ಪೊಲೀಸರು, ಘಟನೆ ಕುರಿತು ವಿವರಿಸಿದ್ದಾರೆ

ಒಂದು ಫೋಟೋದಲ್ಲಿ ಸೋದರ ಭಾಂದವ್ಯ ಬೆಸೆಯುವ ರಾಖಿ ಕಟ್ಟುತ್ತಿರುವ ಮಹಿಳೆ ಮತ್ತೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಹಾಸಿಗೆ ಮೇಲೆ ಮಲಗಿರುವ ಯುವತಿ; 'ರಾಖಿ ಕಟ್ಟಿದ ಕಾರಣಕ್ಕಾಗಿ ಮಹಿಳೆಯೊಬ್ಬರ ಮೇಲೆ ಉತ್ತರ ಪ್ರದೇಶದ ಮುಸ್ಲಿಂ ಕಾಂಗ್ರೆಸ್ ನಾಯಕ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ' ಎಂಬ ಶೀರ್ಷಿಕೆಯಡಿಯಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋಶಾಪ್ ಮಾಡಿರುವ ಈ ಫೋಟೋ ಆತಂಕ ಸೃಷ್ಟಿಸಿದೆ.

ಉತ್ತರ ಪ್ರದೇಶದ ಗೊಂಡಾದ ನಿವಾಸಿಯಾಗಿರುವ ನಿರು ಗೌತಮ್, ಕಾಂಗ್ರೆಸ್ ನಾಯಕ ಗಾಫೂರ್ ಖಾನ್ ಅವರನ್ನು ತನ್ನ ಸಹೋದರನಂತೆ ಎಂದು ಭಾವಿಸಿ ರಾಖಿಯನ್ನು ಕಟ್ಟುತ್ತಾರೆ. ಆದರೆ, ಆಗಸ್ಟ್ 27ರಂದು ಆಕೆಯನ್ನು ಕೆಲಸದ ನಿಮಿತ್ತ ಬರಹೇಳಿದ ಗಾಫೂರ್, ಆಕೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಸುದ್ದಿಯೂ ಈ ಫೋಟೋದೊಂದಿಗೆ ಹರಿದಾಡಿ, ಗೊಂದಲಕ್ಕೆ ಎಡೆಮಾಡಿಕೊಟ್ಟಿತು.

ಪೊಲೀಸರ ಸ್ಪಷ್ಟನೆ

ಸಾಮಾಜದಲ್ಲಿ ಸಾಮರಸ್ಯ ಕದಡುವಂತಿರುವ ಈ ಸುದ್ದಿಯ ಕುರಿತಂತೆ ಎಚ್ಚೆತ್ತ ಉತ್ತರ ಪ್ರದೇಶದ ಪೊಲೀಸರು, ಈ ಕುರಿತಂತೆ ತನಿಖೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋ 2016ರ ನವೆಂಬರ್ 21ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ರೈಲು ಅಪಘಾತದಲ್ಲಿ ಗಾಯಗೊಂಡ ಮಹಿಳೆಯದ್ದಾಗಿದೆ. ರಾಖಿ ಕಟ್ಟಿದ ಕಾರಣಕ್ಕಾಗಿ ಯಾವುದೇ ಮಹಿಳೆ ಮೇಲೆ ಹಲ್ಲೆ ನಡೆದ ಪ್ರಸಂಗ ಉತ್ತರ ಪ್ರದೇಶದಲ್ಲಿ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ತಿರುಚಿದ ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದ ಸುದ್ದಿಯ ಬೆನ್ನುಹತ್ತಿದ ‘ಆಲ್ಟ್ ನ್ಯೂಸ್’ ತಂಡ, ಗೂಗಲ್ ಸಹಾಯದಿಂದ ಗಾಯಗೊಂಡ ಮಹಿಳೆಯ ಫೋಟೋವನ್ನು ಹುಡುಕಾಡಿದಾಗ, ರಾಖಿ ಕಟ್ಟುತ್ತಿರುವ ಮಹಿಳೆಯ ಫೋಟೋ 2018ರ ಆಗಸ್ಟ್ 7ರಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾಗಿತ್ತು. 'ಕೆಲವೊಂದು ಸಂಬಂಧಗಳು ಜಾತಿ, ಧರ್ಮವನ್ನೂ ಮೀರಿರುತ್ತದೆ. ಪ್ರೀತಿ ಮತ್ತು ದ್ವೇಷಕ್ಕೆ ಧರ್ಮವಿಲ್ಲ' ಎಂಬ ಶೀರ್ಷಿಕೆಯಡಿಯಲ್ಲಿ ಪೋಸ್ಟ್ ಆದ ಈ ಟ್ವೀಟ್ ಸಾಮಾಜಿಕ ಸಾಮರಸ್ಯವನ್ನು ಬೆಸೆಯುವ ಸಂದೇಶವನ್ನು ರವಾನಿಸಿತ್ತು.

ಹಲ್ಲೆಗೊಳಗಾದ ಮಹಿಳೆಯ ಫೋಟೋ 2016ರ ನವೆಂಬರ್ 21ರಲ್ಲಿ ಪ್ರಕಟವಾಗಿದ್ದು, ರೈಲಿನ 14 ಬೋಗಿಗಳು ಹಳಿತಪ್ಪಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡ ಮಹಿಳೆಯದ್ದಾಗಿದೆ ಎಂದು ‘ಆಲ್ಟ್ ನ್ಯೂಸ್’ ಕೂಡ ಸ್ಪಷ್ಟಪಡಿಸಿದೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More