ರಾಹುಲ್ ಗಾಂಧಿ ವಿರುದ್ಧ ಆರೋಪ ಮಾಡುವ ಭರದಲ್ಲಿ ಬೇಸ್ತುಬಿದ್ದ ಟ್ವೀಟಿಗರು

ಮಾನಸ ಸರೋವರ ಯಾತ್ರೆಯಲ್ಲಿ ರಾಹುಲ್ ಪಾಲ್ಗೊಂಡಿರುವ ಬಗ್ಗೆ ಅನುಮಾನಗಳಿದ್ದು, ಅವರು ಬಳಸಿರುವುದು ಅಂತರ್ಜಾಲದ ಫೋಟೊಗಳು ಎಂದು ಟ್ವೀಟಿಗರು ಆರೋಪಿಸಿದರು. ಆದರೆ, ನಿಜ ಏನೆಂಬ ಬಗ್ಗೆ ‘ಟೈಮ್ಸ್ ಆಫ್ ಇಂಡಿಯಾ’ ಮಾಡಿದ ಸತ್ಯಶೋಧನೆಯ ವರದಿಯ ಭಾವಾನುವಾದ ಇಲ್ಲಿದೆ

ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಂತರ್ಜಾಲದಲ್ಲಿ ಸರೋವರದ ಚಿತ್ರಗಳನ್ನು ಕದ್ದು ಪ್ರಕಟಿಸಿದ್ದಾರೆ ಎಂದು ಕೆಲವು ಟ್ವಿಟರ್ ಬಳಕೆದಾರರು ಆರೋಪಿಸಿದ್ದರು. ಯಾತ್ರೆಯ ವೇಳೆ ತೆಗೆದ ಫೋಟೊಗಳನ್ನು ರಾಹುಲ್ ಟ್ವೀಟ್ ಮಾಡುತ್ತಿದ್ದರು. ಮಾನಸ ಸರೋವರದ ಕೆಲವು ಚಿತ್ರಗಳನ್ನು ಪ್ರಕಟಿಸಿದ್ದ ರಾಹುಲ್, 'ಇಲ್ಲಿ ದ್ವೇಷ ಇಲ್ಲ' ಎಂಬ ಹೇಳಿಕೆ ಪ್ರಕಟಿಸಿದ್ದರು.

ಕೆಲವು ಗಂಟೆಗಳ ಬಳಿಕ ರಾಹುಲ್, ರಕಸ್ ತಾಲ್ ಸರೋವರದ ಎರಡು ಫೋಟೊಗಳನ್ನು ಟ್ವೀಟ್ ಮಾಡಿ, “ರಕಸ್ ತಾಲ್ ಸರೋವರ ಬೆರಗು ಹುಟ್ಟಿಸುವ ಸೌಂದರ್ಯ ಹೊಂದಿದೆ,” ಎಂದು ಉಲ್ಲೇಖಿಸಿದ್ದರು. ಆದರೆ, ಕೆಲವು ಟ್ವೀಟಿಗರು, “ಅಂತರ್ಜಾಲದಿಂದ ರಕಸ್ ತಾಲ್ ಸರೋವರದ ಫೋಟೊ ಪಡೆದು ರಾಹುಲ್ ಟ್ವೀಟ್ ಮಾಡಿದ್ದಾರೆ. ಅವರು ಯಾತ್ರೆಗೆ ಹೋಗಿರುವುದೇ ಅನುಮಾನ,” ಎಂದು ಆರೋಪಿಸಿದರು.

ವಿಕಾಸ್ ಪಾಂಡೆ @MODIfiedvikas ಎಂಬುವವರು ಮತ್ತೆ ಟ್ವೀಟ್ ಮಾಡಿ, “ನನ್ನ ಕಾಂಗ್ರೆಸ್ ಮಿತ್ರರು ನಾನು ಟ್ವೀಟ್ ಮಾಡಿರುವುದು ತಪ್ಪು ಎನ್ನುತ್ತಿದ್ದಾರೆ. ನನ್ನ ಶೋಧದ ಫಲ ಇಲ್ಲಿದೆ,” ಎನ್ನುತ್ತ ಸರೋವರದ ಫೋಟೊವೊಂದನ್ನು ಲಗತ್ತಿಸಿದ್ದರು.

ಬಿಜೆಪಿ ಮಹಿಳಾ ಮೋರ್ಚಾದ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ಪ್ರೀತಿ ಗಾಂಧಿ ಅವರು ವಿಕಾಸ್ ಪಾಂಡೆ ಪ್ರಕಟಿಸಿದ್ದ ಫೋಟೊವನ್ನೇ ಹಂಚಿಕೊಳ್ಳುತ್ತ, “ನೀವು ನಿಜವಾಗಿಯೂ ಮಾನಸ ಸರೋವರದಲ್ಲಿದ್ದೀರಾ ಅಥವಾ ಬೇರೆಲ್ಲಾದರೂ ಇರುವಿರಾ?” ಎಂದು ಪ್ರಶ್ನಿಸಿದ್ದರು.

ಸುಳ್ಳುಸುದ್ದಿಗಳನ್ನು ಹರಡುವ ಕುಖ್ಯಾತಿ ಪಡೆದಿರುವ ‘ಪೋಸ್ಟ್ ಕಾರ್ಡ್’ ಜಾಲತಾಣದ ಮುಖ್ಯಸ್ಥ ಮಹೇಶ್ ವಿಕ್ರಂ ಹೆಗ್ಡೆ ಕೂಡ, “ರಾಹುಲ್ ಗಾಂಧಿ ಅಂತರ್ಜಾಲದ ಚಿತ್ರಗಳನ್ನು ಟ್ವೀಟ್ ಮಾಡುತ್ತಿರುವುದೇಕೆ? ಅವರು ಬೇರೆಲ್ಲೋ ಇದ್ದುಕೊಂಡು ಮಾನಸ ಸರೋವರದಲ್ಲಿರುವಂತೆ ನಟಿಸುತ್ತಿದ್ದಾರಾ?” ಎಂದು ಪ್ರಶ್ನಿಸಿದ್ದರು.

@being_humor ಎಂಬ ಮತ್ತೊಬ್ಬ ಟ್ವೀಟಿಗ, “ಭಗವಂತನ ಹೆಸರಿನಲ್ಲಿ ಕೂಡ ಸುಳ್ಳು ಹೇಳುತ್ತಿದ್ದಾರೆ,” ಎಂದು ಆರೋಪಿಸುತ್ತ, ವಿಕಾಸ್ ಪಾಂಡೆ ಮತ್ತು ಪ್ರೀತಿ ಗಾಂಧಿ ಅವರ ಚಿತ್ರಗಳನ್ನು ಹಂಚಿಕೊಂಡಿದ್ದರು.

ವಿಕಾಸ್ ಪಾಂಡೆ ಟ್ವೀಟ್ 2,000 ಬಾರಿ ರೀಟ್ವೀಟ್ ಆಗಿದೆ. ಹತ್ತಿರ ಹತ್ತಿರ 3,000 ಲೈಕ್ ಪಡೆದಿದೆ. ಪ್ರೀತಿ ಗಾಂಧಿ ಅವರ ಟ್ವೀಟ್ 1,600 ಬಾರಿ ರೀಟ್ವೀಟ್ ಆಗಿದ್ದು, 1,600 ಲೈಕ್ ಪಡೆದಿದೆ. @being_humor ಅವರ ಟ್ವೀಟ್ 915 ಬಾರಿ ರೀಟ್ವೀಟ್ ಆಗಿದ್ದು, ಸುಮಾರು 1,300 ಲೈಕ್ ಗಳಿಸಿದೆ.

ನಿಜ ಪತ್ತೆಯಾಗಿದ್ದು ಹೀಗೆ…

ಟೈಮ್ಸ್ ಫ್ಯಾಕ್ಟ್ ಚೆಕ್ ತಂಡ ಗೂಗಲ್‌ನ ರಿವರ್ಸ್ ಇಮೇಜ್ ಶೋಧ ಬಳಸಿ ರಾಹುಲ್ ಗಾಂಧಿ ಅವರ ಎರಡೂ ಚಿತ್ರಗಳನ್ನು ಪರಿಶೀಲಿಸಿತು. ‘ಲೋಕತೇಜ್’ ಮತ್ತು ‘ದಿ ಇಂಡಿಯನ್ ಆವಾಜ್’ ಎಂಬ ವೆಬ್ ಪೋರ್ಟಲ್‌ಗಳು ರಾಹುಲ್ ಚಿತ್ರವನ್ನು ಯಥಾವತ್ ಪ್ರಕಟಿಸಿದ್ದವು. ‘ಅರ್ಥ್ ಟ್ರಿಪರ್’ ಎಂಬ ಜಾಲತಾಣ ವಿಕಾಸ್ ಪಾಂಡೆ ಛಾಯಾಚಿತ್ರ ಪ್ರಕಟಿಸಿತ್ತು. ರಾಹುಲ್ ಗಾಂಧಿ ಅವರ ಚಿತ್ರಗಳನ್ನು ಇದರೊಂದಿಗೆ ಹೋಲಿಸಿದಾಗ ವ್ಯತ್ಯಾಸಗಳು ಗೋಚರವಾಗಿವೆ. ಎರಡೂ ಫೋಟೊಗಳಲ್ಲಿ ಸಾಕಷ್ಟು ಹೋಲಿಕೆಗಳಿರುವುದು ನಿಜ. ಆದರೆ ಎರಡೂ ಫೋಟೊಗಳಲ್ಲಿರುವ ಮೋಡಗಳಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡುಬಂದಿವೆ. ಅಲ್ಲದೆ, ಜಸ್ಟ್ ಡಯಲ್ ಜಾಲತಾಣದಲ್ಲಿರುವುದು ರಾಹುಲ್ ಗಾಂಧಿ ಅವರದೇ ಅಕೌಂಟ್ ಎಂದು ದೃಢಪಟ್ಟಿದೆ.

ವಿಷಯ ತಿಳಿದು @being_humor ಅವರು ತಮ್ಮಿಂದ ತಪ್ಪಾಗಿರುವುದು ನಿಜ ಎಂದು ಹೇಳಿದ್ದಾರೆ. “ಈ ಚಿತ್ರ ಜಸ್ಟ್ ಡಯಲ್‌ನಲ್ಲಿರುವ ರಾಹುಲ್ ಗಾಂಧಿ ಪ್ರೊಫೈಲ್‌ನಿಂದ ಪ್ರಕಟವಾಗಿದೆ. ನನ್ನ ತಪ್ಪಿಗಾಗಿ ಕ್ಷಮೆ ಯಾಚಿಸುತ್ತೇನೆ ಮತ್ತು 500 ರೀಟ್ವೀಟ್ ಗಳನ್ನು ಪಡೆದಿರುವ ಟ್ವೀಟನ್ನು ಡಿಲೀಟ್ ಮಾಡುತ್ತಿದ್ದೇನೆ,” ಎಂದಿದ್ದಾರೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More