ಪ್ರಧಾನಿ ಮೋದಿ ಹೇಳಿದ ಮಾತನ್ನು ಹಿಟ್ಲರ್ ಕೂಡ ಆಡಿದ್ದನೆಂಬ ಪುಕಾರು ನಿಜವೇ?

“ನಾನು ಮಾಡಿದ್ದು ತಪ್ಪಿದ್ದಲ್ಲಿ ಯಾರೂ ಹೆದರದೆ ನನ್ನನ್ನು ಜೀವಂತ ಸುಟ್ಟುಹಾಕಿ,” ಎಂದು ಹಿಟ್ಲರ್ ಹೇಳಿದ್ದಾಗಿ, ಪ್ರಧಾನಿ ಮೋದಿಯವರೂ ಅಂತೆಯೇ ಭಾಷಣ ಮಾಡಿದ್ದಾರೆ ಎಂದು ಸುದ್ದಿ ಹರಡಲಾಗುತ್ತಿದೆ. ಆದರೆ, ಹಿಟ್ಲರ್ ನಿಜವಾಗಿಯೂ ಹಾಗೆ ಭಾಷಣ ಮಾಡಿದ್ದನೇ? ಇಲ್ಲಿದೆ ಉತ್ತರ

‘ಇತಿಹಾಸ ಮತ್ತೆ ಮರುಕಳಿಸುತ್ತಿದೆ’ ಎಂಬ ಅಡಿಬರಹದಲ್ಲಿ, ನಾಝಿ ನಾಯಕ ಅಡಾಲ್ಫ್ ಹಿಟ್ಲರ್ ೧೯೩೬ರಲ್ಲಿ ಮಾಡಿದ ಭಾಷಣದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. “ನಾನು ಮಾಡಿದ್ದು ತಪ್ಪಿದ್ದಲ್ಲಿ ಯಾರೂ ಹೆದರದೆ ನನ್ನನ್ನು ಜೀವಂತವಾಗಿ ಸುಟ್ಟುಹಾಕಿ,” ಎಂದು ಹಿಟ್ಲರ್ ಹೇಳಿದ್ದಾಗಿಯೂ, ಪ್ರಧಾನಿ ನರೇಂದ್ರ ಮೋದಿ ಅಂತೆಯೇ ಭಾಷಣ ಮಾಡಿದ್ದಾರೆ ಎಂದೂ ಸುದ್ದಿ ಹರಡಲಾಗುತ್ತಿದೆ. ಆದರೆ, ಹಿಟ್ಲರ್ ನಿಜವಾಗಿಯೂ ಆ ರೀತಿ ಭಾಷಣ ಮಾಡಿದ್ದನೇ ಎಂಬ ಅನುಮಾನಗಳಿಗೆ ಈಗ ತೆರೆಬಿದ್ದಿದೆ. ಅಂತಹ ಯಾವುದೇ ಭಾಷಣವನ್ನು ಹಿಟ್ಲರ್ ಮಾಡಿರಲಿಲ್ಲ ಎಂದು ತಿಳಿದುಬಂದಿದೆ.

ನೋಟು ರದ್ದತಿ ಘೋಷಣೆ ಮಾಡುವ ಸಮಯದಲ್ಲಿ ಪ್ರಧಾನಿ ಮೋದಿ, “೫೦ ದಿನಗಳ ಕಾಲಾವಕಾಶ ಕೊಡಿ, ನೋಟು ಅಮಾನ್ಯ ಒಂದು ವೇಳೆ ವಿಫಲಗೊಂಡರೆ ನನ್ನನ್ನು ನೀವು ಜೀವಂತವಾಗಿ ಸುಡಬಹುದು,” ಎಂದು ಭಾಷಣ ಮಾಡಿದ್ದನ್ನು ಹಾಗೂ ಹಿಟ್ಲರ್‌ನ ಒಂದು ಭಾಷಣವನ್ನು ತುಲನೆ ಮಾಡಿ ಸುಳ್ಳು ಸುದ್ದಿ ಹರಡಲಾಗುತ್ತಿದೆ.

ಹಿಟ್ಲರ್ ಭಾಷಣದ ವಿಡಿಯೋ, ರಾಷ್ಟ್ರೀಯ ಜನಹಿತ ಕಾಂಗ್ರೆಸ್ ಪಕ್ಷದ ರಾಜಕೀಯ ತಂತ್ರಗಾರ ಎಂದು ಹೇಳಿಕೊಂಡಿರುವ ಅಶ್ವಿನ್ ಮಾನೆ ಅವರಿಂದ ಸೆ.೭ರಂದು ರಾತ್ರಿ ೧೦ ಗಂಟೆಯ ಸುಮಾರಿಗೆ ಟ್ವೀಟ್ ಆಗಿದ್ದು ಆನಂತರ ೬೦೦ ಬಾರಿ ರಿಟ್ವೀಟ್ ಆಗಿದೆ. ಅದೇ ವಿಡಿಯೋ ಅಸ್ಸಾಂ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ಲಿಂದಲೂ ಟ್ವೀಟ್ ಆಗಿದೆ. ಅಲ್ಲದೆ, ಆ ವಿಡಿಯೋವನ್ನು ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಶಾಹಿದ್ ಸಿದ್ದಿಕಿ ಅವರು ಕೂಡ ಟ್ವಿಟ್ ಮಾಡಿಕೊಂಡಿದ್ದಾರೆ.

"ನಾನು ತಪ್ಪು ಮಾಡಿದರೆ ನನ್ನನ್ನು ಜೀವಂತವಾಗಿ ಸುಟ್ಟುಹಾಕಿ’ ಎಂದು ಹಿಟ್ಲರ್ 1935ರಲ್ಲಿ ಹೇಳಿದರು. ಆದರೆ ಹಿಟ್ಲರ್ ಸಾಯುವ ಮೊದಲು ಲಕ್ಷಾಂತರ ಜರ್ಮನರು, ರಷ್ಯನ್ನರು, ಇಟಾಲಿಯನ್ನರು, ಫ್ರೆಂಚ್, ಬ್ರಿಟಿಷ್ ಮತ್ತು ಯಹೂದಿಗಳು ಕೊಲ್ಲಲ್ಪಟ್ಟರು. ಸ್ವತಃ ಇತಿಹಾಸ ದುರಂತ ಪುನರಾವರ್ತಿಸುತ್ತಿದೆ,” ಎಂದು ಸಿದ್ಧಿಕಿ ಅವರು ಅಡಿಬರಹ ಬರೆದುಕೊಂಡಿದ್ದಾರೆ. ಆಮ್ ಆದ್ಮಿ ಪಕ್ಷದ ಬೆಂಬಲಿಗರಾದ ಆರತಿ (@aartic02) ಅವರು ಕೂಡ ವಿಡಿಯೋ ಟ್ವೀಟ್ ಮಾಡಿಕೊಂಡಿದ್ದು, ಅದು ಕೂಡ ೬೦೦ ಬಾರಿ ರಿಟ್ವೀಟ್ ಆಗಿದೆ. ಫೇಸ್‌ಬುಕ್‌ನಲ್ಲಿಯೂ ಹಲವಾರು ಜನರು ತಮ್ಮ ವೈಯಕ್ತಿಕ ಅಕೌಂಟ್‌ಗಳಿಂದ ಶೇರ್ ಮಾಡಿಕೊಂಡಿದ್ದು ೬೦೦೦ ಬಾರಿ ಶೇರ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಅಡಾಲ್ಫ್ ಭಾಷಣದಲ್ಲೇನಿದೆ?

ಹಿಟ್ಲರ್ ಮಾತಾಡಿದಂತೆ ಉಪಶೀರ್ಷಿಕೆಗಳೊಂದಿಗೆ ವಿಡಿಯೋವನ್ನು ಮರುಜೋಡಿಸಲಾಗಿದೆ, “ನಾನು ನನ್ನ ದೇಶದ ಸೇವೆಗಾಗಿ ಎಲ್ಲವನ್ನೂ ತೊರೆದಿದ್ದೇನೆ, ನಾನು ಇಲ್ಲಿ ಯಾವುದೇ ಸ್ಥಾನವನ್ನು ಅಲಂಕರಿಸಲು ಇಲ್ಲ, ಆದರೆ ನನಗೆ ಜವಾಬ್ದಾರಿಯಿದೆ. ದೇಶದ ಮುಂದಿನ ಭವಿಷ್ಯಕ್ಕಾಗಿ ನಾನು ತೆಗೆದುಕೊಂಡ ಕಾರ್ಯ ಯೋಜನೆಗಳ ಮೇಲೆ ನನ್ನ ಜವಾಬ್ದಾರಿ ಇದೆ. ನಾನೇನಾದರೂ ತಪ್ಪು ಮಾಡಿದ್ದಲ್ಲಿ ಯಾರು ಹೆದರಬೇಕಾಗಿಲ್ಲ, ಜೀವಂತವಾಗಿ ನನ್ನ ಸುಟ್ಟು ಬಿಡಿ,” ಎಂದು ಹೇಳಿರುವುದಾಗಿ ಭಾಷಣದ ವಿಡಿಯೋ ಸಬ್‌ಟೈಟಲ್‌ನಲ್ಲಿ ಇರುವ ಇಂಗ್ಲಿಷ್ ಅನುವಾದವನ್ನು ಅನುಸರಿಸಿ ಹೇಳಲಾಗಿದೆ.

೨೦೧೬ರಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣದಲ್ಲೇನಿದೆ?

ನವೆಂಬರ್ ೮, ೨೦೧೬ರಂದು ನೋಟು ಅಮಾನ್ಯೀಕರಣಗೊಳಿಸಿದ ಬಳಿಕ ಪ್ರಧಾನಿ ಮೋದಿಯವರು ಭಾವುಕ ಭಾಷಣವೊಂದನ್ನು ಮಾಡುತ್ತಾರೆ. ಆ ಭಾಷಣದಲ್ಲಿ ಅವರು ನೋಟು ಅಮಾನ್ಯೀಕರಣ ಅಥವಾ ನೋಟು ರದ್ದತಿ ಕುರಿತಾಗಿ ದೇಶದಲ್ಲಿ ಆಗುವ ಬದಲಾವಣೆಗೆ ಹಾಗೂ ಯಶಸ್ಸಿಗೆ ಸಮಯಾವಕಾಶ ಹಾಗೂ ಅದಕ್ಕೆ ಪ್ರತಿಯಾಗಿ ಶಿಕ್ಷೆಯ ಕುರಿತಾಗಿ ಮಾತಾಡುತ್ತಾರೆ.

ಹಿಂದಿನ ಸತ್ಯ

೧೯೩೬ ರಲ್ಲಿ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಜರ್ಮನಿಯ ಎಸೆನ್‌ನಲ್ಲಿರುವ ಕ್ರುಪ್ ಕಾರ್ಖಾನೆಯಲ್ಲಿ ಒಂದು ಭಾಷಣವನ್ನು ಮಾಡುತ್ತಾರೆ. ಅಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತಾಡಿದ ಭಾಷಣ ಹೀಗಿದೆ. “ನಾನು ಮಾಡಿದ ಕೆಲಸ ಸರಿಯಾಗಿದೆ ಎಂದು ನೀವು ಯೋಚಿಸಿದರೆ ಹಾಗೂ ನಾನು ದಣಿವರಿಯದೇ ಕೆಲಸ ಮಾಡಿದ್ದೇನೆಂದು ನೀವು ತಿಳಿದರೆ ನಾನು ಕೆಲಸ ಮಾಡಿದ್ದೇನೆ. ನಾನು ನನ್ನ ಸರಿಯಾದ ಸಮಯವನ್ನು ಈ ದೇಶದ ಜನರಿಗಾಗಿ ವ್ಯಯಿಸಿದ್ದೇನೆ, ಹೌದಾದರೆ ನಿಮ್ಮ ಮತವನ್ನು ನನಗೆ ಹಾಕಿ, ನೀವು ನನಗಾಗಿ ನಿಂತರೆ ನಾನು ನಿಮಗಾಗಿ ನಿಲ್ಲುತ್ತೇನೆ,” ಎಂದು ಮಾತಾಡಿದ್ದಾರೆ ಎಂದು ‘ಆಲ್ಟ್ ನ್ಯೂಸ್’ ಫ್ಯಾಕ್ಟ್ ಚೆಕ್ ಮಾಡಿದೆ.

ಹಿಟ್ಲರ್ ಎಸೆನ್‌ನಲ್ಲಿ ಮಾಡಿದ ಭಾಷಣಕ್ಕೂ ವೈರಲ್ ಆದ ಭಾಷಣಕ್ಕೂ ವ್ಯತ್ಯಾಸವಿದೆ. ೨:೪೨ ರಿಂದ ೩:೦೪ ರವರೆಗೆ ವಿಡಿಯೋವನ್ನು ಎಡಿಟ್ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಟ್ವೀಟಿಗರು ಹೇಳಿದಂತೆ ಹಿಟ್ಲರ್ ಆ ಅರ್ಥದಲ್ಲಿ ಮಾತಾಡಿಲ್ಲ ಎಂಬುದು ತಿಳಿದುಬಂದಿದೆ.

ಹಿಟ್ಲರ್ ೧೯೨೨ರಿಂದ ೧೯೪೫ ರವರೆಗೆ ಮಾಡಿದ ಭಾಷಣಗಳ ಇಂಗ್ಲಿಷ್ ಅಕ್ಷರ ರೂಪಗಳ ಸಂಗ್ರಹದಲ್ಲಿರುವಂತೆ (ಪೇಜ್ ೩೨೩) ಹಿಟ್ಲರನ ಭಾವೋದ್ರಿಕ್ತ ಭಾಷಣದ ಸನ್ನಿವೇಶವು ಕ್ಷಿಪ್ರ ಕೈಗಾರಿಕೀಕರಣ ಮತ್ತು ಆಕ್ರಮಣಶೀಲ ಯುದ್ಧ ಮತ್ತು ಅಂತರ್ಯುದ್ಧದ ಬಗೆಗೆ ಇದೆ. ಇದರ ವಿಸ್ತರಣೆಯು ಅಂತಿಮವಾಗಿ ಜಾಗತಿಕ ಯುದ್ಧದಿಂದ ಕೇವಲ ಸಾವು ಮತ್ತು ವಿನಾಶದ ಅತಿರೇಖಕ್ಕೆ ಕಾರಣವಾಯಿತು ಎಂಬುದು ಭಾಷಣದ ಸಾರಾಂಶವಾಗಿದೆ. ಹಿಟ್ಲರ್ ಭಾಷಣ ಜರ್ಮನಿ ಭಾಷೆಯಲ್ಲಿದ್ದು ೧೯೩೬ ರ ಭಾಷಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಜರ್ಮನಿಯಿಂದ ಇಂಗ್ಲಿಷಿಗೆ ತಪ್ಪಾಗಿ ಭಾಷಾಂತರಿಸಲಾಗಿದೆ.

ಮೋದಿ ಹಾಗೂ ಹಿಟ್ಲರ್ ಅವರನ್ನಿಟ್ಟುಕೊಂಡು ಸುಳ್ಳು ಸುದ್ದಿಯನ್ನು ಹರಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಚಿಕ್ಕ ಮಗುವನ್ನು ಪ್ರಧಾನಿ ಮೋದಿಯವರು ಹಿಡಿದುಕೊಂಡಂತೆ ಹಿಟ್ಲರ್‌ ಅವರ ಕೈಯಲ್ಲೂ ಮಗುವನ್ನು ಹಿಡಿಸಿ ಫೋಟೋಶಾಪ್ ಮಾಡಿ ವೈರಲ್ ಮಾಡಲಾಗಿತ್ತು. ಪ್ರಧಾನಿ ಮೋದಿಯವರನ್ನು ಹಿಟ್ಲರ್ ಅವರ ಸರ್ವಾಧಿಕಾರಿ ಧೋರಣೆಗಳಿಗೆ ಹೋಲಿಸಿ ನೋಡುವ ಸುಳ್ಳು ಸುದ್ದಿಗಳನ್ನು ಬಿತ್ತರಿಸಲಾಗಿತ್ತು.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More