ರಾಹುಲ್ ಯಾತ್ರೆ ಬಗ್ಗೆ ಟೀಕಿಸಿ ಸಚಿವ ಗಿರಿರಾಜ್ ಸಿಂಗ್ ಮಾಡಿರುವ ಆರೋಪ ಸತ್ಯವೇ?

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಾನಸ ಸರೋವರ ಯಾತ್ರೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ನಕಲಿ ಎಂದಿರುವ ಈ ಫೋಟೋಗಳು ಅಸಲಿ ಎಂದು ‘ಇಂಡಿಯಾ ಟುಡೆ’ ಹೇಳಿದೆ. ಆ ಲೇಖನದ ಭಾವಾನುವಾದ ಇಲ್ಲಿದೆ

ಮಾನಸ ಸರೋವರ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುವ ಫೋಟೋಗಳು ಬಿಜೆಪಿ ನಾಯಕರ ಟೀಕೆಗಳಿಗೆ ಗುರಿಯಾಗುತ್ತಲೇ ಇವೆ. ಇದೀಗ ಗುಜರಾತ್‌ನ ಅಹಮದಾಬಾದ್ ನಿವಾಸಿ ಮಿಹಿರ್ ಪಟೇಲ್ ಜೊತೆಗೆ ತೆಗೆಸಿಕೊಂಡಿರುವ ಫೋಟೋವನ್ನು ರಾಹುಲ್ ಗಾಂಧಿ ಟ್ವೀಟ್ ಮಾಡುತ್ತಿದ್ದಂತೆ, “ಇದೊಂದು ನಕಲಿ ಫೋಟೋ,” ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಟೀಕಿಸಿದ್ದಾರೆ.

"ಯಾತ್ರಾರ್ಥಿಯೊಂದಿಗೆ ರಾಹುಲ್ ಗಾಂಧಿ ತೆಗೆಸಿಕೊಂಡಿರುವ ಫೋಟೋ ನಕಲಿ. ಇದನ್ನು ಫೊಟೊಶಾಪ್‌ನಲ್ಲಿ ಎಡಿಟ್ ಮಾಡಲಾಗಿದೆ. ಫೊಟೋದಲ್ಲಿ ರಾಹುಲ್ ಗಾಂಧಿ ಕೈಲಿ ಒಂದು ವಾಕಿಂಗ್ ಸ್ಟಿಕ್ ಇದೆ. ಆದರೆ, ಫೋಟೋದಲ್ಲಿ ಕಾಣಿಸುತ್ತಿರುವ ನೆರಳಿನಲ್ಲಿ ರಾಹುಲ್ ಕೈಯಲ್ಲಿ ಹಿಡಿದ ಕೋಲಿನ ನೆರಳು ಮಾಯವಾಗಿದೆ. ಹೀಗಾಗಿ ಫೋಟೊವನ್ನು ಎಡಿಟ್ ಮಾಡಿರುವುದು ಸ್ಪಷ್ಟವಾಗಿದೆ," ಎಂದು ಸಚಿವ ಗಿರಿರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಸಚಿವರ ಟ್ವೀಟ್ ಅನ್ನು ಸಾವಿರಾರು ಮಂದಿ ರೀಟ್ವೀಟ್ ಮಾಡಿದ್ದಾರೆ.

ಈ ಫೋಟೋದ ಕುರಿತಂತೆ ವಿವಾದ ಶುರುವಾಗುತ್ತಿದ್ದಂತೆ ಫ್ಯಾಕ್ಟ್ ಚೆಕ್ ಮಾಡಿರುವ ‘ಇಂಡಿಯಾ ಟುಡೆ’, ಫೋಟೋದ ಹಿಂದಿನ ರಹಸ್ಯ ಬಹಿರಂಗಪಡಿಸಿದೆ. ಅಂದಹಾಗೆ, ಗಿರಿರಾಜ್ ಸಿಂಗ್ ಮಾಡಿರುವ ಆರೋಪದಂತೆ, ರಾಹುಲ್ ಗಾಂಧಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ಚಿತ್ರ ಫೋಟೋಶಾಪ್ ಮಾಡಿರುವುದಲ್ಲ. ಫೋಟೋ ತೆಗೆದ ಸಮಯ ಮತ್ತು ಕ್ಯಾಮೆರಾ ಕೋನದಿಂದಾಗಿ ವಾಸ್ತವವಾಗಿ ಕೋಲಿನ ನೆರಳು ಕೋಲಿನ ಕೆಳಭಾಗದಲ್ಲಿ ಮತ್ತು ರಾಹುಲ್ ಗಾಂಧಿ ದೇಹದ ಮೇಲ್ಭಾಗದಲ್ಲಿ ವಿಲೀನಗೊಂಡಿದೆ.

ನೆರಳಿನ ರಹಸ್ಯ

ರಾಹುಲ್ ಗಾಂಧಿಯವರೊಂದಿಗೆ ಫೋಟೋದಲ್ಲಿರುವ ವ್ಯಕ್ತಿ ಮಿಹಿರ್ ಪಟೇಲ್. ಈತ ಗುಜರಾತ್ ನಿವಾಸಿಯಾಗಿದ್ದು, ಎಂಜಿನಿಯರಿಂಗ್ ವೃತ್ತಿ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ತಮ್ಮ ಗೆಳೆಯನೊಂದಿಗೆ ಮಾನಸ ಸರೋವರ ಯಾತ್ರೆ ಕೈಗೊಂಡಿರುವ ಅವರು, ಯಾತ್ರೆಯಿಂದ ವಾಪಸಾಗಿದ್ದಾರೆ. ಇವರನ್ನು ಫೋನ್ ಮೂಲಕ ಸಂಪರ್ಕಿಸಿದ ‘ಇಂಡಿಯಾ ಟುಡೆ’ ತಂಡ, ಹಲವು ಮಾಹಿತಿ ಕಲೆಹಾಕಿದೆ. ಮಿಹಿರ್ ಹೇಳುವಂತೆ, ಸೆಪ್ಟೆಂಬರ್ 6ರಂದು ದೊಲ್ಮಾಲಾ ಪಾಸ್ ಬಳಿ ಬೆಳಿಗ್ಗೆ 11.30ರಿಂದ 12 ಗಂಟೆ (ಸ್ಥಳೀಯ ಕಾಲಮಾನ) ಅವಧಿಯಲ್ಲಿ ರಾಹುಲ್ ಗಾಂಧಿ ಜೊತೆ ಈ ಫೋಟೋವನ್ನು ತೆಗೆಸಿಕೊಂಡಿದ್ದಾರೆ. ಮಿಹಿರ್ ಜೊತೆಗೆ ಯಾತ್ರೆ ಕೈಗೊಂಡಿದ್ದ ಕೆನಾನ್ ಕೈಲಾಶ್ ಈ ಫೋಟೋ ಕ್ಲಿಕ್ಕಿಸಿದ್ದರು.

ಫೋಟೋ ಕ್ಲಿಕ್ಕಿಸಿರುವ ಕೆನಾನ್ ಕೈಲಾಶ್ ಅವರ ಸಾಮಾಜಿಕ ಜಾಲತಾಣದಲ್ಲೂ ಅವರು ಕೈಗೊಂಡಿರುವ ಮಾನಸ ಸರೋವರ ಯಾತ್ರೆಯ ಫೋಟೋ ಹಾಗೂ ವಿಡಿಯೋಗಳಿದ್ದು, ತಾವು ತಮ್ಮ ಗೆಳೆಯನ ಫೋಟೋವನ್ನು ರಾಹುಲ್ ಗಾಂಧಿ ಜೊತೆಗೆ ಕ್ಲಿಕ್ಕಿಸಿದ್ದು ನಿಜ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನು, ‘ಇಂಡಿಯಾ ಟುಡೇ’ ತಂಡ, ಗೂಗಲ್ ಅರ್ಥ್ ಮತ್ತು ಸನ್‌ಕಾಲ್ಕ್ ವೆಬ್‌ಸೈಟ್ ಸಹಾಯದಿಂದ, ಸೂರ್ಯನ ಸ್ಥಿತಿಯನ್ನು ಮತ್ತು ಡಾಲ್ಮಾಲಾ ಪಾಸ್ ಬಳಿ ಸೆಪ್ಟೆಂಬರ್ 6ರಂದು ಬೆಳಗ್ಗೆ 11.45ರ ಸುಮಾರಿಗೆ ಸೂರ್ಯನ ಬೆಳಕು ಹಾಗೂ ನೆರಳಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದೆ. ಈ ಸಂದರ್ಭದಲ್ಲಿ ವಸ್ತುವಿನ ನೆರಳು 100 ಡಿಗ್ರಿ ಕೋನದಲ್ಲಿ, ಚಿಕ್ಕದಾಗಿ ತೀಕ್ಷ್ಣವಾಗಿ ಬೀಳುವುದು ದೃಢವಾಗಿದ್ದು, ಸೂರ್ಯ ನೆತ್ತಿಯ ಮೇಲಿದ್ದಾಗ, ಬೆಳಕಿನ ಕೋನದಿಂದಾಗಿ, ರಾಹುಲ್ ಗಾಂಧಿ ಅವರ ಕೈಯಲ್ಲಿ ಹಿಡಿದ ಕೋಲಿನ ನೆರಳು ಗೋಚರವಾಗದೆ, ಕೋಲಿನ ಅಡಿಯಲ್ಲಿ ಹಾಗೂ ಅವರ ನೆರಳಿನಲ್ಲಿ ಮರೆಯಾಗಿದೆ ಎಂಬುದು ಸ್ಪಷ್ಪವಾಗುತ್ತದೆ.

‘ಇಂಡಿಯಾ ಟುಡೆ’ ತಂಡ, ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ಹಿರಿಯ ಛಾಯಾಗ್ರಾಹಕ ಅನಿಲ್ ಶರ್ಮಾ ಅವರನ್ನು ಸಂಪರ್ಕಿಸಿ, ಈ ನೆರಳಿನ ರಹಸ್ಯವನ್ನು ಚರ್ಚಿಸಿದೆ. ಈ ಸಂದರ್ಭ ವಿವರಣೆ ನೀಡಿರುವ ಅನಿಲ್ ಶರ್ಮಾ, ಸೂರ್ಯನ ಸ್ಥಿತಿ ಹಾಗೂ ಕ್ಯಾಮೆರಾ ಕೋನದಿಂದಾಗಿ ಕೋಲಿನ ನೆರಳು ಮರೆಯಾಗಿರುವ ಬಗ್ಗೆ ವಿವರಿಸಿದ್ದಾರೆ. ಇನ್ನು, ಫೋಟೋಶಾಪ್ ತಜ್ಞ ಎಂದು ಕರೆಸಿಕೊಂಡಿರುವ @Atheist_Krishna ಎಂಬುವವರು, ನೆರಳಿನ ರಹಸ್ಯವನ್ನು ಹಂತಹಂತವಾಗಿ ವಿಡಿಯೋ ಮೂಲಕ ವಿವರಿಸಿ ಪೋಸ್ಟ್ ಮಾಡಿದ್ದಾರೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More