ಡಿ ಕೆ ಸುರೇಶ್‌ ಉಲ್ಲೇಖಿಸಿದ ಪತ್ರ ನಿಜಕ್ಕೂ ಬಿ ಎಸ್ ಯಡಿಯೂರಪ್ಪ ಬರೆದದ್ದೇ?

ಸಂಸದ ಡಿ ಕೆ ಸುರೇಶ್‌ ಪತ್ರಿಕಾಗೋಷ್ಠಿ ನಡೆಸಿ, ಒಂದು ಪತ್ರವನ್ನು ಕೇಂದ್ರವಾಗಿರಿಸಿಕೊಂಡು ಯಡಿಯೂರಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ತಮಗೂ ಆ ಪತ್ರಕ್ಕೂ ಸಂಬಂಧವಿಲ್ಲವೆಂದು ಬಿಎಸ್‌ವೈ ಪ್ರತಿಕ್ರಿಯೆ ನೀಡಿದ್ದಾರೆ. ನಿಜಕ್ಕೂ ಆ ಪತ್ರದಲ್ಲೇನಿದೆ? ಅದು ಯಾರು ಬರೆದದ್ದು?

"ನನ್ನ ಮತ್ತು ನನ್ನ ಸಹೋದರ ಶಿವಕುಮಾರ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ೨೦೧೭ರ ಜನವರಿ ೧೦ರಂದು ನವದೆಹಲಿಯ ಕೇಂದ್ರ ನೇರ ತೆರಿಗೆ ಮಂಡಳಿಯ ಚೇರ್ಮನ್‌ ಸುಶೀಲ್‌ ಚಂದ್ರ ಅವರಿಗೆ ಪತ್ರ ಬರೆದಿದ್ದಾರೆ,” ಎಂದು ಸಂಸದ ಡಿ ಕೆ ಸುರೇಶ್‌ ಆರೋಪಿಸಿದರು.

ಅವರ ಕೈಯಲ್ಲಿದ್ದದ್ದು ಸಂಸದ ಬಿ ಎಸ್‌ ಯಡಿಯೂರಪ್ಪನವರು ಬರೆದಿದ್ದಾರೆ ಎನ್ನಲಾದ ಪತ್ರ. ದೆಹಲಿಯ ನೇರ ತೆರಿಗೆ ಮಂಡಳಿಯ ಚೇರ್ಮನ್‌ ಆದ ಸುಶೀಲ್‌ ಚಂದ್ರ ಅವರಿಗೆ ಬರೆದ ಈ ಪತ್ರದಲ್ಲಿ, ಜವಾಬ್ದಾರಿಯ ಪ್ರಜ್ಞೆ ಹಾಗೂ ಕರ್ನಾಟಕದ ಒಳಿತಿನ ಹಿನ್ನೆಲೆಯಲ್ಲಿ ಈ ಪತ್ರ ಬರೆಯುತ್ತಿರುವುದಾಗಿಯೂ, ಡಿ ಕೆ ಶಿವಕುಮಾರ್‌ ಮತ್ತು ಡಿ ಕೆ ಸುರೇಶ್‌ ಅವರ ಬೆಂಬಲಿಗರ ಅವ್ಯವಹಾರ ಮತ್ತು ಭ್ರಷ್ಟಚಾರವನ್ನು ಗಮನಕ್ಕೆ ತರುವುದಕ್ಕಾಗಿ ಬರೆಯುತ್ತಿರುವುದಾಗಿ ಹೇಳಲಾಗಿದೆ. ಜೊತೆಗೆ ಆರೋಪಕ್ಕೆ ಪೂರಕವಾದ ದಾಖಲೆಗಳನ್ನು ದೂರಿನ ರೂಪದಲ್ಲಿ ಸಲ್ಲಿಸಲಾಗಿದೆ ಎಂದಿದ್ದು, ಶೀಘ್ರ ಕ್ರಮಕ್ಕೂ ಒತ್ತಾಯಿಸಲಾಗಿದೆ.

ಕಾಂಗ್ರೆಸ್‌ ಸಂಸದರಾಗಿರುವ ಡಿ ಕೆ ಸುರೇಶ್‌ ಅವರ ವಿರುದ್ಧ, ಬಿಜೆಪಿ ನಾಯಕರಾದ ಯಡಿಯೂರಪ್ಪನವರು ಪತ್ರ ಬರೆದಿರಬಹುದು ಎಂದೆನಿಸುತ್ತದೆ. ಆದರೆ, ಪತ್ರದಲ್ಲಿರುವ ಕೆಲವು ಲೋಪಗಳು ಈ ಅನುಮಾನವನ್ನು ಸುಳ್ಳಾಗಿಸುತ್ತವೆ.

ಡಿ ಕೆ ಸುರೇಶ್‌ ಅವರು ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಆರೋಪಿಸಿದ ಕೂಡಲೇ ಬಿ ಎಸ್ ಯಡಿಯೂರಪ್ಪನವರ ಕಚೇರಿಯಿಂದ ಅವರ ಲೆಟರ್‌ಹೆಡ್‌ ಇರುವ ಮತ್ತೊಂದು ಪತ್ರ ಬಿಡುಗಡೆ ಆಗಿತ್ತು; ಅದರಲ್ಲಿ, ಸುರೇಶ್‌ ನಕಲಿ ಪತ್ರವನ್ನು ಬಳಸಿ ಆರೋಪ ಮಾಡುತ್ತಿರುವುದಾಗಿ ಹೇಳಲಾಗಿತ್ತು. ಇವೆರಡೂ ಪತ್ರವನ್ನು ಹೋಲಿಸುವ ಮೊದಲು ಸುರೇಶ್‌ ಬಿಡುಗಡೆ ಮಾಡಿದ ಪತ್ರದಲ್ಲಿರುವ ಒಂದೆರಡು ಲೋಪಗಳನ್ನು ಗಮನಿಸಬಹುದು.

ಪತ್ರದಲ್ಲಿ ಸುಶೀಲ್‌ ಚಂದ್ರ ಅವರ ಹೆಸರನ್ನೇ ತಪ್ಪಾಗಿ ಬರೆಯಲಾಗಿದೆ. 'Susil Chandra' ಎಂದು ಬರೆಯಲಾಗಿದೆ, ವಾಸ್ತವದಲ್ಲಿ ಅವರ ಹೆಸರನ್ನು 'Sushil Chandra' ಎಂದು ಬರೆಯಲಾಗುತ್ತದೆ. ಇನ್ನು, ಪತ್ರದಲ್ಲಿ ರಾಜ್ಯದ ಒಳಿತಿನ ಮಾತನ್ನು ಬರೆಯುವಾಗ 'wellnessbeing' ಎಂದು ಬರೆಯಲಾಗಿದೆ. ದೂರು ಸಲ್ಲಿಸುವ ಕುರಿತು ಹೇಳುತ್ತ 'void' ಎಂಬ ಪದವನ್ನು ಬಳಸಲಾಗಿದ್ದು, ಇದು ವಿಚಾರಕ್ಕೆ ವ್ಯತಿರಿಕ್ತವಾದ ಅರ್ಥ ಹೊರಡಿಸುತ್ತದೆ. ಯಡಿಯೂರಪ್ಪನವರು ಇಷ್ಟು ಕೆಟ್ಟ ಇಂಗ್ಲಿಷ್‌ನಲ್ಲಿ ಪತ್ರ ಬರೆಯುತ್ತಾರೆಯೇ ಅಥವಾ ಪತ್ರದ ಕರಡು ಸಿದ್ಧ ಮಾಡಲು ಬಾರದ ಸಿಬ್ಬಂದಿಯನ್ನು ಹೊಂದಿದ್ದಾರೆಯೇ ಎಂಬ ಪ್ರಶ್ನೆ ಸಹಜವಾಗಿ ಕೇಳಿಬರುತ್ತದೆ. ಇನ್ನು, ಯಡಿಯೂರಪ್ಪನವರ ಸಹಿಯನ್ನು ಯಾವುದೇ ದಾಖಲೆಯಿಂದ ಸ್ಕ್ಯಾನ್‌ ಮಾಡಿ ಬಳಸಿದಂತೆ ಕಾಣಿಸುತ್ತದೆ.

ಈ ಪತ್ರವನ್ನು ಯಡಿಯೂರಪ್ಪನವರ ಕಚೇರಿಯಿಂದ ಬಿಡುಗಡೆಯಾದ ಪತ್ರದೊಂದಿಗೆ ಹೋಲಿಸಿದರೆ, ಇನ್ನಷ್ಟು ವ್ಯತ್ಯಾಸಗಳು ಡಿ ಕೆ ಸುರೇಶ್‌ ಅವರು ಬಿಡುಗಡೆ ಮಾಡಿದ ಪತ್ರದ ಬಗ್ಗೆ ಅನುಮಾನ ಹುಟ್ಟಿಸುತ್ತವೆ.

ಯಡಿಯೂರಪ್ಪನವರ ಕಚೇರಿಯ ಪತ್ರವು ಸಂಸದರ ಅಧಿಕೃತ ಲೆಟರ್‌ಹೆಡ್‌ ಇರುವ ಪತ್ರವಾಗಿದ್ದು, ಇದರಲ್ಲಿ ಎಡ ಮೇಲ್ತುದಿಯಲ್ಲಿ ಯಡಿಯೂರಪ್ಪನವರ ಹೆಸರು ಹಿಂದಿ, ಕನ್ನಡ, ಇಂಗ್ಲಿಷ್‌ ಭಾಷೆಯಲ್ಲಿದೆ. ಪತ್ರದ ಕೆಳ ಭಾಗದಲ್ಲಿ ದೆಹಲಿಯ ಸಂಸದರ ನಿವಾಸದ ವಿಳಾಸ, ನಂತರದಲ್ಲಿ ಕ್ಷೇತ್ರದಲ್ಲಿರುವ ಕಚೇರಿ ವಿಳಾಸ, ದೂರವಾಣಿ, ಟೆಲೆಕ್ಸ್‌ ಮತ್ತು ಇಮೇಲ್‌ ವಿಳಾಸಗಳನ್ನು ನೀಡಲಾಗಿದೆ. ಸಹಿ ಜಾಗದಲ್ಲಿ ಬ್ರಾಕೆಟ್‌ನಲ್ಲಿ ಇಂಗ್ಲಿಷ್‌ನಲ್ಲಿ ಹೆಸರು ನೀಡಲಾಗಿದೆ.

ಬಿ ಎಸ್‌ ಯಡಿಯೂರಪ್ಪನವರ ಅಧಿಕೃತ ಲೆಟರ್‌ ಹೆಡ್‌

ಡಿ ಕೆ ಸುರೇಶ್‌ ಅವರು ಬಿಡುಗಡೆ ಮಾಡಿದ ಪತ್ರದಲ್ಲಿ ಈ ಅಂಶಗಳಲ್ಲಿ ವ್ಯತ್ಯಾಸ ಕಾಣಿಸುತ್ತದೆ. ಯಡಿಯೂರಪ್ಪನವರ ಹೆಸರು ಕನ್ನಡ ಮತ್ತು ಇಂಗ್ಲಿಷ್‌ ಮಾತ್ರದಲ್ಲಿ ಕಾಣಿಸುತ್ತದೆ. ಕೆಳಭಾಗದಲ್ಲಿ ಮೊದಲು ಕಚೇರಿಯ ವಿಳಾಸ, ನಂತರದಲ್ಲಿ ಬೆಂಗಳೂರಿನ ಆರ್‌ಎಂವಿ ಬಡಾವಣೆಯ ನಿವಾಸದ ವಿಳಾಸವನ್ನು ನೀಡಲಾಗಿದೆ. ಇನ್ನು, ಸಹಿ ಮಾಡಿದ ಜಾಗದಲ್ಲಿ ಯಡಿಯೂರಪ್ಪನವರ ಹೆಸರು ಇಂಗ್ಲಿಷ್‌ನಲ್ಲೂ ಇದೆಯಾದರೂ ಬ್ರಾಕೆಟ್‌ ಇಲ್ಲ. ಸಹಿಯಲ್ಲೂ ವ್ಯತ್ಯಾಸ ಕಾಣಿಸುತ್ತದೆ. ಇದು ಸ್ಕ್ಯಾನ್ ಮಾಡಿದಾಗ ಆಗುವ ಬದಲಾವಣೆ ಎಂಬುದು ಸ್ಪಷ್ಟ.

ಇದನ್ನೂ ಓದಿ : ರಾಹುಲ್ ಯಾತ್ರೆ ಬಗ್ಗೆ ಟೀಕಿಸಿ ಸಚಿವ ಗಿರಿರಾಜ್ ಸಿಂಗ್ ಮಾಡಿರುವ ಆರೋಪ ಸತ್ಯವೇ?

ಜೊತೆಗೆ, ಪತ್ರದ ಮುಖ್ಯಭಾಗದ ಕೊನೆಯಲ್ಲಿ, "We Collectively build better Karnataka and Make it Good, Safe place to reside for citizens,'' ಎಂದು ಬರೆಯಲಾಗಿದೆ; ಘೋಷಣೆಯಂತೆ ಕಾಣಿಸುವ, ಪತ್ರದ ಗಾಂಭೀರ್ಯಕ್ಕೆ ಒಗ್ಗದ ಈ ಸಾಲು ಅನುಮಾನ ಹುಟ್ಟಿಸುತ್ತದೆ. ಸಂಸದರೊಬ್ಬರು ಕೇಂದ್ರಕ್ಕೆ, ಅಧಿಕಾರಿಯುತ ಸ್ಥಾನದಲ್ಲಿರುವವರಿಗೆ ಬರೆಯುವ ಪತ್ರದಂತೆ ಇದು ಗೋಚರಿಸುವುದಿಲ್ಲ.

ಒಬ್ಬರೇ ಸಂಸದರಿಗೆ ಎರಡು ಭಿನ್ನ ಲೆಟರ್‌ಹೆಡ್‌ ಇರಲು ಸಾಧ್ಯವೆ? ಒಂದೇ ಲೆಟರ್‌ ಇರುವುದಾದಲ್ಲಿ ಇಷ್ಟೊಂದು ವ್ಯತ್ಯಾಸಗಳು ಹೇಗೆ ಸಾಧ್ಯ? ಈ ಅಂಶಗಳು ಡಿ ಕೆ ಸುರೇಶ್‌ ಅವರು ಪತ್ರಿಕಾಗೋಷ್ಠಿಗೆ ಕಾರಣವಾದ ಪತ್ರದ ಅಧಿಕೃತತೆಯನ್ನು ಪ್ರಶ್ನಿಸುತ್ತವೆ. ಈಗಾಗಲೇ ಯಡಿಯೂರಪ್ಪನವರು ಈ ಪತ್ರ ನಕಲಿ ಎಂದು ಅಲ್ಲಗಳೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಗಾದರೆ, ಈ ನಕಲಿ ಪತ್ರ ಸೃಷ್ಟಿ ಮಾಡಿದ್ದು ಯಾರು? ಇದರ ಉದ್ದೇಶವೇನು ಎಂಬುದನ್ನು ಇನ್ನಷ್ಟೇ ತಿಳಿಯಬೇಕಿದೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More