ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?

ರಾಷ್ಟ್ರೀಯ ಸ್ವಯಂ ಸೇವಕ ಸಂಘವು ದೆಹಲಿಯಲ್ಲಿ ಹಮ್ಮಿಕೊಂಡಿರುವ ‘ಭವಿಷ್ಯದ ಭಾರತ: ಆರೆಸ್ಸೆಸ್ ದೃಷ್ಟಿಕೋನ’ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಲಾಗಿದ್ದು, ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ ಎಂಬ ಸುದ್ದಿ ನಿಜವೇ?

ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸೆ.17ರಿಂದ 19ರವರೆಗೆ ದೆಹಲಿಯಲ್ಲಿ ಹಮ್ಮಿಕೊಂಡಿರುವ 'ಭವಿಷ್ಯದ ಭಾರತ: ಆರೆಸ್ಸೆಸ್ ದೃಷ್ಟಿಕೋನ' ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಲಾಗಿದ್ದು, ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಳಿಕ ಇದೀಗ ರಾಹುಲ್ ಗಾಂಧಿ ಆರೆಸ್ಸೆಸ್ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬಿತ್ಯಾದಿ ವಿಚಾರಗಳು ಕೆಲ ದಿನಗಳಿಂದ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಈ ವಿಚಾರವಾಗಿ ಪರ-ವಿರೋಧ ವ್ಯಕ್ತವಾಗುತ್ತಿದ್ದು, ಆರೆಸ್ಸೆಸ್ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗವಹಿಸುವುದು ಸಮಂಜಸವಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದೀಗ ಈ ಸುದ್ದಿಯ ಕುರಿತಂತೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ, “ಆರೆಸ್ಸೆಸ್ ಹಮ್ಮಿಕೊಂಡಿರುವ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಹುಲ್ ಗಾಂಧಿಗೆ ಯಾವುದೇ ಆಹ್ವಾನ ಬಂದಿಲ್ಲ. ಸಂಘ ಮತ್ತು ಬಿಜೆಪಿ ಸುಖಾಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ,” ಎಂದಿದ್ದಾರೆ. “ಗೌರವ ಪದಕ ಪ್ರಧಾನ ಸಮಾರಂಭಕ್ಕೆ ಆಹ್ವಾನ ನೀಡಿರುವಂತೆ ಬಿಜೆಪಿ ಬಿಂಬಿಸುತ್ತಿದ್ದು, ದ್ವೇಷ ತುಂಬಿದ ಅಜೆಂಡಾವನ್ನು ಕಾಂಗ್ರೆಸ್ ಎಂದಿಗೂ ಪ್ರೋತ್ಸಾಹಿಸುವುದಿಲ್ಲ,” ಎಂದವರು ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ, ಇತ್ತೀಚೆಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, “ಆರೆಸ್ಸೆಸ್ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ತೆರಳುವ ಮಾತೇ ಇಲ್ಲ. ಕಾರ್ಯಕ್ರಮಕ್ಕೆ ರಾಹುಲ್ ಅವರನ್ನು ಆಹ್ವಾನಿಸಿರುವ ವಿಚಾರ ಮಾಧ್ಯಮಗಳಲ್ಲಿ ಮಾತ್ರ ಪ್ರಸಾರವಾಗುತ್ತಿದೆಯೇ ಹೊರತು, ನಮಗಿನ್ನೂ ಅಹ್ವಾನದ ಪ್ರತಿ ದೊರೆತಿಲ್ಲ. ಒಂದು ವೇಳೆ ದೊರೆತರೂ ರಾಹುಲ್ ಕಾರ್ಯಕ್ರಮಕ್ಕೆ ತೆರಳುವುದಿಲ್ಲ,” ಎಂದಿದ್ದರು.

ಇದನ್ನೂ ಓದಿ : ರಾಹುಲ್ ಗಾಂಧಿ ಮಾನಸ ಸರೋವರ ಯಾತ್ರೆ ಕುರಿತ ಬಿಜೆಪಿ ಮುಖಂಡನ ಟ್ವೀಟ್ ರಹಸ್ಯ

ಜೂ.7ರಂದು ನಾಗಪುರದಲ್ಲಿ ನಡೆದ ಆರೆಸ್ಸೆಸ್ ಕಾರ್ಯಕ್ರಮಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದ ಕಾಂಗ್ರೆಸ್, ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಪ್ರಣಬ್ ಮೇಲೆ ಒತ್ತಡ ಹೇರಿತ್ತು. ಆದರೆ, ಆ ಕಾರ್ಯಕ್ರಮದಲ್ಲಿ ಪ್ರಣಬ್ ಪಾಲ್ಗೊಂಡು ಮಾತನಾಡಿದ್ದರು. ಇದರ ಬೆನ್ನಲ್ಲೇ ಇದೀಗ ರಾಹುಲ್ ಗಾಂಧಿ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.

ಇತ್ತೀಚಿಗಷ್ಟೇ ರಾಹುಲ್ ಗಾಂಧಿ, “ಆರೆಸ್ಸೆಸ್, ಅರಬ್ ರಾಷ್ಟ್ರಗಳಲ್ಲಿರುವ ಮುಸ್ಲಿಂ ಬ್ರದರ್‌ಹುಡ್ ಸಂಘಟನೆಯ ಕಲ್ಪನೆಯನ್ನು ಹೋಲುತ್ತದೆ. ಅದು ಭಾರತದ ಸ್ವರೂಪವನ್ನೇ ಬದಲಿಸಲು ಯತ್ನಿಸುತ್ತಿದೆ,” ಎಂಬ ಗಂಭೀರ ಆರೋಪ ಮಾಡಿದ್ದರು.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
‘ಚರಂಡಿಗೆ ಬಿದ್ದ ಕೊಡಗು ಜಿಲ್ಲಾಧಿಕಾರಿ’ ಎಂಬ ಶೀರ್ಷಿಕೆಯಡಿ ವೈರಲ್ ಆದ ವಿಡಿಯೋ ನಿಜವೇ?
Editor’s Pick More